ಲಖನೌ: ದೀಪಾವಳಿ (Diwali) ಹಬ್ಬದ ಸಂಭ್ರಮದ ನಡುವೆಯೇ ಪಟಾಕಿ ಸಿಡಿಸುವ ವಿಚಾರದಲ್ಲಿ ಉಂಟಾದ ಗಲಾಟೆ ವಿಕೋಪಕ್ಕೆ ತಿರುಗಿ, ರಾಷ್ಟ್ರಪತಿಗಳ ಅಂಗರಕ್ಷಕ ದಳದ (ಪಿಬಿಜಿ) ಜವಾನರೊಬ್ಬರ ತಲೆಗೆ ಗುಂಡು ಹಾರಿಸಿರುವ ಘಟನೆ ಉತ್ತರ ಪ್ರದೇಶದ ಬಾಗ್‌ಪತ್ ಜಿಲ್ಲೆಯಲ್ಲಿ ತಡವಾಗಿ ಬೆಳಕಿಗೆ ಬಂದಿದೆ. ಗುಂಡೇಟಿನಿಂದ ತೀವ್ರವಾಗಿ ಗಾಯಗೊಂಡಿರುವ ಸೈನಿಕನನ್ನು ಸೌರಭ್ ತೋಮರ್ (26) ಎಂದು ಗುರುತಿಸಲಾಗಿದ್ದು, ಸದ್ಯ ಇವರ ಸ್ಥಿತಿ ಅತ್ಯಂತ ಚಿಂತಾಜನಕವಾಗಿದೆ ಎಂದು ವೈದ್ಯರು ತಿಳಿಸಿದ್ದಾರೆ.
2021ರಲ್ಲಿ ಭಾರತೀಯ ಸೇನೆಗೆ ಸೇರ್ಪಡೆಯಾಗಿದ್ದ ಸೌರಭ್ ತೋಮರ್, ನವದೆಹಲಿಯ ರಾಷ್ಟ್ರಪತಿ ಭವನದಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದರು. ದೀಪಾವಳಿ ಹಬ್ಬದ ಆಚರಣೆಗಾಗಿ ರಜೆಯ ಮೇಲೆ ಸ್ವಗ್ರಾಮಕ್ಕೆ ಬಂದಿದ್ದ ಅವರು, ರಾತ್ರಿ ತಮ್ಮ ಸಹೋದರರಾದ ವಿನೀತ್ ಮತ್ತು ಮಿಂಟು ಅವರೊಂದಿಗೆ ಮನೆಯ ಹೊರಗೆ ಪಟಾಕಿ ಸಿಡಿಸುತ್ತಿದ್ದರು. ಈ ವೇಳೆ ಅದೇ ಗ್ರಾಮದ ಧೀರಜ್ ಮತ್ತು ಆತನ ಸಹೋದರ ಮೋನು ಅಲಿಯಾಸ್ ಪ್ರವೀಣ್ ಎಂಬುವರೊಂದಿಗೆ ಪಟಾಕಿ ಸಿಡಿಸುವ ವಿಚಾರವಾಗಿ ಸಣ್ಣದಾಗಿ ಶುರುವಾದ ವಾಗ್ವಾದವು ಕೈಕೈ ಮಿಲಾಯಿಸುವ ಹಂತಕ್ಕೆ ತಲುಪಿದೆ.
ಗಲಾಟೆ ತಾರಕಕ್ಕೇರಿದಾಗ ಆರೋಪಿ ಧೀರಜ್ ತಕ್ಷಣವೇ ತನ್ನ ಬಳಿಯಿದ್ದ ದೇಶಿ ನಿರ್ಮಿತ ಪಿಸ್ತೂಲ್ ತೆಗೆದು ಸೌರಭ್ ಅವರತ್ತ ಗುಂಡು ಹಾರಿಸಿದ್ದಾನೆ. ಆ ಪೈಕಿ ಒಂದು ಗುಂಡು ಸೌರಭ್ ಅವರ ಕಿವಿಯ ಹಿಂಭಾಗದ ತಲೆಗೆ ನೇರವಾಗಿ ಹೊಕ್ಕಿದ್ದರಿಂದ ಅವರು ಸ್ಥಳದಲ್ಲೇ ಕುಸಿದು ಬಿದ್ದಿದ್ದಾರೆ. ಗಲಾಟೆಯ ನಂತರ ಆರೋಪಿಗಳು ಸ್ಥಳದಿಂದ ಪರಾರಿಯಾಗಿದ್ದಾರೆ.
ರಕ್ತದ ಮಡುವಿನಲ್ಲಿ ಬಿದ್ದಿದ್ದ ಸೌರಭ್ ಅವರನ್ನು ಕುಟುಂಬಸ್ಥರು ತಕ್ಷಣವೇ ಬಡೌತ್‌ನ ಆರೋಗ್ಯ ಕೇಂದ್ರಕ್ಕೆ ಹಾಗೂ ನಂತರ ಮೀರತ್‌ನ ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದಾರೆ. ಆಸ್ಪತ್ರೆಯ ವೈದ್ಯರು ತುರ್ತು ಶಸ್ತ್ರಚಿಕಿತ್ಸೆ ನಡೆಸಿ ಸೌರಭ್ ತಲೆಯಲ್ಲಿದ್ದ ಗುಂಡನ್ನು ಹೊರಗೆ ತೆಗೆಯುವಲ್ಲಿ ಯಶಸ್ವಿಯಾಗಿದ್ದಾರಾದರೂ, ಸದ್ಯ ಅವರನ್ನು ತೀವ್ರ ನಿಗಾ ಘಟಕದಲ್ಲಿ ಇರಿಸಲಾಗಿದ್ದು ಸಾವು-ಬದುಕಿನ ನಡುವೆ ಹೋರಾಡುತ್ತಿದ್ದಾರೆ.
ಘಟನೆಗೆ ಸಂಬಂಧಿಸಿದಂತೆ ಸೌರಭ್ ತಂದೆ ಜನಕ್ ರಾಜ್ ಅವರು ನೀಡಿದ ಲಿಖಿತ ದೂರಿನ ಮೇರೆಗೆ ಬಾಗ್‌ಪತ್ ಪೊಲೀಸರು ಆರೋಪಿಗಳಾದ ಧೀರಜ್ ಮತ್ತು ಮೋನು ವಿರುದ್ಧ ಕೊಲೆ ಯತ್ನ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಹಿರಿಯ ಪೊಲೀಸ್ ಅಧಿಕಾರಿಗಳು ಘಟನಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಸದ್ಯ ತಲೆಮರೆಸಿಕೊಂಡಿರುವ ಇಬ್ಬರೂ ಆರೋಪಿಗಳ ಬಂಧನಕ್ಕಾಗಿ ವಿಶೇಷ ತಂಡಗಳನ್ನು ರಚಿಸಿ ತೀವ್ರ ಶೋಧ ನಡೆಸುತ್ತಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.