ತಿರುವನಂತಪುರಂ: ಇಡೀ ರಾಜ್ಯವನ್ನೇ ಬೆಚ್ಚಿ ಬೀಳಿಸಿದ ಭೀಕರ ಹತ್ಯಾಕಂಡ ಕೇರಳ ರಾಜಧಾನಿ ತಿರುವನಂತಪುರಂನ ವೆಂಜಾರಮೂಡಿನಲ್ಲಿ ನಡೆದಿದ್ದು (Kerala Horror), 23 ವರ್ಷದ ಯುವಕ ಅಫಾನ್ (Afan) ಐವರನ್ನು ಭೀಕರವಾಗಿ ಕೊಲೆ ಮಾಡಿ ಪೊಲೀಸರಿಗೆ ಶರಣಾಗಿದ್ದಾನೆ. ಸುಮಾರು 6 ಗಂಟೆಯ ಕಾಲಾವಧಿಯಲ್ಲಿ 3 ಕಡೆಗಳಲ್ಲಿ ಈತ ಈ ಕೃತ್ಯ ಎಸಗಿದ್ದು, ಪೊಲೀಸರು ತನಿಖೆ ಕೈಗೆತ್ತಿಕೊಂಡಿದ್ದಾರೆ. ಹಲ್ಲೆಗೊಳಗಾದ ಈತನ ತಾಯಿ ಆಸ್ಪತ್ರೆಯಲ್ಲಿ ಸಾವು-ಬದುಕೊನ ನಡುವೆ ಹೋರಾಟ ನಡೆಸುತ್ತಿದ್ದಾರೆ. ಇದೀಗ ಕೊಲೆಗಳ ಬಗ್ಗೆ ರಹಸ್ಯ ಒಂದೊಂದಾಗಿ ಹೊರ ಬೀಳುತ್ತಿದೆ.
ಅಫಾನ್ ಫೆ. 24ರಂದು 13 ವರ್ಷದ ತನ್ನ ಸಹೋದರ ಅಹ್ಸಾನ್, ಅಜ್ಜಿ ಸಲ್ಮಾ ಬೀವಿ, ತಂದೆಯ ಚಿಕ್ಕಪ್ಪ ಲತೀಫ್, ಚಿಕ್ಕಮ್ಮ ಶಾಹಿಹಾ ಮತ್ತು ಗೆಳತಿ ಫರ್ಶಾನಾ ಅವರನ್ನು ಕೊಲೆ ಮಾಡಿದ್ದಾನೆ. ಜತೆಗೆ ಆತನಿಂದ ಹಲ್ಲೆಗೊಳಗಾಗಿರುವ ತಾಯಿ ಶೆಮಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಅಫಾನ್ 5 ಕೊಲೆಗೂ ಒಂದೇ ಸುತ್ತಿಗೆ ಬಳಸಿರುವುದು ತನಿಖೆಯಲ್ಲಿ ಕಂಡು ಬಂದಿದೆ. ಎಲ್ಲರ ತಲೆಗೆ ಸುತ್ತಿಗೆಯಿಂದ ಬಲವಾಗಿ ಹೊಡೆದಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.
ರಕ್ತದ ಹೊಳೆ
ಕೊಲ್ಲಂ ಕಾಲೇಜಿನಲ್ಲಿ ಸ್ನಾತಕೋತ್ತರ ಪದವಿ ಓದುತ್ತಿರುವ ಫರ್ಶಾನಾ ಅವರ ಮೃತದೇಹ ಕುರ್ಜಿಯಲ್ಲಿ ಕುಳಿತಿರುವ ಸ್ಥಿತಿಯಲ್ಲಿ ಪತ್ತೆಯಾಗಿದೆ. ಅವರ ತಲೆ ಹೋಳಾಗಿದ್ದು, ನೆಲದಲ್ಲಿ ರಕ್ತದ ಹೊಳೆಯೇ ಹರಿದಿದೆ. ಸುತ್ತಿಗೆಯಿಂದ ಬಲವಾದ ಹೊಡೆತ ಬಿದ್ದಿದ್ದರಿಂದ ಅವರ ಹಣೆ ಭಾಗ ಜಜ್ಜಿ ಹೋಗಿದೆ ಎಂದು ಮೂಲಗಳು ತಿಳಿಸಿವೆ. ಅಲ್ಲದೆ ಹಲವು ಬಾರಿ ಬಲವಾಗಿ ಹೊಡೆದಿದ್ದರಿಂದ ಮುಖದಲ್ಲಿಯೂ ಹಲವು ಗಾಯ ಕಂಡು ಬಂದಿದೆ.
ಇನ್ನು ತನ್ನೊಂದಿಗೆ ಆತ್ಮೀಯನಾಗಿದ್ದ ಸಹೋದರ ಅಹ್ಸಾನ್‌ನನ್ನೂ ಅಫಾನ್ ಕ್ರೂರವಾಗಿ ಕೊಂದಿದ್ದಾನೆ. ಆತನ ತಲೆಗೂ ಸುತ್ತಿಗೆಯಿಂದ ಬಲವಾಗಿ ಹೊಡೆಯಲಾಗಿದೆ. ಈತನ ತಲೆಯಲ್ಲಿ 8 ಗಾಯ ಕಂಡು ಬಂದಿದೆ. ತಮ್ಮನನ್ನು ಕೊಲೆ ಮಾಡುವ ಮುನ್ನ ಅಫಾನ್ ಆತನ ನೆಚ್ಚಿನ ತಿಂಡಿ ತಂದುಕೊಟ್ಟಿದ್ದ ಎನ್ನಲಾಗಿದೆ. ಉಳಿದವರನ್ನೂ ಈತ ಇದೇ ಮಾದರಿಯಲ್ಲಿ ಅತೀ ಕ್ರೂರವಾಗಿ ಕೊಲೆ ಮಾಡಿದ್ದಾನೆ. ಆತ ಮಾದಕ ವಸ್ತುಗಳಿಗೆ ದಾಸನಾಗಿದ್ದ. ಅಲ್ಲದೆ ಆರ್ಥಿಕ ಮುಗ್ಗಟ್ಟಿನ ಕಾರಣದಿಂದ ಈ ಕೃತ್ಯ ಎಸಗಿದ್ದಾನೆ ಎನ್ನಲಾಗಿದೆ. ಆತನ ಮಾನಸಿಕ ಆರೋಗ್ಯದ ಬಗ್ಗೆಯೂ ಪರಿಶೀಲನೆ ನಡೆಸಲಾಗುತ್ತಿದೆ. ಪ್ರೀತಿಪಾತ್ರರನ್ನು ಕ್ರೂರವಾಗಿ ಕೊಲೆ ಮಾಡುವಾಗ ಆತನ ಮನಸ್ಥಿತಿ ಹೇಗಿತ್ತು ಎನ್ನುವ ಬಗ್ಗೆಯೂ ತನಿಖೆ ನಡೆಸಲಾಗುತ್ತಿದೆ.
ಪ್ರಿಯತಮೆ ಏಕಾಂಗಿಯಾಗುತ್ತಾಳೆಂದು ಕೊಂದೆ
ಪೊಲೀಸರ ಬಳಿ ಫರ್ಶಾನಾಳನ್ನು ಯಾಕೆ ಕೊಂದೆ ಎನ್ನುವ ಬಗ್ಗೆ ಕಾರಣ ನೀಡಿದ್ದಾನೆ. ತಾನು ಸತ್ತರೆ ಆಕೆ ಏಕಾಂಗಿಯಾಗುತ್ತಾಳೆ ಎನ್ನುವುದಕ್ಕೆ ಕೊಲೆ ಮಾಡಿದ್ದಾಗಿ ತಿಳಿಸಿದ್ದಾನೆ. ತನ್ನ ಅಜ್ಜಿಯನ್ನು ಕೊಂದು ಅವರ ಕತ್ತಿನಲ್ಲಿದ್ದ ಚಿನ್ನದ ಸರ ಕಿತ್ತು ಅಡವಿಟ್ಟು ಹಣ ಪಡೆದುಕೊಂಡಿರುವುದಾಗಿ ತಿಳಿಸಿದ್ದಾನೆ. ಇನ್ನು ಅಫಾನ್‌ನ ತಂದೆ ರಹೀಂ ಸೌದಿ ಅರೇಬಿಯಾದ ಒಮಾನ್‌ನಲ್ಲಿದ್ದಾರೆ. ವೀಸಾ ಸಮಸ್ಯೆ ಮತ್ತು ಕೆಲವೊಂದಿಷ್ಟು ಸಾಲಗಳಿರುವುದರಿಂದ ಕೂಡಲೇ ಬರಲು ಸಾಧ್ಯವಾಗುತ್ತಿಲ್ಲ. ಆದಷ್ಟು ಬೇಗ ಹಿಂದಿರುಗುವುದಾಗಿ ಅವರು ತಿಳಿಸಿದ್ದಾರೆ ಎಂದು ಏಷ್ಯಾನೆಟ್ ನ್ಯೂಸ್ ವರದಿ ಮಾಡಿದೆ.
ಈ ಸುದ್ದಿಯನ್ನೂ ಓದಿ: Kerala Horror: ಯುವಕನಿಂದ ಬರ್ಬರ ಹತ್ಯಾಕಾಂಡ; ಪ್ರೇಯಸಿಯನ್ನೂ ಸೇರಿಸಿ ಕುಟುಂಬದ ಐವರ ಕೊಲೆ
ಇನ್ನೂ ಬಯಲಾಗದ ರಹಸ್ಯ
ಅಫಾನ್ ಯಾಕಾಗಿ ಈ ಕೊಲೆ ಮಾಡಿದ್ದಾನೆ ಎನ್ನುವ ರಹಸ್ಯ ಇನ್ನೂ ಪೂರ್ತಿಯಾಗಿ ಹೊರ ಬಿದ್ದಿಲ್ಲ. ತಾನು ಮಾಡಿರುವ ಸಾಲವನ್ನು ತೀರಿಸಲು ಯಾರೂ ಸಹಾಯ ಮಾಡುತ್ತಿಲ್ಲ ಎನ್ನುವ ಆಕ್ರೋಶದಲ್ಲಿ ಕೊಲೆ ಮಾಡಿದ್ದಾಗಿ ಆತ ನೀಡಿದ ಹೇಳಿಕೆಯನ್ನು ಪೋಲೀಸರು ಪೂರ್ತಿಯಾಗಿ ನಂಬಿಲ್ಲ. ಈ ಬಗ್ಗೆ ಹೆಚ್ಚಿನ ಮಾಹಿತಿ ಕಲೆ ಹಾಕುತ್ತಿದ್ದಾರೆ. ʼʼಸದ್ಯ ಎಲ್ಲ ರಹಸ್ಯ ತಿಳಿದಿರುವ ಅಫಾನ್‌ನ ತಾಯಿ ಶೆಮಿ ಮಾತನಾಡುವ ಸ್ಥಿತಿಯಲ್ಲಿಲ್ಲ. ಅವರು ಚೇತರಿಸಿಕೊಂಡ ಬಳಿಕ ರಹಸ್ಯ ಬಯಲಾಗಲಿದೆʼʼ ಎಂದು ಪೊಲೀಸರು ತಿಳಿಸಿದ್ದಾರೆ. ಮಂಗಳವಾರ ಸಂಜೆ ಮೃತರೆಲ್ಲರ ಅಂತ್ಯ ಸಂಸ್ಕಾರ ನಡೆಸಲಾಗಿದೆ.