ಶಿರಸಿ: ಕೊಲೆ ಆರೋಪದಲ್ಲಿ ಜೀವಾವಧಿ ಶಿಕ್ಷೆ ಮುಗಿಸಿದ ವ್ಯಕ್ತಿಯೊರ್ವ ಕೇವಲ 200 ರೂ. ಗಳಿಗೆ ತನ್ನದೇ ಜೊತೆ ಕೆಲಸ ಮಾಡುವ ಇನ್ನೊಂದು ವ್ಯಕ್ತಿಯನ್ನು (Murder Case) ಗುದ್ದಲಿಯಿಂದ ತಲೆ ಒಡೆದು ಭೀಕರವಾಗಿ ಕೊಲೆ ಮಾಡಿದ ಘಟನೆ ಉತ್ತರ ಕನ್ನಡ ಜಿಲ್ಲೆಯ ಶಿರಸಿಯಲ್ಲಿ ನಡೆದಿದೆ. ಕೊಲೆ ನಡೆದ ಕೆಲವೇ ಗಂಟೆಯಲ್ಲಿ ಪೊಲೀಸರು ಆರೋಪಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಶಿರಸಿ ತಾಲೂಕಿನ ಕಮಟಗೇರಿಯಲ್ಲಿ ಗುರವಾರ ರಾತ್ರಿ ಈ ಕೊಲೆ ನಡೆದಿದೆ. ಆರೋಪಿಯನ್ನು ಕಮಟಗೇರಿಯ ಮಂಜುನಾಥ ಬಸ್ಯಾ ಚನ್ನಯ್ಯ ಎಂದು ಗುರುತಿಸಲಾಗಿದ್ದು, ಈತ ಈ ಹಿಂದೆಯೂ ಕೊಲೆ ಆರೋಪದಲ್ಲಿಯೇ ಜೀವಾವಧಿ ಶಿಕ್ಷೆ ಅನುಭವಿಸಿ ಹೊರ ಬಂದಿದ್ದ.
ಈಗ ಮದ್ಯದ ನಶೆಯಲ್ಲಿ ಹಣಕ್ಕಾಗಿ ಅದೇ ಗ್ರಾಮದ ರವೀಶ ಗಣಪತಿ ಚನ್ನಯ್ಯ ( 35 ) ನನ್ನು ಗುದ್ದಲಿಯಿಂದ ತಲೆಗೆ ಹೊಡೆದು ಕೊಲೆ ಮಾಡಲಾಗಿದೆ. ಆರೋಪಿಯನ್ನು ಶಿರಸಿ ತಾಲೂಕಿನ ಸೋಂದಾ ಕ್ರಾಸ್ ಸಮೀಪ ಶುಕ್ರವಾರ ಬಂಧಿಸಲಾಗಿದೆ. ಗುರುವಾರ ರಾತ್ರಿ 8.30 ರ ವೇಳೆಗೆ ಕಮಟಗೇರಿಯ ವಾದಿರಾಜ ಮಠದ ಕಮಾನಿನ ಬಳಿಯಲ್ಲಿ ಮದ್ಯದ ನಶೆಯಲ್ಲಿ ಆರೋಪಿ ಹಾಗೂ ಕೊಲೆಯಾದ ವ್ಯಕ್ತಿಯ ನಡುಗೆ ಜಗಳ ನಡೆದಿದೆ. ಕೂಲಿ ಹಣ 500 ರೂ ಕೊಡುವುದು ಬಾಕಿಯಿದ್ದು, ಅದರಲ್ಲಿ ರವೀಶ ಕೊಲೆ ಆರೋಪಿಗೆ 300 ರೂ ನೀಡಿದ್ದಾರೆ. ಆದರೆ ಇನ್ನೂ 200 ರೂ ನೀಡದ ಕಾರಣ ಸಿಟ್ಟಿನಲ್ಲಿ ಕೊಲೆ ಮಾಡಿದ್ದಾಗಿ ಪೊಲೀಸರು ತಿಳಿಸಿದ್ದಾರೆ.
ಕೊಲೆ ಆರೋಪಿ ಮಂಜುನಾಥ ಬಸಯ್ಯ ಚನ್ನಯ್ಯಗೆ 2002 ರಲ್ಲಿ ತನ್ನ ಹೆಂಡತಿಯ ಅಪ್ಪ ( ಮಾವ ) ನನ್ನು ಕೊಲೆ ಮಾಡಿದ ಆರೋಪದಲ್ಲಿ ಶಿಕ್ಷೆ ವಿಧಿಸಲಾಗಿತ್ತು. 2016 ರಲ್ಲಿ 14 ವರ್ಷಗಳ ಜೀವಾವಧಿ ಶಿಕ್ಷೆ ಮುಗಿಸಿ ಜೈಲಿನಿಂದ ಹೊರ ಬಂದಿದ್ದ ಮಂಜುನಾಥ ಕೊಲೆಯಾದ ರವೀಶ್ ಜೊತೆಯಲ್ಲಿ ಕೂಲಿ ಕೆಲಸ ಮಾಡಿಕೊಂಡಿದ್ದ. ಆದರೆ ಕೆಲಸ ಕೊಟ್ಟ ರವೀಶ್ ಜೊತೆಯಲ್ಲಿ ಮದ್ಯದ ನಶೆಯಲ್ಲಿ ' ಕೂಲಿ' ಹಣಕ್ಕಾಗಿ ನಡೆದ ಗಲಾಟೆಯಲ್ಲಿ ಇದೀಗ ಭೀಕರ ಕೊಲೆ ನಡೆದಂತಾಗಿದೆ.
ಈ ಸುದ್ದಿಯನ್ನೂ ಓದಿ: Murder Case: ಪತ್ನಿ, ಮಗುವಿನ ಮುಂದೆಯೇ ಮಾರಕಾಸ್ತ್ರಗಳಿಂದ ಕೊಚ್ಚಿ ಯುವಕನ ಕೊಲೆ
ಗುರವಾರ ರಾತ್ರಿ ಕೊಲೆಯಾಗಿದ್ದು ಶುಕ್ರವಾರ ಬೆಳಿಗ್ಗೆ ಘಟನೆ ಬೆಳಕಿಗೆ ಬಂದಿದೆ. ಕಮಟಗೇರಿಯ ಆರೋಪಿ ಮನೆಯ ಮುಂಭಾಗದಲ್ಲಿಯೇ ಕೊಲೆ ನಡೆದಿದ್ದು, ಕೊಲೆಯಾದ ವ್ಯಕ್ತಿಯ ಪತ್ನಿ ಶಿರಸಿ ಗ್ರಾಮೀಣ ಠಾಣೆಯಲ್ಲಿ ದೂರು ದಾಖಲಿಸಿದ್ದಾಳೆ. ಜಿಲ್ಲಾ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಕೃಷ್ಣಮೂರ್ತಿ, ಡಿವೈಎಸ್ಪಿ ಗೀತಾ ಪಾಟೀಲ್, ಸಿಪಿಐ ಶಶಿಕಾಂತ ವರ್ಮಾ, ಗ್ರಾಮೀಣ ಠಾಣೆ ಪಿಎಸ್ಐ ಸಂತೋಷ್ ಕುಮಾರ್ ಹಾಗೂ ಸಿಬ್ಬಂದಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.