ಚನ್ನಪಟ್ಟಣ: ಕುಟುಂಬದ ವ್ಯಾಜ್ಯ ಪರಿಹರಿಸಲು ಬಂದ ಪೊಲೀಸ್ ಪೇದೆ (Police Constable) ತನ್ನನ್ನು ನಾಲ್ಕು ಬಾರಿ ಅತ್ಯಾಚಾರ (Physical Abuse) ಮಾಡಿದ್ದಾನೆ. ಮಾತ್ರವಲ್ಲದೇ ತನ್ನಿಂದ 12 ಲಕ್ಷ ರೂ ಹಣ ಕೂಡ ಪಡೆದು ವಂಚಿಸಿದ್ದಾನೆ ಎಂದು ಮಹಿಳೆಯೊಬ್ಬರು ಗಂಭೀರ ಆರೋಪ ಮಾಡಿದ್ದಾರೆ. ರಾಮನಗರದಲ್ಲಿ (Ramanagara) ಡಿಎಆರ್ ಪೇದೆಯೊಬ್ಬರ ವಿರುದ್ಧ ಮಹಿಳೆ ಅತ್ಯಾಚಾರದ ಆರೋಪ ಮಾಡಿದ್ದು, ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಆರೋಪಿ ಪೇದೆ ನಾಪತ್ತೆಯಾಗಿದ್ದು, ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ನಡೆಸಿದ್ದಾರೆ.
ಡಿಎಆರ್ ಪೇದೆ ಪುಟ್ಟಸ್ವಾಮಿ ವಿರುದ್ಧ ಈ ಗಂಭೀರ ಆರೋಪ ಕೇಳಿಬಂದಿದ್ದು, ಈತ 112 ವಾಹನದ ಚಾಲಕನಾಗಿ ಕೆಲಸ ಮಾಡುತ್ತಿದ್ದ. ಚನ್ನಪಟ್ಟಣ ತಾಲ್ಲೂಕಿನ ಮಹಿಳೆಯೊಬ್ಬರನ್ನು ಅತ್ಯಾಚಾರ ಮಾಡಿ, ಮಹಿಳೆಯನ್ನು ಪುಸಲಾಯಿಸಿ 12 ಲಕ್ಷ ರೂ. ಹಣ ಕೂಡಾ ಪಡೆದಿದ್ದಾನೆ ಎಂದು ದೂರಿನಲ್ಲಿ ಆರೋಪಿಸಲಾಗಿದೆ. ಮೂಲಗಳ ಪ್ರಕಾರ ಯಾವುದೋ ಗಲಾಟೆ ಪ್ರಕರಣ ಸಂಬಂಧ ಸಂತ್ರಸ್ತ ಮಹಿಳೆ 112ಗೆ ಕರೆ ಮಾಡಿದ್ದರು. ಈ ವೇಳೆ ಸ್ಥಳಕ್ಕಾಗಮಿಸಿದ 112 ವಾಹನದ ಚಾಲಕ ಡಿಎಆರ್ ಪೇದೆ ಪುಟ್ಟಸ್ವಾಮಿ ಸಂತ್ರಸ್ತ ಮಹಿಳೆಯ ಪರಿಚಯ ಮಾಡಿಕೊಂಡು ಸ್ನೇಹ ಬೆಳೆಸಿಕೊಂಡಿದ್ದ. ಬಳಿಕ ಆಕೆಯಿಂದ ಪೋನ್ ನಂಬರ್ ಪಡೆದು ಸಲುಗೆ ಬೆಳೆಸಿಕೊಂಡಿದ್ದ.
ಬಳಿಕ ಆಕೆಗೆ ಹತ್ತಿರವಾಗಿ ವಿವಿಧ ಸಂದರ್ಭಗಳಲ್ಲಿ ಆಕೆಯನ್ನು ಲೈಂಗಿಕವಾಗಿ ಬಳಸಿಕೊಂಡಿದ್ದಾನೆ ಎಂದು ಮಹಿಳೆ ಆರೋಪಿಸಿದ್ದಾರೆ. ಈ ರೀತಿ ಪೇದೆ ಪುಟ್ಟಸ್ವಾಮಿ ತನ್ನ ಮೇಲೆ ನಾಲ್ಕು ಬಾರಿ ಅತ್ಯಾಚಾರ ಮಾಡಿದ್ದಾನೆ ಎಂದು ಮಹಿಳೆ ಆರೋಪಿಸಿದ್ದಾರೆ. ಅಲ್ಲದೆ ತನ್ನ ಬಳಿ ಸುಮಾರು 12 ಲಕ್ಷ ರೂ. ಹಣ ಪಡೆದು ಹಣವನ್ನೂ ನೀಡದೆ ಸತಾಯಿಸುತ್ತಿದ್ದಾನೆ ಎಂದು ದೂರಿನಲ್ಲಿ ಆರೋಪಿಸಿದ್ದಾಳೆ.
ಈ ಬಗ್ಗೆ ಎಂಕೆ ದೊಡ್ಡಿ ಪೊಲೀಸ್ ಠಾಣೆಗೆ ಮಹಿಳೆ ದೂರು ನೀಡಿದ್ದಾರೆ. ಪ್ರಕರಣ ದಾಖಲಾಗುತ್ತಿದ್ದಂತೆ ಪೇದೆ ಪುಟ್ಟಸ್ವಾಮಿ ತಲೆಮರೆಸಿಕೊಂಡಿದ್ದಾನೆ. ಪ್ರಕರಣ ಸಂಬಂಧ ಪೇದೆಯನ್ನು ಎಸ್‌ಪಿ ಶ್ರೀನಿವಾಸ್ ಗೌಡ ಅಮಾನತು ಮಾಡಿದ್ದಾರೆ. ಪ್ರಕರಣ ತನಿಖೆಯನ್ನು ಡಿಸಿಆರ್‌ಇ ಪೊಲೀಸ್ ಠಾಣೆಗೆ ವರ್ಗಾವಣೆ ಮಾಡಲಾಗಿದೆ. ಜುಲೈ 3ರಂದು ಪ್ರಕರಣ ದಾಖಲಾಗಿದ್ದು, ತಲೆ ಮರೆಸಿಕೊಂಡಿರುವ ಪೇದೆಯ ಬಂಧನಕ್ಕೆ ಪೊಲೀಸರು ಬಲೆ ಬೀಸಿದ್ದಾರೆ.
ಇದನ್ನೂ ಓದಿ: Mangaluru News: ಪತ್ನಿ ಮೇಲೆಯೇ ಅತ್ಯಾಚಾರ ಎಸಗಲು ಪೊಲೀಸ್ ಪೇದೆಗೆ ಸಹಕರಿಸಿದ ಪತಿ; ಇಬ್ಬರು ಅರೆಸ್ಟ್