ನವದೆಹಲಿ: ದೆಹಲಿಯಲ್ಲಿ ಉಪಹಾರ ಗೃಹವೊಂದರಲ್ಲಿ ಬೆಂಕಿ ಅವಘಡ (fire accident) ಸಂಭವಿಸಿದ್ದು, ಸಂಪೂರ್ಣ ರೆಸ್ಟೋರೆಂಟ್ (delhi restaurant) ಬೆಂಕಿಗೆ ಆಹುತಿಯಾಗಿದೆ. ಜೂನ್ 3ರಂದು ಮಾಳವೀಯ ನಗರದ ಫ್ಲೋರಿಷ್ ಸ್ಟೇ ಬೆಡ್-ಅಂಡ್ ಬ್ರೇಕ್‌ಫಾಸ್ಟ್ ರೆಸ್ಟೋರೆಂಟ್‌ನಲ್ಲಿ ಭಾರಿ ಬೆಂಕಿ ಕಾಣಿಸಿಕೊಂಡು 21 ಮಂದಿ ಸಾವನ್ನಪ್ಪಿದ್ದರು. ಇದರ ಬೆನ್ನಲ್ಲೇ ಇದೀಗ ಮತ್ತೊಂದು ರೆಸ್ಟೋರೆಂಟ್ ಬೆಂಕಿಗೆ ಆಹುತಿಯಾಗಿದೆ. ಮೂರು ಅಡುಗೆ ಅನಿಲ ಸಿಲಿಂಡರ್ ಸ್ಫೋಟಗೊಂಡು (cylinder explosion) ಬೆಂಕಿ ಉಂಟಾಗಿದೆ. ಕಲ್ಕಾಜಿಯ ಗೋವಿಂದಪುರಿ ಫ್ಲೈಓವರ್ ಬಳಿಯ ಪಂಜಾಬಿ ತಡ್ಕಾ ರೆಸ್ಟೋರೆಂಟ್‌ನಲ್ಲಿ (Punjabi Tadka restaurant) ಈ ಘಟನೆ ನಡೆದಿದೆ.
ಭಾನುವಾರ ಬೆಳ್ಳಂಬೆಳಗ್ಗೆ ದೆಹಲಿಯ ಕಲ್ಕಾಜಿ ಪ್ರದೇಶದ ರೆಸ್ಟೋರೆಂಟ್‌ನಲ್ಲಿ ಬೆಂಕಿ ಕಾಣಿಸಿಕೊಂಡಿದೆ. ಇದರಿಂದ ರೆಸ್ಟೋರೆಂಟ್‌ನಲ್ಲಿದ್ದ ಮೂರು ವಾಣಿಜ್ಯ ಎಲ್‌ಪಿಜಿ ಸಿಲಿಂಡರ್‌ಗಳು ಸ್ಫೋಟಗೊಂಡಿವೆ. ಅತ್ಯಂತ ವೇಗವಾಗಿ ಹರಡಿದ ಬೆಂಕಿಯಿಂದಾಗಿ ರೆಸ್ಟೋರೆಂಟ್ ಒಳಗೆ ಮಹಿಳೆಯೊಬ್ಬರು ಸಿಲುಕಿಕೊಂಡಿದ್ದು, ಅವರನ್ನು ರಕ್ಷಿಸಲಾಗಿದೆ.
Doddaballapur News: ದೊಡ್ಡಬಳ್ಳಾಪುರದಲ್ಲಿ ಕೃಷಿ ಹೊಂಡಕ್ಕೆ ಬಿದ್ದು ಇಬ್ಬರು ಮಕ್ಕಳ ಸಾವು
ಕಲ್ಕಾಜಿಯ ಗೋವಿಂದಪುರಿ ಫ್ಲೈಓವರ್ ಬಳಿಯ ಪಂಜಾಬಿ ತಡ್ಕಾ ರೆಸ್ಟೋರೆಂಟ್‌ನಲ್ಲಿ ಬೆಳಗ್ಗೆ 4.45 ರ ಸುಮಾರಿಗೆ ಬೆಂಕಿ ಕಾಣಿಸಿಕೊಂಡಿದೆ. ಮಾಹಿತಿ ತಿಳಿದ ತಕ್ಷಣ ದೆಹಲಿ ಅಗ್ನಿಶಾಮಕ ಸೇವೆಯ ತಂಡಗಳು ಸ್ಥಳಕ್ಕೆ ಧಾವಿಸಿದವು. ಆರು ಅಗ್ನಿಶಾಮಕ ದಳಗಳು ಬಂದಿದ್ದು, ತಕ್ಷಣವೇ ಬೆಂಕಿ ನಿಯಂತ್ರಿಸುವ ಕಾರ್ಯಾಚರಣೆಯನ್ನು ನಡೆಸಲಾಯಿತು.
ರೆಸ್ಟೋರೆಂಟ್ ನ ನೆಲಮಾಳಿಗೆಯಿಂದ ಮೂರನೇ ಮಹಡಿ ವರೆಗೆ ಬೆಂಕಿ ವ್ಯಾಪಿಸಿದೆ. ಟೆರೇಸ್ ಮೇಲೆ ನಿರ್ಮಿಸಲಾಗಿದ್ದ ತಾತ್ಕಾಲಿಕ ರಚನೆ ಕೂಡ ಬೆಂಕಿಗೆ ಆಹುತಿಯಾಗಿದೆ. ರೆಸ್ಟೋರೆಂಟ್ ನಲ್ಲಿದ್ದ ವಾಣಿಜ್ಯ ಎಲ್‌ಪಿಜಿ ಸಿಲಿಂಡರ್‌ಗಳು ಸ್ಫೋಟಗೊಂಡಿದ್ದರಿಂದ ಸ್ಥಳದಲ್ಲಿ ಆತಂಕದ ವಾತಾವರಣ ನಿರ್ಮಾಣವಾಗಿತ್ತು.
ರೆಸ್ಟೋರೆಂಟ್ ಒಳಗೆ 75 ವರ್ಷದ ಸೀತಾ ದೇವಿ ಎಂಬ ಮಹಿಳೆ ಸಿಲುಕಿಕೊಂಡಿದ್ದರು. ದೆಹಲಿ ಅಗ್ನಿಶಾಮಕ ದಳದ ಸಿಬ್ಬಂದಿ ತಮ್ಮ ಜೀವಗಳನ್ನು ಪಣಕ್ಕಿಟ್ಟು ಅವರನ್ನು ರಕ್ಷಿಸಿ ಸುರಕ್ಷಿತವಾಗಿ ಹೊರಗೆ ಕರೆದುಕೊಂಡು ಬಂದರು.
ರೆಸ್ಟೋರೆಂಟ್ ಗೆ ವ್ಯಾಪಿಸಿದ್ದ ಬೆಂಕಿಯನ್ನು ನಂದಿಸಲು ನೀರಿನ ಟೆಂಡರ್‌ಗಳು, ನೀರಿನ ಬೌಸರ್, ಉಸಿರಾಟದ ಬೆಂಬಲ ಘಟಕ ಮತ್ತು ಬಹುಪಯೋಗಿ ವಾಹನಗಳು ರಸ್ತೆಯಲ್ಲಿ ಬಂದು ನಿಂತಿದ್ದರಿಂದ ಕೆಲಕಾಲ ಸುಗಮ ವಾಹನ ಸಂಚಾರಕ್ಕೂ ಅಡ್ಡಿಯಾಗಿದೆ. ಬೆಂಕಿಯನ್ನು ನಿಯಂತ್ರಿಸಲಾಗಿದ್ದು, ಘಟನೆಗೆ ಕಾರಣ ತಿಳಿದುಬಂದಿಲ್ಲ. ಈ ಕುರಿತು ತನಿಖೆ ನಡೆಸುತ್ತಿರುವುದಾಗಿ ಪೊಲೀಸರು ತಿಳಿಸಿದ್ದಾರೆ.
ಇದಕ್ಕೂ ಜೂನ್ 3ರಂದು ದೆಹಲಿಯ ಮಾಳವೀಯ ನಗರದ ಫ್ಲೋರಿಷ್ ಸ್ಟೇ ಬೆಡ್-ಅಂಡ್ ಬ್ರೇಕ್‌ಫಾಸ್ಟ್ ರೆಸ್ಟೋರೆಂಟ್ ನಲ್ಲಿ ಬೆಂಕಿ ಕಾಣಿಸಿಕೊಂಡು 21 ಮಂದಿ ಸಾವನ್ನಪ್ಪಿದ್ದರು. ಬೆಳಗ್ಗೆ 8.50ರ ಸುಮಾರಿಗೆ ಬೆಂಕಿ ಕಾಣಿಸಿಕೊಂಡು ಪಕ್ಕದಲ್ಲಿದ್ದ ರೆಸ್ಟೋರೆಂಟ್ ಗೂ ವ್ಯಾಪಿಸಿಕೊಂಡಿತ್ತು. ಕಿರಿದಾದ ಪ್ರದೇಶದಲ್ಲಿ ಕಾಣಿಸಿಕೊಂಡ ಬೆಂಕಿಯನ್ನು ನಂದಿಸಲು ಅಗ್ನಿಶಾಮಕದಳದ ಸಿಬ್ಬಂದಿ ಪರದಾಡಬೇಕಾಯಿತು.
ಈ ಪ್ರಕರಣಕ್ಕೆ ಸಂಬಂಧಿಸಿ ರೆಸ್ಟೋರೆಂಟ್ ಮಾಲೀಕ ಲವ್‌ಕೇಶ್ ಬಜಾಜ್ ಎಂಬವರನ್ನು ಬಂಧಿಸಿ ವಿಚಾರಣೆಗೆ ಒಳಪಡಿಸಲಾಗಿದೆ. ಐದು ಅಂತಸ್ತಿನ ಕಟ್ಟಡಕ್ಕೆ ಬೆಂಕಿ ಆವರಿಸಿಕೊಂಡು ಜನರು ತಪ್ಪಿಸಿಕೊಳ್ಳಲು ಪ್ರಯತ್ನಿಸುತ್ತಿದ್ದಾಗ ಅವರು ಸ್ಥಳದಿಂದ ಪರಾರಿಯಾಗಿದ್ದಾಗಿ ವಿಚಾರಣೆ ವೇಳೆ ತಿಳಿಸಿದ್ದಾರೆ.