ಬಳ್ಳಾರಿ: ಇತ್ತೀಚೆಗೆ ಶಿವಮೊಗ್ಗದಲ್ಲಿ ಎಸ್‌ಎಸ್‌ಎಲ್‌ಸಿ ಬಾಲಕನ ಕೊಲೆ ಪ್ರಕರಣ ಮಾಸುವ ಮುನ್ನವೇ ಬಳ್ಳಾರಿಯಲ್ಲಿಯೂ ಅಂತಹುದೇ ಪ್ರಕರಣ ನಡೆದಿದೆ. ಕ್ಷುಲ್ಲಕ ಕಾರಣಕ್ಕೆ ನಡೆದ ಗಲಾಟೆಯಲ್ಲಿ ಓರ್ವ ಬಾಲಕ (Crime News) ಮೃತಪಟ್ಟಿರುವ ಘಟನೆ ಬಳ್ಳಾರಿಯ ಖಾಸಗಿ ಶಾಲೆಗೆ ಸೇರಿದ ಹಾಸ್ಟೆಲ್ನಲ್ಲಿ ನಡೆದಿದೆ. ಹಾಸ್ಟೆಲ್ನ ವಾರ್ಡನ್ ಸೇರಿ ಹಲವು ಬಾಲಕರ ಮೇಲೆ 9ನೇ ತರಗತಿ ವಿದ್ಯಾರ್ಥಿ ರಾಡ್ನಿಂದ ಹಲ್ಲೆ ನಡೆಸಿದ ಪರಿಣಾಮ ಓರ್ವ ಪ್ರಾಣಬಿಟ್ಟಿದ್ದರೆ, ಇತರ ಏಳು ಮಂದಿ ಗಂಭೀರವಾಗಿ ಗಾಯಗೊಂಡಿದ್ದಾರೆ.
ಹಲ್ಲೆ ನಡೆಸಿ ಬಾಲಕ ಪರಾರಿಯಾಗಿದ್ದು, ಗಾಯಾಳುಗಳನ್ನು ಬಳ್ಳಾರಿಯ ವಿಮ್ಸ್ ಆಸ್ಪತ್ರೆಗೆ ರವಾನೆ ಮಾಡಲಾಗಿದೆ. ಇನ್ನು ಘಟನೆಯಲ್ಲಿ ಮೃತ ಬಾಲಕನ ಪೋಷಕರ ಆಕ್ರಂದನ ಮುಗಿಲು ಮುಟ್ಟಿದೆ. ರಾಡ್ನಿಂದ ಹೊಡೆದಿದ್ದಾನೆ ಎಂದು ಶಾಲಾ ಆಡಳಿತ ಮಂಡಳಿ ಹೇಳ್ತಿದೆ. ಆದರೆ ಚಾಕುವಿನಿಂದ ಇರಿದು ಕೊಲೆ ಮಾಡಿರುವ ಅನುಮಾನ ಇದೆ. ಹಲ್ಲೆ ನಡೆಸಿರುವ ವಿದ್ಯಾರ್ಥಿ ಡ್ರಗ್ ಅಡಿಕ್ಟ್ ಆಗಿರುವ ಶಂಕೆ ಇದ್ದು, ಇಷ್ಟೆಲ್ಲ ಹುಡುಗರ ಮೇಲೆ ಆತ ಒಬ್ಬನೇ ಹಲ್ಲೆ ಮಾಡೋದಕ್ಕೆ ಹೇಗೆ ಸಾಧ್ಯ? ಇದಕ್ಕೆಲ್ಲಾ ಶಾಲಾ ಆಡಳಿತ ಮಂಡಳಿಯೇ ನೇರ ಹೊಣೆ ಎಂದು ಮೃತ ವಿದ್ಯಾರ್ಥಿ ಪೋಷಕರು ಆರೋಪಿಸಿದ್ದಾರೆ. ಹಾಸ್ಟೆಲ್ ಬಳಿ ಮೃತ ವಿದ್ಯಾರ್ಥಿ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ.
ಅನೈತಿಕ ಸಂಬಂಧಕ್ಕೆ ಕೊಲೆ
ಪ್ರೇಯಸಿಯನ್ನು ಕೊಲೆ ಮಾಡಿ ಬಳಿಕ ಶವವನ್ನು ಸುಟ್ಟು ಸಾಕ್ಷ್ಯ ನಾಶ ಮಾಡಲು ವ್ಯಕ್ತಿಯೊಬ್ಬ ಯತ್ನಿಸಿರುವ ಘಟನೆಯೊಂದು ನಗರದ ಹೊರವಲಯದ ದೇವನಹಳ್ಳಿಯಲ್ಲಿ ನಡೆದಿದೆ. ಆರೋಪಿಯನ್ನು ಮೌನೇಶ್ ಮೈತ್ರಿ (34) ಎಂದು ಗುರುತಿಸಲಾಗಿದೆ. ಈತ ಮೂಲತಃ ಯಾದಗಿರಿ ಜಿಲ್ಲೆಯ ಹಸನಾಪುರ ನಿವಾಸಿಯಾಗಿದ್ದು, ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಖಾಸಗಿ ಉದ್ಯೋಗಿಯಾಗಿ ಕೆಲಸ ಮಾಡುತ್ತಿದ್ದಾನೆಂದು ತಿಳಿದುಬಂದಿದೆ.
ಆರೋಪಿಯ ಪತ್ನಿ ಹೆರಿಗೆಗಾಗಿ ತನ್ನ ಊರಿಗೆ ತೆರಳಿದ್ದ ಸಮಯದಲ್ಲಿ ಮೌನೇಶ್ ಮತ್ತು ನಿರ್ಮಲಾ ನಡುವೆ ಅನೈತಿಕ ಸಂಬಂಧ ಬೆಳೆದಿದೆ. ಈ ಸಂಬಂಧ ಬಹಿರಂಗವಾಗುವ ಭಯದಿಂದ ಫೆಬ್ರವರಿ 21ರಂದು ದೇವನಹಳ್ಳಿಯ ಬಾಡಿಗೆ ಮನೆಯಲ್ಲಿ ಮೌನೇಶ್ ನಿರ್ಮಲಾಳನ್ನು ಉಸಿರುಗಟ್ಟಿಸಿ ಕೊಲೆ ಮಾಡಿದ್ದಾನೆ.