ಲಖನೌ, ಮೇ 31: ಉತ್ತರ ಪ್ರದೇಶದ (Uttar Pradesh) ಗಾಜಿಯಾಬಾದ್‌ನಲ್ಲಿ 17 ವರ್ಷದ ಸೂರ್ಯ ಪ್ರತಾಪ್ ಚೌಹಾಣ್ ಹತ್ಯೆಯ ನಂತರ ಪ್ರತಿಭಟನೆ ಮತ್ತು ಸಾರ್ವಜನಿಕ ಆಕ್ರೋಶ ಭುಗಿಲೆದ್ದ ಕೆಲವು ದಿನಗಳ ನಂತರ, ಪ್ರಕರಣದ ಪ್ರಮುಖ ಆರೋಪಿ, ಹದಿಹರೆಯದ ಯುವಕ ಅಸಾದ್ ಪೊಲೀಸ್ ಎನ್‌ಕೌಂಟರ್‌ನಲ್ಲಿ ಹತನಾಗಿದ್ದಾನೆ. ಆತನ ತಂದೆ ಸೇರಿ ಮೂವರು ಆರೋಪಿಗಳನ್ನು ಪ್ರಕರಣ ಸಂಬಂಧ ಬಂಧಿಸಲಾಗಿದೆ (Crime News).
ಮೇ 28ರಂದು ನಡೆದ ಚೌಹಾಣ್ ಹತ್ಯೆಯ ನಂತರ ಆರೋಪಿ ಅಸಾದ್ ತಲೆಮರೆಸಿಕೊಂಡಿದ್ದ. ಆರೋಪಿಯನ್ನು ಪತ್ತೆಹಚ್ಚಿ ತಿಳಿಸಿದವರಿಗೆ 50,000 ರುಪಾಯಿ ಬಹುಮಾನ ಘೋಷಿಸಲಾಗಿತ್ತು. ಶನಿವಾರ ತಡರಾತ್ರಿ ಖೋಡಾ ಮತ್ತು ಇಂದಿರಾಪುರಂ ಪೊಲೀಸರ ಜಂಟಿ ತಂಡ ನಡೆಸಿದ ಗುಂಡಿನ ಚಕಮಕಿಯಲ್ಲಿ ಆರೋಪಿ ಅಸಾದ್ ಮೃತಪಟ್ಟಿದ್ದಾನೆ.
ಪ್ರತಿದಾಳಿಯ ಸಮಯದಲ್ಲಿ ಅಸಾದ್‌ಗೆ ಗುಂಡೇಟಿನ ಗಾಯಗಳಾಗಿದ್ದು, ಆಸ್ಪತ್ರೆಗೆ ಸಾಗಿಸುವಷ್ಟರಲ್ಲಿ ಮೃತಪಟ್ಟಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ. ಘರ್ಷಣೆಯಲ್ಲಿ ಒಬ್ಬ ಪೊಲೀಸ್ ಅಧಿಕಾರಿ ಕೂಡ ಗಾಯಗೊಂಡಿದ್ದು, ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಪ್ರಿಯಕರನೊಂದಿಗೆ ಸೇರಿ ಒಂದೂವರೆ ವರ್ಷದ ಮಗುವನ್ನು ಕೊಂದಳಾ ಪಾಪಿ ತಾಯಿ?
ಬಕ್ರೀದ್ ಆಚರಣೆಯ ಸಂದರ್ಭದಲ್ಲಿ ಮೇ 28ರಂದು ಗಾಜಿಯಾಬಾದ್‌ನ ಖೋಡಾ ಪ್ರದೇಶದಲ್ಲಿ ಅಸಾದ್ ಮತ್ತು ಅವನ ಸಹಚರರು ಸೂರ್ಯ ಪ್ರತಾಪ್ ಚೌಹಾಣ್ ಮೇಲೆ ಚಾಕುವಿನಿಂದ ಇರಿದು ಹತ್ಯೆ ಮಾಡಿದ್ದರು. ಈ ಘಟನೆ ನಡೆದ ಕೂದಲೆಳೆ ದಿನಗಳ ನಂತರ ಎನ್‌ಕೌಂಟರ್ ನಡೆದಿದೆ. ಪೊಲೀಸ್ ಕಾರ್ಯಾಚರಣೆಯಲ್ಲಿ ಗಂಭೀರವಾಗಿ ಗಾಯಗೊಂಡಿದ್ದ ಅಸಾದ್ ಮೃತಪಟ್ಟಿದ್ದಾನೆ.
ಸೂರ್ಯ ಪ್ರತಾಪ್ ಚೌಹಾಣ್ ಹತ್ಯೆಯು ಸ್ಥಳೀಯ ನಿವಾಸಿಗಳು ಮತ್ತು ಹಿಂದೂ ಸಂಘಟನೆಗಳಲ್ಲಿ ವ್ಯಾಪಕ ಆಕ್ರೋಶವನ್ನು ಹುಟ್ಟುಹಾಕಿತು. ಘಟನೆಯಲ್ಲಿ ಭಾಗಿಯಾಗಿರುವವರನ್ನು ತಕ್ಷಣ ಬಂಧಿಸಬೇಕೆಂದು ಒತ್ತಾಯಿಸಿ ಪ್ರತಿಭಟನೆ ನಡೆಸಿದಿದ್ದವು. ಈ ಪ್ರಕರಣದಲ್ಲಿ ಐವರನ್ನು ಆರೋಪಿಗಳೆಂದು ಗುರುತಿಸಲಾಗಿದೆ. ತಡರಾತ್ರಿ ನಡೆದ ಎನ್‌ಕೌಂಟರ್‌ಗೆ ಮುನ್ನ ಪೊಲೀಸರು ಅಸಾದ್‌ನನ್ನು ಪತ್ತೆಹಚ್ಚಲು ನಿರಂತರ ದಾಳಿ ಮತ್ತು ಶೋಧ ಕಾರ್ಯಾಚರಣೆಗಳನ್ನು ನಡೆಸಿದ್ದರು ಎಂದು ಉಪ ಪೊಲೀಸ್ ಆಯುಕ್ತ (ನಗರ/ಟ್ರಾನ್ಸ್-ಹಿಂಡನ್) ಧವಲ್ ಜೈಸ್ವಾಲ್ ಹೇಳಿದ್ದಾರೆ.
ʼʼಘಟನೆ ನಡೆದ ತಕ್ಷಣ, ಪೊಲೀಸರು ಮೂವರು ಆರೋಪಿಗಳನ್ನು ಬಂಧಿಸಿದರು. ಆದರೆ ಪ್ರಮುಖ ಆರೋಪಿ ಅಸಾದ್ ತಲೆಮರೆಸಿಕೊಂಡಿದ್ದ. ಅವನನ್ನು ಬಂಧಿಸಲು ಹಲವು ಪೊಲೀಸ್ ತಂಡಗಳನ್ನು ರಚಿಸಲಾಯಿತು. ಅವನನ್ನು ಪತ್ತೆಹಚ್ಚಿದವರಿಗೆ 50,000 ರುಪಾಯಿ ಬಹುಮಾನ ಘೋಷಿಸಲಾಯಿತುʼʼ ಎಂದು ಜೈಸ್ವಾಲ್ ತಿಳಿಸಿದ್ದಾರೆ.
ಪಲಾಯನಕ್ಕೆ ಪ್ಲ್ಯಾನ್
ಗುಪ್ತಚರ ಮಾಹಿತಿಯ ಪ್ರಕಾರ, ಅಸಾದ್ ತನ್ನ ಸಹಚರರಿಂದ ಹಣ ಸಂಗ್ರಹಿಸಿ ನಂತರ ಆ ಪ್ರದೇಶದಿಂದ ಪಲಾಯನ ಮಾಡಲು ಚಿಂತಿಸಿದ್ದ. ಮಾಹಿತಿಯ ಮೇರೆಗೆ, ಪೊಲೀಸ್ ತಂಡಗಳು ಬ್ಯಾರಿಕೇಡ್‌ಗಳನ್ನು ಸ್ಥಾಪಿಸಿ ತಪಾಸಣೆ ಕಾರ್ಯಾಚರಣೆ ಪ್ರಾರಂಭಿಸಿದವು. ಪೊಲೀಸರು ಅವನನ್ನು ತಡೆಯಲು ಪ್ರಯತ್ನಿಸಿದಾಗ, ಅವೆ ಮೇಲೆಯೇ ಗುಂಡು ಹಾರಿಸಿದ್ದ. ಪೊಲೀಸರು ಪ್ರತಿ ದಾಳಿ ನಡೆಸಿದರು. ಈ ಸಂದರ್ಭದಲ್ಲಿ ಅಸದ್ ಗಂಭೀರವಾಗಿ ಗಾಯಗೊಂಡಿದ್ದ. ಕೂಡಲೇ ಅವನನ್ನು ಆಸ್ಪತ್ರೆಗೆ ಸಾಗಿಸಲಾಯಿತು. ವೈದ್ಯರು ಅವನನ್ನು ಮೃತಪಟ್ಟಿರುವುದಾಗಿ ಘೋಷಿಸಿದರು ಎಂದು ಮೂಲಗಳು ವರದಿ ಮಾಡಿವೆ.