ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

ಅಯೋಧ್ಯೆ ರಾಮ ಮಂದಿರದ ದೇಣಿಗೆಯಿಂದ ಪ್ರತಿ ನಿತ್ಯ 6- 8 ಲಕ್ಷ ರೂ. ಕಳವು

ಅಯೋಧ್ಯೆ ರಾಮ ಮಂದಿರದ ದೇಣಿಗೆ ಪೆಟ್ಟಿಗೆಗೆ ಪ್ರತಿ ದಿನ 24 ರಿಂದ 26 ಲಕ್ಷ ರೂ. ಹರಿದು ಬರುತ್ತಿದ್ದು, ಇದರಿಂದ 6- 8 ಲಕ್ಷ ರೂ. ಕಳವಾಗುತ್ತಿತ್ತು. ಆರಂಭದಲ್ಲಿ ದಿನಕ್ಕೆ ಸರಾಸರಿ 16 ರಿಂದ 18 ಲಕ್ಷ ರೂ. ಬರುತ್ತಿತ್ತು. ಇದು ಬಳಿಕ ಹೆಚ್ಚುತ್ತಾ ಹೋಗಿದೆ ಎಂದು ಬ್ಯಾಂಕ್ ಸಿಬ್ಬಂದಿ ವಿಶೇಷ ತನಿಖಾ ತಂಡದ ಅಧಿಕಾರಿಗಳಿಗೆ ತಿಳಿಸಿದ್ದಾರೆ.

ಸಂಗ್ರಹ ಚಿತ್ರ

ಉತ್ತರ ಪ್ರದೇಶ: ಅಯೋಧ್ಯೆ ರಾಮ ಮಂದಿರದ ( Ayodhya ram mandir) ದೇಣಿಗೆ ಪೆಟ್ಟಿಗೆಯಿಂದ ಪ್ರತಿ ದಿನ 6- 8 ಲಕ್ಷ ರೂ. ಕಳವಾಗುತ್ತಿತ್ತು (Donations theft) ಎಂಬುದು ತನಿಖೆ ವೇಳೆ ಬಹಿರಂಗವಾಗಿದೆ. ವಿಶೇಷ ತನಿಖಾ ತಂಡವು (Special Investigation Team) ಈ ಕುರಿತು ಬ್ಯಾಂಕ್ ಅಧಿಕಾರಿಗಳನ್ನು ವಿಚಾರಣೆ ಒಳಪಡಿಸಿದ್ದು, ರಾಮ ಮಂದಿರದ ದೇಣಿಗೆ ಹಣದ ಕಳ್ಳತನ ವಿಚಾರ ಬಹಿರಂಗವಾಗುವ ಮೊದಲು ದಿನಕ್ಕೆ ಸರಾಸರಿ 16 ರಿಂದ 18 ಲಕ್ಷ ರೂ. ದೇಣಿಗೆ ಬರುತ್ತಿತ್ತು. ಇದು ಬಳಿಕ 24 ರಿಂದ 26 ಲಕ್ಷ ರೂ.ಗಳಿಗೆ ಏರಿಕೆಯಾಗಿತ್ತು ಎಂದು ಬ್ಯಾಂಕ್ ಸಿಬ್ಬಂದಿ ಎಸ್‌ಐಟಿಗೆ ಮಾಹಿತಿ ನೀಡಿದ್ದಾರೆ.

ರಾಮ ಮಂದಿರದಲ್ಲಿ ನಡೆದಿರುವ ದೇಣಿಗೆ ಕಳ್ಳತನ ಪ್ರಕರಣಕ್ಕೆ ಸಂಬಂಧಿಸಿದ ವಿಚಾರಣೆ ವೇಳೆ ಕಳ್ಳತನ ಪ್ರಕರಣ ಬೆಳಕಿಗೆ ಬರುವ ಮೊದಲು ರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್‌ನ ಬ್ಯಾಂಕ್ ಖಾತೆಗಳಿಗೆ ದಿನಕ್ಕೆ ಸರಾಸರಿ 16 ರಿಂದ 18 ಲಕ್ಷ ರೂ. ದೇಣಿಗೆಗಳು ಬಂದಿವೆ. ಆದರೆ ಪ್ರಕರಣ ಬೆಳಕಿಗೆ ಬಂದ ಬಳಿಕ ಈ ಮೊತ್ತವು ದಿನಕ್ಕೆ 24 ರಿಂದ 26 ಲಕ್ಷ ರೂ.ಗಳಿಗೆ ಏರಿಕೆಯಾಗಿದೆ. ಈ ಅಂಕಿಅಂಶಗಳ ಆಧಾರದ ಮೇಲೆ ದೇವಾಲಯದ ದೇಣಿಗೆಗಳಿಂದ ಪ್ರತಿದಿನ 6 ರಿಂದ 8 ಲಕ್ಷ ರೂ. ವರೆಗೆ ಕಳವಾಗಿದೆ ಎಂದು ತನಿಖಾಧಿಕಾರಿಗಳು ಅಂದಾಜಿಸಿದ್ದಾರೆ.

ರಾಮ ಮಂದಿರ ದೇಣಿಗೆ ಕಳವು ಪ್ರಕರಣ: ಆರೋಪಿ ಲವಕುಶ್ ಮಿಶ್ರಾ ಆಸ್ತಿ ಮೇಲೆ ಎಡಿಎ ಕಣ್ಣು

ದೇವಾಲಯದ ನಗದು ದೇಣಿಗೆಗಳ ಎಣಿಕೆ ಕಾರ್ಯವನ್ನು ಎಸ್ ಬಿಐ ನೋಡಿಕೊಳ್ಳುತ್ತದೆ. ಆದರೆ ಇದಕ್ಕಾಗಿ ಅದು ಖಾಸಗಿ ಏಜೆನ್ಸಿಯನ್ನು ನೇಮಿಸಿಕೊಂಡಿದೆ. ನಾಲ್ಕು ದೇಣಿಗೆ ಪೆಟ್ಟಿಗೆಗಳಲ್ಲಿ ನಗದು ಕಾಣಿಕೆಗಳನ್ನು ನೀಡಲಾಗುತ್ತದೆ ಮತ್ತು 11 ಬ್ಯಾಂಕ್ ಸಿಬ್ಬಂದಿ ಮತ್ತು ದೇವಾಲಯದ ಟ್ರಸ್ಟ್‌ನ ಮೂವರು ಸೇರಿದಂತೆ 14 ಜನರ ತಂಡವು ಎಣಿಕೆ ಮಾಡುತ್ತದೆ. ಹೀಗಾಗಿ ಕೆಲವು ಎಸ್ ಬಿಐ ಉದ್ಯೋಗಿಗಳ ಮೇಲೆಯೂ ಎಸ್ ಐಟಿ ನಿಗಾ ಇರಿಸಿದೆ.

ನಿವೃತ್ತ ಬ್ಯಾಂಕ್ ಉದ್ಯೋಗಿ ಮತ್ತು ಆರೋಪಿ ಸುಭಾಷ್ ಶ್ರೀವಾಸ್ತವ ಅವರು ಎಣಿಕೆ ಪ್ರಕ್ರಿಯೆಯ ಉಸ್ತುವಾರಿ ವಹಿಸಿದ್ದರು. ದೇಣಿಗೆ ಪೆಟ್ಟಿಗೆಗಳಿಂದ ಹಣವನ್ನು ಹೊರತೆಗೆಯುವುದು, ಎಣಿಕೆ ಕೋಣೆಗೆ ಕಳುಹಿಸುವುದು ಮತ್ತು ಅಂತಿಮವಾಗಿ ಅದನ್ನು ಬ್ಯಾಂಕ್ ಗೆ ಹಸ್ತಾಂತರಿಸುವುದು ಅವರ ಜವಾಬ್ದಾರಿಯಾಗಿತ್ತು. ದೇವಾಲಯಕ್ಕೆ ಬರುತ್ತಿದ್ದ ಆಭರಣಗಳ ವ್ಯವಸ್ಥಿತ ದಾಖಲೆ ಇರಲಿಲ್ಲ. ಹೀಗಾಗಿ ಇದು ಭಾರಿ ಪ್ರಮಾಣದಲ್ಲಿ ಕಳವಾಗಿರಬಹುದು ಎಂದು ಅಧಿಕಾರಿಗಳು ಶಂಕಿಸಿದ್ದಾರೆ.ಈ ಹಿನ್ನೆಲೆಯಲ್ಲಿ ರಾಮ ಮಂದಿರದ ಹಣಕಾಸಿನ ವಹಿವಾಟುಗಳ ಕುರಿತು ಆಳವಾದ ತನಿಖೆಗೆ ಅಯೋಧ್ಯಾ ಪೊಲೀಸರು ಜಾರಿ ನಿರ್ದೇಶನಾಲಯಕ್ಕೆ ಪತ್ರ ಬರೆಯಲಿದ್ದಾರೆ ಎನ್ನಲಾಗಿದೆ.

ರಾಮ ಮಂದಿರದ ದೇಣಿಗೆ ಕಳವು ಪ್ರಕರಣ ಮೊದಲು ಫೆಬ್ರವರಿಯಲ್ಲಿ ಬೆಳಕಿಗೆ ಬಂದಿತ್ತು. ಎಣಿಕೆಯ ಸಮಯದಲ್ಲಿ ಹಣ ಕಳವು ಮಾಡುವುದನ್ನು ನೋಡಿದ ಎಣಿಕೆ ತಂಡದ ಸದಸ್ಯರೊಬ್ಬರು ಈ ಕುರಿತು ಸುಭಾಷ್ ಶ್ರೀವಾಸ್ತವ ಅವರಿಗೆ ಮಾಹಿತಿ ನೀಡಿದರು. ಅದಕ್ಕೆ ಅವರು ದೇವರು ಎಲ್ಲವನ್ನೂ ನೋಡುತ್ತಿದ್ದಾನೆ. ಅದು ನಿಮ್ಮ ಅಥವಾ ನನ್ನ ಮನೆಯಿಂದ ಹೋಗುತ್ತಿಲ್ಲ ಎಂದು ಹೇಳಿದ್ದರು ಎನ್ನಲಾಗಿದೆ.

ನಗದು ಎಣಿಕೆ ಪ್ರಕ್ರಿಯೆಯಲ್ಲಿ ಭಾಗಿಯಾಗಿರುವ ಬ್ಯಾಂಕ್ ನ ಕೆಲವು ಅಧಿಕಾರಿಗಳನ್ನು ಶುಕ್ರವಾರ ಎಸ್‌ಐಟಿ ವಿಚಾರಣೆಗೆ ಒಳಪಡಿಸಲಾಗಿದೆ. ಟ್ರಸ್ಟ್ ಮತ್ತು ಬ್ಯಾಂಕ್ ನಡುವಿನ ಒಪ್ಪಂದವನ್ನು ಏಕೆ ಸಂಪೂರ್ಣವಾಗಿ ಅನುಸರಿಸಲಾಗಿಲ್ಲ, ನಿಗದಿತ ಕಾರ್ಯವಿಧಾನದಲ್ಲಿ ಬದಲಾವಣೆಗಳನ್ನು ಏಕೆ ಮಾಡಲಾಗಿದೆ, ಅಕ್ರಮದ ಬಗ್ಗೆ ಅನುಮಾನ ವ್ಯಕ್ತವಾದಾಗ ಹಿರಿಯ ಅಧಿಕಾರಿಗಳಿಗೆ ಏಕೆ ವರದಿ ಮಾಡಲಾಗಿಲ್ಲ, ಖಾಸಗಿ ಭದ್ರತಾ ಸಂಸ್ಥೆಯನ್ನು ನಗದು ಎಣಿಕೆಯಂತಹ ಸೂಕ್ಷ್ಮ ಕಾರ್ಯಗಳಿಗೆ ಯಾಕೆ ನಿಯೋಜಿಸಲಾಯಿತು ಎಂದು ಬ್ಯಾಂಕ್ ಅಧಿಕಾರಿಗಳನ್ನು ಪ್ರಶ್ನಿಸಲಾಗಿದೆ.

ಶೀಘ್ರದಲ್ಲೇ ಎಸ್‌ಐಟಿ ತನ್ನ ಅಂತಿಮ ವರದಿಯನ್ನು ಸಲ್ಲಿಸಲಿದ್ದು, ಇದರಲ್ಲಿ ಬ್ಯಾಂಕ್ ಸಿಬ್ಬಂದಿಯ ಪಾತ್ರದ ಬಗ್ಗೆಯೂ ಉಲ್ಲೇಖಿಸಲಿದೆ. ಇದರೊಂದಿಗೆ ಆರೋಪಿ ಬ್ಯಾಂಕ್ ಸಿಬ್ಬಂದಿ ವಿರುದ್ಧ ಕ್ರಮ ಕೈಗೊಳ್ಳುವ ಸಾಧ್ಯತೆಯಿದೆ.

ರಾಮ ಮಂದಿರ ದೇಣಿಗೆ ಕಳವು ಪ್ರಕರಣ: ಆರೋಪಿ ಲವಕುಶ್ ಮಿಶ್ರಾ ಆಸ್ತಿ ಮೇಲೆ ಎಡಿಎ ಕಣ್ಣು

ಪ್ರಕರಣಕ್ಕೆ ಸಂಬಂಧಿಸಿ ಆರೋಪಿ ಅವಿನಾಶ್ ಶುಕ್ಲಾ ಕದ್ದ ಹಣವನ್ನು ದೇವಾಲಯದ ಬಳಿಯ 14 ಕೋಶಿ ಪರಿಕ್ರಮ ಮಾರ್ಗದಲ್ಲಿರುವ ಭಿಕಾಪುರ ಬಳಿಯ ಉದ್ಯಾನದಲ್ಲಿ ಸಹಚರರ ನಡುವೆ ಹಂಚಿರುವುದಾಗಿ ಪೊಲೀಸರಿಗೆ ತಿಳಿಸಿದ್ದಾರೆ. ಎಸ್‌ಐಟಿಯು ಶುಕ್ರವಾರ ಎರಡನೇ ಬಾರಿಗೆ ಟ್ರಸ್ಟ್ ಹುದ್ದೆಗಳಿಗೆ ರಾಜೀನಾಮೆ ನೀಡಿರುವ ಚಂಪತ್ ರಾಯ್, ಅನಿಲ್ ಮಿಶ್ರಾ, ಗೋಪಾಲ್ ರಾವ್ ಅವರನ್ನು ಪ್ರಶ್ನಿಸಿದೆ. ಇವರ ವೈಯಕ್ತಿಕ ಆಸ್ತಿ ಮತ್ತು ಆದಾಯದ ಮೂಲಗಳ ಬಗ್ಗೆ ಪ್ರಶ್ನಿಸಲಾಗಿದ್ದು, ಇದಕ್ಕೆ ಸಂಬಂಧಿಸಿದ ದಾಖಲೆಗಳನ್ನು ಸಲ್ಲಿಸಲು ಕೇಳಿದೆ.

ವಿದ್ಯಾ ಇರ್ವತ್ತೂರು

View all posts by this author