ಹೈದರಾಬಾದ್, ಜು. 11: ಕುಟುಂಬ ಸದಸ್ಯರು ಮತ್ತು ದೂರುದಾರರು ಸೇ ಆರು ಮಂದಿಯನ್ನು ಪೋಕ್ಸೊ ಅಪರಾಧಿ ಹತ್ಯೆ ಮಾಡಿರುವ ಆಘಾತಕಾರಿ ಘಟನೆ ತೆಲಂಗಾಣದ ರಂಗಾರೆಡ್ಡಿ ಜಿಲ್ಲೆಯಲ್ಲಿ ನಡೆದಿದೆ (Telangana Horror). ಪೋಕ್ಸೊ ಕಾಯ್ದೆಯಡಿ ಜೈಲು ಸೇರಿದ್ದ 35 ವರ್ಷದ ಈತ ಜಾಮೀನು ಪಡೆದು ಹೊರ ಬಂದು ತನ್ನ ಇಬ್ಬರು ಮಕ್ಕಳು ಮತ್ತು ತನ್ನ ವಿರುದ್ಧ ದೂರು ದಾಖಲಿಸಿದ ಕುಟುಂಬದ ಮೂವರು ಸೇರಿ ಆರು ಜನರನ್ನು ಕೊಲೆ ಮಾಡಿದ್ದಾನೆ (Crime News). ಈ ಘಟನೆ ದೇಶಾದ್ಯಂತ ಸಂಚಲನ ಮೂಡಿಸಿದೆ.
ಪಿ. ರಾಜ್‌ಕುಮಾರ್ ಕೃತ್ಯ ಎಸಗಿರುವ ಪಾಪಿ. ಈತ ಆರಂಭದಲ್ಲಿ ದೂರು ದಾಖಲಿಸಿದ ಶಾಬಾದ್ ಪಟ್ಟಣದ ಅಪ್ರಾಪ್ತ ಬಾಲಕಿಯ ಮನೆಗೆ ನುಗ್ಗಿ, ಅಲ್ಲಿ ಮಲಗಿದ್ದ ಆಕೆಯ ತಾಯಿ ಮತ್ತು ಅಜ್ಜಿಯನ್ನು ಕೊಲೆ ಮಾಡಿದ್ದಾನೆ. ನಂತರ ಅವನು ಅಪ್ರಾಪ್ತ ಬಾಲಕಿಯನ್ನು ಕಾರಿನಲ್ಲಿ ತನ್ನ ಹುಟ್ಟೂರು ಧೈವಲ್ಗುಡ ಗ್ರಾಮಕ್ಕೆ ಕರೆದೊಯ್ದು ಸರೋವರದ ಬಳಿ ಇರಿದು ಕೊಂದಿದ್ದಾನೆ.
ನಂತರ, ರಾಜ್‌ಕುಮಾರ್ ಸರೋವರದಿಂದ ಸುಮಾರು 250 ಮೀಟರ್ ದೂರದಲ್ಲಿರುವ ತನ್ನ ಮನೆಗೆ ಹೋಗಿ, ತನ್ನ ಪತ್ನಿ ಹಾಗೂ ನಾಲ್ಕು ಮತ್ತು ಒಂದೂವರೆ ವರ್ಷದ ಇಬ್ಬರು ಗಂಡು ಮಕ್ಕಳನ್ನು ಕೊಂದಿದ್ದಾನೆ. ಅವರೆಲ್ಲರೂ ನಿದ್ದೆ ಮಾಡುತ್ತಿದ್ದಾಗ ಆರೋಪಿ ಈ ಕೃತ್ಯ ಎಸಗಿದ್ದಾನೆ.
ಗುರುಗ್ರಾಮದಲ್ಲಿ ಗುಂಡಿನ ಚಕಮಕಿ: ನಾಲ್ವರು ದರೋಡೆಕೋರರ ಎನ್‌ಕೌಂಟರ್
ಈ ವರ್ಷದ ಮೇಯಲ್ಲಿ ಬಾಲಕಿಯ ಕುಟುಂಬಸ್ಥರು ಸಲ್ಲಿಸಿದ ದೂರಿನ ಆಧಾರದ ಮೇಲೆ, ಅಪ್ರಾಪ್ತ ಬಾಲಕಿಯನ್ನು ಹಿಂಬಾಲಿಸಿ ಕಿರುಕುಳ ನೀಡಿದ್ದಕ್ಕಾಗಿ ರಾಜ್‌ಕುಮಾರ್ ವಿರುದ್ಧ ಪೋಕ್ಸೊ ಕಾಯ್ದೆಯಡಿ ಪ್ರಕರಣ ದಾಖಲಿಸಲಾಗಿತ್ತು. ಈ ಪ್ರಕರಣದಲ್ಲಿ ಆತ ಇತ್ತೀಚೆಗೆ ನಿರೀಕ್ಷಣಾ ಜಾಮೀನು ಪಡೆದಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.
ಗಂಟಲು ಸೀಳಿ ಕೊಲೆ
ರಾಜ್‌ಕುಮಾರ್ ಕುಡುಗೋಲು ಮತ್ತು ಚಾಕು ಬಳಸಿ ಸಂತ್ರಸ್ತರನ್ನು ಇರಿದು, ಅವರ ಗಂಟಲು ಸೀಳಿ ಕೊಂದಿದ್ದಾನೆ. ಕೊಲೆ ನಡೆದ ತಕ್ಷಣ, ಅಪರಾಧಿ ತನ್ನ ತಂದೆಗೆ ಕರೆ ಮಾಡಿ ತಾನು ಮಾಡಿರುವ ಅಪರಾಧಗಳನ್ನು ತಿಳಿಸಿದ್ದಾನೆ. ಬಳಿಕ ತಾನು ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಹೇಳಿ, ತನ್ನ ಫೋನ್ ಸ್ವಿಚ್ ಆಫ್ ಮಾಡಿದ್ದಾನೆ. ಭಯಗೊಂಡ ಆತನ ಪೋಷಕರು ಪೊಲೀಸರಿಗೆ ವಿಷಯ ತಿಳಿಸಿದ್ದಾರೆ. ಪೊಲೀಸರು ಧಾವಿಸಿದಾಗ ರಾಜ್‌ಕುಮಾರ್ ಸ್ಥಳದಿಂದ ಪರಾರಿಯಾಗಿದ್ದು, ತಲೆಮರೆಸಿಕೊಂಡಿದ್ದಾನೆ. ಆರು ಮೃತದೇಹಗಳನ್ನು ಮರಣೋತ್ತರ ಪರೀಕ್ಷೆಗಾಗಿ ಆಸ್ಪತ್ರೆಗೆ ಕಳುಹಿಸಲಾಗಿದೆ.
ಅಪರಾಧಿಯನ್ನು ಬಂಧಿಸಲು ಏಳು ತಂಡಗಳನ್ನು ರಚಿಸಲಾಗಿದ್ದು, ಆತನಿಗಾಗಿ ಹುಡುಕಾಟ ನಡೆಸಲಾಗುತ್ತಿದೆ ಎಂದು ಪೊಲೀಸರು ಆಯುಕ್ತರು ಹೇಳಿದರು. ಶೀಘ್ರದಲ್ಲೇ ಆತನನ್ನು ಬಂಧಿಸುತ್ತೇವೆ ಎಂದು ಅವರು ತಿಳಿಸಿದರು. ಒಬ್ಬನೇ ಈ ಹತ್ಯೆಗಳನ್ನು ಮಾಡಿದ್ದಾನೆ ಎಂದು ಪೊಲೀಸರು ಮಾಹಿತಿ ನೀಡಿದರು. ಹತ್ಯೆಗಳಿಗೆ ನಿಖರವಾದ ಕಾರಣ ತನಿಖೆ ಹಂತದಲ್ಲಿದೆ ಎಂದು ಅಧಿಕಾರಿ ಹೇಳಿದರು. ಆತನನ್ನು ಬಂಧಿಸಿ ವಿಚಾರಣೆ ನಡೆಸಿದ ನಂತರ ನಿಜವಾದ ಕಾರಣ ತಿಳಿದುಬರಲಿದೆ.
ಅಪ್ರಾಪ್ತ ಬಾಲಕಿಯ ಮೇಲೆ ಅವನಿಗೆ ತೀವ್ರ ದ್ವೇಷವಿರಬಹುದು ಎಂದು ತನಿಖಾಧಿಕಾರಿಗಳು ಶಂಕಿಸಿದ್ದಾರೆ. ಆದರೆ ಆತನ ಪತ್ನಿ ಮತ್ತು ಇಬ್ಬರು ಮಕ್ಕಳನ್ನು ಹತ್ಯೆ ಮಾಡಿದ ಹಿಂದಿನ ಉದ್ದೇಶ ಇನ್ನೂ ತಿಳಿದುಬಂದಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ.