ಶಿರಸಿ: ವಿವಿಧ ಪ್ರಕರಣಗಳಲ್ಲಿ ಭಾಗಿಯಾಗಿ ತಲೆಮರೆಸಿಕೊಂಡಿದ್ದ ರೌಡಿಶೀಟರ್‌ನನ್ನು ಬಂಧಿಸುವಲ್ಲಿ ಶಿರಸಿ ಗ್ರಾಮೀಣ ಪೊಲೀಸ್ ಠಾಣೆ (Sirsi Rural Station police ) ಪೊಲೀಸರು ಯಶಸ್ವಿಯಾಗಿದ್ದಾರೆ. ತಾಲೂಕಿನ ಮಳಲಿ ಗ್ರಾಮದ ಅರುಣ (ಅರ್ಜುನ್) ಲಕ್ಷ್ಮಣ ಗೌಡ (28) ಬಂಧಿತನಾಗಿದ್ದಾನೆ. ಆರೋಪಿಯ ವಿರುದ್ಧ ಶಿರಸಿ ಗ್ರಾಮೀಣ, ಬನವಾಸಿ ಹಾಗೂ ಕುಂದಾಪುರ ಪೊಲೀಸ್ ಠಾಣೆಗಳಲ್ಲಿ ವಿವಿಧ ಪ್ರಕರಣಗಳು ದಾಖಲಾಗಿವೆ. ಈತನ ವಿರುದ್ಧ ಪೋಕ್ಸೋ, ಬಲಾತ್ಕಾರ, ಪೊಲೀಸರ ಮೇಲೆ ಹಲ್ಲೆ, ಕೊಲೆ ಯತ್ನ, ಮೋಸ, ಹೆಣ್ಣುಮಕ್ಕಳಿಗೆ ಕಿರುಕುಳ ನೀಡುವುದು ಹಾಗೂ ಸಾಮಾಜಿಕ ಜಾಲತಾಣಗಳಲ್ಲಿ ಅಶ್ಲೀಲ ಭಾವಚಿತ್ರಗಳನ್ನು ಪೋಸ್ಟ್ ಮಾಡುವ ಆರೋಪಗಳಿವೆ.
ಆರೋಪಿಯ ವಿರುದ್ಧ ಈಗಾಗಲೇ ನ್ಯಾಯಾಲಯಗಳಿಂದ ಮೂರು ಜಾಮೀನು ರಹಿತ ವಾರಂಟ್‌ಗಳು ಹೊರಡಿಸಲಾಗಿದ್ದು, ಒಂದು ಪ್ರಕರಣದಲ್ಲಿ ಘೋಷಿತ ಅಪರಾಧಿ ಎಂದು ಘೋಷಿಸಲಾಗಿತ್ತು. ಮತ್ತೊಂದು ಪ್ರಕರಣದಲ್ಲಿ ಸಮನ್ಸ್ ಆದೇಶ ಹೊರಡಿಸಿದ್ದರೂ ನ್ಯಾಯಾಲಯದ ವಿಚಾರಣೆಗೆ ಹಾಜರಾಗದೆ ತಲೆಮರೆಸಿಕೊಂಡಿದ್ದನು. ಬಂಧಿಸಲು ಪೊಲೀಸರು ಹಲವು ಬಾರಿ ಪ್ರಯತ್ನಿಸಿದಾಗಲೂ ಆರೋಪಿಯು ಪೊಲೀಸರ ಮೇಲೆ ಹಲ್ಲೆ ಮಾಡುವುದು ಅಥವಾ ತನ್ನಷ್ಟಕ್ಕೆ ತಾನೇ ಗಾಯ ಮಾಡಿಕೊಂಡು ತಪ್ಪಿಸಿಕೊಂಡು ಕಾಡಿನಲ್ಲಿ ಅಡಗಿ ತಿರುಗಾಡುತ್ತಿದ್ದನು. ಶಿರಸಿ ಗ್ರಾಮೀಣ ಠಾಣೆಯ ಪೊಲೀಸರು ವಿಶೇಷ ತಂಡ ರಚಿಸಿ, ಆರೋಪಿಯನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು, ನ್ಯಾಯಾಲಯವು ನ್ಯಾಯಾಂಗ ಬಂಧನ ವಿಧಿಸಿದೆ.
ಸೂರತ್‌ನಲ್ಲಿ ಒಂದೇ ಕುಟುಂಬದ ಮೂವರ ಆತ್ಮಹತ್ಯೆ: ಕ್ರೆಡಿಟ್ ಕಾರ್ಡ್ ವಂಚನೆ, ಮಾನಸಿಕ ಕಿರುಕುಳ ನೀಡಿದ್ದ ಆರೋಪಿ ಬಂಧನ!
ಕಾರ್ಯಾಚರಣೆಯಲ್ಲಿ ಶಿರಸಿ ಗ್ರಾಮೀಣ ಠಾಣೆಯ ಪಿ.ಐ ರಮೇಶ್ ಹೂಗಾರ, ಪಿ.ಎಸ್.ಐ ಸಂತೋಷಕುಮಾರ ಎಂ, ತನಿಖಾ ಪಿ.ಎಸ್.ಐ ಅಶೋಕ ರಾಠೋಡ, ಎ.ಎಸ್.ಐ ಪ್ರಕಾಶ ತಳವಾರ ಹಾಗೂ ಸಿಬ್ಬಂದಿಗಳಾದ ವಿಘ್ನೇಶ್ವರ ಹೆಗಡೆ, ಮಾಂತೇಶ ಬಾರಕೇರ, ಅಶೋಕ ನಾಯ್ಕ, ಅಭಿಷೇಕ ಆರ್, ಅರುಣಕುಮಾರ ವಿ, ಗಣಪತಿ ನಾಯ್ಕ, ವೆಂಕಟ್ರಮಣ ನಾಯ್ಕ, ದಾವಲಸಾಬ ಕುಂದಿ ಮತ್ತು ಮಾರುತಿ ಗೌಡ ಭಾಗವಹಿಸಿದ್ದರು