ಬೆಂಗಳೂರು: ಬೆಂಗಳೂರಿನ ವಿಜಯನಗರ ಕ್ಲಬ್‌ನ ಮಾಜಿ ಕಾರ್ಯದರ್ಶಿ ಎಸ್.ನಾಗಚಂದ್ರ ಸಾವಿನ ಪ್ರಕರಣ ಇದೀಗ ಹೊಸ ತಿರುವು ಪಡೆದುಕೊಂಡಿದೆ. ಇದುವರೆಗೆ ಅಸಹಜ ಸಾವು ಎಂದು ಪರಿಗಣಿಸಲಾಗಿದ್ದ ಪ್ರಕರಣದಲ್ಲಿ, ಖಾಸಗಿ ದೂರಿನ ಆಧಾರದ ಮೇಲೆ ನಗರದ 24ನೇ ಎಸಿಜೆಎಂ ನ್ಯಾಯಾಲಯದ ಆದೇಶದಂತೆ ವಿಜಯನಗರ ಪೊಲೀಸರು ಎಫ್‌ಐಆರ್ ದಾಖಲಿಸಿ ತನಿಖೆ ಆರಂಭಿ ಸಿದ್ದಾರೆ.
ನಾಗಚಂದ್ರ ಅವರ ಸ್ನೇಹಿತ ರಾಜುಗೌಡ ನೀಡಿರುವ ದೂರಿನ ಆಧಾರದ ಮೇಲೆ ಪತ್ನಿ ಜೆ.ಚಂದನಾ ವಿರುದ್ಧ ಜೂನ್ 1 ರಂದು ಎಫ್.ಐ.ಆರ್ ದಾಖಲಾಗಿದೆ. ನಾಗಚಂದ್ರ ಅವರ ಅವರ ಸಾವಿನ ಹಿಂದೆ ನಿರ್ಲಕ್ಷ್ಯ ಅಥವಾ ಬೇರೆ ಯಾವುದೇ ಅಪರಾಧ ನಡೆದಿದೆಯೇ ಎಂಬ ಬಗ್ಗೆ ಪೊಲೀಸರು ತನಿಖೆ ನಡೆಸಲಿದ್ದಾರೆ. ಪ್ರಕರಣದ ಕುರಿತು ಸಲ್ಲಿಸಲಾದ ಖಾಸಗಿ ದೂರಿನಲ್ಲಿ ಹಲವು ಗಂಭೀರ ಆರೋಪ ಗಳನ್ನು ಮಾಡಲಾಗಿದ್ದು, ಈ ಆರೋಪಗಳು ತನಿಖೆಗೆ ಅರ್ಹವೆಂದು ಕಂಡ ನ್ಯಾಯಾಲಯ ಎಫ್‌ಐಆರ್ ದಾಖಲಿಸುವಂತೆ ಆದೇಶಿಸಿತ್ತು.
ರಕ್ತದೊತ್ತಡದಿಂದ ಬಳಲುತ್ತಿದ್ದ ನಾಗಚಂದ್ರ ಅವರು ಧೂಮಪಾನ, ಮದ್ಯಪಾನದ ಜೊತೆಗೆ ಬೆನ್ನು ಮೂಳೆಯ ಕಾಯಿಲೆಯಿಂದಲೂ ಸಹ ಬಳಲುತ್ತಿದ್ದರು. 2024 ರ ಅಕ್ಟೋಬರ್ 24 ರಂದು ಬೆಳಿಗ್ಗೆ ಇವರಿಗೆ ಪತ್ನಿ ಮಾತ್ರೆ ಕೊಟ್ಟು ಮಲಗಿಸಿದ್ದರು. ಸಂಜೆ 5.45 ರ ವೇಳೆಗೆ ಪತ್ನಿ ಚಂದನಾ ಎಬ್ಬಿಸಿದಾಗ ಪ್ರತಿಕ್ರಿಯೆ ನೀಡಿರಲಿಲ್ಲ. ಬಳಿಕ ವಿಜಯನಗರದ ಸನ್ ಫ್ಲವರ್ ಆಸ್ಪತ್ರೆಗೆ ಕರೆದೊಯ್ದಾಗ ಮೃತ ಪಟ್ಟಿರುವುದಾಗಿ ವೈದ್ಯರು ತಿಳಿಸಿದ್ದರು.
ಇದನ್ನೂ ಓದಿ: Shidlaghatta Crime: ಅಕ್ರಮವಾಗಿ ಸಾಗಿಸುತ್ತಿದ್ದ ಗೋಧಿ ಕ್ಯಾಂಟರ್ ಸೆರೆ; ಇಬ್ಬರ ವಿರುದ್ಧ ಪ್ರಕರಣ ದಾಖಲು
ಆದರೆ ವಿಕ್ಟೋರಿಯಾ ಆಸ್ಪತ್ರೆ ವೈದ್ಯರು ಸರಿಯಾಗಿ ಮರಣೋತ್ತರ ಪರೀಕ್ಷೆ ನಡೆಸಿಲ್ಲ ಎಂದು ಅರ್ಜಿದಾರರು ದೂರು ನೀಡಿದ್ದಾರೆ. ನಾಗಚಂದ್ರ ಅವರ ಕೊಠಡಿಯಲ್ಲಿ ಮಾನಸಿಕ ಚಿಕಿತ್ಸೆಗೆ ಸಂಬಂಧಿಸಿದ ಮಾತ್ರೆಗಳು, ಸಿಗರೇಟ್ ಪ್ಯಾಕ್ ಗಳು, ಮದ್ಯದ ಬಾಟೆಲಿಗಳು ದೊರೆತಿವೆ. ಕೊಠಡಿಯ ಸ್ವಚ್ಛತೆಗೆ ಆದ್ಯತೆ ನೀಡದೇ ನಾಗಚಂದ್ರ ಅವರ ಆರೋಗ್ಯದ ಬಗ್ಗೆ ನಿರ್ಲಕ್ಷ್ಯ ವಹಿಸಿರುವುದು ಕಂಡು ಬಂದಿದೆ ಎಂಬುದಾಗಿ ಅರ್ಜಿದಾರರು ಆರೋಪಿಸಿದ್ದಾರೆ.
ನಾಗಚಂದ್ರ ಪ್ರಕರಣದಲ್ಲಿ ಸತ್ಯದ ಹುಡುಕಾಟಕ್ಕೆ ಹೊಸ ಅಧ್ಯಾಯ ಪ್ರಾರಂಭವಾಗಿದೆ. ಕೆಲ ವೊಮ್ಮೆ ಒಂದು ಸಾವು ಕೇವಲ ಒಂದು ಕುಟುಂಬದ ದುಃಖವಾಗಿರುವುದಿಲ್ಲ. ಅದು ಅನೇಕ ಪ್ರಶ್ನೆಗ ಳನ್ನು ಹುಟ್ಟು ಹಾಕುತ್ತದೆ. ಸಂಬಂಧಗಳ ನಿಜಸ್ವರೂಪ, ನ್ಯಾಯ ವ್ಯವಸ್ಥೆಯ ಮೇಲಿನ ನಂಬಿಕೆ ಹಾಗೂ ಸತ್ಯದ ಅನ್ವೇಷಣೆಯ ಅಗತ್ಯವನ್ನು ಸಮಾಜದ ಮುಂದೆ ನಿಲ್ಲಿಸುತ್ತದೆ. ನಾಗಚಂದ್ರ ಅವರ ಸಾವಿನ ಪ್ರಕರಣವೂ ಇದೀಗ ಅಂತಹ ಹಂತವನ್ನು ತಲುಪಿದೆ.
ಆರಂಭದಲ್ಲಿ ಅಸಹಜ ಸಾವು ಪ್ರಕರಣ ಎಂದು ದಾಖಲಾಗಿದ್ದರೂ, ಸಾವಿನ ಸುತ್ತಲಿನ ಹಲವು ಅನುಮಾನಗಳು, ವೈದ್ಯಕೀಯ ಚಿಕಿತ್ಸೆ, ಮರಣೋತ್ತರ ಪರೀಕ್ಷೆ ಹಾಗೂ ಆರಂಭಿಕ ತನಿಖೆಯ ಬಗ್ಗೆ ಪ್ರಶ್ನೆಗಳು ಎದ್ದ ಹಿನ್ನೆಲೆಯಲ್ಲಿ ಈ ಪ್ರಕರಣ ಮತ್ತೆ ಬೆಳಕಿಗೆ ಬಂದಿದೆ.
ಇತ್ತೀಚಿನ ದಿನಗಳಲ್ಲಿ ರಾಜ್ಯದಲ್ಲಿ ಆಸ್ತಿ, ಹಣಕಾಸು ಹಾಗೂ ವೈಯಕ್ತಿಕ ಸಂಬಂಧಗಳ ಹಿನ್ನೆಲೆ ಯಲ್ಲಿನ ಅನುಮಾನಾಸ್ಪದ ಸಾವುಗಳ ಬಗ್ಗೆ ಹಲವು ಪ್ರಕರಣಗಳು ಬೆಳಕಿಗೆ ಬರುತ್ತಿರುವ ಸಂದರ್ಭ ದಲ್ಲಿ, ನಾಗಚಂದ್ರ ಅವರ ಪ್ರಕರಣವೂ ಸಾರ್ವಜನಿಕ ಕುತೂಹಲ ಕೆರಳಿಸಿದೆ. ಆದರೆ ಈ ಪ್ರಕರಣ ದಲ್ಲಿ ದಾಖಲಾಗಿರುವ ಆರೋಪಗಳು ತನಿಖೆಯ ಹಂತದಲ್ಲಿದೆ. ಪೊಲೀಸರು ವೈದ್ಯಕೀಯ ದಾಖಲೆಗಳು, ಸಾಕ್ಷಿಗಳ ಹೇಳಿಕೆಗಳು ಹಾಗೂ ಇತರೆ ಸಾಕ್ಷ್ಯಗಳನ್ನು ಪರಿಶೀಲಿಸಿ ನ್ಯಾಯಾಲಯಕ್ಕೆ ತನಿಖಾ ವರದಿ ಸಲ್ಲಿಸಲಿದ್ದಾರೆ ಎಂದು ತಿಳಿದು ಬಂದಿದೆ.