ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

ಮದುವೆಗಾಗಿ 17 ಕೋಟಿ ರುಪಾಯಿ ಕೊಟ್ಟು ಅರಮನೆ ಬುಕ್‌ ಮಾಡಿದವ ಹೆಣವಾದ! ಪ್ರೇಮಿಯೊಂದಿಗೆ ಸೇರಿ ಕೋಟೆಯಿಂದ ತಳ್ಳಿ ಕೊಂದ ಭಾವಿ ಪತ್ನಿ

Ketan Agarwal: ಪುಣೆಯ ಲೋಹಗಡ್ ಕೋಟೆಯಲ್ಲಿ ಅಪಘಾತ ಎಂದು ಭಾವಿಸಲಾಗಿದ್ದ 26 ವರ್ಷದ ಕೇತನ್‌ ವಿಶಾಲ್ ಅಗರ್ವಾಲ್ ಸಾವಿನ ಪ್ರಕರಣಕ್ಕೆ ಹೊಸ ತಿರುವು ಸಿಕ್ಕಿದೆ. ನಿಶ್ಚಿತಾರ್ಥವಾಗಿದ್ದ ಸಿಯಾ ಗೋಯಲ್ ಮತ್ತು ಆಕೆಯ ಪ್ರೇಮಿ ಸೇರಿ ಪೂರ್ವಯೋಜಿತವಾಗಿ ಕೇತನ್‌ನನ್ನು ಕೋಟೆಯಿಂದ ತಳ್ಳಿ ಕೊಲೆ ಮಾಡಿರುವ ಆರೋಪ ಕೇಳಿಬಂದಿದ್ದು, ಇಬ್ಬರನ್ನೂ ಬಂಧಿಸಲಾಗಿದೆ.

ಸಿಯಾ ಗೋಯಲ್ - ಕೇತನ್‌ ಅಗರ್ವಾಲ್

ಮುಂಬೈ, ಜೂ. 23: ಮಹಾರಾಷ್ಟ್ರದ ಪುಣೆ ಜಿಲ್ಲೆಯ ಲೋಹಗಡ್ ಕೋಟೆ (Lohagad Fort)ಯಲ್ಲಿ 26 ವರ್ಷದ ರಿಯಲ್ ಎಸ್ಟೇಟ್ ನಿರ್ದೇಶಕ ಕೇತನ್‌ ವಿಶಾಲ್ ಅಗರ್ವಾಲ್ (Ketan Vishal Agrawal) ಸಾವಿನ ಪ್ರಕರಣಕ್ಕೆ ಆಘಾತಕಾರಿ ತಿರುವು ಸಿಕ್ಕಿದೆ. ಆರಂಭದಲ್ಲಿ ಟ್ರೆಕ್ಕಿಂಗ್ ವೇಳೆ ಕಾಲು ಜಾರಿ ಬಿದ್ದು ಮೃತಪಟ್ಟಿದ್ದಾರೆ ಎಂದು ಭಾವಿಸಲಾಗಿದ್ದ ಪ್ರಕರಣ ಇದೀಗ ಪೂರ್ವಯೋಜಿತ ಕೊಲೆ ಎಂದು ಪೊಲೀಸರು ತಿಳಿಸಿದ್ದಾರೆ. ಕೇತನ್‌ ಅಗರ್ವಾಲ್ ಮತ್ತು ಸಿಯಾ ಗೋಯಲ್ ಅವರ ನಿಶ್ಚಿತಾರ್ಥವಾಗಿದ್ದು, ಕುಟುಂಬಸ್ಥರು ಮದುವೆ ಸಿದ್ಧತೆಗಳನ್ನು ಕೂಡ ಆರಂಭಿಸಿದ್ದರು. 17 ಕೋಟಿ ರುಪಾಯಿ ಕೊಟ್ಟು ರಾಜಸ್ಥಾನದ ಉದಯಪುರದಲ್ಲಿ ಮದುವೆ ಮಂಟಪವನ್ನೂ ಬುಕ್ ಮಾಡಲಾಗಿತ್ತು. ಆದರೆ ತನಿಖೆಯಲ್ಲಿ ಸಿಯಾ ಗೋಯಲ್ ಕಳೆದ ಒಂದು ವರ್ಷದಿಂದ ಪುಣೆಯ ಕೊಂಡ್ವಾ ನಿವಾಸಿ 22 ವರ್ಷದ ಚೇತನ್ ಬಾಬುಲಾಲ್ ಚೌಧರಿ ಜತೆ ಪ್ರೀತಿಯಲ್ಲಿದ್ದಳು ಎಂಬುದು ಬೆಳಕಿಗೆ ಬಂದಿದೆ.

ಪೊಲೀಸರ ಪ್ರಕಾರ, ತಮ್ಮ ಸಂಬಂಧಕ್ಕೆ ಅಡ್ಡಿಯಾಗಿದ್ದಾರೆ ಎಂದು ಭಾವಿಸಿದ ಸಿಯಾ ಮತ್ತು ಚೇತನ್ ಸೇರಿ ಕೇತನ್‌ನನ್ನು ಕೊಲೆ ಮಾಡಲು ಸಂಚು ರೂಪಿಸಿದ್ದರು. ಜೂನ್ 18ರಂದು ಸಿಯಾ ಸುತ್ತಾಟದ ನೆಪದಲ್ಲಿ ಕೇತನ್‌ನನ್ನು ಲೋಹಗಡ್ ಕೋಟೆಗೆ ಕರೆದುಕೊಂಡು ಹೋಗಿದ್ದಳು. ನಂತರ ಅಲ್ಲಿಗೆ ಚೇತನ್ ಕೂಡ ಬಂದಿದ್ದು, ಇಬ್ಬರೂ ಸೇರಿ ಕೇತನ್‌ ಮೇಲೆ ಹಲ್ಲೆ ನಡೆಸಿ ಸುಮಾರು 400 ಅಡಿ ಆಳದ ಕಂದಕಕ್ಕೆ ತಳ್ಳಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ಆರಂಭದಲ್ಲಿ ಸಿಯಾ, "ಬಲವಾದ ಗಾಳಿಯಿಂದ ಫೋಟೊ ತೆಗೆಯುವ ವೇಳೆ ಕೇತನ ಕಾಲು ಜಾರಿ ಬಿದ್ದಿದ್ದಾರೆ" ಎಂದು ಪೊಲೀಸರಿಗೆ ಹೇಳಿದ್ದಳು. ಅದರ ಆಧಾರದ ಮೇಲೆ ಅಪಘಾತ ಸಾವು ಪ್ರಕರಣ ದಾಖಲಾಗಿತ್ತು. ಆದರೆ ಆಕೆಯ ಹೇಳಿಕೆಗಳಲ್ಲಿ ಕಂಡುಬಂದ ವ್ಯತ್ಯಾಸಗಳು ಮತ್ತು ಅನುಮಾನಾಸ್ಪದ ವರ್ತನೆಯಿಂದ ಪೊಲೀಸರು ತನಿಖೆಯನ್ನು ತೀವ್ರಗೊಳಿಸಿದರು.

ಮೃತನ ತಂದೆ ವಿಶಾಲ್ ಅಗರ್ವಾಲ್ ನೀಡಿದ ದೂರಿನ ಮೇರೆಗೆ ಲೋಣಾವಳಾ ಗ್ರಾಮೀಣ ಪೊಲೀಸರು ಕೊಲೆ ಮತ್ತು ಕ್ರಿಮಿನಲ್ ಸಂಚು ಆರೋಪದಡಿ ಪ್ರಕರಣ ದಾಖಲಿಸಿದ್ದಾರೆ. ಬಂಧನದ ನಂತರ ಸಿಯಾ ಮತ್ತು ಚೇತನ್ ಕೊಲೆಯ ಸಂಚು ರೂಪಿಸಿದ್ದಾಗಿ ಒಪ್ಪಿಕೊಂಡಿದ್ದಾರೆ ಎಂದು ಮೃತನ ತಂದೆ ತಿಳಿಸಿದ್ದಾರೆ.

ಪ್ರಿಯಕರನೊಟ್ಟಿಗೆ ಸೇರಿ ತಂದೆ, ತಾಯಿ, ತಂಗಿಯನ್ನೇ ಕೊಂದ ಪಾಪಿ ಮಗಳು

ಇನ್ನೂ ಆಘಾತಕಾರಿ ಸಂಗತಿಯೆಂದರೆ, ಜೂನ್ 14ರಂದು ಮೊದಲ ಬಾರಿಗೆ ಕೇತನ್‌ನನ್ನು ಕೊಲೆ ಮಾಡಲು ಯೋಜನೆ ರೂಪಿಸಿದ್ದರೂ ಅದು ವಿಫಲವಾಗಿತ್ತು. ಬಳಿಕ ಜೂನ್ 18ರಂದು ಮತ್ತೊಮ್ಮೆ ಕೋಟೆಗೆ ಕರೆದೊಯ್ದು ಸಂಚನ್ನು ಯಶಸ್ವಿಗೊಳಿಸಿದ್ದಾರೆ ಎಂದು ಆರೋಪಿಗಳು ವಿಚಾರಣೆ ವೇಳೆ ಬಹಿರಂಗಪಡಿಸಿದ್ದಾರೆ ಎಂದು ಕುಟುಂಬದವರು ಹೇಳಿದ್ದಾರೆ.

ಮೃತನ ತಂದೆ, "ಮದುವೆ ಇಷ್ಟವಿರಲಿಲ್ಲ ಎಂದರೆ ನೇರವಾಗಿ ನಿರಾಕರಿಸಬಹುದಿತ್ತು. ನಮ್ಮ ಕುಟುಂಬ ಮದುವೆಯನ್ನು ರದ್ದುಗೊಳಿಸುತ್ತಿತ್ತು. ಆದರೆ ನನ್ನ 26 ವರ್ಷದ ಮಗನ ಜೀವವನ್ನೇ ತೆಗೆದುಕೊಳ್ಳುವಷ್ಟು ಕ್ರೂರ ಮನಸ್ಥಿತಿ ಹೇಗೆ ಬಂತು?" ಎಂದು ಕಣ್ಣೀರಿಟ್ಟಿದ್ದಾರೆ.

ಪ್ರಕರಣದಲ್ಲಿ ಸಿಯಾ ಕುಟುಂಬದ ಇತರ ಸದಸ್ಯರ ಪಾತ್ರವೂ ಇರಬಹುದು ಎಂಬ ಅನುಮಾನ ವ್ಯಕ್ತವಾಗಿದ್ದು, ಎಲ್ಲ ಆರೋಪಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಕುಟುಂಬಸ್ಥರು ಆಗ್ರಹಿಸಿದ್ದಾರೆ. ಸದ್ಯ ಇಬ್ಬರು ಆರೋಪಿಗಳನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ಪ್ರಕರಣದ ತನಿಖೆ ಮುಂದುವರಿದಿದೆ.