ಮುಂಬೈ: ಪಾಕಿಸ್ತಾನದ ಭಯೋತ್ಪಾದಕರೊಂದಿಗೆ (pakistan terrorist) ನಂಟು ಹೊಂದಿದ್ದ ಆರೋಪದಲ್ಲಿ ಮುಂಬೈಯಲ್ಲಿ (Mumbai) ಶಂಕಿತನೋರ್ವನನ್ನು ಭಾರತೀಯ ಭದ್ರತಾ ಸಂಸ್ಥೆಗಳು (Indian security agencies) ವಶಕ್ಕೆ ಪಡೆದಿವೆ. ಹುಜೈಫಾ ಎಂಬಾತ ಪಾಕಿಸ್ತಾನದ ಐಎಸ್‌ಐ (ISI) ಬೆಂಬಲಿತ ಭೂಗತ ಭಯೋತ್ಪಾದಕ ಮಾಡ್ಯೂಲ್‌ನಲ್ಲಿ ಪ್ರಮುಖ ಸಂಯೋಜಕನಾಗಿದ್ದ ಎಂದು ಆರೋಪಿಸಲಾಗಿದೆ. ಮಹಾರಾಷ್ಟ್ರ ಭಯೋತ್ಪಾದನಾ ನಿಗ್ರಹ ದಳ (ATS) ಮತ್ತು ದೆಹಲಿ ಪೊಲೀಸ್ ವಿಶೇಷ ಘಟಕ ಸೇರಿ ಜಂಟಿಯಾಗಿ ಮೂರು ದಿನಗಳ ಕಾಲ ಮಹಾರಾಷ್ಟ್ರದಾದ್ಯಂತ ತೀವ್ರ ಶೋಧ ಕಾರ್ಯಾಚರಣೆ ನಡೆಸಿ ಹುಜೈಫಾನನ್ನು ವಶಕ್ಕೆ ಪಡೆದಿದೆ.
ಗುಪ್ತಚರ ವಿಭಾಗದ ಮಾಹಿತಿ ಮೇರೆಗೆ ಮಹಾರಾಷ್ಟ್ರ ಭಯೋತ್ಪಾದನಾ ನಿಗ್ರಹ ದಳ (ಎಟಿಎಸ್) ಮತ್ತು ದೆಹಲಿ ಪೊಲೀಸ್ ವಿಶೇಷ ಘಟಕ ಜಂಟಿಯಾಗಿ ಸೇರಿ ಕಾರ್ಯಾಚರಣೆ ನಡೆಸಿ ಹುಜೈಫಾನನ್ನು ಬಂಧಿಸಿದೆ. ಈತ ಪಾಕಿಸ್ತಾನದ ದಾವೂದ್ ಇಬ್ರಾಹಿಂನ ಸಿಂಡಿಕೇಟ್ (ಡಿ-ಕಂಪನಿ) ಮತ್ತು ಪಾಕಿಸ್ತಾನದ ಇಂಟರ್-ಸರ್ವೀಸಸ್ ಇಂಟೆಲಿಜೆನ್ಸ್ (ಐಎಸ್‌ಐ) ಗೆ ದೇಶೀಯ ನೇಮಕಾತಿ ಮತ್ತು ನಿರ್ವಾಹಕನಾಗಿ ಕೆಲಸ ಮಾಡುತ್ತಿದ್ದನು. ಈ ಹಿನ್ನೆಲೆಯಲ್ಲಿ ಇಟ ಪಾಕಿಸ್ತಾನ ಮೂಲದ ಉನ್ನತ ಮಟ್ಟದ ಹ್ಯಾಂಡ್ಲರ್‌ಗಳೊಂದಿಗೆ ನೇರ ಸಂಪರ್ಕ ಹೊಂದಿದ್ದಾನೆ ಎಂದು ಶಂಕಿಸಲಾಗಿದೆ.
ದೆಹಲಿಯ ರೆಸ್ಟೋರೆಂಟ್‌ನಲ್ಲಿ ಭಾರಿ ಬೆಂಕಿ ಅವಘಡ: 10 ಮಂದಿ ಸಾವು
ಪಾಕಿಸ್ತಾನದಲ್ಲಿ ನೆಲೆಸಿರುವ ಭಯೋತ್ಪಾದಕರಲ್ಲಿ ಪ್ರಮುಖನಾದ ದಾವೂದ್ ಇಬ್ರಾಹಿಂನ ನಿಷ್ಠಾವಂತ ಲೆಫ್ಟಿನೆಂಟ್ ಸೈಯದ್ ಮುದಾಸರ್ ಹುಸೇನ್ ಅಲಿಯಾಸ್ "ಮುನ್ನಾ ಝಿಂಗಾಡಾ" ನ ಆದೇಶದಂತೆ ಹುಜೈಫಾ ಕಾರ್ಯನಿರ್ವಹಿಸುತ್ತಿದ್ದನೆಂದು ತನಿಖಾಧಿಕಾರಿಗಳು ತಿಳಿಸಿದ್ದಾರೆ.
ಸೈಯದ್ ಮುದಾಸರ್ ಹುಸೇನ್ ಪಾಕಿಸ್ತಾನಕ್ಕೆ ಪರಾರಿಯಾಗುವ ಮುನ್ನ ಭಯೋತ್ಪಾದಕ ಛೋಟಾ ರಾಜನ್ ಹತ್ಯೆಗೆ ಯತ್ನಿಸಿ ಬ್ಯಾಂಕಾಕ್ ನಲ್ಲಿ 17 ವರ್ಷಗಳ ಕಾಲ ಸೆರೆಮನೆ ವಾಸ ಅನುಭವಿಸಿದ್ದನು. ಬಳಿಕ ಆತ ಭಾರತದೊಳಗೆ ಭಯೋತ್ಪಾದಕ ಚಟುವಟಿಕೆಗಳಿಗಾಗಿ ಐಎಸ್‌ಐ ಜೊತೆ ಕೆಲಸ ಮಾಡುತ್ತಿದ್ದಾನೆ ಎನ್ನಲಾಗಿದೆ.
ಜಿಂಗಡಾ ಜೊತೆಗೆ ಪಾಕಿಸ್ತಾನ ಮೂಲದ ಇನ್ನೋರ್ವ ಭಯೋತ್ಪಾದಕ ಶಹಜಾದ್ ಭಟ್ಟಿ ಮತ್ತು ಯಾವರ್ ಖಾನ್ ಎಂದು ಗುರುತಿಸಲ್ಪಟ್ಟ ಐಎಸ್‌ಐ ನಿರ್ವಾಹಕನೊಂದಿಗೂ ಹುಜೈಫಾ ನಿಕಟ ಸಂಪರ್ಕದಲ್ಲಿದ್ದಾನೆ ಎಂದು ಗುಪ್ತಚರ ಮೂಲಗಳು ತಿಳಿಸಿವೆ.
ದೆಹಲಿ ಪೊಲೀಸ್ ವಿಶೇಷ ಘಟಕವು ಇತ್ತೀಚೆಗೆ ನಡೆಸಿರುವ ಭಯೋತ್ಪಾದಕ ನಿಗ್ರಹ ಕಾರ್ಯಾಚರಣೆಯಿಂದಾಗಿ ಹುಜೈಫಾ ಪಾಕಿಸ್ತಾನದೊಂದಿಗೆ ನಂಟು ಹೊಂದಿರುವುದು ಬೆಳಕಿಗೆ ಬಂದಿದೆ. ಇದೇ ಪ್ರಕರಣಕ್ಕೆ ಸಂಬಂಧಿಸಿ ದೆಹಲಿ, ಮುಂಬೈ ಮತ್ತು ಪಂಜಾಬ್‌ನಾದ್ಯಂತ ಇತರ ಒಂಬತ್ತು ಮಂದಿಯನ್ನು ಬಂಧಿಸಲಾಗಿದೆ. ಮುಂಬೈನಲ್ಲಿ ಬಂಧಿಸಲ್ಪಟ್ಟ ತೌಕೀರ್ ಶೇಖ್ ಮತ್ತು ಅರ್ಬಾಜ್ ಖಾನ್ ವಿಚಾರಣೆಯ ಸಮಯದಲ್ಲಿ ಹುಜೈಫಾ ತಮ್ಮನ್ನು ಈ ಕಾರ್ಯಕ್ಕೆ ನೇಮಿಸಿರುವುದಾಗಿ ಹೇಳಿಕೊಂಡಿದ್ದಾರೆ.
ಇವರ ತಂಡವು ದಾದರ್ ರೈಲ್ವೆ ನಿಲ್ದಾಣ, ಮುಂಬೈನ ಹಲವಾರು ಸೇತುವೆಗಳು ಸೇರಿದಂತೆ ಪ್ರಮುಖ ಸಾರ್ವಜನಿಕ ಮೂಲಸೌಕರ್ಯಗಳ ಮೇಲೆ ದಾಳಿ ನಡೆಸಲು ಸಂಚು ರೂಪಿಸಿತ್ತು. ಹುಜೈಫಾ ಬಂಧನಕ್ಕೆ ಕೆಲವೇ ದಿನಗಳ ಮೊದಲು ಪಂಜಾಬ್‌ನಿಂದ ಕಾರ್ಯಕರ್ತರನ್ನು ಸಾಗಿಸುತ್ತಿದ್ದ ದೆಹಲಿಯಲ್ಲಿ ವಾಹನವನ್ನು ತಡೆಹಿಡಿದು ಡ್ರೋನ್, ಸ್ವಯಂಚಾಲಿತ ಶಸ್ತ್ರಾಸ್ತ್ರಗಳು, ಲೈವ್ ಹ್ಯಾಂಡ್ ಗ್ರೆನೇಡ್‌ಗಳು ಮತ್ತು ಪಾಕಿಸ್ತಾನಿ ಮೂಲದ ಮದ್ದುಗುಂಡುಗಳ ಬೃಹತ್ ಸಂಗ್ರಹವನ್ನು ವಶಪಡಿಸಿಕೊಂಡಿದೆ. ಈ ಕಾರ್ಯಾಚರಣೆಗೆ ಜಿಂಗಡಾ ಸೂಚನೆಗಳ ಮೇರೆಗೆ ಹಣಕಾಸು ಒದಗಿಸಿದ ನೇಪಾಳಿ ಪ್ರಜೆ ಆಂಗ್ ಕಾಮಿ ಲಾಮಾ ಎಂಬಾತನನ್ನು ಕೂಡ ಬಂಧಿಸಲಾಗಿದೆ.
ಕರಾಚಿ ಸೇಫ್ ಹೌಸ್‌ನಿಂದ ಉಗ್ರ ಜಾಲ ನಿರ್ವಹಣೆ? ದಾವೂದ್ ಆಪ್ತ ಮುನ್ನಾ ಝಿಂಗಾಡಾ ಮೇಲೆ ತನಿಖಾ ಬಲೆ
ಭಯೋತ್ಪಾದನಾ ನಿಗ್ರಹ ಕಾರ್ಯಾಚರಣೆಯಲ್ಲಿ ಹುಜೈಫಾ ಬಂಧನ ಒಂದು ಪ್ರಮುಖ ಬೆಳವಣಿಗೆಯಾಗಿದೆ. ಯಾಕೆಂದರೆ ಆತ ಜಾಲದ ಕಾರ್ಯಾಚರಣೆಗಳು, ಸಂಪರ್ಕಗಳು ಮತ್ತು ಚಟುವಟಿಕೆಗಳ ಬಗ್ಗೆ ಪ್ರಮುಖ ಮಾಹಿತಿ ಹೊಂದಿದ್ದಾನೆ ಎಂದು ತನಿಖಾಧಿಕಾರಿಗಳು ಶಂಕಿಸಿದ್ದಾರೆ. ದೆಹಲಿ ಪೊಲೀಸ್ ವಿಶೇಷ ದಳವು ಆತನನ್ನು ಸ್ಥಳೀಯ ನ್ಯಾಯಾಲಯದ ಮುಂದೆ ಹಾಜರುಪಡಿಸಿ ಬಳಿಕ ಹೆಚ್ಚಿನ ವಿಚಾರಣೆಗಾಗಿ ದೆಹಲಿಗೆ ಕರೆತರಲು ಪ್ರೊಡಕ್ಷನ್ ವಾರಂಟ್ ಕೋರುವ ನಿರೀಕ್ಷೆಯಿದೆ.