ಬೆಂಗಳೂರು: ರನ್ಯಾ ರಾವ್ ಪ್ರಕರಣದಲ್ಲಿ ಸಿಐಡಿ ತನಿಖೆಯನ್ನು ರಾಜ್ಯ ಸರ್ಕಾರ ಕೈಬಿಟ್ಟಿದೆ. ಚಿನ್ನದ ಕಳ್ಳಸಾಗಣೆ ಪ್ರಕರಣ ಅಂತಾರಾಷ್ಟ್ರೀಯ ಮಟ್ಟದಲ್ಲಿ ಸುದ್ದಿಯಾದ ಹಿನ್ನೆಲೆಯಲ್ಲಿ ಕೇಂದ್ರ ಮತ್ತು ರಾಜ್ಯಸರ್ಕಾರದ ಹಲವು ಸಂಸ್ಥೆಗಳು ಚಿನ್ನ ಕಳ್ಳಸಾಗಣೆ ಜಾಲದ ಬೆನ್ನು ಬಿದ್ದಿವೆ. ಇನ್ನು ರನ್ಯಾ ರಾವ್ ರಾಜ್ಯದ ಡಿಜಿಪಿ ಹಾಗೂ ಪೊಲೀಸ್ ವಸತಿಗೃಹ ನಿಗಮದ ಅಧ್ಯಕ್ಷ ರಾಮಚಂದ್ರರಾವ್ ಅವರ ಸಾಕು ಮಗಳಾಗಿದ್ದರಿಂದ ಪ್ರಭಾವ ಬಳಸಿ ವಿಮಾನನಿಲ್ದಾಣದಲ್ಲಿ ಶಿಷ್ಟಾಚಾರ ಉಲ್ಲಂಘಿಸಿ ತಪಾಸಣಾ ರಹಿತವಾಗಿ ಹೊರಬರುತ್ತಿದ್ದರು ಎನ್ನಲಾಗಿದೆ. ಹೀಗಾಗಿ ಸಿಐಡಿ ತನಿಖೆಗೆ ಆದೇಶಿಸಲಾಗಿತ್ತು. ಆದರೆ, ಸಿಬಿಐ ಕೂಡ ಕೇಸ್ ದಾಖಲಿಸಿಕೊಂಡು ವಿಚಾರಣೆ ಆರಂಭಿಸಿರುವ ಹಿನ್ನೆಲೆಯಲ್ಲಿ ಸಿಐಡಿ ತನಿಖೆ ಆದೇಶವನ್ನು ರಾಜ್ಯ ಸರ್ಕಾರ ಹಿಂಪಡೆದಿದೆ.
ವಿಮಾನ ನಿಲ್ದಾಣದಿಂದ ಚಿನ್ನವನ್ನು ಅಕ್ರಮವಾಗಿ ತೆಗೆದುಕೊಂಡು ಹೋಗುತ್ತಿದ್ದಾಗ ಕಂದಾಯ ಗುಪ್ತಚರ ನಿರ್ದೇಶನಾಲಯ (ಡಿಆರ್‌ಐ) ಅಧಿಕಾರಿಗಳು ರನ್ಯಾರನ್ನು ಬಂಧಿಸಿದ್ದರು. ಇದರ ಬೆನ್ನಲ್ಲೇ ಚಿನ್ನ ಕಳ್ಳಸಾಗಾಣಿಕೆ ತನಿಖೆಗಾಗಿ ಸಿಬಿಐ ಪ್ರಕರಣ ದಾಖಲಿಸಿ ವಿಚಾರಣೆ ಆರಂಭಿಸಿದೆ. ಮತ್ತೊಂದೆಡೆ ಜಾರಿ ನಿರ್ದೇಶನಾಲಯ ಹಾಗೂ ಆದಾಯ ತೆರಿಗೆ ಅಧಿಕಾರಿಗಳು ಕೂಡ ತನಿಖೆ ಕೈಗೆತ್ತಿಕೊಳ್ಳುವ ಸಾಧ್ಯತೆ ಇದೆ. ಹೀಗಾಗಿ ಒಂದೇ ಪ್ರಕರಣದಲ್ಲಿ ಎರಡು ತನಿಖೆಗಳು ಸೂಕ್ತ ಅಲ್ಲ ಎಂಬ ಕಾರಣಕ್ಕಾಗಿ ಈಗ ಸಿಐಡಿ ವಿಚಾರಣೆಯನ್ನು ಹಿಂಪಡೆಯಲಾಗಿದೆ.
ಜಾಮೀನು ಆದೇಶ ಮಾರ್ಚ್ 14ಕ್ಕೆ ಪ್ರಕಟ
ಚಿನ್ನ ಕಳ್ಳ ಸಾಗಣೆ ಪ್ರಕರಣದಲ್ಲಿ ಬಂಧಿತರಾಗಿರುವ ನಟಿ ರನ್ಯಾ ರಾವ್ ಅವರ ಜಾಮೀನು ಅರ್ಜಿಯ ಆದೇಶವನ್ನು ಮಾರ್ಚ್ 14ಕ್ಕೆ ಪ್ರಕಟಿಸುವುದಾಗಿ ಆರ್ಥಿಕ ಅಪರಾಧಗಳ ಕುರಿತಾದ ವಿಶೇಷ ನ್ಯಾಯಾಲಯವು ಬುಧವಾರ ಆದೇಶಿಸಿದೆ. ನಟಿ ರನ್ಯಾ ರಾವ್ ಸಲ್ಲಿಸಿದ್ದ ಜಾಮೀನು ಅರ್ಜಿಯ ವಿಚಾರಣೆಯನ್ನು ವಿಶೇಷ ನ್ಯಾಯಾಧೀಶರಾದ ವಿಶ್ವನಾಥ್ ಗೌಡರ್ ಅವರು ನಡೆಸಿದರು.
ರನ್ಯಾ ಪ್ರತಿನಿಧಿಸಿದ್ದ ಹಿರಿಯ ವಕೀಲ ಕಿರಣ್ ಜವಳಿ ಅವರು, ಕಸ್ಟಮ್ಸ್ ಕಾಯ್ದೆಯ ಸೆಕ್ಷನ್ 102 ಅನ್ನು ಕಂದಾಯ ಗುಪ್ತಚರ ನಿರ್ದೇಶನಾಲಯದ (ಡಿಆರ್‌ಐ) ಅಧಿಕಾರಿಗಳು ಅನುಪಾಲಿಸಿಲ್ಲ. ಬಂಧನ ಮೆಮೊವನ್ನು ನೀಡಲಾಗಿಲ್ಲ. ಆಕೆ ನಿದ್ರಿಸುವುದಕ್ಕೆ ಅವಕಾಶ ನೀಡದೇ ಆಕೆಯ ಹೇಳಿಕೆ ದಾಖಲಿಸಿಕೊಂಡಿರುವುದು ಸ್ವಯಂ ಹೇಳಿಕೆಯಾಗುವುದಿಲ್ಲ. ರಿಮ್ಯಾಂಡ್ ಅರ್ಜಿಯಲ್ಲಿ ಮೂವರನ್ನು ಬಂಧಿಸಲಾಗಿದೆ ಎಂದು ಪ್ರಾಸಿಕ್ಯೂಷನ್ ತಿಳಿಸಿದೆ. ಆದರೆ, ಉಳಿದ ಇಬ್ಬರ ಬಗ್ಗೆ ಯಾವುದೇ ಮಾಹಿತಿ ನೀಡಿಲ್ಲ ಎಂದು ಆಕ್ಷೇಪಿಸಿದರು.
ಈ ಸುದ್ದಿಯನ್ನೂ ಓದಿ | Ranya Rao: ನಟಿ ರನ್ಯಾ ರಾವ್ ತಂದೆ ಡಿಜಿಪಿ ರಾಮಚಂದ್ರ ರಾವ್ ವಿರುದ್ಧ ತನಿಖೆಗೆ ಆದೇಶ
ಪ್ರಾಸಿಕ್ಯೂಷನ್ ಪ್ರತಿನಿಧಿಸಿದ್ದ ಹಿರಿಯ ಸ್ಥಾಯಿ ವಕೀಲ ಮಧು ಎನ್ ರಾವ್ ಅವರು, ಕಸ್ಟಮ್ಸ್ ಕಾಯ್ದೆಗೆ ಅನುಗುಣವಾಗಿ ರನ್ಯಾರನ್ನು ಬಂಧಿಸಲಾಗಿದೆ. ಒಂದೊಮ್ಮೆ ಕಾಯ್ದೆಯನ್ನು ಪಾಲಿಸದಿದ್ದರೂ ಮೇಲ್ನೋಟಕ್ಕೆ ಆರೋಪವಿದ್ದಾಗ ವಶಕ್ಕೆ ಪಡೆಯಲು ಅವಕಾಶವಿದೆ ಎಂದು ಕಾನೂನು ಹೇಳುತ್ತದೆ. ಚಿನ್ನ ಕಳ್ಳ ಸಾಗಣೆಯಲ್ಲಿ ದೊಡ್ಡ ಜಾಲವಿದ್ದು, ಅದನ್ನು ಭೇದಿಸಬೇಕಿದೆ. ವಿಧಿ ವಿಜ್ಞಾನ ಪ್ರಯೋಗಾಲಯದ ದಾಖಲೆಗಳಿಗೆ ಕಾಯಲಾಗುತ್ತಿದ್ದು, ತನಿಖೆ ನಡೆಯುತ್ತಿದೆ. ಹೀಗಾಗಿ, ಆಕೆಗೆ ಜಾಮೀನು ನಿರಾಕರಿಸಬೇಕು ಎಂದು ಮನವಿ ಮಾಡಿದರು. ವಾದ-ಪ್ರತಿವಾದ ಆಲಿಸಿದ ನ್ಯಾಯಾಲಯವು ಮಾರ್ಚ್ 14ಕ್ಕೆ ಆದೇಶ ಪ್ರಕಟಿಸುವುದಾಗಿ ತಿಳಿಸಿತು.