ಭೋಪಾಲ್, ಆ. 17: ಇನ್‌ಸ್ಟಾಗ್ರಾಂನಲ್ಲಿ ಪಿಸ್ತೂಲ್ ಪ್ರದರ್ಶಿಸಿದ ಪ್ರಕರಣದ ತನಿಖೆ ನಡೆಸಲು ತೆರಳಿದ ಪೊಲೀಸರಿಗೆ ಮನೆಯೊಂದರಲ್ಲಿ ಬರೋಬ್ಬರಿ 3 ಕೋಟಿ ರುಪಾಯಿ ನಗದು ಪತ್ತೆಯಾದ ಘಟನೆ ಮಧ್ಯ ಪ್ರದೇಶದ ಸಾಗರ್‌ನಲ್ಲಿ ನಡೆದಿದೆ. ಆದರೆ, ಪೊಲೀಸರು ಹುಡುಕಾಟ ನಡೆಸಿದ ವೇಳೆ ಯಾವುದೇ ಪಿಸ್ತೂಲ್ ಪತ್ತೆಯಾಗಿಲ್ಲ. ಸಾಮಾಜಿಕ ಜಾಲತಾಣಗಳಲ್ಲಿ ಪಿಸ್ತೂಲ್, ಚಾಕು ಸೇರಿ ಶಸ್ತ್ರಾಸ್ತ್ರಗಳನ್ನು ಪ್ರದರ್ಶಿಸುವವರ ವಿರುದ್ಧ ಪೊಲೀಸರು ನಡೆಸುತ್ತಿದ್ದ ವಿಶೇಷ ಕಾರ್ಯಾಚರಣೆಯ ವೇಳೆ ಈ ಘಟನೆ ಬೆಳಕಿಗೆ ಬಂದಿದೆ. ಸಾಗರ್ ಪೊಲೀಸ್ ಅಧೀಕ್ಷಕ ಅನುರಾಗ್ ಸುಜಾನಿಯಾ ಅವರ ಪ್ರಕಾರ, ಅಪರಾಧ ಚಟುವಟಿಕೆಗಳ ಶಂಕೆ ಇರುವವರು ಹಾಗೂ ಸಾಮಾಜಿಕ ಜಾಲತಾಣಗಳಲ್ಲಿ ಶಸ್ತ್ರಾಸ್ತ್ರಗಳನ್ನು ಪ್ರದರ್ಶಿಸುವವರ ಇನ್‌ಸ್ಟಾಗ್ರಾಂ ಖಾತೆಗಳನ್ನು ಪರಿಶೀಲಿಸಲಾಗುತ್ತಿತ್ತು.
ಭಾನುವಾರ ಎರಡು ಇನ್‌ಸ್ಟಾಗ್ರಾಂ ಖಾತೆಗಳಲ್ಲಿ ಪಿಸ್ತೂಲ್‌ಗಳ ಫೋಟೊಗಳು ಪತ್ತೆಯಾಗಿದ್ದು, ಅವುಗಳಿಗೆ ಸಂಬಂಧಿಸಿದಂತೆ ಮೋತಿ ನಗರ ಮತ್ತು ಗೋಪಾಲಗಂಜ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರತ್ಯೇಕವಾಗಿ ಪರಿಶೀಲನೆ ನಡೆಸಲಾಯಿತು. ಗೋಪಾಲಗಂಜ್ ಪ್ರದೇಶದಲ್ಲಿ ನಡೆಸಿದ ಪರಿಶೀಲನೆಯ ಭಾಗವಾಗಿ ಪೊಲೀಸರು ಸೌರಭ್ ಅಹಿರ್ವಾರ್‌ನ ಮನೆಗೆ ತೆರಳಿದರು.
ಪಿಸ್ತೂಲ್ ಕುರಿತು ವಿಚಾರಣೆ ನಡೆಸಿ, ಶಸ್ತ್ರಾಸ್ತ್ರಕ್ಕಾಗಿ ಮನೆಯನ್ನು ಶೋಧಿಸುತ್ತಿದ್ದಾಗ ಪೊಲೀಸರ ಗಮನಕ್ಕೆ ಲಾಕ್ ಮಾಡಲಾಗಿದ್ದ ಒಂದು ಕಪಾಟು ಬಂದಿದೆ. ಕಪಾಟಿನ ಕೀಲಿ ತಮ್ಮ ಬಳಿ ಇಲ್ಲ ಎಂದು ಕುಟುಂಬದವರು ಪೊಲೀಸರಿಗೆ ತಿಳಿಸಿದ್ದಾರೆ ಎನ್ನಲಾಗಿದೆ.
ಅನುಕಂಪದ ಸರ್ಕಾರಿ ಕೆಲಸ ಗಿಟ್ಟಿಸಿಕೊಳ್ಳಲು ತಾಯಿಯನ್ನೇ ಕೊಂದ ಪಾಪಿ ಮಗಳು
ನಂತರ ಸಾಕ್ಷಿಗಳ ಸಮ್ಮುಖದಲ್ಲಿ ಅಗತ್ಯ ಕಾನೂನು ಪ್ರಕ್ರಿಯೆಗಳನ್ನು ಪೂರ್ಣಗೊಳಿಸಿ ಕಪಾಟು ತೆರೆಯಲಾಯಿತು. ಅದರೊಳಗೆ ಶಸ್ತ್ರಾಸ್ತ್ರದ ಬದಲು ಹಣದ ಕಂತೆಗಳಿಂದ ತುಂಬಿದ್ದ ಚೀಲಗಳು ಪತ್ತೆಯಾಗಿವೆ. ಭಾರಿ ಪ್ರಮಾಣದ ಹಣವಿದ್ದ ಹಿನ್ನೆಲೆಯಲ್ಲಿ ನೋಟು ಎಣಿಕೆ ಯಂತ್ರವನ್ನು ತರಿಸಿ ಎಣಿಸಲಾಯಿತು.
ಪೊಲೀಸರ ಪ್ರಕಾರ, ಹಣವನ್ನು ವಿಡಿಯೋಗ್ರಫಿ ಹಾಗೂ ಸ್ವತಂತ್ರ ಸಾಕ್ಷಿಗಳ ಸಮ್ಮುಖದಲ್ಲಿ ವಶಕ್ಕೆ ಪಡೆಯಲಾಗಿದ್ದು, ಪ್ರಾಥಮಿಕ ಎಣಿಕೆಯಲ್ಲಿ ಮೊತ್ತ ಸುಮಾರು 3 ಕೋಟಿ ರುಪಾಯಿ ಎಂದು ತಿಳಿದುಬಂದಿದೆ. ಸೌರಭ್ ಅಹಿರ್ವಾರ್ ಟ್ಯಾಕ್ಸಿ ಚಾಲಕನಾಗಿದ್ದು, ಆತನ ಸಹೋದರ ಆಟೋ ಓಡಿಸುತ್ತಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ. ಆದರೆ, ಈ ಹಣ ತಮ್ಮದಲ್ಲ ಎಂದು ಇಬ್ಬರೂ ಪೊಲೀಸರಿಗೆ ಹೇಳಿದ್ದಾರೆ. ರಮೇಶ್ ಅಹಿರ್ವಾರ್ ಎಂಬ ಸಂಬಂಧಿಕರಿಗೆ ಸೇರಿದ ಹಣವನ್ನು ಸುಮಾರು 8–9 ತಿಂಗಳ ಹಿಂದೆ ಕಪಾಟಿನಲ್ಲಿ ಇಡಲಾಗಿತ್ತು ಎಂದು ಕುಟುಂಬದವರು ಹೇಳಿಕೊಂಡಿದ್ದಾರೆ.
ರಮೇಶ್ ಭೋಪಾಲ್‌ನಲ್ಲಿ ವಾಸಿಸುತ್ತಿದ್ದು, ಲೋಕೋಪಯೋಗಿ ಇಲಾಖೆಯಲ್ಲಿ (PWD) ಎಂಜಿನಿಯರ್ ಆಗಿ ಕೆಲಸ ಮಾಡುತ್ತಿದ್ದಾನೆ ಎಂದು ಕುಟುಂಬದವರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಆದರೆ, ಹಣದ ನಿಜವಾದ ಮಾಲಕತ್ವ ಮತ್ತು ಅದರ ಮೂಲದ ಬಗ್ಗೆ ಪೊಲೀಸರು ಇನ್ನೂ ಸ್ವತಂತ್ರವಾಗಿ ಪರಿಶೀಲನೆ ನಡೆಸಬೇಕಿದೆ.
ಪಿಸ್ತೂಲ್ ಹುಡುಕಾಟದಿಂದ ಆರಂಭವಾದ ಈ ಪ್ರಕರಣ ಇದೀಗ 3 ಕೋಟಿ ರುಪಾಯಿ ನಗದು ಎಲ್ಲಿಂದ ಬಂತು ಮತ್ತು ಯಾರಿಗೆ ಸೇರಿದ್ದು ಎಂಬುದರ ತನಿಖೆಯಾಗಿ ಮತ್ತಷ್ಟು ತಿರುವು ಪಡೆದುಕೊಂಡಿದೆ. ಈ ಬಗ್ಗೆ ಹೆಚ್ಚಿನ ಮಾಹಿತಿ ಕಲೆ ಹಾಕಲಾಗುತ್ತಿದೆ.