ಚಿಂತಾಮಣಿ: ತಾಲೂಕಿನ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯ ತಿಮ್ಮಸಂದ್ರ ಗ್ರಾಮದ ಬಳಿ ಕಾನೂನುಬಾಹಿರವಾಗಿ ನಡೆಯುತ್ತಿದ್ದ ಐಪಿಎಲ್ ಕ್ರಿಕೆಟ್ ಬೆಟ್ಟಿಂಗ್ ದಂಧೆ ಯೊಂದನ್ನು ಭೇದಿಸುವಲ್ಲಿ ಚಿಂತಾಮಣಿ ಗ್ರಾಮಾಂತರ ಪೊಲೀಸರು ಯಶಸ್ವಿಯಾಗಿದ್ದಾರೆ.
ಖಚಿತ ಮಾಹಿತಿ ಮೇರೆಗೆ ಗ್ರಾಮಾಂತರ ಠಾಣೆಯ ಸರ್ಕಲ್ ಇನ್ಸ್ಪೆಕ್ಟರ್ ಶಿವರಾಜ್ ಹಾಗೂ ಸಿಬ್ಬಂದಿ ದಾಳಿ ನಡೆಸಿದ ಪೊಲೀಸರು,ಸ್ಥಳದಲ್ಲಿದ್ದ ಮೊಬೈಲ್ ಫೋನ್‌ಗಳು ವಶಪಡಿಸಿ ಕೊಂಡು ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಇದನ್ನೂ ಓದಿ: IPL Betting Racket: ಬೆಳಗಾವಿಯಲ್ಲಿ ಐಪಿಎಲ್ ಬೆಟ್ಟಿಂಗ್ ದಂಧೆ ನಡೆಸುತ್ತಿದ್ದ ಬುಕ್ಕಿ ಬಂಧನ
ತಿಮ್ಮಸಂದ್ರ ಗ್ರಾಮದ ಬಳಿಯ ಸಾರ್ವಜನಿಕ ರಸ್ತೆಯಲ್ಲಿ ಕೆಲವರು ಮೊಬೈಲ್ ಆಪ್‌ಗಳ ಮೂಲಕ ಸಾರ್ವಜನಿಕರಿಂದ ಹಣ ಪಡೆದು ಐಪಿಎಲ್ ಕ್ರಿಕೆಟ್ ಪಂದ್ಯಾವಳಿಗೆ ಬೆಟ್ಟಿಂಗ್ ಕಟ್ಟಿಸಿಕೊಳ್ಳುತ್ತಿದ್ದಾರೆ ಎಂಬ ನಂಬಲರ್ಹ ಮಾಹಿತಿ ಲಭಿಸಿತ್ತು.
ಮಾಹಿತಿ ಆಧರಿಸಿ ತಕ್ಷಣವೇ ಕಾರ್ಯಪ್ರವೃತ್ತರಾದ ಪೊಲೀಸ್ ತಂಡವು ಕ್ರಿಕೆಟ್ ಬೆಟ್ಟಿಂಗ್ ನಲ್ಲಿ ತೊಡಗಿದ್ದ ತಿಮ್ಮಸಂದ್ರ ಗ್ರಾಮದ ನಾಗರಾಜ್ ಬಿನ್ ರಾಜಣ್ಣ(47)ಇನ್ನು ಈ ಕೃತ್ಯದಲ್ಲಿ ಭಾಗಿಯಾಗಿದ್ದ ಭರತ್,ಮಹಿಂದ್ರಾ,ರಾಜು,ಆರೋಪಿಗಳನ್ನು ಮತ್ತು ಬೆಟ್ಟಿಂಗ್‌ಗೆ ಬಳಸುತ್ತಿದ್ದ ಪರಿಕರಗಳನ್ನು ರೆಡ್‌ಹ್ಯಾಂಡ್ ಆಗಿ ಹಿಡಿಯುವಲ್ಲಿ ಪೊಲೀಸರು ಯಶಸ್ವಿ ಯಾಗಿದ್ದಾರೆ.
ಸದ್ಯ ಪೊಲೀಸರು ಹಲವು ಮೊಬೈಲ್'ಗಳು ವಶಪಡಿಸಿಕೊಂಡ ಈ ದಂಧೆಯ ಹಿಂದೆ ಇರುವ ಇತರ ಕಿಂಗ್‌ಪಿನ್‌ಗಳ ಪತ್ತೆಗಾಗಿ ಮುಂದಿನ ತನಿಖೆಯನ್ನು ಕೈಗೊಂಡಿದ್ದಾರೆ.