ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

ಕೊಲೆ ಮಾಡಿದರೂ ಪಶ್ಚಾತಾಪವೇ ಇಲ್ಲ; ಮಾಧ್ಯಮದತ್ತ ಮಧ್ಯ ಬೆರಳು ತೋರಿಸಿ ಅಸಭ್ಯ ವರ್ತನೆ ತೋರಿದ ಸಿಯಾ ಗೋಯಲ್

ಮಹಾರಾಷ್ಟ್ರದ ಪುಣೆ ಸಮೀಪದ ಲೋಹಗಢ ಕೋಟೆಯಲ್ಲಿ ನಿಶ್ಚಿತಾರ್ಥದ ವರ ಕೇತನ್ ಅಗರವಾಲ್ ಅವರನ್ನು ಪ್ರಿಯಕರನೊಂದಿಗೆ ಸೇರಿ ಕಣಿವೆಗೆ ತಳ್ಳಿ ಹತ್ಯೆ ಮಾಡಿರುವ ಆರೋಪದಡಿ ಸಿಯಾ ಗೋಯಲ್ ಬಂಧಿತರಾಗಿದ್ದಾರೆ. ಆರಂಭದಲ್ಲಿ ಇದನ್ನು ಅಪಘಾತ ಎಂದು ಬಿಂಬಿಸಲಾಗಿದ್ದರೂ, ಸಿಯಾ ಯಾವುದೇ ಪಶ್ಚಾತ್ತಾಪ ತೋರಿಸದಿರುವುದು ಪೊಲೀರಲ್ಲಿ ಅನುಮಾನ ಮೂಡಿಸಿತು. ತನಿಖೆಯಲ್ಲಿ ಕೊಲೆ ಸಂಚು ಬಹಿರಂಗವಾಗಿದ್ದು, ಇಬ್ಬರನ್ನು ಬಂಧಿಸಲಾಗಿದೆ.

ಸಿಯಾ ಗೋಯಲ್

ಪುಣೆ: ಮಹಾರಾಷ್ಟ್ರದ ಪುಣೆ ಜಿಲ್ಲೆಯ ಲೋಹಗಢ ಕೋಟೆಯಲ್ಲಿ ನಿಶ್ಚಿತಾರ್ಥದ ಯುವಕ ಕೇತನ್ ಅಗರವಾಲ್ ಅವರನ್ನು ಪ್ರಿಯಕರನೊಂದಿಗೆ ಸೇರಿ ಕಣಿವೆಗೆ ತಳ್ಳಿ ಹತ್ಯೆ ಮಾಡಿರುವ ಆರೋಪ ಎದುರಿಸುತ್ತಿರುವ ಸಿಯಾ ಗೋಯಲ್ (Siya Goyal) ಮತ್ತೊಮ್ಮೆ ಸುದ್ದಿಯಲ್ಲಿದ್ದಾರೆ. ಪೊಲೀಸ್ ಕಸ್ಟಡಿಯಲ್ಲಿ ತನಿಖೆಗಾಗಿ ತನ್ನ ನಿವಾಸದಿಂದ ಹೊರಬರುತ್ತಿದ್ದ ವೇಳೆ ಮಾಧ್ಯಮ ಪ್ರತಿನಿಧಿಗಳತ್ತ ಮಧ್ಯದ ಬೆರಳು (Middle Finger) ತೋರಿಸಿ ಅಶ್ಲೀಲ ಸನ್ನೆ ಮಾಡಿದ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ (Social Media) ವೈರಲ್ ಆಗಿದೆ.

ಸುಮಾರು 17 ಸೆಕೆಂಡುಗಳ ವಿಡಿಯೊದಲ್ಲಿ ಕಪ್ಪು ಬಣ್ಣದ ಟಿ-ಶರ್ಟ್ ಧರಿಸಿ, ಮುಖವನ್ನು ಸ್ಕಾರ್ಫ್‌ನಿಂದ ಮುಚ್ಚಿಕೊಂಡಿದ್ದ ಸಿಯಾ ಗೋಯಲ್, ಪೊಲೀಸರು ಕರೆದುಕೊಂಡು ಹೋಗುತ್ತಿದ್ದಾಗ ಕ್ಯಾಮೆರಾಗಳತ್ತ ನೋಡುತ್ತಲೇ ಮಧ್ಯದ ಬೆರಳು ತೋರಿಸಿರುವುದು ಕಂಡುಬಂದಿದೆ. ಈ ವಿಡಿಯೊ ವೈರಲ್ ಆದ ಬಳಿಕ ಸಾಮಾಜಿಕ ಜಾಲತಾಣಗಳಲ್ಲಿ ತೀವ್ರ ಆಕ್ರೋಶ ವ್ಯಕ್ತವಾಗಿದ್ದು, ಹಲವರು "ಯಾವುದೇ ಪಶ್ಚಾತ್ತಾಪವಿಲ್ಲ", "ಇಂತಹ ಕ್ರೂರ ವರ್ತನೆ ಖಂಡನೀಯ" ಎಂದು ಪ್ರತಿಕ್ರಿಯಿಸಿದ್ದಾರೆ.

ಹೇಗೆ ಬಯಲಾಯಿತು ಕೊಲೆ ಸಂಚು?

ಜೂನ್ 18ರಂದು ಲೋಹಗಢ ಕೋಟೆಯಲ್ಲಿ ಕೇತನ್ ಅಗರವಾಲ್ ಕಣಿವೆಗೆ ಬಿದ್ದು ಮೃತಪಟ್ಟಿದ್ದರು. ಆರಂಭದಲ್ಲಿ ಸಿಯಾ ಗೋಯಲ್, "ಕೇತನ್ ಕಾಲು ಜಾರಿ ಬಿದ್ದು ಸಾವನ್ನಪ್ಪಿದರು" ಎಂದು ಪೊಲೀಸರಿಗೆ ಹೇಳಿಕೆ ನೀಡಿದ್ದಳು. ಈ ಆಧಾರದ ಮೇಲೆ ಪೊಲೀಸರು ಮೊದಲಿಗೆ ಅಪಘಾತ ಪ್ರಕರಣ ದಾಖಲಿಸಿದ್ದರು.

ಆದರೆ ನಿಶ್ಚಿತಾರ್ಥದ ವ್ಯಕ್ತಿಯ ಸಾವಿನ ಬಳಿಕವೂ ಸಿಯಾ ಯಾವುದೇ ದುಃಖ, ಆತಂಕ ಅಥವಾ ಪಶ್ಚಾತ್ತಾಪ ತೋರಿಸದಿರುವುದು ತನಿಖಾಧಿಕಾರಿಗಳ ಗಮನ ಸೆಳೆಯಿತು. ಆಕೆಯ ಹೇಳಿಕೆಗಳಲ್ಲಿ ಕಂಡುಬಂದ ವೈರುಧ್ಯ ಹಾಗೂ ಅನುಮಾನಾಸ್ಪದ ವರ್ತನೆಯ ಹಿನ್ನೆಲೆಯಲ್ಲಿ ಪೊಲೀಸರು ಮರು ತನಿಖೆ ಆರಂಭಿಸಿದರು.



ಕೇತನ್ ಅಗರ್ವಾಲ್ ಹತ್ಯೆ ಪ್ರಕರಣ: ಸಿಯಾ ಗೋಯಲ್‌ಗೆ ಪಾಲಿಗ್ರಾಫ್ ಪರೀಕ್ಷೆಗೆ ಪೊಲೀಸರ ಮನವಿ

ಮೊದಲ ಪ್ರಯತ್ನ ವಿಫಲ, ಎರಡನೇ ಬಾರಿ ಕೊಲೆ ಆರೋಪ

ಪೊಲೀಸರ ತನಿಖೆಯ ಪ್ರಕಾರ, ಜೂನ್ 14ರಂದು ಸಿಯಾ ಮೊದಲ ಬಾರಿಗೆ ಕೇತನರನ್ನು ಲೋಹಗಢ ಕೋಟೆಗೆ ಕರೆದುಕೊಂಡು ಹೋಗಿ ಕಣಿವೆಗೆ ತಳ್ಳಲು ಯತ್ನಿಸಿದ್ದಳು. ಆದರೆ ಕೇತನ್ ಬಂಡೆಯ ಅಂಚಿನಲ್ಲಿದ್ದ ಪೊದೆಯನ್ನು ಹಿಡಿದು ಪ್ರಾಣಾಪಾಯದಿಂದ ಪಾರಾಗಿದ್ದರು. ಬಳಿಕ ಅನುಮಾನ ಬಾರದಂತೆ "ಹಾವು ಬಂದಿದೆ" ಎಂದು ಕಿರುಚಿ ನಾಟಕವಾಡಿದ್ದಳು. ನಂತರ ಕೇತನರನ್ನು ಅಪ್ಪಿಕೊಂಡು ಪರಿಸ್ಥಿತಿಯನ್ನು ಸಹಜಗೊಳಿಸಿದ್ದಳು ಎಂದು ಪೊಲೀಸರು ತಿಳಿಸಿದ್ದಾರೆ.

ಕೆಲ ದಿನಗಳ ಬಳಿಕ, ಜೂನ್ 18ರಂದು ಸಿಯಾ ಮತ್ತೊಮ್ಮೆ ಕೇತನರನ್ನು ಅದೇ ಸ್ಥಳಕ್ಕೆ ಕರೆಸಿಕೊಂಡಿದ್ದಳು. ಈ ಬಾರಿ ತನ್ನ ಪ್ರಿಯಕರ ಚೇತನ್ ಚೌಧರಿಯನ್ನೂ ಮುಂಚಿತವಾಗಿ ಸ್ಥಳಕ್ಕೆ ಕರೆಸಿಕೊಂಡಿದ್ದಳು. ಸೂಕ್ತ ಸಮಯ ನೋಡಿಕೊಂಡು ಇಬ್ಬರೂ ಸೇರಿ ಕೇತನರನ್ನು ಹಿಂಬದಿಯಿಂದ ಕಣಿವೆಗೆ ತಳ್ಳಿದ ಪರಿಣಾಮ ಅವರು ಸ್ಥಳದಲ್ಲೇ ಮೃತಪಟ್ಟಿದ್ದಾರೆ ಎಂದು ಪೊಲೀಸರು ಆರೋಪಿಸಿದ್ದಾರೆ.

ಮದುವೆಗೆ ಸಿದ್ಧತೆ, ಆದರೆ ಗುಪ್ತ ಪ್ರೇಮ ಸಂಬಂಧ

ಪೊಲೀಸರ ಮಾಹಿತಿ ಪ್ರಕಾರ, ಸಿಯಾ ಗೋಯಲ್ ಮತ್ತು ಕೇತನ್ ಅಗರವಾಲ್ ಕುಟುಂಬಗಳ ಒಪ್ಪಿಗೆಯೊಂದಿಗೆ ನಿಶ್ಚಿತಾರ್ಥ ಮಾಡಿಕೊಂಡಿದ್ದು, ಅವರ ಅದ್ಧೂರಿ ಮದುವೆ ಇದೇ ವರ್ಷದ ನವೆಂಬರ್‌ನಲ್ಲಿ ನಡೆಯಬೇಕಿತ್ತು. ಆದರೆ ಸಿಯಾ ತನ್ನ ಪ್ರಿಯಕರ ಚೇತನ್ ಚೌಧರಿಯೊಂದಿಗೆ ಸಂಬಂಧ ಮುಂದುವರಿಸಿಕೊಂಡಿದ್ದಳು. ಕೇತನ್ ತಮ್ಮ ಸಂಬಂಧಕ್ಕೆ ಅಡ್ಡಿಯಾಗಿದ್ದಾರೆ ಎಂದು ಭಾವಿಸಿದ ಇಬ್ಬರೂ ಸೇರಿ ಕೊಲೆ ಸಂಚು ರೂಪಿಸಿದ್ದರು ಎಂದು ತನಿಖೆಯಲ್ಲಿ ತಿಳಿದುಬಂದಿದೆ.

ನ್ಯಾಯಾಲಯಕ್ಕೆ ಹಾಜರು

ಬಂಧಿತ ಸಿಯಾ ಗೋಯಲ್ ಮತ್ತು ಚೇತನ್ ಚೌಧರಿಯನ್ನು ಇಂದು ಮಧ್ಯಾಹ್ನ ವಡಗಾಂವ್ ನ್ಯಾಯಾಲಯಕ್ಕೆ ಹಾಜರುಪಡಿಸಲಾಗುತ್ತಿದೆ. ಹೆಚ್ಚಿನ ವಿಚಾರಣೆಗೆ ಹೆಚ್ಚುವರಿ ಪೊಲೀಸ್ ಕಸ್ಟಡಿ ನೀಡುವಂತೆ ಪುಣೆ ಗ್ರಾಮೀಣ ಪೊಲೀಸರು ನ್ಯಾಯಾಲಯಕ್ಕೆ ಮನವಿ ಸಲ್ಲಿಸಲಿದ್ದು, ಆರೋಪಿಗಳ ಪರ ವಕೀಲರು ನ್ಯಾಯಾಂಗ ಬಂಧನಕ್ಕೆ ಕೋರಲಿದ್ದಾರೆ.