ನವದೆಹಲಿ, ಅ. 24: ನಿಷೇಧಿತ ಉಗ್ರ ಸಂಘಟನೆ ಜೈಶ್-ಎ-ಮೊಹಮ್ಮದ್ (JeM) ಜತೆ ಸಂಪರ್ಕ ಹೊಂದಿರುವ ಶಂಕೆ ಹಾಗೂ ಪ್ರಧಾನಿ ನರೇಂದ್ರ ಮೋದಿ(PM Modi) ವಿರುದ್ಧ ವಿವಾದಾತ್ಮಕ ಹೇಳಿಕೆಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಪ್ರಕಟಿಸಿದ ಆರೋಪದ ಮೇಲೆ ಮುಂಬೈಯಲ್ಲಿ 33 ವರ್ಷದ ರ‍್ಯಾಪಿಡೋ ಚಾಲಕನನ್ನು ಮಹಾರಾಷ್ಟ್ರ ಭಯೋತ್ಪಾದನಾ ನಿಗ್ರಹ ದಳ (ATS) ಬಂಧಿಸಿದೆ.
ಬಂಧಿತನನ್ನು ಮೊಹಮ್ಮದ್ ಹಸನ್ ಅಬು ಸರ್ಮದ್ ಅಖ್ತರ್ ಎಂದು ಗುರುತಿಸಲಾಗಿದ್ದು, ಮುಂಬೈಯ ಮಾಹಿಮ್ ನಿವಾಸಿಯಾಗಿರುವ ಈತನನ್ನು ಖಚಿತ ಮಾಹಿತಿ ಆಧರಿಸಿ ಮಾಹಿಮ್ ಮೆಟ್ರೋ ನಿಲ್ದಾಣದ ಸಮೀಪ ಬಂಧಿಸಲಾಗಿದೆ ಎಂದು ತನಿಖಾ ಸಂಸ್ಥೆ ತಿಳಿಸಿದೆ.
ಸಾಮಾಜಿಕ ಜಾಲತಾಣಗಳಲ್ಲಿ ಪ್ರಚೋದನಕಾರಿ ಪೋಸ್ಟ್‌ಗಳು
ತನಿಖಾಧಿಕಾರಿಗಳ ಪ್ರಕಾರ, ಆರೋಪಿ ರ‍್ಯಾಪಿಡೋ ಚಾಲಕನಾಗಿ ಮತ್ತು ಸುಗಂಧ ದ್ರವ್ಯಗಳ ಮಾರಾಟಗಾರನಾಗಿ ಕೆಲಸ ಮಾಡುತ್ತಿದ್ದ. ಈ ಉದ್ಯೋಗಗಳ ಮರೆಯಲ್ಲಿ ತೀವ್ರಗಾಮಿ ಸಿದ್ಧಾಂತಗಳನ್ನು ಪ್ರಚಾರ ಮಾಡುತ್ತಿದ್ದ ಎಂಬ ಆರೋಪವಿದೆ. ಅಲ್ಲದೆ, ಪಾಕಿಸ್ತಾನದ ಗುಪ್ತಚರ ಕಾರ್ಯಾಚರಣೆಯೊಂದರ ಸಂಪರ್ಕದಲ್ಲಿದ್ದ ಎಂಬ ಶಂಕೆಯೂ ವ್ಯಕ್ತವಾಗಿದೆ.
ಟೆಲಿಗ್ರಾಮ್‌ನ 'Indian Muslim' ಎಂಬ ಗುಂಪಿನಲ್ಲಿ ಜೈಶ್-ಎ-ಮೊಹಮ್ಮದ್ ಮುಖ್ಯಸ್ಥ ಮೌಲಾನಾ ಮಸೂದ್ ಅಜರ್‌ಗೆ ಸಂಬಂಧಿಸಿದ ಧ್ವನಿಮುದ್ರಿಕೆಗಳನ್ನು ಹಂಚಿಕೊಂಡಿದ್ದ ಎನ್ನಲಾಗಿದೆ. ಬಾಬರಿ ಮಸೀದಿ ವಿಚಾರಕ್ಕೆ ಸಂಬಂಧಿಸಿದ ಧ್ವನಿಮುದ್ರಿಕೆಗಳನ್ನೂ ಹಂಚಿಕೊಂಡಿದ್ದಾನೆ ಎಂದು ತನಿಖಾಧಿಕಾರಿಗಳು ತಿಳಿಸಿದ್ದಾರೆ. IBN E Qasim ಎಂಬ ಪಾಕಿಸ್ತಾನ ಮೂಲದ ತೀವ್ರಗಾಮಿ ಟೆಲಿಗ್ರಾಮ್ ಚಾನೆಲ್‌ಗೆ ಆತ ಚಂದಾದಾರನಾಗಿದ್ದ ಎಂಬುದೂ ತನಿಖೆಯಲ್ಲಿ ಬೆಳಕಿಗೆ ಬಂದಿದೆ.
ಎಕ್ಸ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಜಿಹಾದ್‌ಗೆ ಕರೆ ನೀಡುವ ಹಾಗೂ ಹಿಂಸಾಚಾರವನ್ನು ಪ್ರಚೋದಿಸುವ ರೀತಿಯ ಪೋಸ್ಟ್‌ಗಳನ್ನು ಪ್ರಕಟಿಸಿದ್ದಾನೆ ಎಂದು ಆರೋಪಿಸಲಾಗಿದೆ. ಪ್ರಧಾನಿ ನರೇಂದ್ರ ಮೋದಿ ಅವರ ಮುಂಬೈ ಭೇಟಿಗೂ ಮುನ್ನ ಭದ್ರತಾ ಲೋಪದ ಕುರಿತು ಪ್ರಕಟವಾದ ಪೋಸ್ಟ್‌ಗೆ ಪ್ರತಿಕ್ರಿಯಿಸುವಾಗ, ಮಾಜಿ ಪ್ರಧಾನಿ ಇಂದಿರಾ ಗಾಂಧಿ ಅವರ ಹತ್ಯೆಯನ್ನು ಉಲ್ಲೇಖಿಸಿ ಮೋದಿ ವಿರುದ್ಧವೂ ಅದೇ ರೀತಿಯ ಕೃತ್ಯ ಎಸಗಬೇಕೆಂಬ ಅರ್ಥ ಬರುವ ಹೇಳಿಕೆ ನೀಡಿದ್ದಾನೆ ಎಂದು ವರದಿಯಾಗಿದೆ.
ಮೊಬೈಲ್ ಫೋನ್ ವಶಕ್ಕೆ
ತನಿಖೆಯ ಭಾಗವಾಗಿ ಆರೋಪಿಯಿಂದ ರೆಡ್ಮಿ ನೋಟ್ 14 ಪ್ರೊ ಮೊಬೈಲ್ ಫೋನ್ ವಶಪಡಿಸಿಕೊಳ್ಳಲಾಗಿದೆ. ಸಾಮಾಜಿಕ ಜಾಲತಾಣಗಳಲ್ಲಿ ಆತ ಪ್ರಕಟಿಸಿದ್ದ ಆಕ್ಷೇಪಾರ್ಹ ಪೋಸ್ಟ್‌ಗಳಿಗೆ ಸಂಬಂಧಿಸಿದ 39 ಸ್ಕ್ರೀನ್‌ಶಾಟ್‌ಗಳನ್ನು ಅಧಿಕಾರಿಗಳು ಸಂಗ್ರಹಿಸಿದ್ದಾರೆ.
ಜೈಲಿನಿಂದ ಬಿಡುಗಡೆಯಾದರೂ ʼಜಿರಳೆʼ ನಾಯಕ ಸೌರವ್ ದಾಸ್ ಬೆಂಬಿಡದ ಸಂಕಷ್ಟ
ವಿವಿಧ ಧಾರ್ಮಿಕ ಗುಂಪುಗಳ ನಡುವೆ ದ್ವೇಷವನ್ನು ಉತ್ತೇಜಿಸಿದ ಆರೋಪದ ಮೇಲೆ ಭಾರತೀಯ ನ್ಯಾಯ ಸಂಹಿತೆಯ (BNS) ಸೆಕ್ಷನ್ 196(1) ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ.
ನೆರೆಹೊರೆಯವರಿಗೆ ಅನುಮಾನವೇ ಇರಲಿಲ್ಲ
ಆರೋಪಿ ಕಳೆದ ಮೂರೂವರೆ ವರ್ಷಗಳಿಂದ ಬಾಡಿಗೆ ಮನೆಯಲ್ಲಿ ವಾಸಿಸುತ್ತಿದ್ದ ಎಂದು ಆತನ ನೆರೆಹೊರೆಯವರು ಐಎಎನ್‌ಎಸ್‌ಗೆ ತಿಳಿಸಿದ್ದಾರೆ. ಆತ ಇಂತಹ ಕೃತ್ಯಗಳಲ್ಲಿ ತೊಡಗಿರಬಹುದು ಎಂದು ತಮಗೆ ಎಂದಿಗೂ ಎನಿಸಿರಲಿಲ್ಲ. ಮನೆಯಿಂದ ಹೊರಗೆ ಕುಳಿತುಕೊಳ್ಳುತ್ತಿದ್ದ ಆತನೊಂದಿಗೆ ಮಾತನಾಡುತ್ತಿದ್ದೆವು. ಮೊದಲು ಸುಗಂಧ ದ್ರವ್ಯಗಳನ್ನು ಮಾರಾಟ ಮಾಡುತ್ತಿದ್ದ ಆತ, ಬಳಿಕ ರಾತ್ರಿ ವೇಳೆ ಬೇರೆ ಕೆಲಸಕ್ಕೆ ಹೋಗುತ್ತಿದ್ದ ಎಂದು ನೆರೆಹೊರೆಯವರು ಹೇಳಿದ್ದಾರೆ. ಆದರೆ ದೇಶಕ್ಕೆ ದ್ರೋಹ ಬಗೆಯುವ ಯಾರೇ ಆಗಿದ್ದರೂ ಅವರಿಗೆ ಶಿಕ್ಷೆಯಾಗಬೇಕು ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.
ಟೈಗರ್ ಶ್ರಾಫ್ ಮೇಲಿನ ದಾಳಿ ಪ್ರಕರಣದ ಬೆನ್ನಲ್ಲೇ ಬಂಧನ
ಬಾಲಿವುಡ್ ನಟ ಟೈಗರ್ ಶ್ರಾಫ್ ಅವರ ಮೇಲೆ ಮುಂಬೈಯಲ್ಲಿ ನಡೆದ ದಾಳಿ ಪ್ರಕರಣದ ಕೆಲವೇ ದಿನಗಳ ಬಳಿಕ ಈ ಬಂಧನ ನಡೆದಿದೆ. ಆ ಪ್ರಕರಣದಲ್ಲಿ ಭಾಗಿಯಾಗಿರುವ ಶಂಕಿತ ಆರೋಪಿಯೊಬ್ಬ ರ‍್ಯಾಪಿಡೋ ಚಾಲಕನಾಗಿ ಕೆಲಸ ಮಾಡುತ್ತಿದ್ದ ಎನ್ನಲಾಗಿದೆ. ತನ್ನ ಕೆಲಸದ ನೆಪದಲ್ಲಿ ಬಾಲಿವುಡ್ ಸೆಲೆಬ್ರಿಟಿಗಳು ವಾಸಿಸುವ ಐಷಾರಾಮಿ ಪ್ರದೇಶಗಳ ಮೇಲೆ ನಿಗಾ ಇರಿಸಿದ್ದ ಎಂಬ ಆರೋಪವೂ ಕೇಳಿಬಂದಿತ್ತು.
ಈ ಕುರಿತು ಪ್ರತಿಕ್ರಿಯಿಸಿದ್ದ ರ‍್ಯಾಪಿಡೋ ಸಂಸ್ಥೆ, ಸಂಬಂಧಪಟ್ಟ ವ್ಯಕ್ತಿ ಅಕ್ಟೋಬರ್ 14ರಿಂದ ತನ್ನ ವೇದಿಕೆಯಲ್ಲಿ ಚಾಲಕನಾಗಿ ಸಕ್ರಿಯವಾಗಿರಲಿಲ್ಲ ಎಂದು ತಿಳಿಸಿತ್ತು. ಘಟನೆಯ ದಿನ ಆತ ರಾಪಿಡೋ ಸೇವೆಯನ್ನು ಗ್ರಾಹಕನಾಗಿ ಬಳಸಿದ್ದ ಎಂದು ಸಂಸ್ಥೆ ಸ್ಪಷ್ಟಪಡಿಸಿತ್ತು.
ಇದಕ್ಕೂ ಮೊದಲು, ಜುಲೈಯಲ್ಲಿ ಜೈಶ್-ಎ-ಮೊಹಮ್ಮದ್‌ಗೆ ಸಂಬಂಧಿಸಿದ ಶಂಕಿತ ಉಗ್ರ ಜಾಲದ ತನಿಖೆಯ ವೇಳೆ ಗುಜರಾತ್ ಭಯೋತ್ಪಾದನಾ ನಿಗ್ರಹ ದಳ ಐವರನ್ನು ವಶಕ್ಕೆ ಪಡೆದಿತ್ತು.