ರೇಣುಕಾ ಸ್ವಾಮಿ ತಾಯಿಗೆ ಕ್ರಾಸ್ ಎಕ್ಸಾಮಿನೇಷನ್; ವಿಚಾರಣೆ ನಾಳೆಗೆ ಮುಂದೂಡಿಕೆ
Renukaswamy Murder Case: ಬೆಂಗಳೂರಿನ 57ನೇ ಸಿಸಿಎಚ್ ಕೋರ್ಟ್‌ನಲ್ಲಿ ವಿಚಾರಣೆ ನಡೆದಿದೆ. ಪವಿತ್ರಾಗೌಡ ಪರ ವಕೀಲ ಬಾಲನ್ ಅವರು, ರೇಣುಕಾಸ್ವಾಮಿ ತಾಯಿಗೆ ಒಂದಿಷ್ಟು ಕ್ರಾಸ್ ಎಕ್ಸಾಮಿನೇಷನ್ ಪ್ರಶ್ನೆಗಳನ್ನು ಕೇಳಿದ್ದಾರೆ. ವಾದ ಆಲಿಸಿದ ನ್ಯಾಯಾಲಯವು ವಿಚಾರಣೆಯನ್ನು ಡಿ.17ಕ್ಕೆ ಮುಂದೂಡಿದೆ.
ರೇಣುಕಾಸ್ವಾಮಿ, ಪವಿತ್ರಾಗೌಡ ಮತ್ತು ನಟ ದರ್ಶನ್ (ಸಂಗ್ರಹ ಚಿತ್ರ) -
ಬೆಂಗಳೂರು: ರೇಣುಕಾ ಸ್ವಾಮಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿ ಬೆಂಗಳೂರಿನ 57ನೇ ಸಿಸಿಎಚ್ ಕೋರ್ಟ್‌ನಲ್ಲಿ ಬುಧವಾರ ವಿಚಾರಣೆ ನಡೆದಿದ್ದು, ಪವಿತ್ರಾಗೌಡ ಪರ ವಕೀಲರ ವಾದ ಆಲಿಸಿದ ನ್ಯಾಯಾಲಯ, ವಿಚಾರಣೆಯನ್ನು ನಾಳೆಗೆ (ಡಿ.17) ಮುಂದೂಡಿದೆ.
ವಿಚಾರಣೆಯ ವೇಳೆ ರೇಣುಕಾ ಸ್ವಾಮಿ ತಾಯಿ ರತ್ನಪ್ರಭಾ ಹೇಳಿಕೆಗೆ ಆರೋಪಿ ಪವಿತ್ರ ಗೌಡ ಪರ ವಕೀಲ ಬಾಲನ್ ಅವರು ಪಾಟೀ ಸವಾಲು (ಕ್ರಾಸ್ ಎಕ್ಸಾಮಿನೇಷನ್) ಮಾಡಿದರು. ಕೆಲವೊಂದಕ್ಕೆ ಉತ್ತರ ಕೊಟ್ಟ ರೇಣುಕಾಸ್ವಾಮಿ ತಾಯಿ, ಬಹುತೇಕ ಪ್ರಶ್ನೆಗೆ ಗೊತ್ತಿಲ್ಲ, ಇಲ್ಲ ಎಂಬ ಉತ್ತರವನ್ನು ನೀಡಿದರು.
ರೇಣುಕಾ ಸ್ವಾಮಿ ತಾಯಿಗೆ ವಕೀಲರು ಕೇಳಿದ ಪ್ರಶ್ನೆಗಳೇನು?
ಜೂನ್ 11ರಂದು ಪೊಲೀಸರು ವಿಚಾರಣೆ ಮಾಡಿದ್ದರೇ ಎಂದು ಪವಿತ್ರಾ ಪರ ವಕೀಲ ಬಾಲನ್ ಕೇಳಿದರು, ಇಲ್ಲ ಜೂನ್ 14ರಂದು ಉತ್ತರಿಸಿದ್ದೇನೆ ಎಂದು ರತ್ನಪ್ರಭಾ ತಿಳಿಸಿದರು. 2024 ಜೂನ್ 8ರಂದು ಕೆಲಸಕ್ಕೆ ಹೋಗುತ್ತೇನೆ ಎಂದು ಹೇಳಿ, ಅಪೋಲೋ ಫಾರ್ಮಸಿಗೆ ಹೋಗಿದ್ದ ಹೌದಾ? ಅಂತ ವಕೀಲ ಬಾಲನ್ ಕೇಳಿದಾಗ, ರೇಣುಕಾ ಸ್ವಾಮಿ ತಾಯಿ ರತ್ನಪ್ರಭಾ ಇಲ್ಲ ಎಂದು ಉತ್ತರಿಸಿದರು.
ಶವಾಗಾರದಲ್ಲಿ ರೇಣುಕಾ ಸ್ವಾಮಿ ಧರಿಸಿದ್ದ ಟಿ ಶರ್ಟ್ ನೋಡಿದ್ದೀರಾ? ಆತ ಮನೆಯಿಂದ ಹೋಗುವಾಗ ಬೇರೆ ಶರ್ಟ್ ಹಾಕಿದ್ದ, 2024ರ ಜೂನ್ 11ರಂದು ಶರ್ಟ್ ಬಗ್ಗೆ ಪೊಲೀಸರು ವಿಚಾರಣೆ ಮಾಡಿದ್ರಾ?, ನೀಲಿ ಜೀನ್ಸ್ ಮತ್ತು ಕೈ ಗಡಿಯಾರ ಧರಿಸಿದ್ದನ್ನು ಪೊಲೀಸರಿಗೆ ಹೇಳಿದ್ರಾ?, ನಿಮ್ಮ ಮಗನ ಜತೆ ಮಧ್ಯಾಹ್ನ ಊಟ ಮಾಡಿದ್ದೇನೆ ಎಂದು ರೇಣುಕಾ ಸ್ವಾಮಿಯ ಕೆಲವು ಸ್ನೇಹಿತರು ಹೇಳಿದ್ದಾರೆ ಎಂದಾಗ, ಇಲ್ಲ ಅಂತ ರೇಣುಕಾಸ್ವಾಮಿ ತಾಯಿ ಉತ್ತರ ನೀಡಿದರು.
ಜೂನ್ 9ರಂದು ನಿಮ್ಮ ಮಗ ಎಲ್ಲಿಗೆ ಹೋಗಿದ್ದು ಗೊತ್ತಿತ್ತಾ? ಕೆಎಸ್ಆರ್ಟಿಸಿ ಬಸ್ ಹತ್ತಿದ್ದು ನಿಮಗೆ ಗೊತ್ತಿತ್ತಾ? ಹೀಗಾಗಿಯೇ ನೀವು ದೂರು ಕೊಟ್ಟಿಲ್ಲ ಎಂದಾಗ, ಗೊತ್ತಿರಲಿಲ್ಲ ಎಂದು ರತ್ನಪ್ರಭಾ ಉತ್ತರಿಸಿದರು.
ಕಾಮಿಡಿ ಮಾಡಿದ್ರೂ ರಿಯಾಕ್ಟ್ ಮಾಡ್ತಾ ಇರಲಿಲ್ಲ, ಸೈಲೆಂಟ್ ಆಗಿದ್ರು ದರ್ಶನ್: ವಿಜಯಲಕ್ಷ್ಮಿ
ಮಗ ಕೆಲಸಕ್ಕೆ ಹೋಗುವಾಗ ಯೂನಿಫಾರ್ಮ್ ಹಾಕುತ್ತಿರಲಿಲ್ವಾ ಎಂದಾಗ ಶನಿವಾರ ಮಾತ್ರ ಯುನಿಫಾರ್ಮ್ ಹಾಕುತ್ತಿರಲಿಲ್ಲ ಎಂದು ರತ್ನ ಪ್ರಭ ಉತ್ತರಿಸಿದರು. ರೇಣುಕಾಸ್ವಾಮಿ ಕೊರಳಲ್ಲಿ ಗೋಲ್ಡ್ ಚೈನ್ ಇತ್ತಾ? ಸಾವಿನ ನಂತರ ಪೊಲೀಸರು ನಿಮಗೆ ಚೈನ್ ನೀಡಿದ್ರಾ ಅಂತ ಕೇಳಿದಾಗ ರತ್ನಪ್ರಭಾ ಇಲ್ಲ ಎಂದು ಉತ್ತರಿಸಿದರು.