ಫೋಟೋ ಗ್ಯಾಲರಿ ಬಜೆಟ್​ T20 ವಿಶ್ವಕಪ್​ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ವಿದೇಶ ಕ್ರೈಂ ಧಾರ್ಮಿಕ ಪ್ರವಾಸಿ ಪ್ರಪಂಚ ಸಂಪಾದಕೀಯ ಉದ್ಯೋಗ

ಸೋಲೋ ಟ್ರಾವೆಲ್‌ಗೆ ಹೊರಟ ಯುವತಿಗೆ ಭಯಾನಕ ಅನುಭವ: ಟ್ಯಾಕ್ಸಿ ಚಾಲಕನಿಂದ ಅತ್ಯಾಚಾರಕ್ಕೆ ಯತ್ನ; ತಪ್ಪಿಸಿಕೊಂಡು ರಾತ್ರಿಯಿಡೀ ಕಾಡಿನಲ್ಲಿ ಕಳೆದ ಸಂತ್ರಸ್ತೆ

Taxi Driver Attempts Physical Assault: ಟ್ಯಾಕ್ಸಿ ಚಾಲಕನಿಂದ ನಡೆದ ಅತ್ಯಾಚಾರ ಯತ್ನದಿಂದ ತಪ್ಪಿಸಿಕೊಳ್ಳಲು ಕಾಡಿನಲ್ಲಿ ಗಂಟೆಗಟ್ಟಲೆ ಅಡಗಿಕೊಂಡಿದ್ದ ಯುವತಿಗೆ ಏಕಾಂಗಿ ಪ್ರವಾಸವು ಭಯಾನಕ ರಾತ್ರಿಯಾಗಿ ಮಾರ್ಪಟ್ಟಿದೆ. 31 ವರ್ಷದ ಮಹಿಳೆ ದೆಹಲಿಯಿಂದ ಡೆಹ್ರಾಡೂನ್ ಮೂಲಕ ಕಥ್ಗೋಡಮ್‌ಗೆ ಆಗಮಿಸಿ ನೈನಿತಾಲ್‌ಗೆ ಟ್ಯಾಕ್ಸಿ ಬಾಡಿಗೆಗೆ ಪಡೆದಾಗ ಈ ಘಟನೆ ನಡೆದಿದೆ.

ಸಾಂದರ್ಭಿಕ ಚಿತ್ರ

ಡೆಹ್ರಾಡೂನ್, ಮಾ. 8: ಟ್ಯಾಕ್ಸಿ ಚಾಲಕನಿಂದ ನಡೆದ ಅತ್ಯಾಚಾರ ಯತ್ನದಿಂದ ತಪ್ಪಿಸಿಕೊಳ್ಳಲು ಉತ್ತರಾಖಂಡದ (Uttarakhand) ನೈನಿತಾಲ್ ಕಾಡಿನಲ್ಲಿ ಗಂಟೆಗಟ್ಟಲೆ ಅಡಗಿಕೊಂಡಿದ್ದ ದೆಹಲಿಯ ಯುವತಿಗೆ ಏಕಾಂಗಿ ಪ್ರವಾಸವು ಭಯಾನಕ ರಾತ್ರಿಯಾಗಿ ಮಾರ್ಪಟ್ಟಿತು. ಗಾಯಗೊಂಡು ಮೊಬೈಲ್ ಫೋನ್ ಇಲ್ಲದೆ, ಸುರಕ್ಷಿತ ಸ್ಥಳಕ್ಕೆ ತಲುಪುವ ಮೊದಲು ಅವರು ರಾತ್ರಿಯಿಡೀ ಕಾಡಿನಲ್ಲಿ ಅಡಗಿಕೊಂಡಿದ್ದರು ಎಂದು ವರದಿಯಾಗಿದೆ (Crime News).

ಪೊಲೀಸರ ಪ್ರಕಾರ, 31 ವರ್ಷದ ಯುವತಿ ದೆಹಲಿಯಿಂದ ಡೆಹ್ರಾಡೂನ್ ಮೂಲಕ ಕಥ್ಗೋಡಮ್‌ಗೆ ಆಗಮಿಸಿ ಗುರುವಾರ (ಮಾರ್ಚ್‌ 5) ನೈನಿತಾಲ್‌ಗೆ ಟ್ಯಾಕ್ಸಿ ಬಾಡಿಗೆಗೆ ಪಡೆದರು. ಬೆಳಗಿನ ಜಾವ 1:30ರ ಸುಮಾರಿಗೆ ಟ್ಯಾಕ್ಸಿ ಚಾಲಕ ಲೇಕ್ ಸಿಟಿ ಬಳಿಯ ಪಟ್ವಾ ದಂಗಾರ್‌ನಲ್ಲಿ ನಿರ್ಜನ ರಸ್ತೆಗೆ ವಾಹನವನ್ನು ತಿರುಗಿಸಿದ್ದಾನೆ. ಮಹಿಳೆ ಆಕ್ಷೇಪ ವ್ಯಕ್ತಪಡಿಸಿದಾಗ, ಚಾಲಕ ವಾಹನವನ್ನು ನಿಲ್ಲಿಸಿ, ಆಕೆಯನ್ನು ನಿಂದಿಸಿ, ಹಲ್ಲೆ ನಡೆಸಿದ್ದಾನೆ. ಆಕೆಯ ಮೊಬೈಲ್ ಫೋನ್ ಕಸಿದುಕೊಂಡು ಅತ್ಯಾಚಾರಕ್ಕೆ ಯತ್ನಿಸಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.

ಆತನಿಂದ ತಪ್ಪಿಸಿಕೊಳ್ಳಲು ಮಹಿಳೆ ಹತ್ತಿರದ ಕಾಡಿನ ಕಡೆಗೆ ಓಡಿಹೋಗಿ ರಾತ್ರಿಯಿಡೀ ಅಲ್ಲಿ ಅಡಗಿಕೊಂಡಿದ್ದಾರೆ. ಶುಕ್ರವಾರ ಬೆಳಗ್ಗೆ ಪಟ್ವಾ ದಂಗರ್ ಗ್ರಾಮವನ್ನು ತಲುಪುವಲ್ಲಿ ಅವರು ಯಶಸ್ವಿಯಾದರು. ಸ್ಥಳೀಯರ ಸಹಾಯದಿಂದ ಪೊಲೀಸರಿಗೆ ದೂರು ನೀಡಿದರು.

ಹಾಸ್ಟೆಲ್​ನಲ್ಲಿ ವಿದ್ಯಾರ್ಥಿಯಿಂದ ಹಲವರ ಮೇಲೆ ಹಲ್ಲೆ, ಓರ್ವ ಬಾಲಕ ಸಾವು, ವಾರ್ಡನ್‌ಗೆ ಗಾಯ

ಪೊಲೀಸರು ತಕ್ಷಣ ಕಾರ್ಯಪ್ರವೃತ್ತರಾಗಿ, ಸಾಕ್ಷ್ಯಗಳನ್ನು ಸಂಗ್ರಹಿಸಿ, ಸಂತ್ರಸ್ತೆಯನ್ನು ವೈದ್ಯಕೀಯ ಪರೀಕ್ಷೆಗೆ ಕಳುಹಿಸಿದ್ದಾಗಿ ಹೇಳಿದರು. ಸಿಸಿಟಿವಿ ದೃಶ್ಯಾವಳಿಗಳು, ಟ್ಯಾಕ್ಸಿಯ ನೋಂದಣಿ ಸಂಖ್ಯೆ ಮತ್ತು ಅದರ ಜಿಪಿಎಸ್ ವ್ಯವಸ್ಥೆಯನ್ನು ಬಳಸಿಕೊಂಡು, ಪೊಲೀಸರು ಆರೋಪಿ ಚಾಲಕನನ್ನು ಪತ್ತೆಹಚ್ಚಿದರು. ಆರೋಪಿಯನ್ನು ಪೈನ್ಸ್ ಭವಾಲಿ ರಸ್ತೆಯ ದೀಪಕ್ ಸಿಂಗ್ ಬೋರಾ (39) ಎಂದು ಗುರುತಿಸಲಾಗಿದೆ.

ಮಹಿಳೆಯ ಬಳಿಯಿಂದ ಕದ್ದ ಮೊಬೈಲ್ ಫೋನ್ ಅನ್ನು ಬೋರಾನಿಂದ ವಶಪಡಿಸಿಕೊಳ್ಳಲಾಗಿದ್ದು, ಆತನ ವಾಹನವನ್ನು ಸಹ ವಶಪಡಿಸಿಕೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಸಂತ್ರಸ್ತೆಯ ದೂರಿನ ಆಧಾರದ ಮೇಲೆ, ಭಾರತೀಯ ನ್ಯಾಯ ಸಂಹಿತಾ ಕಾಯ್ದೆಯಡಿ ಅತ್ಯಾಚಾರ, ದರೋಡೆ ಮತ್ತು ಅಪಹರಣಕ್ಕೆ ಸಂಬಂಧಿಸಿದ ಸೆಕ್ಷನ್‌ಗಳ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ.

ನೈನಿತಾಲ್ ಹಿರಿಯ ಪೊಲೀಸ್ ವರಿಷ್ಠಾಧಿಕಾರಿ ಮಂಜುನಾಥ್ ಟಿ.ಸಿ. ಮಾತನಾಡಿ, ಪ್ರವಾಸಿಗರು ಮತ್ತು ನಿವಾಸಿಗಳ ಸುರಕ್ಷತೆಯು ಪ್ರಮುಖ ಆದ್ಯತೆಯಾಗಿದ್ದು, ಅಂತಹ ಅಪರಾಧಗಳಲ್ಲಿ ಭಾಗಿಯಾಗಿರುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದರು.

ಟ್ಯಾಕ್ಸಿ ಮಾಲಕರು ಚಾಲಕರ ಪೂರ್ವಾಪರ ವಿಚಾರಿಸಬೇಕು ಮತ್ತು ಸರಿಯಾದ ದಾಖಲೆಗಳನ್ನು ಖಚಿತಪಡಿಸಿಕೊಳ್ಳಬೇಕು ಎಂದು ಅವರು ಎಚ್ಚರಿಸಿದರು. ನಿಯಮಗಳನ್ನು ಪಾಲಿಸದಿದ್ದರೆ ಕಠಿಣ ಕ್ರಮ ಕೈಗೊಳ್ಳಬೇಕಾಗುತ್ತದೆ ಎಂದು ಹೇಳಿದರು. ಆರೋಪಿಯು ಬೇರೊಬ್ಬರಿಗೆ ಸೇರಿದ ಟ್ಯಾಕ್ಸಿಯನ್ನು ಚಲಾಯಿಸುತ್ತಿದ್ದ ಎಂದು ನೈನಿತಾಲ್ ಹಿರಿಯ ಪೊಲೀಸ್ ವರಿಷ್ಠಾಧಿಕಾರಿ ಮಂಜುನಾಥ್ ಹೇಳಿದರು.