ಚೆನ್ನೈ, ನ. 9: ದೇಶಾದ್ಯಂತ ಅದ್ಧೂರಿಯಾಗಿ ದೀಪಾವಳಿ ಆಚರಿಸಲಾಗುತ್ತಿದೆ. ಎಲ್ಲೆಡೆ ಪಟಾಕಿ ಸದ್ದು ಜೋರಾಗಿದೆ. ಪಟಾಕಿ ಸಿಡಿಸಲು ಒಂದಷ್ಟು ನಿಯಮ ಜಾರಿಗೆ ತರಲಾಗಿದ್ದು, ಅದರ ಪ್ರಕಾರ ರಸ್ತೆ, ಸಾರ್ವಜನಿಕ ಸ್ಥಳಗಳಲ್ಲಿ ಪಟಾಕಿ ಹೊಡೆಯುವಂತಿಲ್ಲ. ಹಾಗಿದ್ದೂ ಈ ನಿಯಮ ಪದೇ ಪದೆ ಉಲ್ಲಂಘನೆಯಾಗುತ್ತಲೇ ಇದೆ. ಅದಕ್ಕೆ ಉದಾಹರಣೆಯಂತಿದೆ ಈ ಘಟನೆ. ರೀಲ್ಸ್‌ಗಾಗಿ ರಸ್ತೆ ಮಧ್ಯೆ ಪಟಾಕಿ ಹೊಡೆಯುವುದನ್ನು ಪ್ರಶ್ನಿಸಿದ ಪೊಲೀಸ್ ಅಧಿಕಾರಿಯನ್ನು ಮೂವರು ಹೊಡೆದು ಹತ್ಯೆ ಮಾಡಿರುವ ಭೀಕರ ಘಟನೆ ತಮಿಳುನಾಡಿನಲ್ಲಿ ನಡೆದಿದೆ (Tamil Nadu Horror). ಸದ್ಯ ಈ ಪ್ರಕರಣಕ್ಕೆ ಸಂಬಂಧಿಸಿ ಸೋಮವಾರ (ನವೆಂಬರ್ 9) ಮೂವರನ್ನು ಬಂಧಿಸಲಾಗಿದ್ದು, ದೇಶಾದ್ಯಂತ ಸಂಚಲನ ಮೂಡಿಸಿದೆ. ರಾಜ್ಯದಲ್ಲಿ ಟಿವಿಕೆ ಅಧಿಕಾರಕ್ಕೆ ಬಂದ ಬಳಿಕ ಪೊಲೀಸ್ ಅಧಿಕಾರಿಗಳೂ ಸುರಕ್ಷಿತರಲ್ಲ ಎಂದು ವಿಪಕ್ಷಗಳು ಟೀಕಿಸಿವೆ.
ತಮಿಳುನಾಡಿನ ಥೇಣಿ ಜಿಲ್ಲೆಯಲ್ಲಿ ಈ ಕೃತ್ಯ ನಡೆದಿದೆ. ʼʼಈ ಕೃತ್ಯ ನಡೆಸಿದ ಮೂವರನ್ನು ಬಂಧಿಸಲಾಗಿದೆ. ಈ ಬಗ್ಗೆ ಹೆಚ್ಚಿನ ಮಾಹಿತಿ ಆಮೇಲೆ ಹಂಚಿಕೊಳ್ಳಲಾಗುವುದುʼʼ ಎಂದು ಅಧಿಕಾರಿಗಳು ತಿಳಿಸಿದ್ದಾಗಿ ಹಿಂದೂಸ್ಥಾನ್ ಟೈಮ್ಸ್ ವರದಿ ಮಾಡಿದೆ. ಥೇಣಿ ಸಬ್-ಡಿವಿಷನ್ ಪೊಲೀಸರು ಇದೀಗ ಮೂವರ ವಿರುದ್ಧ ಪ್ರಕರಣ ದಾಖಲಿಸಿ ತನಿಖೆಯನ್ನು ತೀವ್ರಗೊಳಿಸಿದ್ದಾರೆ.
ದೀಪಾವಳಿ ಸಂಭ್ರಮದ ನಡುವೆ ಪಟಾಕಿ ಅವಘಡ: ಬೆಂಗಳೂರಿನಲ್ಲಿ 44ಕ್ಕೂ ಹೆಚ್ಚು ಜನರಿಗೆ ಗಾಯ
ಮೃತ ಪೊಲೀಸ್ ಅಧಿಕಾರಿಯನ್ನು ಥೇಣಿ ಸ್ಪೆಷಲ್ ಸಬ್-ಇನ್ಸ್‌ಪೆಕ್ಟರ್ 56 ವರ್ಷದ ಸೆಂಥಿಲ್ ಕುಮಾರ್ ಎಂದು ಗುರುತಿಸಲಾಗಿದೆ. ಸೆಂಥಿಲ್ ಕುಮಾರ್ ಭಾನುವಾರ ಮನೆಗೆ ಹಿಂದಿರುಗುತ್ತಿದ್ದಾಗ ಮೂವರು ಸಮಧರಂಪುರಂ ರಸ್ತೆ ಮಧ್ಯೆ ಪಟಾಕಿ ಸಿಡಿಸಿ ವಿಡಿಯೊ ಚಿತ್ರೀಕರಿಸುತ್ತಿರುವುದನ್ನು ಗಮನಿಸಿ ಈ ಬಗ್ಗೆ ಪ್ರಶ್ನಿಸಿದ್ದರು. ನಿಯಮ ಉಲ್ಲಂಘಿಸುತ್ತಿರುವ ಬಗ್ಗೆ ತರಾಟೆಗೆ ತೆಗೆದುಕೊಂಡಿದ್ದರು. ಅದನ್ನು ನಿರ್ಲಕ್ಷಿಸಿದ ಮೂವರ ವಿಡಿಯೊವನ್ನು ಸೆಂಥಿಲ್ ಕುಮಾರ್ ಚಿತ್ರೀಕರಿಸಲು ಆರಂಭಿಸಿದ್ದರು.
ಈ ವೇಳೆ ಸಂಘರ್ಷ ಭುಗಿಲೆದ್ದಿದ್ದು, ಆ ಪೈಕಿ ಓರ್ವ ಕಬ್ಬಿಣ ರಾಡ್‌ನಿಂದ ಬಲವಾಗಿ ಹೊಡೆದಿದ್ದಾನೆ. ಸೆಂಥಿಲ್ ಕುಮಾರ್ ಕೂಡಲೇ ಕುಸಿದು ಬಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ರಸ್ತೆ ಬದಿ ಕುಸಿದು ಬಿದ್ದಿದ್ದ ಅವರನ್ನು ಕೂಡಲೇ ಆಸ್ಪತ್ರೆಗೆ ದಾಖಲಿಸಲಾಯಿತಾದರೂ ಅಷ್ಟರಲ್ಲಿ ಮೃತಪಟ್ಟಿದ್ದಾರೆ. ಸದ್ಯ ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ.
ರಾಜ್ಯಾದ್ಯಂತ ಭಾರಿ ಸಂಚಲನ
ʼʼರೀಲ್ಸ್‌ಗಾಗಿ ರಸ್ತೆ ಮಧ್ಯೆ ಪಟಾಕಿ ಸಿಡಿಸುತ್ತಿದ್ದ ಮೂವರ ಪೈಕಿ ಒರ್ವ ಯುವಕ ಸೆಂಥಿಲ್ ಕುಮಾರ್ ಅವರ ಮೇಲೆ ಹಲ್ಲೆ ನಡೆಸಿದ್ದಾನೆ. ಕೂಡಲೇ ಸೆಂಥಿಲ್ ಕುಮಾರ್ ಪ್ರಜ್ಞೆ ಕಳೆದುಕೊಂಡು ರಸ್ತೆ ಮೇಲೆ ಬಿದ್ದು ಬಿಟ್ಟರುʼʼ ಎಂದು ಪೊಲೀಸರು ತಿಳಿಸಿದ್ದಾರೆ. ಎಸ್‌ಪಿ ಕೆ.ಎಸ್. ಪ್ರವೀಣ್ ಗೌತಮ್ ಸ್ಥಳಕ್ಕೆ ಭೇಟಿ ಪರೀಶೀಲನೆ ನಡೆಸಿದ್ದಾರೆ. ಸದ್ಯ ಈ ಪ್ರಕರಣ ತಮಿಳುನಾಡಿನಾದ್ಯಂತ ಭಾರಿ ಸದ್ದು ಮಾಡಿದೆ.
ದೇವಸ್ಥಾನದ ಬಳಿ ಗೋಣಿ ಚೀಲದಲ್ಲಿ ಮಹಿಳೆಯ ಮೃತದೇಹ ಪತ್ತೆ
40 ಲಕ್ಷ ರೂಪಾಯಿ ಪರಿಹಾರ
ತಮಿಳುನಾಡು ಮುಖ್ಯಮಂತ್ರಿ ಸಿ. ಜೋಸೆಫ್ ವಿಜಯ್ ಸೋಮವಾರ ಸೆಂಥಿಲ್ ಕುಮಾರ್ ಅವರ ಕುಟುಂಬಕ್ಕೆ ಸಂತಾಪ ಸೂಚಿಸಿ 40 ಲಕ್ಷ ರೂಪಾಯಿ ಪರಿಹಾರ ಘೋಷಿಸಿದರು. ತಪ್ಪಿತಸ್ಥರಿಗೆ ಕಠಿಣ ಶಿಕ್ಷೆಯಾಗಲಿದೆ ಎಂದು ಘೋಷಿಸಿದರು.
ಇನ್ನಷ್ಟು ಕ್ರೈಂ ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ.
ʼಪ್ರವಾಸಿ ಪ್ರಪಂಚʼ ವೆಬ್‌ಸೈಟ್‌ಗೆ ಭೇಟಿ ನೀಡಲು ಇಲ್ಲಿ ಕ್ಲಿಕ್ ಮಾಡಿ.