ಚಿಂತಾಮಣಿ: ನಗರದ ಕನಂಪಲ್ಲಿ ಗ್ರಾಮದಲ್ಲಿ ಅಕ್ರಮವಾಗಿ ನಡೆಸಲಾಗುತ್ತಿದ್ದ ವೇಶ್ಯಾವಾಟಿಕೆ ಅಡಗುದಾಣದ ಮೇಲೆ ಜಿಲ್ಲಾ ಅಪರಾಧ ದಳ ಹಾಗೂ ಚಿಂತಾಮಣಿ ಗ್ರಾಮಾಂತರ ಪೊಲೀಸರು ಜಂಟಿಯಾಗಿ ದಾಳಿ ನಡೆಸಿ, ಇಬ್ಬರು ಮಹಿಳೆಯರು ಹಾಗೂ ಓರ್ವ ಗ್ರಾಹಕನನ್ನು ಬಂಧಿಸಿದ್ದಾರೆ.
ಖಚಿತ ಮಾಹಿತಿಯ ಮೇರೆಗೆ ಜಿಲ್ಲಾ ಅಪರಾಧ ದಳದ ಕೆಂಚಾರಹಳ್ಳಿ ಪಿಎಸ್‌ಐ ಶ್ಯಾಮಲಾ ಹಾಗೂ ಚಿಂತಾಮಣಿ ಗ್ರಾಮಾಂತರ ಪೊಲೀಸ್ ಠಾಣೆಯ ಇನ್ಸ್‌ಪೆಕ್ಟರ್ ಶಿವರಾಜ್ ಎಸ್. ನೇತೃತ್ವದ ತಂಡ ಕನಂಪಲ್ಲಿಯಿಂದ ಕಲ್ಲಹಳ್ಳಿಗೆ ಹೋಗುವ ರಸ್ತೆಯಲ್ಲಿರುವ ಮನೆಯ ಮೇಲೆ ದಾಳಿ ನಡೆಸಿತು.
ಇದನ್ನೂ ಓದಿ: Chinthamani News: ನಿಯಮಿತ ಮಣ್ಣು ಪರೀಕ್ಷೆಯಿಂದ ವೆಚ್ಚ ಕಡಿಮೆ, ಆದಾಯ ಹೆಚ್ಚಳ: ಕೃಷಿ ವಿಜ್ಞಾನಿಗಳ ಸಲಹೆ
ಪರಿಶೀಲನೆ ವೇಳೆ ಮನೆಯಲ್ಲಿ ಅಕ್ರಮ ವೇಶ್ಯಾವಾಟಿಕೆ ನಡೆಯುತ್ತಿರುವುದು ದೃಢಪಟ್ಟಿದ್ದು, ದಂಧೆ ನಡೆಸುತ್ತಿದ್ದ 55 ವರ್ಷದ ಮನೆ ಮಾಲಕಿ, 32 ವರ್ಷದ ಮತ್ತೊಬ್ಬ ಮಹಿಳೆ ಹಾಗೂ ಆಶ್ರಯ ಬಡಾವಣೆ ನಿವಾಸಿ ಗ್ರಾಹಕನನ್ನು ವಶಕ್ಕೆ ಪಡೆದುಕೊಳ್ಳಲಾಗಿದೆ.
ಪ್ರಾಥಮಿಕ ತನಿಖೆಯಲ್ಲಿ, ಮನೆ ಮಾಲಕಿ ಹಣದಾಸೆಗೆ ತನ್ನ ಪರಿಚಯದ ಮಹಿಳೆಯರನ್ನು ಕರೆಸಿ ಗ್ರಾಹಕರಿಂದ ಹಣ ಪಡೆದು ಅಕ್ರಮ ದಂಧೆ ನಡೆಸುತ್ತಿದ್ದಳು ಎಂಬುದು ಬೆಳಕಿಗೆ ಬಂದಿದೆ. ದಾಳಿ ವೇಳೆ ನಗದು ಹಣ ಹಾಗೂ ಅಕ್ರಮ ಚಟುವಟಿಕೆಗೆ ಬಳಸುತ್ತಿದ್ದ ವಿವಿಧ ಸಾಮಗ್ರಿಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.
ಈ ಸಂಬಂಧ ಚಿಂತಾಮಣಿ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆರೋಪಿಗಳ ವಿರುದ್ಧ ಮುಂದಿನ ಕಾನೂನು ಕ್ರಮ ಕೈಗೊಳ್ಳಲಾಗಿದೆ.