ಲಖನೌ: ಅಕ್ರಮವಾಗಿ ಭಾರತದ ಗಡಿಯೊಳಗೆ ಪ್ರವೇಶಿಸಿ ಗಡಿ ಭಾಗದಲ್ಲಿ ಅನುಮಾನಾಸ್ಪದವಾಗಿ ಓಡಾಡುತ್ತಿದ್ದ ಚೀನಾ ಪ್ರಜೆಯೊಬ್ಬ (Chinese Man) ಸಶಸ್ತ್ರ ಸೀಮಾ ಬಲ್ (ಎಸ್‌ಎಸ್‌ಬಿ) ಸೈನಿಕರ ಬಲೆಗೆ ಬಿದ್ದಿದ್ದಾನೆ. ಈತ ಉತ್ತರ ಪ್ರದೇಶದ ಬಹ್ರೈಚ್ ಜಿಲ್ಲೆಯ ಭಾರತ-ನೇಪಾಳ ಗಡಿಯಲ್ಲಿರುವ ರುಪೈದಿಹಾ ಚೆಕ್‌ಪೋಸ್ಟ್‌ನಲ್ಲಿ ಸೋಮವಾರ ಸಿಕ್ಕಿಬಿದ್ದಿದ್ದಾನೆ. ಆರೋಪಿ ಗಡಿಯೊಳಗೆ ಪ್ರವೇಶಿಸಿದ್ದು ಮಾತ್ರವಲ್ಲದೇ ಅಲ್ಲಿ ವಿಡಿಯೊಗಳನ್ನು ಚಿತ್ರೀಕರಿಸುತ್ತಿದ್ದ ಎನ್ನಲಾಗಿದೆ. ಈತನ ಚಲನವನದ ಬಗ್ಗೆ ಅನುಮಾನಗೊಂಡ ಸೈನಿಕರು ಆತನನ್ನು ತಕ್ಷಣ ವಶಕ್ಕೆ ಪಡೆದಿದ್ದಾರೆ. ಬಂಧಿತ ವ್ಯಕ್ತಿಯನ್ನು 36 ವರ್ಷದ ಲಿಯು ಕುನ್ಜಿಂಗ್ ಎಂದು ಗುರುತಿಸಲಾಗಿದ್ದು, ಚೀನಾದ ಹುನಾನ್ ನಿವಾಸಿಯಾಗಿರುವ ಈತ ಅಕ್ರಮವಾಗಿ ಭಾರತದ ಗಡಿಯೊಳಗೆ ಪ್ರವೇಶಿಸಿದ್ದಾನೆ ಎಂಬುದು ತಿಳಿದುಬಂದಿದೆ.
ಈತ ನೇಪಾಳ, ಪಾಕಿಸ್ತಾನಕ್ಕೂ ಈ ಹಿಂದೆ ಪ್ರಯಾಣ ಬೆಳೆಸಿದ್ದ ಎಂಬುದು ತನಿಖೆಯಲ್ಲಿ ಬಯಲಾಗಿದ್ದು, ಆತನಿಂದ ಚೀನಾ, ಪಾಕಿಸ್ತಾನ, ಮತ್ತು ನೇಪಾಳ ಕರೆನ್ಸಿಯನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಎಸ್‌ಎಸ್‌ಬಿ ಅಧಿಕಾರಿಗಳು ತಿಳಿಸಿದ್ದಾರೆ. ಈತ ನೇಪಾಳದಿಂದ ಅಕ್ರಮ ಮಾರ್ಗದ ಮೂಲಕ ಭಾರತಕ್ಕೆ ನುಸುಳಿ ಗಡಿ ಪ್ರದೇಶದ ವಿಡಿಯೋ ಚಿತ್ರೀಕರಣ ಮಾಡುತ್ತಿರುವ ವೇಳೆ ಹಿಡಿದು ಬಂಧಿಸಲಾಗಿದೆ ಎಂದು ಎಸ್‌ಎಸ್‌ಬಿಯ 42ನೇ ಬೆಟಾಲಿಯನ್‌ನ ಕಮಾಂಡೆಂಟ್ ಗಂಗಾ ಸಿಂಗ್ ಉದಾವತ್ ತಿಳಿಸಿದ್ದಾರೆ.
ಅವನಿಂದ ಮೂರು ಮೊಬೈಲ್ ಫೋನ್‌ಗಳನ್ನು ವಶಪಡಿಸಿಕೊಂಡಿದ್ದು, ಒಂದರಲ್ಲಿ ಭಾರತದ ಭೂಪ್ರದೇಶದ ಹಲವು ಸ್ಥಳಗಳ ವೀಡಿಯೊಗಳಿವೆ. ಮತ್ತು ಆತನ ಬಳಿ ನೇಪಾಳದ ನಕ್ಷೆ ದೊರಕಿದ್ದು, ನಕ್ಷೆಯಲ್ಲಿ ಕೆಲ ಮಾಹಿತಿಯನ್ನು ಇಂಗ್ಲೀಷ್‌ನಲ್ಲಿ ಬರೆಯಲಾಗಿತ್ತು. ಈ ಕುರಿತು ಅಧಿಕಾರಿಗಳು ಪ್ರಶ್ನೆ ಮಾಡಿದಾಗ ಆತ ತನಗೆ ಹಿಂದಿ ಮತ್ತು ಇಂಗ್ಲೀಷ್ ಬರುವುದಿಲ್ಲ ಎಂದು ಕೈ ಸನ್ನೆಯ ಮೂಲಕ ತಿಳಿಸಿದ್ದಾನೆ. ಎಸ್‌ಎಸ್‌ಬಿ, ಪೊಲೀಸರು ಮತ್ತು ಇತರ ಭದ್ರತಾ ಸಂಸ್ಥೆಗಳು ವಿಚಾರಣೆಗೆ ಒಳಪಡಿಸಿದಾಗ ತಾನು ಚೀನಾ ಮೂಲದ ಪ್ರಜೆ, ಪಾಕಿಸ್ತಾನಕ್ಕೂ ಭೇಟಿ ನೀಡಿದ್ದೇನೆಂದು ತಿಳಿಸಿದ್ದಾನೆ ಎಂದು ಕಮಾಂಡೆಂಟ್ ಮಾಹಿತಿ ಹಂಚಿಕೊಂಡಿದ್ದಾರೆ.
Illegal Immigrants: ಅಮೆರಿಕದಲ್ಲಿ 500 ಅಕ್ರಮ ವಲಸಿಗರು ಅರೆಸ್ಟ್; 100 ಜನರ ಗಡಿಪಾರು!
ಈವರೆಗೆ ಲಭ್ಯವಿರುವ ಮಾಹಿತಿ ಆಧಾರದಲ್ಲಿ ಪಾಕಿಸ್ತಾನಕ್ಕೆ ಪ್ರಯಾಣ ಬೆಳೆಸಿರುವುದು, ಸರಿಯಾದ ದಾಖಲೆಗಳಿಲ್ಲದೆ ಭಾರತಕ್ಕೆ ಪ್ರವೇಶಿಸಿರುವುದು, ಗಡಿ ಪ್ರದೇಶದ ವಿಡಿಯೋ ಚಿತ್ರೀಕರಣ ಮತ್ತು ವಶಪಡಿಸಿಕೊಂಡ ನಕ್ಷೆ ಇಂಗ್ಲಿಷ್‌ನಲ್ಲಿದ್ದರೂ, ವಿಚಾರಣೆಯ ಸಮಯದಲ್ಲಿ ಇಂಗ್ಲಿಷ್, ಹಿಂದಿ ಗೊತ್ತಿಲ್ಲವೆಂದು ಹೇಳಿರುವುದರಿಂದ ಅವನನ್ನು ಶಂಕಿತ ಉಗ್ರ ಎಂದು ಪರಿಗಣಿಸಲಾಗಿದೆ. ಈ ಹಿನ್ನೆಲೆ ಬಂಧಿತ ಚೀನಿ ಪ್ರಜೆಯನ್ನು ಪೊಲೀಸರಿಗೆ ಹಸ್ತಾಂತರಿಸಲಾಗಿದೆ ಎಂದು ಉದಾವತ್ ತಿಳಿಸಿದ್ದಾರೆ. ಪೊಲೀಸರು ರುಪೈದಿಹಾ ಪೊಲೀಸ್ ಠಾಣೆಯಲ್ಲಿ ವಿದೇಶಿಯರ ಕಾಯ್ದೆಯ ಸೆಕ್ಷನ್‌ಗಳ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡಿದ್ದು, ತನಿಖೆ ಮುಂದುವರೆಸಿದ್ದಾರೆ.
ಭದ್ರತಾ ಸಂಸ್ಥೆಗಳು ನಡೆಸಿರುವ ಪ್ರಾಥಮಿಕ ತನಿಖೆಯಲ್ಲಿ ಅವನು ನವೆಂಬರ್ 15 ರಂದು ಚೀನಾದಿಂದ ನೇಪಾಳ ಪ್ರವಾಸಿ ವೀಸಾದ ಮೂಲಕ ನೇಪಾಳವನ್ನು ಪ್ರವೇಶಿಸಿದ್ದಾನೆ. ನಂತರ ನವೆಂಬರ್ 24 ರಂದು ರುಪೈದಿಹಾ ಗಡಿಯ ಮೂಲಕ ಅಕ್ರಮವಾಗಿ ಭಾರತವನ್ನು ಪ್ರವೇಶಿಸಿದ್ದಾನೆ ಎಂದು ತಿಳಿದುಬಂದಿದೆ.