ಭೋಪಾಲ್, ಫೆ. 18: ತನ್ನ 24 ವರ್ಷದ ಗೆಳತಿಯನ್ನು ಕತ್ತು ಹಿಸುಕಿ ಹತ್ಯೆ ಮಾಡಿ, ಶವದ ಮೇಲೆ ಅತ್ಯಾಚಾರ ಎಸಗಿದ ಆಘಾತಕಾರಿ ಘಟನೆಯೊಂದು ಇತ್ತೀಚೆಗೆ ಮಧ್ಯ ಪ್ರದೇಶದಲ್ಲಿ ನಡೆದಿದೆ. ಆರೋಪಿಯನ್ನು ಪಿಯೂಷ್ ಧಮ್ನೋಟಿಯಾ ಎಂದು ಗುರುತಿಸಲಾಗಿದೆ. ಆದರೆ ಕೃತ್ಯ ಎಸಗಿದ್ದಕ್ಕೆ ಆತನಿಗೆ ಒಂಚೂರು ಪಶ್ಚಾತ್ತಾಪವಿಲ್ಲ. ಮಾಧ್ಯಮವೊಂದು ಈ ಬಗ್ಗೆ ಪ್ರಶ್ನಿಸಿದಾಗ ಯಾವುದೇ ಪಶ್ಚಾತ್ತಾಪವಿಲ್ಲದೆ ಉತ್ತರಿಸಿದ್ದಾನೆ.
ಮಾಧ್ಯಮವೊಂದು ಪ್ರಶ್ನೆ ಕೇಳಿದಾಗ ನಕ್ಕ ಆತ, ʼʼಆಗಬೇಕಿರುವುದು ಆಗಿ ಹೋಯಿತು. ಆಗಿದ್ದೆಲ್ಲ ಮರೆತುಬಿಡಿ. ಇನ್ನು ಅದನ್ನು ತಿಳಿದುಕೊಂಡು ನೀವೇನು ಮಾಡುತ್ತೀರಿ?ʼʼ ಎಂದು ಉಡಾಫೆಯಿಂದ ವರ್ತಿಸಿದ್ದಾನೆ. ಮತ್ತಷ್ಟು ಕೇಳಿದಾಗ ಸುಮ್ಮನೆ ಹಾಗೆ ನೋಡಿ, ನಂತರ ಸಮಯ ಬಂದಾಗ ಎಲ್ಲವನ್ನೂ ಹೇಳುವುದಾಗಿ ತಿಳಿಸಿದ್ದಾನೆ. ಇಂದೋರ್‌ನ ಸ್ಥಳೀಯ ಪೊಲೀಸ್ ಠಾಣೆಯ ಹೊರಗಿನಿಂದ ಅವನನ್ನು ಪೊಲೀಸ್ ಜೀಪಿನಲ್ಲಿ ಕರೆದೊಯ್ಯಲಾಯಿತು. ಈ ವೇಳೆ ಆರೋಪಿ ಪಿಯೂಷ್ ಯಾವುದೇ ಪಶ್ಚಾತ್ತಾಪ ಇಲ್ಲದಂತೆ ವರ್ತಿಸಿದ್ದಾನೆ.
ಪ್ರೇಮಿಗಳ ದಿನದ ಮುನ್ನಾದಿನ, ಫೆಬ್ರವರಿ 13ರಂದು ಇಂದೋರ್‌ನ ದ್ವಾರಕಾಪುರಿ ಪ್ರದೇಶದ ಬಾಡಿಗೆ ಕೋಣೆಯಲ್ಲಿ ಯುವತಿಯ ಕೊಳೆತ, ಬೆತ್ತಲೆ ದೇಹವು ಪತ್ತೆಯಾದಾಗ ಈ ಅಪರಾಧ ಬೆಳಕಿಗೆ ಬಂದಿತು. ಮೃತದೇಹ ಪತ್ತೆಯಾದ ಒಂದು ದಿನದ ನಂತರ ಆರೋಪಿಯನ್ನು ಬಂಧಿಸಲಾಯಿತು. ನೆರೆಹೊರೆಯವರು ಮನೆಯಿಂದ ಕೆಟ್ಟ ವಾಸನೆ ಬರುತ್ತಿದೆ ಎಂದು ದೂರು ನೀಡಿದ ನಂತರ ಪೊಲೀಸರು ಸ್ಥಳಕ್ಕೆ ಧಾವಿಸಿ, ಬಾಗಿಲು ಒಡೆದು ನೋಡಿದಾಗ ಈ ವಿಷಯ ಬೆಳಕಿಗೆ ಬಂತು. ಪೊಲೀಸರು ಬಾಗಿಲು ಒಡೆದು ಒಳಗೆ ಹೋದಾಗ ಕೊಳೆತ, ಯುವತಿಯೊಬ್ಬಳ ಬೆತ್ತಲೆ ಮೃತದೇಹ ಪತ್ತೆಯಾಗಿತ್ತು. ಕುತ್ತಿಗೆಯಲ್ಲಿ ಹಗ್ಗದ ಗುರುತು ಗೋಚರಿಸಿತ್ತು.
ಯುವತಿ ಹಾಗೂ ಆರೋಪಿ ಪಿಯೂಷ್ ಇಬ್ಬರೂ ವಿದ್ಯಾರ್ಥಿಗಳಾಗಿದ್ದು, ಪರಸ್ಪರ ಚಿರಪರಿತರಾಗಿದ್ದರು. ಇಬ್ಬರೂ ಪರಸ್ಪರ ಪ್ರೀತಿಸುತ್ತಿದ್ದರು ಎನ್ನಲಾಗಿದೆ. ಆದರೆ ಮದುವೆ ವಿಚಾರಕ್ಕೆ ಇವರಿಬ್ಬರ ಮಧ್ಯೆ ಭಿನ್ನಾಭಿಪ್ರಾಯ ಉಂಟಾಗಿತ್ತು. ಯುವತಿಯು ತನ್ನನ್ನು ಮದುವೆಯಾಗುವಂತೆ ಗೆಳೆಯನಿಗೆ ಒತ್ತಾಯಿಸುತ್ತಿದ್ದಳು ಎನ್ನಲಾಗಿದೆ. ಇದರಿಂದ ಇಬ್ಬರ ಮಧ್ಯೆ ಆಗಾಗ ಜಗಳ ನಡೆಯುತ್ತಿತ್ತು.
ಮಂಗಳಮುಖಿ ಜತೆ ಪ್ರೀತಿಯಲ್ಲಿದ್ದ ಯುವಕ; ಬಾಡಿಗೆ ಮನೆಯಲ್ಲಿ ಇಬ್ಬರೂ ಅನುಮಾನಾಸ್ಪದ ಸಾವು
ಮದುವೆಯ ಬಗ್ಗೆ ಇಬ್ಬರ ನಡುವೆ ಆಗಾಗ ಜಗಳಗಳು ನಡೆಯುತ್ತಿದ್ದವು. ಫೆಬ್ರವರಿ 10ರಂದು, ಆರೋಪಿಯು ಯುವತಿ ಜತೆಗಿರುವ ಭಿನ್ನಾಭಿಪ್ರಾಯಗಳನ್ನು ಬಗೆಹರಿಸಲು ತನ್ನ ಬಾಡಿಗೆ ಮನೆಗೆ ಕರೆಸಿದ್ದಾನೆ ಎಂದು ಹೇಳಲಾಗಿದೆ. ಅವರಿಬ್ಬರು ದೈಹಿಕ ಸಂಪರ್ಕವನ್ನು ಕೂಡ ಬೆಳೆಸಿಕೊಂಡಿದ್ದರು. ಆದರೆ ಮದುವೆಯ ವಿಚಾರದಲ್ಲಿ ಜಗಳ ಭುಗಿಲೆದ್ದಿದೆ. ಈ ವಿವಾದ ಹಿಂಸಾಚಾರಕ್ಕೆ ತಿರುಗಿ ಯುವತಿಯ ಸಾವಿಗೆ ಕಾರಣವಾಯಿತು.
ಗೆಳತಿಯು ಇತರ ಯುವಕರೊಂದಿಗೆ ಮಾತನಾಡುವುದು ಆರೋಪಿ ಪಿಯೂಷ್‌ಗೆ ಸಹಿಸಲು ಸಾಧ್ಯವಾಗುತ್ತಿರಲಿಲ್ಲ ಎಂಬುದು ಪೊಲೀಸ್ ತನಿಖೆಯಿಂದ ತಿಳಿದುಬಂದಿದೆ. ಆರೋಪಿಯು ಯುವತಿಯ ಕೈಕಾಲುಗಳನ್ನು ಕಟ್ಟಿಹಾಕಿ, ಆಕೆಯ ಬಾಯಿಗೆ ಟೇಪ್ ತುರುಕಿ, ಆಕೆ ಕಿರುಚದಂತೆ ನೋಡಿಕೊಂಡಿದ್ದಾನೆ. ನಂತರ ಆರೋಪಿಯು ಆಕೆಯ ಕುತ್ತಿಗೆಗೆ ಹಗ್ಗ ಬಳಸಿ ಕತ್ತು ಹಿಸುಕಿ ಕೊಂದಿದ್ದಾನೆ.
ಘಟನೆಯ ನಂತರ, ಆರೋಪಿಯು ಕೋಣೆಯಲ್ಲೇ ಇದ್ದು, ದೇಹದ ಪಕ್ಕದಲ್ಲೇ ಮದ್ಯ ಸೇವಿಸಿದ್ದ. ಜತೆಗೆ ಶವದ ಮೇಲೆ ಲೈಂಗಿಕ ದೌರ್ಜನ್ಯ ನಡೆಸಿದ್ದ ಎನ್ನಲಾಗಿದೆ. ಅವನು ಮೃತ ಯುವತಿಯ ಫೋನ್ ಬಳಸಿ ಅಶ್ಲೀಲ ದೃಶ್ಯಗಳನ್ನು ಚಿತ್ರೀಕರಿಸಿ ಕಾಲೇಜು ವಾಟ್ಸ್‌ಆ್ಯಪ್ ಗ್ರೂಪ್‌ಗೆ ಕಳುಹಿಸಿದ್ದಾನೆ. ಅಷ್ಟೇ ಅಲ್ಲ, ತನ್ನ ಮೃತ ಗೆಳತಿಯ ಆತ್ಮವನ್ನು ಕರೆಯಲು ಮಾಂತ್ರಿಕ ವಿದ್ಯೆಗಾಗಿ ಇಂಟರ್‌ನೆಟ್ ಮತ್ತು ಯೂಟ್ಯೂಬ್‌ನಲ್ಲಿ ಹುಡುಕಿದ್ದ ಎಂದು ತಿಳಿದುಬಂದಿದೆ.