ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

Tamil Nadu Horror: ಮಗನ ಜೀವನ ಸರಿ ಮಾಡಲು ಮಾಟ ಮಾಡಿ 6 ವರ್ಷದ ಮೊಮ್ಮಗನನ್ನು ನರಬಲಿ ಕೊಟ್ಟ ಅಜ್ಜಿ; ತಮಿಳುನಾಡಿನಲ್ಲಿ ಅಮಾನುಷ ಕೃತ್ಯ

Crime News: ತಮಿಳುನಾಡಿನ ವೆಲ್ಲೂರ್‌ ಜಿಲ್ಲೆಯಲ್ಲಿ ಅಮಾನುಷ ಘಟನೆಯೊಂದು ನಡೆದಿದ್ದು, 6 ವರ್ಷದ ಬಾಲಕನನ್ನು ಅಜ್ಜಿಯೇ ನರಬಲಿ ಕೊಟ್ಟಿದ್ದಾಳೆ. ಮೃತ ಬಾಲಕನನ್ನು ಮುಗಿಲನ್‌ ಎಂದು ಗುರುತಿಸಲಾಗಿದೆ. ಆತ ಅಜ್ಜಿ ಮನೆಯಲ್ಲಿ ಶಂಕಾಸ್ಪದ ರೀತಿಯಲ್ಲಿ ಮೃತಪಟ್ಟ ರೀತಿಯೇ ಇದೀಗ ಹಲವು ಅನುಮಾನಗಳಿಗೆ ಕಾರಣವಾಗಿದೆ.

ಮಾಟ ಮಾಡಿ 6 ವರ್ಷದ ಮೊಮ್ಮಗನನ್ನು ನರಬಲಿ ಕೊಟ್ಟ ಅಜ್ಜಿ

ಮೃತ ಮುಗಿಲನ್‌ ಮತ್ತು ಮನೆಯೊಳಗಿನ ದೃಶ್ಯ -

Ramesh Ballamoole
Ramesh Ballamoole Jun 16, 2026 7:12 PM

ಚೆನ್ನೈ, ಜೂ. 16: ದೇಶವನ್ನೇ ಬೆಚ್ಚಿ ಬೀಳಿಸುವ ಘಟನೆಯೊಂದು ನಡೆದಿದ್ದು, ಮಾಟ ಮಂತ್ರಕ್ಕೆ (Black Magic) 6 ವರ್ಷದ ಬಾಲಕ ಬಲಿಯಾಗಿದ್ದಾನೆ. ತಮಿಳುನಾಡಿನ ವೆಲ್ಲೂರ್‌ ಜಿಲ್ಲೆಯಲ್ಲಿ ಈ ಅಮಾನುಷ ಘಟನೆ ಸಂಭವಿಸಿದೆ. ಬಾಲಕ ಅನುಮಾನಾಸ್ಪದ ರೀತಿಯಲ್ಲಿ ಮೃತಪಟ್ಟಿದ್ದು, ಇದರ ಹಿಂದೆ ಮಾಟ ನಡೆದಿರುವ ಶಂಕೆ ವ್ಯಕ್ತವಾಗಿದೆ. ಬಾಲಕನನ್ನು ನರಬಲಿ ಕೊಡಲಾಗಿದೆ ಎಂದು ಸಂಬಂಧಿಕರು ಆರೋಪಿಸಿದ್ದಾರೆ (Tamil Nadu Horror). ಅಜ್ಜಿ ಮತ್ತು ಅತ್ತೆ ಸೇರಿ ಬಾಲಕನನ್ನು ಬಲಿ ಕೊಟ್ಟಿದ್ದಾರೆ ಎನ್ನುವ ದೂರು ಕೇಳಿ ಬಂದಿದ್ದು, ವೈವಾಹಿಕ ಕಲಹವೇ ಇದಕ್ಕೆ ಕಾರಣ ಎನ್ನಲಾಗಿದೆ.

ಮೃತ ಬಾಲಕನನ್ನು ಮುಗಿಲನ್‌ ಎಂದು ಗುರುತಿಸಲಾಗಿದೆ. ಆತ ಅಜ್ಜಿ ಮನೆಯಲ್ಲಿ ಶಂಕಾಸ್ಪದ ರೀತಿಯಲ್ಲಿ ಮೃತಪಟ್ಟ ರೀತಿಯೇ ಇದೀಗ ಹಲವು ಅನುಮಾನಗಳಿಗೆ ಕಾರಣವಾಗಿದೆ. ಪ್ರಾಥಮಿಕ ಪರಿಶೀಲನೆ ವೇಳೆ ಬಾಲಕನ ದೇಹದ ತುಂಬೆಲ್ಲ ಸುಟ್ಟ ಗಾಯಗಳಿರುವುದು ಕಂಡು ಬಂದಿದೆ. ಸಂಬಂಧಿಕರು ಮತ್ತು ಸ್ಥಳೀಯರ ಮಾಹಿತಿ ಮೇರೆಗೆ ಆಗಮಿಸಿದ ಪೊಲೀಸರು ಆತನ ಮೃತದೇಹವನ್ನು ಪೋಸ್ಟ್‌ ಮಾರ್ಟಂಗಾಗಿ ಕಳುಹಿಸಿದ್ದು, ವರದಿ ಕೈ ಸೇರಿದ ಬಳಿಕ ಸಾವಿನ ನಿಜವಾದ ಕಾರಣ ಬಹಿರಂಗಗೊಳ್ಳಲಿದೆ.

ಅಜ್ಜಿಯಿಂದಲೇ 6 ವರ್ಷದ ಬಾಲಕನ ನರಬಲಿ:



ಸ್ಥಳೀಯರ ವಾದವೇನು?

ಮಾಟ ಮಾಡಿ ಬಾಲಕನನ್ನು ಬಲಿ ಕೊಡಲಾಗಿದೆ ಎಂದು ಸ್ಥಳೀಯರು ಆರೋಪಿಸಿದ್ದು, ಪೊಲೀಸರು ಇದುವರೆಗೆ ಈ ಬಗ್ಗೆ ಖಚಿತವಾಗಿ ಏನನ್ನೂ ಹೇಳಿಲ್ಲ. ಎಲ್ಲ ಕೋನಗಳಿಂದಲೂ ತನಿಖೆ ಮಾಡುವುದಾಗಿ ತಿಳಿಸಿದ್ದಾರೆ. ರಾಜೇಶ್‌ ಮತ್ತು ಆಶಾ ದಂಪತಿಯ ಪುತ್ರ ಮುಗಿಲನ್‌. ದಾಂಪತ್ಯದಲ್ಲಿ ಬಿರುಕು ಮೂಡಿದ ಕಾರಣ ರಾಜೇಶ್‌ ಮತ್ತು ಆಶಾ ಕೆಲವು ವರ್ಷಗಳಿಂದ ಪ್ರತ್ಯೇಕವಾಗಿ ವಾಸವಾಗಿದ್ದಾರೆ. ಇತ್ತೀಚೆಗೆ ಅವರು ಉದ್ಯೋಗದ ನಿಮಿತ್ತ ಬೇರೆ ಊರಿಗೆ ತೆರಳಿದ್ದರಿಂದ ಮುಗಿಲನ್‌ನನ್ನು ಅಜ್ಜಿ ವಿಜಯಾ (ರಾಜೇಶ್‌ನ ತಾಯಿ) ಬಳಿ ಬಿಟ್ಟಿದ್ದರು. ಇದೀಗ ವಿಜಯಾ ಅವರ ಮನೆಯಲ್ಲಿ ಮುಗಿಲನ್‌ ಮೃತದೇಹ ಪತ್ತೆಯಾಗಿದೆ.

2ನೇ ಪತ್ನಿಯನ್ನು ಕೊಂದು ಮೃತದೇಹದೊಂದಿಗೆ 2 ದಿನ ಕಳೆದ ಪಾಪಿ ಪತಿ; ಮೈ ಜುಂ ಎನಿಸುವ ಭಯಾನಕ ಕೃತ್ಯ ಬಯಲು

ಸಂಬಂಧಿಕರ ಪ್ರಕಾರ ವಿಜಯಾ ಮಾಟ ಮಾಡುತ್ತಿದ್ದಳು. ಅಲ್ಲದೆ ಅದೇ ಊರಿನಲ್ಲಿ ವಾಸವಾಗಿರುವ ರಾಜೇಶ್‌ನ ಸಹೋದರಿ ರೇವತಿ ಮುಗಿಲನ್‌ ಬಗ್ಗೆ ಅಸಮಾಧಾನ ಹೊಂದಿದ್ದಳು. ರಾಜೇಶ್ ಮತ್ತು ಆಶಾ ದೂರವಾಗಲು ಮಗುವೇ ಕಾರಣ ಎನ್ನುವುದು ಆಕೆಯ ವಾದ.‌ ಹೀಗಾಗಿ ಇವರಿಬ್ಬರು ನರಬಲಿ ಕೊಟ್ಟಿರುವ ಸಾಧ್ಯತೆ ಇದೆ ಎನ್ನಲಾಗಿದೆ. ಸದ್ಯ ವಿಜಯಾ ಮತ್ತು ರೇವತಿಯನ್ನು ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ.

ಅನುಮಾನ ಮೂಡಲು ಕಾರಣವೇನು?

ಬಾಲಕ ಮುಗಿಲನ್‌ ತಲೆಯಲ್ಲಿ ಬಲವಾದ ಪೆಟ್ಟು ಬಿದ್ದಿರುವ ಗುರುತಿದ್ದು, ಶರೀರದಲ್ಲಿ ಸುಟ್ಟ ಗಾಯಗಳಿವೆ. ಈ ಕಾರಣಕ್ಕೆ ನರಬಲಿ ನಡೆದಿರುವ ಶಂಕೆ ವ್ಯಕ್ತವಾಗಿದೆ. ಮಗನ ಜೀವನ ಸರಿಯಾಬೇಕೆಂಬ ಉದ್ದೇಶದಿಂದ ವಿಜಯಾ ಮೊಮ್ಮಗನನ್ನು ನರಬಲಿ ಕೊಟ್ಟಿದ್ದಾಳೆ ಎನ್ನುವ ಮಾತು ಕೇಳಿ ಬಂದಿದೆ. ಈ ಬಗ್ಗೆ ಪೊಲೀಸರು ಅಧಿಕೃತವಾಗಿ ಯಾವುದೇ ಹೇಳಿಕೆ ನೀಡಿಲ್ಲ. ಸದ್ಯ ಈ ಘಟನೆ ಗ್ರಾಮದಲ್ಲಿ ಭಯದ ವಾತಾವರಣ ಮೂಡಿಸಿದೆ. ಜತೆಗೆ ವಿಜಯಾ ಮನೆಯಲ್ಲಿ ಕೆಲವು ಆಚರಣೆ ನಡೆದಿರುವ ಬಗ್ಗೆ ಕುರುಹು ಸಿಕ್ಕಿದ್ದು, ಅನುಮಾನವನ್ನು ಮತ್ತಷ್ಟು ಗಟ್ಟಿಗೊಳಿಸಿದೆ.

ಮಾಟಮಂತ್ರ ಮಾಡುತ್ತಿದ್ದ ಶಂಕೆ: ವ್ಯಕ್ತಿಯನ್ನು ಕೊಂದು ಸುಟ್ಟು ಹಾಕಿದ ಗ್ರಾಮಸ್ಥರು

ʼʼಸದ್ಯ ಕೊಲೆಗೆ ಕಾರಣವೇನು ಎನ್ನುವುದನ್ನು ಇನ್ನೂ ನಿರ್ಧರಿಸಿಲ್ಲ. ನರಬಲಿ ಶಂಕೆ ವ್ಯಕ್ತವಾಗಿರುವುದರಿಂದ ಆ ಕೋನದಲ್ಲಿಯೂ ತನಿಖೆ ನಡೆಸಲಿದ್ದೇವೆ. ಸದ್ಯ ಯಾರೂ ವದಂತಿ ನಂಬಬೇಡಿ. ಮರಣೋತ್ತರ ಪರೀಕ್ಷೆಯ ವರದಿ ಕೈ ಸೇರಿದ ಬಳಿಕ ಸಾವಿನ ನೈಜ ಕಾರಣ ಹೊರ ಬರಲಿದೆʼʼ ಎಂದು ಪೊಲೀಸ್‌ ಅಧಿಕಾರಿಗಳು ತಿಳಿಸಿದ್ದಾರೆ.

ಕ್ರೈಂ ಸುದ್ದಿ ಓದಲು ಇಲ್ಲಿ ಕ್ಲಿಕ್‌ ಮಾಡಿ.

ʼಪ್ರವಾಸಿ ಪ್ರಪಂಚʼ ವೆಬ್‌ಸೈಟ್‌ಗೆ ಭೇಟಿ ನೀಡಲು ಇಲ್ಲಿ ಕ್ಲಿಕ್‌ ಮಾಡಿ.