ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

ಮೂತ್ರದಿಂದ ಯೂರಿಯಾ ತೆಗೆದು ಬಾಂಬ್ ತಯಾರಿ? ರೆಡ್‌ಫೋರ್ಟ್ ಸ್ಫೋಟದ ಬಗ್ಗೆ NIA ಸ್ಫೋಟಕ ಮಾಹಿತಿ!

ರೆಡ್‌ಫೋರ್ಟ್ ಕಾರು ಸ್ಫೋಟ ಪ್ರಕರಣದ ತನಿಖೆಯಲ್ಲಿ ಮಹತ್ವದ ಸಂಗತಿಗಳು ಹೊರಬಿದ್ದಿವೆ. ಆತ್ಮಹತ್ಯಾ ಬಾಂಬರ್ ಉಮರ್ ಉನ್ ನಬಿ ಯೂರಿಯಾ ಬಳಸಿ ಸ್ಫೋಟಕ ತಯಾರಿಸಿದ್ದಾನೆ ಎಂದು NIA ಚಾರ್ಜ್‌ಶೀಟ್‌ನಲ್ಲಿ ಆರೋಪಿಸಿದೆ. ಮೂತ್ರದಿಂದ ಯೂರಿಯಾವನ್ನು ಹೊರತೆಗೆಯುವ ವಿಧಾನದ ಕುರಿತು ನಬಿ ಹಾಗೂ ಮತ್ತೊಬ್ಬ ಆರೋಪಿ ಶಾಹೀನ್ ಸಯೀದ್‌ಗೆ ಸೇರಿದ ಪೆನ್‌ಡ್ರೈವ್‌ಗಳಲ್ಲಿದ್ದ PDF ದಾಖಲೆಗಳಲ್ಲಿ ಮಾಹಿತಿ ಪತ್ತೆಯಾಗಿದೆ ಎಂದು ತನಿಖಾ ಸಂಸ್ಥೆ ಹೇಳಿದೆ.

ರೆಡ್‌ಫೋರ್ಟ್ ಸ್ಫೋಟ: NIA ಚಾರ್ಜ್‌ಶೀಟ್‌ನಲ್ಲಿ ಸ್ಫೋಟಕ ಮಾಹಿತಿ

ನವದೆಹಲಿ: ಕಳೆದ ವರ್ಷ ದೆಹಲಿಯ ರೆಡ್‌ಫೋರ್ಟ್ (Red Fort) ಸಮೀಪ ನಡೆದ ಕಾರು ಸ್ಫೋಟ (Car Blast) ಪ್ರಕರಣದಲ್ಲಿ ಆತ್ಮಹತ್ಯಾ ಬಾಂಬರ್ (Suicide Bomber) ಉಮರ್ ಉನ್ ನಬಿ ಯೂರಿಯಾ (Urea) ಬಳಸಿ ಸ್ಫೋಟಕ (Explosives) ತಯಾರಿಸಿದ್ದಾನೆ ಎಂದು ರಾಷ್ಟ್ರೀಯ ತನಿಖಾ ಸಂಸ್ಥೆ (NIA – National Investigation Agency) ಆರೋಪಿಸಿದೆ.

ವೃತ್ತಿಯಲ್ಲಿ ವೈದ್ಯನಾಗಿದ್ದ ಉಮರ್ ಉನ್ ನಬಿ, ಬಾಂಬ್ ತಯಾರಿಕೆಗೆ ಅಗತ್ಯವಿದ್ದ ಯೂರಿಯಾವನ್ನು ಮೂತ್ರದಿಂದಲೇ ಹೊರತೆಗೆಯುತ್ತಿದ್ದನೆಂದು ಎನ್‌ಐಎ ತನ್ನ ಚಾರ್ಜ್‌ಶೀಟ್‌ನಲ್ಲಿ ಉಲ್ಲೇಖಿಸಿದೆ. ನಬಿ ನುಹ್‌ನಲ್ಲಿ ಸುಮಾರು 11 ದಿನಗಳ ಕಾಲ ಬಾಡಿಗೆ ಕೊಠಡಿಯಲ್ಲಿ ವಾಸವಿದ್ದ ಸಂದರ್ಭದಲ್ಲಿ ಸ್ಫೋಟಕ ವಸ್ತುಗಳ ತಯಾರಿ ನಡೆಸಿದ್ದಾನೆ ಎಂದು ತನಿಖೆಯಿಂದ ತಿಳಿದುಬಂದಿದೆ. ಆತನ ಚಲನವಲನಗಳು, ಮೊಬೈಲ್ ಬಳಕೆ, ಸ್ಫೋಟಕ ತಯಾರಿಕೆಯ ಚಟುವಟಿಕೆ ಸೇರಿದಂತೆ ಹಲವು ವಿಚಾರಗಳಿಗೆ ಸಂಬಂಧಿಸಿದ ಸಾಕ್ಷಿಗಳ ಹೇಳಿಕೆ ಹಾಗೂ ವಿಧಿವಿಜ್ಞಾನ ಸಾಕ್ಷ್ಯಗಳನ್ನು ಎನ್‌ಐಎ ಸಂಗ್ರಹಿಸಿದೆ.

‘ಮೂತ್ರದಿಂದ ಯೂರಿಯಾ’ ತಯಾರಿಕೆಯ ದಾಖಲೆ

ನಬಿ ಹಾಗೂ ಮತ್ತೊಬ್ಬ ಆರೋಪಿ ಶಾಹೀನ್ ಸಯೀದ್‌ಗೆ ಸೇರಿದ ಪೆನ್‌ಡ್ರೈವ್‌ಗಳಲ್ಲಿ ದೊರೆತ ಪಿಡಿಎಫ್ ದಾಖಲೆಗಳಲ್ಲಿ ಯೂರಿಯಾ ನೈಟ್ರೇಟ್‌ಗೆ ಸಂಬಂಧಿಸಿದ ಬಾಂಬ್ ತಯಾರಿಕಾ ವಿಧಾನಗಳ ಮಾಹಿತಿ ಇತ್ತು ಎಂದು ಎನ್‌ಐಎ ಹೇಳಿದೆ. ಮೂತ್ರದಿಂದ ಯೂರಿಯಾವನ್ನು ಹೊರತೆಗೆಯುವ ಪರ್ಯಾಯ ವಿಧಾನದ ಬಗ್ಗೆಯೂ ದಾಖಲೆಗಳಲ್ಲಿ ಉಲ್ಲೇಖವಿತ್ತು ಎಂದು ಚಾರ್ಜ್‌ಶೀಟ್‌ನಲ್ಲಿ ತಿಳಿಸಲಾಗಿದೆ.

ನಬಿ ವಾಸಿಸುತ್ತಿದ್ದ ಕೊಠಡಿಯಿಂದ ದುರ್ವಾಸನೆ ಬರುತ್ತಿದ್ದ ಹಿನ್ನೆಲೆಯಲ್ಲಿ, ಪಕ್ಕದ ಮನೆಯ ಮಹಿಳೆಯೊಬ್ಬರು ಪ್ಲಾಸ್ಟಿಕ್ ಚೀಲದಲ್ಲಿ ಮೂತ್ರ ಸಂಗ್ರಹಿಸಿರುವುದನ್ನು ಗಮನಿಸಿದ್ದಾಗಿ ಸಾಕ್ಷ್ಯ ನೀಡಿರುವುದಾಗಿ ಎನ್‌ಐಎ ಹೇಳಿದೆ. ಈ ಬಗ್ಗೆ ಆಕೆ ನಬಿಯ ಸ್ನೇಹಿತ ಶೋಯೆಬ್‌ಗೆ ದೂರು ನೀಡಿದ್ದಳು ಎನ್ನಲಾಗಿದೆ.

ರೆಡ್‌ ಪೋರ್ಟ್‌ನಲ್ಲಿ ಆತ್ಮಾಹುತಿ ಬಾಂಬರ್‌ ಉಮರ್ ಉನ್ ನಬಿ ಕಾರ್‌ ಸ್ಫೋಟಿಸಿದ್ದು ಹೇಗೆ? NIA ಚಾರ್ಜ್‌ಶೀಟ್‌ನಲ್ಲಿದೆ ಇಂಚಿಂಚು ಮಾಹಿತಿ

ಮೊದಲು ಲಾಲ್ ಮಂದಿರವೇ ಟಾರ್ಗೆಟ್?

ಸ್ಫೋಟದ ದಿನ ನಬಿಯ ಮೊದಲ ಗುರಿ ದೆಹಲಿಯ ಲಾಲ್ ಮಂದಿರವಾಗಿತ್ತು ಎಂದು ಎನ್‌ಐಎ ಶಂಕಿಸಿದೆ. ಸುನಹರಿ ಮಸೀದಿ ಪಾರ್ಕಿಂಗ್ ಸ್ಥಳದಿಂದ ಸಂಜೆ ಸುಮಾರು 6:37ಕ್ಕೆ ಹೊರಬಂದ ನಬಿ, ಸ್ಫೋಟಕ ತುಂಬಿದ್ದ i20 ಕಾರನ್ನು ಲಾಲ್ ಮಂದಿರದ ಬಳಿ ನಿಲ್ಲಿಸಲು ಪ್ರಯತ್ನಿಸಿದ್ದಾನೆ ಎಂದು ಚಾರ್ಜ್‌ಶೀಟ್‌ನಲ್ಲಿ ಉಲ್ಲೇಖಿಸಲಾಗಿದೆ.

ಆದರೆ ಕೇಂದ್ರ ದೆಹಲಿಯಲ್ಲಿದ್ದ ಭಾರಿ ಸಂಚಾರ ಹಾಗೂ ಪೊಲೀಸರ ಉಪಸ್ಥಿತಿಯಿಂದಾಗಿ ಆತ ಅಲ್ಲಿ ಕಾರು ನಿಲ್ಲಿಸಲು ಸಾಧ್ಯವಾಗದೆ ಯೂ-ಟರ್ನ್ ಪಡೆದು ರೆಡ್‌ಫೋರ್ಟ್ ಕಡೆ ತೆರಳಿದ್ದಾನೆ ಎನ್ನಲಾಗಿದೆ. ಅದಾದ ಕೆಲವೇ ನಿಮಿಷಗಳಲ್ಲಿ, ಸಂಜೆ ಸುಮಾರು 6:50ಕ್ಕೆ ರೆಡ್‌ಫೋರ್ಟ್ ಸಮೀಪ ಕಾರು ಸ್ಫೋಟಗೊಂಡಿದ್ದು, 11 ಮಂದಿ ಮೃತಪಟ್ಟಿದ್ದರು ಹಾಗೂ ಹಲವರು ಗಾಯಗೊಂಡಿದ್ದರು.

ರೆಡ್‌ಫೋರ್ಟ್‌ಗೆ 12 ಬಾರಿ ಭೇಟಿ

2023ರಿಂದ 2025ರ ಅವಧಿಯಲ್ಲಿ ನಬಿ ರೆಡ್‌ಫೋರ್ಟ್‌ಗೆ 12 ಬಾರಿ ಭೇಟಿ ನೀಡಿದ್ದನೆಂದು ಎನ್‌ಐಎ ಈ ಹಿಂದೆ ಹೇಳಿತ್ತು. ಸ್ಫೋಟಕ್ಕೂ ಸುಮಾರು ಆರು ತಿಂಗಳ ಮುನ್ನ, 2025ರ ಮೇ 1ರಂದು ಆತ ಕೊನೆಯ ಬಾರಿ ರೆಡ್‌ಫೋರ್ಟ್‌ಗೆ ಭೇಟಿ ನೀಡಿದ್ದ ಎನ್ನಲಾಗಿದೆ.

ಈ ಭೇಟಿಗಳು ಕೇವಲ ಪ್ರವಾಸಕ್ಕಾಗಿ ನಡೆದದ್ದಲ್ಲ. ಸ್ಫೋಟದ ಯೋಜನೆಗಾಗಿ ಸ್ಥಳ ಪರಿಶೀಲನೆ (ರೆಕಾನೈಸನ್ಸ್) ನಡೆಸಲು ಆತ ರೆಡ್‌ಫೋರ್ಟ್‌ಗೆ ಭೇಟಿ ನೀಡಿದ್ದಿರಬಹುದು ಎಂದು ತನಿಖಾ ಸಂಸ್ಥೆ ಶಂಕಿಸಿದೆ.

ನಬಿ ಮತ್ತು ಆತನ ಸಹಚರರು ಇಂತಹ ಭೇಟಿಗಳ ಸಂದರ್ಭದಲ್ಲಿ ತಮ್ಮ ಮೊಬೈಲ್ ಫೋನ್‌ಗಳನ್ನು ಸ್ವಿಚ್ ಆಫ್ ಮಾಡುತ್ತಿದ್ದರು. ತಮ್ಮ ಡಿಜಿಟಲ್ ಚಲನವಲನದ ದಾಖಲೆಗಳನ್ನು ಮರೆಮಾಚುವ ಉದ್ದೇಶದಿಂದಲೇ ಹೀಗೆ ಮಾಡಿರಬಹುದು ಎಂದು ಎನ್‌ಐಎ ಅನುಮಾನಿಸಿದೆ.

ಸ್ಫೋಟಕ್ಕೂ ಒಂದು ದಿನ ಮುನ್ನ ನಬಿ ನುಹ್‌ನಲ್ಲಿದ್ದ ತನ್ನ ಬಾಡಿಗೆ ಕೊಠಡಿಯನ್ನು ತೊರೆದಿದ್ದ ಎನ್ನಲಾಗಿದ್ದು, ಅಲ್ಲಿ ಆತ ಸ್ಫೋಟಕ ತಯಾರಿಕೆಯಲ್ಲಿ ತೊಡಗಿದ್ದನೆಂಬ ಆರೋಪದ ಕುರಿತು ಎನ್‌ಐಎ ತನಿಖೆ ಮುಂದುವರಿಸಿದೆ.