ಪುಣೆ: ಉದ್ಯಮಿ ಕೇತನ್ ಅಗರ್ವಾಲ್ (Ketan Agarwal) ಹತ್ಯೆಯ ತನಿಖೆ ನಡೆಸುತ್ತಿರುವ ತನಿಖಾಧಿಕಾರಿಗಳು ಆರೋಪಿಗಳನ್ನು ಹಂತ ಹಂತವಾಗಿ ವಿಚಾರಣೆ ನಡೆಸುತ್ತಿದ್ದಾರೆ. ಸಿಯಾ ಗೋಯಲ್ (Siya Goyal) ಮತ್ತು ಆಕೆಯ ಪ್ರಿಯಕರ ಎಂದು ಹೇಳಲಾಗುವ ಚೇತನ್ ಚೌಧರಿ, ತಮ್ಮ ಭವಿಷ್ಯವನ್ನು ಒಟ್ಟಿಗೆ ಯೋಜಿಸಿದ್ದರು, ಇದರಲ್ಲಿ ಅವರು ಯಾವಾಗ ಮದುವೆಯಾಗುತ್ತಾರೆ ಮತ್ತು ಕೇತನ್ ಸಾವಿನ ನಂತರ ಅನುಮಾನ ಬಂದರೆ ತಪ್ಪಿಸಿಕೊಳ್ಳುವುದು ಹೇಗೆ ಎಂಬುದರ ಸಂಚು ರೂಪಿಸಿದ್ದರು.
ಕೊಲೆಯ ನಂತರ ಸುಮಾರು ಮೂರು ವರ್ಷಗಳ ಕಾಲ ಬೇರೆಯಾಗಿರಲು ಯೋಜನೆ ರೂಪಿಸಲಾಗಿತ್ತು ಎಂದು ವರದಿಯಾಗಿದೆ. ಪೊಲೀಸ್ ಮೂಲಗಳ ಪ್ರಕಾರ, ಕೇತನ್ ಸಿಯಾಗೆ ಮದುವೆಗೆ ಸಂಬಂಧಿಸಿದ ವೆಚ್ಚಗಳಿಗಾಗಿ ಸುಮಾರು 1 ಕೋಟಿ ರೂ.ಗಳನ್ನು ನೀಡಿದ್ದರು ಎಂದು ತಿಳಿದು ಬಂದಿದೆ. ತನಿಖಾಧಿಕಾರಿಗಳು ಹೇಳುವಂತೆ ಈ ಮೊತ್ತವನ್ನು ಸಿಯಾ ಅವರಿಗೆ ಮದುವೆಗೆ ಬಳಸಲಾಗಲಿಲ್ಲ ಮತ್ತು ಬದಲಿಗೆ ಚೇತನ್‌ಗೆ ನೀಡಿದ್ದಾಳೆ. ಆತ ಅದನ್ನು ತಮ್ಮ ವೃತ್ತಿ ಮತ್ತು ವ್ಯವಹಾರದಲ್ಲಿ ಹೂಡಿಕೆ ಮಾಡಲು ಯೋಜಿಸಿದ್ದ ಎನ್ನಲಾಗಿದೆ.
ಫೆಬ್ರವರಿಯಲ್ಲಿ ಕೇತನ್ ಜೊತೆ ಎಂಗೇಜ್ ಮೆಂಟ್ ಮಾಡಿಕೊಳ್ಳುವ ಮುನ್ನಾ ಸಿಯಾ ಮತ್ತು ಚೇತನ್ ಒಂದು ಗುಂಪಿನೊಂದಿಗೆ ಉದಯಪುರಕ್ಕೆ ಪ್ರಯಾಣಿಸಿದ್ದರು. ಕೊಲೆಗೆ ಸಂಚು ರೂಪಿಸುವ ಉದ್ದೇಶದಿಂದಲೇ ಉದಯಪುರಕ್ಕೆ ಹೋಗಿದ್ರಾ ಎಂಬುದರ ಕುರಿತು ಮಾಹಿತಿ ಸಂಗ್ರಹಿಸಲು ಪೊಲೀಸರು ಈಗ ಪ್ರಯಾಣ ದಾಖಲೆಗಳು ಮತ್ತಿತರ ದಾಖಲೆಗಳನ್ನು ಪರಿಶೀಲಿಸುತ್ತಿದ್ದಾರೆ. ಕೇತನ್ ಜೊತೆ ಮದುವೆಯಾಗಲು ತಾನು ಎಂದಿಗೂ ಬಯಸಿರಲಿಲ್ಲ ಎಂದು ಸಿಯಾ ಹೇಳಿರುವುದಾಗಿ ತನಿಖಾಧಿಕಾರಿಗಳು ಉಲ್ಲೇಖಿಸಿದ್ದಾರೆ.
ಪುಣೆ ಉದ್ಯಮಿ ಕೊಲೆ ಕೇಸ್; ಸಿಕ್ಕಿಬಿದ್ದ ಬಳಿಕ ಮೂಡಿತಾ ಬಿರುಕು? ಸಿಯಾ - ಚೇತನ್ ಪರಸ್ಪರ ಆರೋಪ
ಕೇತನ್ ಕೊಲೆಯಾದ ಕೆಲ ತಿಂಗಳ ಬಳಿಕ ಚೇತನ್ ಸಿಯಾಳ ಕುಟುಂಬ ಸಂಪರ್ಕಿ ಅಧಿಕೃತವಾಗಿ ಮದುವೆಯ ಪ್ರಸ್ತಾಪ ಮಾಡಲು ಯೋಜಿಸಿದ್ದರು ಎಂಬ ಆರೋಪಗಳ ಬಗ್ಗೆಯೂ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಕೇತನ್ ಅಗರ್ವಾಲ್ ಅವರನ್ನು ಲೋಹಗಡ್ ಕೋಟೆಯಿಂದ ತಳ್ಳುವ ಅರ್ಧ ಗಂಟೆ ಮೊದಲು ಸಿಯಾ ಗೋಯಲ್ ತನ್ನ ಗೆಳೆಯ ಚೇತನ್ ಗೆ ಕರೆ ಮಾಡಿದ್ದಾಳೆ ಎಂದು ಪೊಲೀಸ್ ತನಿಖೆಯಿಂದ ತಿಳಿದುಬಂದಿದೆ. ಫೆಬ್ರವರಿಯಲ್ಲಿ ಕೇತನ್ ಅಗರ್ವಾಲ್ ಜೊತೆ 20 ವರ್ಷದ ಸಿಯಾ ಗೋಯಲ್ ನಿಶ್ಚಿತಾರ್ಥ ಮಾಡಿಕೊಂಡಿದ್ದಳು. ಆದರೆ ಇದಾದ ಬಳಿಕ ಆಕೆ ಆತನನ್ನು ಲೋಹಗಡ್ ಕೋಟೆಯಿಂದ ತಳ್ಳಿ ಕೊಂದಿದ್ದಾಳೆ.