ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

ಪಂಜಾಬ್‌ನಲ್ಲಿ ಮಾದಕವಸ್ತು ವಿರೋಧಿ ಹೋರಾಟಗಾರ ಪರ್ವಿಂದರ್ ಸಿಂಗ್ ಜೋಟಾ ಗುಂಡಿಕ್ಕಿ ಹತ್ಯೆ: ಭೀಕರ ದೃಶ್ಯ ಕ್ಯಾಮೆರಾದಲ್ಲೇ ಸೆರೆ!

ಪಂಜಾಬ್‌ನ ಮಾನ್ಸಾ ಜಿಲ್ಲೆಯಲ್ಲಿ ಮಾದಕವಸ್ತು ಮತ್ತು ನಿಷೇಧಿತ ಔಷಧಿಗಳ ಅಕ್ರಮ ಮಾರಾಟದ ವಿರುದ್ಧ ಹೋರಾಡುತ್ತಿದ್ದ ಪರ್ವಿಂದರ್ ಸಿಂಗ್ ಜೋಟಾ ಗುಂಡೇಟಿಗೆ ಬಲಿಯಾಗಿದ್ದಾರೆ ಎಂಬ ವರದಿಯಾಗಿದೆ. ಮೆಡಿಕಲ್ ಸ್ಟೋರ್‌ನಲ್ಲಿ ನಡೆದ ವಾಗ್ವಾದದ ವೇಳೆ ಗುಂಡಿನ ದಾಳಿ ನಡೆದಿದ್ದು, ಘಟನೆಯ ದೃಶ್ಯಗಳು ಮೊಬೈಲ್ ಕ್ಯಾಮೆರಾದಲ್ಲಿ ಸೆರೆಯಾಗಿವೆ ಎಂದು ವರದಿಯಾಗಿದೆ. ಘಟನೆಯ ಬಳಿಕ ಸ್ಥಳೀಯವಾಗಿ ಉದ್ವಿಗ್ನತೆ ಉಂಟಾಗಿದ್ದು, ಆರೋಪಿಯ ವಿರುದ್ಧ ಪೊಲೀಸರು ಕ್ರಮ ಕೈಗೊಳ್ಳುತ್ತಿದ್ದಾರೆ ಎಂದು ವರದಿಯಾಗಿದೆ.

ಪರ್ವಿಂದರ್ ಸಿಂಗ್

ಚಂಡೀಗಢ: ಪಂಜಾಬ್‌ (Punjab)ನ ಮಾನ್ಸಾ ಜಿಲ್ಲೆಯಲ್ಲಿ ಮಾದಕವಸ್ತು ಜಾಲ ಹಾಗೂ ನಿಷೇಧಿತ ಔಷಧಿಗಳ ಅಕ್ರಮ ಮಾರಾಟದ ವಿರುದ್ಧ ವ್ಯಾಪಕವಾಗಿ ಹೋರಾಟ ನಡೆಸುತ್ತಿದ್ದ ಖ್ಯಾತ ಕಾರ್ಯಕರ್ತ ಪರ್ವಿಂದರ್ ಸಿಂಗ್ ಜೋಟಾ (Parvinder Singh Jhota) ಅವರನ್ನು ಮಂಗಳವಾರ ಬೆಳಗ್ಗೆ ಮೆಡಿಕಲ್ ಸ್ಟೋರ್ ಮಾಲೀಕನೊಬ್ಬ ಪಾಯಿಂಟ್ ಬ್ಲಾಂಕ್ ರೇಂಜ್‌ನಲ್ಲಿ ಗುಂಡಿಕ್ಕಿ ಬರ್ಬರ ಹತ್ಯೆ ಮಾಡಿದ್ದಾನೆ. ಮೆಡಿಕಲ್ ಶಾಪ್ ಒಂದರಲ್ಲಿ ನಿಷೇಧಿತ ಮಾತ್ರೆಗಳನ್ನು ಮಾರಾಟ ಮಾಡುತ್ತಿರುವುದನ್ನು ಜೋಟಾ ಪ್ರಶ್ನಿಸುತ್ತಿದ್ದ ವೇಳೆ ಈ ಕೃತ್ಯ ಸಂಭವಿಸಿದ್ದು, ಇಡೀ ಘಟನಾವಳಿಗಳು ಮೊಬೈಲ್ ಕ್ಯಾಮೆರಾದಲ್ಲೇ ಸೆರೆಯಾಗಿವೆ.

'ಫೋರ್ಸ್' ಎಂಬ ಸಂಘಟನೆಯ ಮೂಲಕ ಜೋಟಾ ಅವರು ಪಂಜಾಬ್ ಯುವಜನತೆಯನ್ನು ಮಾದಕವ್ಯಸನದಿಂದ ರಕ್ಷಿಸಲು ಸತತ ಜಾಗೃತಿ ಮೂಡಿಸುತ್ತಿದ್ದರು. ಕೇವಲ ಪ್ರಚಾರಕ್ಕೆ ಸೀಮಿತವಾಗದೆ, ಅಕ್ರಮ ದಂಧೆಕೋರರನ್ನು ನೇರವಾಗಿ ತಡೆದು ಪೊಲೀಸರಿಗೆ ಒಪ್ಪಿಸುತ್ತಿದ್ದರು. ಅವರ ಪ್ರಯತ್ನದಿಂದಾಗಿ ಹಲವು ಗ್ರಾಮ ಪಂಚಾಯಿತಿಗಳು ಡ್ರಗ್ಸ್ ವಿರುದ್ಧ ಅಧಿಕೃತ ನಿರ್ಣಯಗಳನ್ನೂ ಕೈಗೊಂಡಿದ್ದವು. ಹೀಗಾಗಿ ಸ್ಥಳೀಯ ಡ್ರಗ್ಸ್ ವ್ಯಾಪಾರಿಗಳ ಜೊತೆ ಜೋಟಾ ಅವರಿಗೆ ಆಗಾಗ ತೀವ್ರ ಘರ್ಷಣೆಗಳು ನಡೆಯುತ್ತಿದ್ದವು.

ಮಂಗಳವಾರ ಬೆಳಿಗ್ಗೆ ನಿಷೇಧಿತ ಔಷಧಿ ಮಾರಾಟದ ವಿಚಾರವಾಗಿ ಜೋಟಾ ಮತ್ತು ಮೆಡಿಕಲ್ ಸ್ಟೋರ್ ಮಾಲೀಕನ ನಡುವೆ ತೀವ್ರ ವಾಗ್ವಾದ ನಡೆದಿದೆ. ವೈರಲ್ ಆದ ಆಘಾತಕಾರಿ ವಿಡಿಯೋದಲ್ಲಿ, ಅಂಗಡಿ ಮಾಲೀಕ ಕೈಯಲ್ಲಿ ಪಿಸ್ತೂಲು ಹಿಡಿದಿದ್ದಾಗ ಜೋಟಾ, "ನನ್ನನ್ನು ಕೊಲ್ಲು, ಕೊಂದುಬಿಡು, ಪಿಸ್ತೂಲು ಯಾಕೆ ಹಿಡಿದುಕೊಂಡಿದ್ದೀಯಾ?" ಎಂದು ಆಕ್ರೋಶದಿಂದ ಸವಾಲು ಹಾಕಿದ್ದಾರೆ. ತಕ್ಷಣವೇ ಅಂಗಡಿ ಮಾಲೀಕ ಅತಿ ಸಮೀಪದಿಂದ ನಿರಂತರವಾಗಿ ಗುಂಡಿನ ದಾಳಿ ನಡೆಸಿದ್ದಾನೆ. ಗುಂಡುಗಳು ಎದೆಯನ್ನು ತೂರಿಕೊಂಡು ಹೋದ ಪರಿಣಾಮ ಜೋಟಾ ಸ್ಥಳದಲ್ಲೇ ರಕ್ತದ ಮಡುವಿನಲ್ಲಿ ಕುಸಿದುಬಿದ್ದು ಮೃತಪಟ್ಟಿದ್ದಾರೆ.

ಪಶ್ಚಾತಾಪವೇ ಇಲ್ಲದೇ ದುಡ್ಡಿನ ಧಿಮಾಕು; ಮಿನಿ ಕೂಪರ್ ಕಾರು ಹರಿಸಿ ಮೂವರನ್ನು ಕೊಂದ 19 ವರ್ಷದ ಯುವಕ

ಹೋರಾಟಗಾರನ ಹತ್ಯೆಯ ಸುದ್ದಿ ತಿಳಿಯುತ್ತಿದ್ದಂತೆ ಜಿಲ್ಲೆಯಾದ್ಯಂತ ಭಾರಿ ಉದ್ವಿಗ್ನತೆ ಸೃಷ್ಟಿಯಾಗಿದ್ದು, ಆಡಳಿತದ ವೈಫಲ್ಯವನ್ನು ಖಂಡಿಸಿ ಸಾರ್ವಜನಿಕರು ಬೀದಿಗಿಳಿದು ಪ್ರತಿಭಟನೆ ನಡೆಸಿದ್ದಾರೆ. ಪರಿಸ್ಥಿತಿ ಉದ್ವಿಗ್ನಗೊಂಡ ಹಿನ್ನೆಲೆಯಲ್ಲಿ ಮುನ್ನೆಚ್ಚರಿಕಾ ಕ್ರಮವಾಗಿ ಜಿಲ್ಲೆಯ ಎಲ್ಲಾ ಶಾಲಾ-ಕಾಲೇಜುಗಳನ್ನು ಮುಚ್ಚಲಾಗಿದೆ. ಘಟನೆಯನ್ನು ಬಿಜೆಪಿ ಮತ್ತು ಶಿರೋಮಣಿ ಅಕಾಲಿದಳ ತೀವ್ರವಾಗಿ ಖಂಡಿಸಿದ್ದು, ಮುಖ್ಯಮಂತ್ರಿ ಭಗವಂತ್ ಮಾನ್ ಸರ್ಕಾರದ ಕಾನೂನು ಸುವ್ಯವಸ್ಥೆ ಸಂಪೂರ್ಣ ಕುಸಿದಿದೆ ಎಂದು ಕಿಡಿಕಾರಿವೆ.

"ಪಂಜಾಬ್ ಯುವಕರ ಭವಿಷ್ಯಕ್ಕಾಗಿ ಹೋರಾಡುತ್ತಿದ್ದ ಧೀರ ಯುವಕನನ್ನೇ ಹಾಡಹಗಲೇ ಹತ್ಯೆ ಮಾಡಲಾಗಿದೆ. ಡ್ರಗ್ಸ್ ವಿರುದ್ಧ ಧ್ವನಿ ಎತ್ತುವ ಜನರಿಗೇ ಇಲ್ಲಿ ರಕ್ಷಣೆಯಿಲ್ಲದಿದ್ದರೆ ಯುವಪೀಳಿಗೆ ಯಾರನ್ನು ನಂಬಬೇಕು? ಇದು ಆಡಳಿತವಲ್ಲ, ಸಂಪೂರ್ಣ ಅರಾಜಕತೆ" ಎಂದು ವಿರೋಧ ಪಕ್ಷಗಳು ತೀವ್ರ ಆಕ್ರೋಶ ವ್ಯಕ್ತಪಡಿಸಿವೆ. ಸದ್ಯ ಪೊಲೀಸರು ಕೊಲೆ ಆರೋಪಿ ಮೆಡಿಕಲ್ ಶಾಪ್ ಮಾಲೀಕನ ಬಂಧನಕ್ಕಾಗಿ ವಿಶೇಷ ತನಿಖಾ ತಂಡ ರಚಿಸಿ ಶೋಧ ಕಾರ್ಯ ತೀವ್ರಗೊಳಿಸಿದ್ದಾರೆ.