ಹೈದರಾಬಾದ್, ಮೇ 11: ಅತೀ ವೇಗವಾಗಿ ಬಂದ ಸ್ಪೋರ್ಟ್ಸ್ ಬೈಕ್ ನಿಯಂತ್ರಣ ತಪ್ಪಿ ಕಾರಿಗೆ ಡಿಕ್ಕಿ ಹೊಡೆದ ಪರಿಣಾಮ ಐವರು ಸಾವನ್ನಪ್ಪಿರುವ ಭೀಕರ ಘಟನೆ ತೆಲಂಗಾಣದ ಮಹಬೂಬ್‌ನಗರದ ಪಾಲಕೊಂಡ ಬೈಪಾಸ್ ರಸ್ತೆಯಲ್ಲಿ ಭಾನುವಾರ ತಡರಾತ್ರಿ ನಡೆದಿದೆ. ಯುವಕರು ರಾತ್ರಿ ವೇಳೆ ನಡೆಸುತ್ತಿದ್ದ ಅಕ್ರಮ ಬೈಕ್ ರೇಸಿಂಗ್ (Bike Racing) ಈ ದುರಂತಕ್ಕೆ ಕಾರಣ ಎನ್ನಲಾಗಿದೆ.
ಪ್ರಾಥಮಿಕ ಮಾಹಿತಿಯ ಪ್ರಕಾರ, ಸುಜುಕಿ ಹಯಾಬುಸಾ ಬೈಕ್ ಮೇಲೆ ಇಬ್ಬರು ಯುವಕರು ಸುಮಾರು 140 ಕಿ.ಮೀ. ವೇಗದಲ್ಲಿ ಸಾಗುತ್ತಿದ್ದರು. ಅತೀ ವೇಗದಲ್ಲಿದ್ದ ಬೈಕ್ ಸವಾರನ ನಿಯಂತ್ರಣ ತಪ್ಪಿ ಎದುರಿನಿಂದ ಬರುತ್ತಿದ್ದ ಕಾರಿಗೆ ಬಲವಾಗಿ ಡಿಕ್ಕಿ ಹೊಡೆದಿದೆ. ಡಿಕ್ಕಿಯ ತೀವ್ರತೆ ಎಷ್ಟಿತ್ತೆಂದರೆ ಕಾರಿನಲ್ಲಿದ್ದ ಒಂದೇ ಕುಟುಂಬದ ಮೂವರು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಮೃತರನ್ನು ಅರ್ಶಿಯಾ ಬೇಗಂ (30), ಉಜೇಪಾ (7) ಮತ್ತು ಎರಡು ವರ್ಷದ ಮಗು ಅಮರ್ ಎಂದು ಗುರುತಿಸಲಾಗಿದೆ.
ತೆಲಂಗಾಣದ ಮಹಬೂಬ್‌ನಗರದಲ್ಲಿ ನಡೆದ ಅಪಘಾತ:
ಬೈಕ್‌ನಲ್ಲಿದ್ದ ಇಬ್ಬರು ಸವಾರರನ್ನು ತಕ್ಷಣವೇ ಹತ್ತಿರದ ಆಸ್ಪತ್ರೆಗೆ ದಾಖಲಿಸಲಾಯಿತಾದರೂ, ಅವರು ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ ಎಂದು ವೈದ್ಯರು ಘೋಷಿಸಿದ್ದಾರೆ. ಮೃತ ಸವಾರರಲ್ಲಿ ಒಬ್ಬನನ್ನು ಯಾಕೂಬ್ ಅಫ್ಜಲ್ (25) ಎಂದು ಗುರುತಿಸಲಾಗಿದ್ದು, ಮತ್ತೊಬ್ಬನ ಗುರುತು ಇನ್ನು ಪತ್ತೆಯಾಗಬೇಕಿದೆ. ವಿಶ್ವದ ಅತ್ಯಂತ ವೇಗದ ಬೈಕ್‌ಗಳಲ್ಲಿ ಒಂದಾದ ಹಯಾಬುಸಾ, ಗಂಟೆಗೆ 300 ಕಿ.ಮೀ. ವೇಗವನ್ನು ತಲುಪಬಲ್ಲ ಸಾಮರ್ಥ್ಯ ಹೊಂದಿದೆ.
ಗುರುಮಠಕಲ್ ಬಳಿ ಟ್ರ್ಯಾಕ್ಟರ್‌ಗೆ ಬೈಕ್ ಡಿಕ್ಕಿಯಾಗಿ ಇಬ್ಬರು ಸವಾರರ ದುರ್ಮರಣ
ಸ್ಥಳೀಯರ ಆಕ್ರೋಶ
ಈ ದುರಂತದ ಬೆನ್ನಲ್ಲೇ ಸ್ಥಳೀಯರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಪಾಲಕೊಂಡ ಬೈಪಾಸ್ ರಸ್ತೆಯು ರಾತ್ರಿ ವೇಳೆ ಕಿಡಿಗೇಡಿ ಯುವಕರ ರೇಸಿಂಗ್ ಅಡ್ಡೆಯಾಗಿ ಮಾರ್ಪಟ್ಟಿದೆ ಎಂದು ಅವರು ಆರೋಪಿಸಿದ್ದಾರೆ. "ಪ್ರತಿ ರಾತ್ರಿ ಯುವಕರ ಗುಂಪುಗಳು ದೊಡ್ಡ ಶಬ್ದ ಮಾಡುವ ಸ್ಪೋರ್ಟ್ಸ್ ಬೈಕ್‌ಗಳಲ್ಲಿ ಸ್ಟಂಟ್ ಮಾಡುತ್ತಾ ಅತೀ ವೇಗವಾಗಿ ಚಲಿಸುತ್ತಾರೆ. ಇದರಿಂದ ಸಾರ್ವಜನಿಕರ ಜೀವಕ್ಕೆ ಸಂಚಕಾರ ಒದಗುತ್ತಿದೆ. ಈ ಬಗ್ಗೆ ಹಲವು ಬಾರಿ ದೂರು ನೀಡಿದರೂ ಪೊಲೀಸರು ಯಾವುದೇ ಕಠಿಣ ಕ್ರಮ ಕೈಗೊಂಡಿಲ್ಲ" ಎಂದು ನಿವಾಸಿಗಳು ದೂರಿದ್ದಾರೆ.
ಬಿಗಿ ಕ್ರಮಕ್ಕೆ ಆಗ್ರಹ
ಹೆದ್ದಾರಿಗಳಲ್ಲಿ ಅಕ್ರಮ ರೇಸಿಂಗ್ ತಡೆಯಲು ರಾತ್ರಿ ವೇಳೆ ಪೊಲೀಸ್ ಗಸ್ತು ಹೆಚ್ಚಿಸಬೇಕು, ಸಿಸಿಟಿವಿ ಕ್ಯಾಮೆರಾಗಳನ್ನು ಅಳವಡಿಸಬೇಕು ಮತ್ತು ವೇಗವನ್ನು ಪತ್ತೆಹಚ್ಚುವ 'ಸ್ಪೀಡ್ ಗನ್'ಗಳನ್ನು ಬಳಸಬೇಕು ಎಂದು ಜನರು ಆಗ್ರಹಿಸಿದ್ದಾರೆ. ಮುಗ್ಧ ಜೀವಗಳು ಬಲಿಯಾಗುವ ಮುನ್ನ ರೇಸಿಂಗ್ ಗ್ಯಾಂಗ್‌ಗಳ ವಿರುದ್ಧ ವಿಶೇಷ ಕಾರ್ಯಾಚರಣೆ ನಡೆಸಿ ಕಠಿಣ ಶಿಕ್ಷೆ ವಿಧಿಸಬೇಕು ಎಂಬುದು ಸಾರ್ವಜನಿಕರ ಒತ್ತಾಯವಾಗಿದೆ. ಈ ಅಪಘಾತವು ಅತೀ ವೇಗದ ಚಾಲನೆ ಮತ್ತು ರಸ್ತೆ ನಿಯಮಗಳ ಉಲ್ಲಂಘನೆಯಿಂದ ಆಗುವ ಅಪಾಯಗಳಿಗೆ ಸಾಕ್ಷಿಯಾಗಿದೆ.