ಬೆಂಗಳೂರು, ಡಿ.31: ಚಿತ್ರದುರ್ಗದ ರೇಣುಕಾಸ್ವಾಮಿ ಹತ್ಯೆ (Renuka Swamy murder case) ಪ್ರಕರಣಕ್ಕೆ ಸಂಬಂಧಿಸಿದಂತೆ ಮಹತ್ವದ ಬೆಳವಣಿಗೆ ನಡೆದಿದೆ. ಈಗಾಗಲೇ ರೇಣುಕಾಸ್ವಾಮಿ ಕೊಲೆ ಕೇಸಲ್ಲಿ ಟ್ರಯಲ್ ಶುರುವಾಗಿದ್ದು, ರೇಣುಕಾಸ್ವಾಮಿ ತಂದೆ-ತಾಯಿಯ ಹೇಳಿಕೆ ದಾಖಲಿಸಲಾಗುತ್ತಿದೆ. ಈ ಹೊತ್ತಲ್ಲೇ ಪ್ರಕರಣಕ್ಕೆ ಬಿಗ್ ಟ್ವಿಸ್ಟ್ ಸಿಕ್ಕಿದೆ. ಪ್ರಾಸಿಕ್ಯೂಷನ್ (Prosecution) ವಿರುದ್ಧವೇ ರೇಣುಕಾಸ್ವಾಮಿ ತಾಯಿ ರತ್ನಪ್ರಭಾ ಹೇಳಿಕೆ ನೀಡಿದ್ದಾರೆ.
ಹಿಂದಿನ ಹೇಳಿಕೆಗೂ ಈಗಿನ ಹೇಳಿಕೆಗೂ ದ್ವಂದ್ವದ ಹಿನ್ನೆಲೆಯಲ್ಲಿ ರತ್ನಪ್ರಭಾರನ್ನು ಪ್ರತಿಕೂಲ ಸಾಕ್ಷಿಯಾಗಿ ಪರಿಗಣಿಸಲು ಎಸ್‌ಪಿಪಿ (SPP) ಮನವಿ ಮಾಡಿದ್ದಾರೆ. ಎಸ್‌ಪಿಪಿ ಪ್ರಸನ್ನಕುಮಾರ್ ಸಲ್ಲಿಸಿದ ಮನವಿ ಬಗ್ಗೆ ಸೋಮವಾರ ನಿರ್ಧಾರ ಆಗಲಿದೆ. ರತ್ನಪ್ರಭಾ 8 ಅಂಶಗಳಲ್ಲಿ ಪ್ರಾಸಿಕ್ಯೂಷನ್ ವಿರುದ್ಧವೇ ವ್ಯತಿರಿಕ್ತ ಹೇಳಿಕೆ ಕೊಟ್ಟಿದ್ದಾರೆ. ಮಗನ ಮೊಬೈಲ್ ಬಗ್ಗೆ ಗೊತ್ತಿಲ್ಲ ಎಂದು ನ್ಯಾಯಾಲಯದಲ್ಲಿ ಹೇಳಿದ್ದು ಪೊಲೀಸರ ಮುಂದೆ ಇದೇ ಮೊಬೈಲ್ ಅಂತ ಹೇಳಿದ್ದರು. ಜೊತೆಗೆ ಹತ್ಯೆಯಾದ ದಿನ 2 ಬಾರಿ ರೇಣುಕಾಗೆ ಕರೆ ಮಾಡಿದ್ದರು. ಆದರೆ ಕರೆ ಮಾಡಿಲ್ಲ ಅಂತ ಪೊಲೀಸರ ಮುಂದೆ ಹೇಳಿಕೆ ನೀಡಿದ್ದರು. ಈ ಎಲ್ಲಾ ಹೇಳಿಕೆಗಳ ಆಧಾರದಲ್ಲಿ ರತ್ನಪ್ರಭಾರನ್ನು ಪ್ರತಿಕೂಲ ಸಾಕ್ಷಿಯಾಗಿ ಪರಿಗಣಿಸಲು ಕೋರಲಾಗಿದೆ.
ಇದೀಗ ದರ್ಶನ್ ಪರ ವಕೀಲರಿಂದ ರೇಣುಕಾಸ್ವಾಮಿ ತಂದೆ-ತಾಯಿ ಕ್ರಾಸ್ ಎಕ್ಸಾಮಿನೇಷನ್ ನಡೆಯುತಿದ್ದು, ದರ್ಶನ್ ಪರ ವಕೀಲ ಸಿವಿ ನಾಗೇಶ್‌ರಿಂದ ಕ್ರಾಸ್ ಎಕ್ಸಾಮಿನೇಷನ್ ಈಗಾಗಲೇ ಆರಂಭವಾಗಿದೆ. ಈ ಮಧ್ಯೆ ರೇಣುಕಾಸ್ವಾಮಿ ತಾಯಿ ರತ್ನಪ್ರಭಾರನ್ನು Hostile witness ಎಂದು ಪರಿಗಣಿಸುವಂತೆ ಎಸ್ಪಿಪಿ ಪ್ರಸನ್ನಕುಮಾರ್ ಕೋರ್ಟ್ ಗೆ ಮನವಿ ಮಾಡಿದ್ದಾರೆ. ಎಸ್ಪಿಪಿ ಮನವಿ ಬಗ್ಗೆ ಕೋರ್ಟ್ ಸೋಮವಾರ ನಿರ್ಧಾರ ಮಾಡಲಿದೆ.
ರೇಣುಕಾ ಸ್ವಾಮಿ ತಾಯಿಗೆ ಕ್ರಾಸ್ ಎಕ್ಸಾಮಿನೇಷನ್; ವಿಚಾರಣೆ ನಾಳೆಗೆ ಮುಂದೂಡಿಕೆ
ಹೋಸ್ಟೈಲ್ ವಿಟ್ನೆಸ್ ಎಂದರೆ, ನ್ಯಾಯಾಲಯದಲ್ಲಿ ಸಾಕ್ಷ್ಯ ಹೇಳುವ ವ್ಯಕ್ತಿ, ತನನ್ನು ಕರೆದ ಪಕ್ಷದ (ಪ್ರಾಸಿಕ್ಯೂಷನ್ ಅಥವಾ ಡಿಫೆನ್ಸ್) ಪರವಾಗಿ ನಿಲ್ಲದೆ, ಅವರ ಮಾತಿಗೆ ವಿರುದ್ಧವಾಗಿ ಹೇಳಿಕೆ ನೀಡುವ ಸಾಕ್ಷಿ. ಸರಳವಾಗಿ ಹೇಳುವುದಾದರೆ, ಒಬ್ಬ ಸಾಕ್ಷಿಧಾರನನ್ನು ಒಂದು ಪಾರ್ಟಿಯು ನ್ಯಾಯಾಲಯಕ್ಕೆ ಕರೆಸುತ್ತದೆ. ಆದರೆ ಆ ಸಾಕ್ಷಿಧಾರ ನ್ಯಾಯಾಲಯದಲ್ಲಿ ತನ್ನ ಹಿಂದಿನ ಹೇಳಿಕೆಯನ್ನು ಬದಲಿಸಿ, ಅಥವಾ ಸತ್ಯವನ್ನು ಮುಚ್ಚಿಹಾಕಿ, ಅಥವಾ ಪ್ರತಿವಾದಿಗಳಿಗೆ ಅನುಕೂಲವಾಗುವಂತೆ ಮಾತನಾಡಿದರೆ, ಆ ಸಾಕ್ಷಿಯನ್ನು Hostile Witness ಎಂದು ಕರೆಯಲಾಗುತ್ತದೆ.