Odisha Horror: ಹೆಣ್ಣು ಹೆತ್ತಿದ್ದಕ್ಕೆ ಸೊಸೆಗೆ ಬೆಂಕಿ ಹಚ್ಚಿದ ಮಾವ; 21ನೇ ಶತಮಾನದಲ್ಲೂ ನಾಚಿಗೇಡಿನ ಕೃತ್ಯ
Crime News: ಒಡಿಶಾದಲ್ಲಿ ವ್ಯಕ್ತಿಯೊಬ್ಬ ಹೆಣ್ಣು ಮಗುವನ್ನು ಹೆತ್ತಿದ್ದಕ್ಕೆ ಸೊಸೆಗೆ ಬೆಂಕಿ ಹಚ್ಚಲು ಯತ್ನಿಸಿರುವ ಅಮಾನುಷ ಘಟನೆ ನಡೆದಿದೆ. ಕೆಂದ್ರಪಾರ ಜಿಲ್ಲೆಯಲ್ಲಿ ನಡೆದ ಈ ಕೃತ್ಯ ದೇಶವನ್ನೇ ಬೆಚ್ಚಿ ಬೀಳಿಸಿದೆ. ಧರ್ಮಪುರ ಗ್ರಾಮದ 75 ವರ್ಷದ ಪ್ರಫುಲ್ಲ ರೆ ಎನ್ನುವ ವೃದ್ಧನೇ ಕೊಲೆ ಮಾಡಲು ಯತ್ನಿಸಿದ ಪಾಪಿ.
ಸಾಂದರ್ಭಿಕ ಚಿತ್ರ. -
ಭುವನೇಶ್ವರ, ಜ. 24: ಹೆಣ್ಣು ಮಕ್ಕಳು ಈಗ ಎಲ್ಲ ಕ್ಷೇತ್ರದಲ್ಲೂ ಛಾಪು ಮೂಡಿಸಿ ತಾವು ಯಾರಿಗೂ ಕಡಿಮೆ ಇಲ್ಲ ಎನ್ನುವುದನ್ನು ಸಾಧಿಸಿ ತೋರಿಸಿದ್ದಾರೆ. ಅದಾಗ್ಯೂ ಇನ್ನೂ ಹೆಣ್ಣು ಮಕ್ಕಳ ವಿರುದ್ಧದ ದೌರ್ಜನ್ಯ ಕಡಿಮೆಯಾಗಿಲ್ಲ. ಈ 21ನೇ ಶತಮಾನದಲ್ಲಿಯೂ ಹೆಣ್ಣು ಮಕ್ಕಳನ್ನು ಕೀಳಾಗಿ ನೋಡುವವರು ಇದ್ದಾರೆ ಎನ್ನುವುದಕ್ಕೆ ಈ ಘಟನೆಯೇ ಸ್ಪಷ್ಟ ಉದಾಹರಣೆ (Crime News). ಒಡಿಶಾದಲ್ಲಿ ವ್ಯಕ್ತಿಯೊಬ್ಬ ಹೆಣ್ಣು ಮಗುವನ್ನು ಹೆತ್ತಿದ್ದಕ್ಕೆ ಸೊಸೆಗೆ ಬೆಂಕಿ ಹಚ್ಚಲು ಯತ್ನಿಸಿರುವ ಅಮಾನುಷ ಘಟನೆ ನಡೆದಿದೆ (Odisha Horror). ಕೆಂದ್ರಪಾರ ಜಿಲ್ಲೆಯಲ್ಲಿ ನಡೆದ ಈ ಕೃತ್ಯ ದೇಶವನ್ನೇ ಬೆಚ್ಚಿ ಬೀಳಿಸಿದೆ.
ಧರ್ಮಪುರ ಗ್ರಾಮದ 75 ವರ್ಷದ ಪ್ರಫುಲ್ಲ ರೆ ಎನ್ನುವ ವೃದ್ಧನೇ ಮಾನವೀಯತೆ ಮರೆತು ತನ್ನ ಸೊಸೆ ಸುಶ್ಮಿತಾ ಮತ್ತು ನವಜಾತ ಶಿಶುವನ್ನು ಕೊಲೆ ಮಾಡಲು ಯತ್ನಿಸಿದ ಪಾಪಿ. ಸೊಸೆಯ ಬೆಡ್ ಮೇಲೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಲು ಯತ್ನಿಸಿದ್ದಾನೆ ಎಂದು ಮೂಲಗಳು ತಿಳಿಸಿವೆ. ಸುಶ್ಮಿತಾ ತಮ್ಮ ನವಜಾತ ಶಿಶುವಿನೊಂದಿಗೆ ಮಲಗಿದ್ದಾಗ ಪ್ರಫುಲ್ಲ ರೆ ದಾಳಿ ನಡೆಸಿದ್ದಾನೆ. ಪೆಟ್ರೋಲ್ ಎರಚಿ ಬೆಂಕಿ ಹಚ್ಚಿದ್ದಾನೆ. ಅದೃಷ್ಟವಶಾತ್ ಸುಶ್ಮಿತಾ ಮತ್ತು ಮಗಳು ಪಾರಾಗಿದ್ದಾರೆ.
ಸೊಸೆಗೆ ಬೆಂಕಿ ಹಚ್ಚಲು ಯತ್ನಿಸಿದ ವೃದ್ಧ:
#ଝିଅ_ହେଲା_ବୋଲି..#ବୋହୂକୁ_ଜାଳିଦେଲା_ଶଶୁର!
— Sambad (ସମ୍ବାଦ) (@sambad_odisha) January 23, 2026
ପଟ୍ଟାମୁଣ୍ଡାଇ ଗ୍ରାମାଞ୍ଚଳ ଥାନା ଅନ୍ତର୍ଗତ ଡାମରପୁର ଗ୍ରାମରେ ଅଭାବନୀୟ ଘଟଣା। ଝିଅ ହେବାରୁ ବୋହୂକୁ ପୋଡ଼ି ମାରିଦେବାକୁ ଉଦ୍ୟମ।#Sambad #DomesticViolence #Damarpur #Pattamundai #WomenSafety #CrimeNews #IndiaNews #DaughterInLawAbuse #ShockingIncident… pic.twitter.com/Err8QPKnc6
ಘಟನೆ ವಿವರ
ಇದ್ದಕ್ಕಿದ್ದಂತೆ ರೂಮ್‌ನಲ್ಲಿ ಬೆಂಕಿ ಕಾಣಿಸಿಕೊಂಡು ಹೊತ್ತಿ ಉರಿಯತೊಡಗಿತು. ಕೂಡಲೇ ಎಚ್ಚೆತ್ತುಕೊಂಡ ಸುಶ್ಮಿತಾ ತನ್ನ ಮಗುವನ್ನು ಎದೆಗವುಚಿಕೊಂಡು ರೂಮ್‌ನಿಂದ ಅಚೆ ಓಡಿ ಬಂದಿದ್ದಾರೆ. ಸುರಕ್ಷತೆ ದೃಷ್ಟಿಯಿಂದ ಆ ಚಳಿಯಲ್ಲಿ ನಡುಗುತ್ತ ಅವರು ಇಡೀ ರಾತ್ರಿ ಮನೆಯಿಂದ ಆಚೆ ಕಳೆದಿದ್ದಾರೆ ಎಂದು ಮೂಲಗಳು ತಿಳಿಸಿವೆ.
ನಿಶ್ಚಿಂತಕೋಯಿಲಿ ಬಲಿಪಾದ ಮೂಲದ ಸುಶ್ಮಿತಾ ಧರ್ಮಪುರದ ಸುಶಾಂತ್ ರೆಯನ್ನು 8 ವರ್ಷಗಳ ಹಿಂದೆ ವಿವಾಹವಾಗಿದ್ದರು. ಈ ದಂಪತಿಗೆ ಈಗಾಗಲೇ ಇಬ್ಬರು ಹೆಣ್ಣು ಮಕ್ಕಳಿದ್ದಾರೆ. ಇದೀಗ ಸುಶ್ಮಿತಾ ಮತ್ತೆ ಹೆಣ್ಣು ಮಗುವಿಗೆ ಜನ್ಮ ನೀಡಿದ್ದು, ಮನೆಯವರ ಅಸಮಾಧಾನಕ್ಕೆ ಕಾರಣವಾಯಿತು. ಹೀಗಾಗಿ ಕೆಲವು ದಿನಗಳಿಂದ ಸುಶ್ಮಿತಾ ಅವರಿಗೆ ಪತಿ ಮತ್ತು ಮಾವ-ಅತ್ತೆ ನಿರಂತರವಾಗಿ ಮಾನಸಿಕ ಮತ್ತು ದೈಹಿಕ ಕಿರುಕುಳ ನೀಡುತ್ತಿದ್ದರು.
ಪ್ರಿಯಕರನೊಂದಿಗೆ ಸೇರಿ ಪತಿಯನ್ನೇ ಹತೈಗೈದು ಮೊಬೈಲ್‌ನಲ್ಲಿ ಅಶ್ಲೀಲ ವಿಡಿಯೊ ನೋಡುತ್ತ ಕುಳಿತ ಪಾಪಿ ಪತ್ನಿ!
ಅಧಿಕಾರಿಗಳು ಹೇಳಿದ್ದೇನು?
ಪೊಲೀಸ್ ಅಧಿಕಾರಿ ಶ್ರೀಕಾಂತ್ ಬರಿಕ್ ಈ ಬಗ್ಗೆ ಮಾತನಾಡಿ, ʼʼಮಾಹಿತಿ ಲಭ್ಯವಾಗುತ್ತಿದ್ದಂತೆ ಸ್ಥಳಕ್ಕೆ ಭೇಟಿ ನೀಡಿದ್ದೇವೆ. ಪೊಲೀಸರು ಈಗಾಗಲೇ ಘಟನೆ ಬಗ್ಗೆ ತನಿಖೆ ಆರಂಭಿಸಿದ್ದಾರೆ. ವಿಧಿ ವಿಜ್ಞಾನ ತಂಡವೂ ಪರಿಶೀಲನೆ ಆರಂಭಿಸಿದೆʼʼ ಎಂದು ಹೇಳಿದ್ದಾರೆ. ಸುಶ್ಮಿತಾ ಅವರ ಸಹೋದರಿ ಕನಕಲತಾ ರೆ ಅವರ ದೂರಿನ ಮೇರೆಗೆ ಪೊಲೀಸರು ಕೃತ್ಯ ಎಸಗಿದ ಪ್ರಫುಲ್ಲ ರೆಯನ್ನು ಬಂಧಿಸಿದ್ದಾರೆ.
ಕಿಡಿಕಾರಿದ ನೆಟ್ಟಿಗರು
ಸದ್ಯ ಈ ಘಟನೆ ದೇಶಾದ್ಯಂತ ಭಾರಿ ಚರ್ಚೆಗೆ ಕಾರಣವಾಗಿದೆ. ದೇಶ ಇಷ್ಟು ಮುಂದುವರಿದಿದ್ದರೂ ಇನ್ನೂ ಮೂಢನಂಬಿಕೆಯನ್ನು ತಲೆಯಲ್ಲಿ ತುಂಬಿಕೊಂಡಿರುವ ಪ್ರಫುಲ್ಲ ರೆಯಂತವರ ಬಗ್ಗೆ ಹಲವರು ಕಿಡಿಕಾರಿದ್ದಾರೆ. ಜನವರಿ 24ರಂದು ಹೆಣ್ಣು ಮಕ್ಕಳ ದಿನವನ್ನಾಗಿ ಆಚರಿಸಲಾಗುತ್ತಿದೆ. ಅಂದೇ ಈ ಘಟನೆ ಬೆಳಕಿಗೆ ಬಂದಿದ್ದು, ಕೃತ್ಯದಲ್ಲಿ ಭಾಗಿಯಾದ ಪ್ರತಿಯೊಬ್ಬರಿಗೂ ಕಠಿಣ ಶಿಕ್ಷೆ ನೀಡಬೇಕೆಂದು ಆಗ್ರಹಿಸಿದ್ದಾರೆ.