ಮಂಗಳೂರು: ಧರ್ಮಸ್ಥಳದಲ್ಲಿ (Dharmasthala) ಶವಗಳನ್ನು ಹೂತಿದ್ದೇನೆ ಎಂದು ವ್ಯಕ್ತಿಯೊಬ್ಬ ವಕೀಲರ ಮೂಲಕ ದೂರು ನೀಡಿದ ಪ್ರಕರಣದಲ್ಲಿ ಎಸ್‌ಐಟಿ ತನಿಖೆ (SIT Investigation) ತೀವ್ರಗೊಂಡಿದೆ. ದೂರುದಾರನು 13 ಸ್ಥಳಗಳನ್ನು ಗುರುತಿಸಿದ್ದು, ಒಂದೊಂದೇ ಜಾಗವನ್ನು ಅಗೆದು ಶೋಧ (Searching) ನಡೆಸಲಾಗುತ್ತಿದೆ. ಮೊದಲ ದಿನದ ಕಾರ್ಯಾಚರಣೆಯಲ್ಲಿ ಯಾವುದೇ ಕಳೇಬರ ಸಿಕ್ಕಿಲ್ಲ. ಎರಡನೇ ದಿನವಾದ ಇಂದು, ಗುರುತಿಸಿದ 2ನೇ ಸ್ಥಳದಲ್ಲಿ 6 ಅಡಿ ಆಳದ ಗುಂಡಿಯನ್ನು ಅಗೆದರೂ ಯಾವುದೇ ಸಾಕ್ಷ್ಯ ದೊರೆತಿಲ್ಲ.
ದೂರುದಾರನು “ನಾನೇ ಶವಗಳನ್ನು ಹೂತಿದ್ದೇನೆ” ಎಂದು ಸಾಕ್ಷಿಯಾಗಿ ಹೇಳಿಕೆ ನೀಡಿದ್ದಾನೆ. ಎರಡನೇ ಸ್ಥಳದಲ್ಲಿ ಉತ್ಖನನ ಕಾರ್ಯ ಆರಂಭವಾಗಿದ್ದು, ಪಂಚಾಯತ್‌ನ 20 ಕಾರ್ಮಿಕರು ಈ ಕೆಲಸದಲ್ಲಿ ತೊಡಗಿದ್ದಾರೆ. 6 ಅಡಿ ಉದ್ದ ಮತ್ತು 5 ಅಡಿ ಅಗಲದ ಗುಂಡಿಯನ್ನು ಅಗೆದರೂ ಕಳೇಬರಗಳು ಸಿಕ್ಕಿಲ್ಲ. ಆಗಂತುಕನು 9, 10, ಮತ್ತು 11ನೇ ಸ್ಥಳಗಳಲ್ಲಿ ಶೋಧ ನಡೆಸಲು ಸೂಚಿಸಿದ್ದಾನೆ, ಆದರೆ ಎಸ್‌ಐಟಿ ಅಧಿಕಾರಿ ಎಸಿ ವರ್ಗೀಸ್ ಕ್ರಮಬದ್ಧವಾಗಿ ಉತ್ಖನನ ಮುಂದುವರಿಸುವುದಾಗಿ ತಿಳಿಸಿದ್ದಾರೆ.
ಈ ಆರೋಪದಿಂದ ಧರ್ಮಸ್ಥಳದ ಭಕ್ತ ಸಮುದಾಯ ಕಿಡಿಕಾರುತ್ತಿದೆ. “ಶ್ರೀಕ್ಷೇತ್ರದ ಪಾವಿತ್ರ್ಯತೆಯನ್ನು ಹಾಳುಮಾಡಲು ಷಡ್ಯಂತ್ರ ರೂಪಿಸಲಾಗಿದೆ” ಎಂದು ಭಕ್ತರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಸ್ಥಳೀಯರೊಬ್ಬರು, “ಹಿಂದೆ ನದಿಯಲ್ಲಿ ಬಂದ ಕೊಳೆತ ಶವಗಳನ್ನು ಕಂದಾಯ ಭೂಮಿಯಲ್ಲಿ ಹೂಳಲಾಗುತ್ತಿತ್ತು. ಆದರೆ ಆಗಂತುಕನು ತೋರಿಸಿರುವ ಜಾಗ ಅರಣ್ಯ ಪ್ರದೇಶಕ್ಕೆ ಸೇರಿದೆ” ಎಂದು ಹೇಳಿದರು. “ಧರ್ಮಸ್ಥಳದಂತಹ ಶ್ರದ್ಧಾಸ್ಥಾನದಲ್ಲಿ ಅಪಪ್ರಚಾರ ಸಲ್ಲದು. ಶ್ರೀ ಮಂಜುನಾಥ ಸ್ವಾಮಿ ತಪ್ಪಿತಸ್ಥರಿಗೆ ಶಿಕ್ಷೆ ನೀಡುತ್ತಾರೆ” ಎಂದು ಭಕ್ತರು ಹೇಳುತ್ತಿದ್ದಾರೆ.
Dharmasthala: ಧರ್ಮಸ್ಥಳದ ಕಾಡಿನಲ್ಲಿ ಶವ ಹೂಳಿದ ಜಾಗಗಳನ್ನು ತೋರಿಸಿದ ಮುಸುಕುಧಾರಿ
ಮಂಗಳವಾರ ಸುಮಾರು 10 ಕಾರ್ಮಿಕರನ್ನು ಒಳಗೊಂಡ ತಂಡವು ಹಾರೆ, ಪಿಕಾಸಿ ಬಳಸಿ ಮಧ್ಯಾಹ್ನ 12 ಗಂಟೆ ಸುಮಾರಿಗೆ ಅಗೆಯುವ ಕಾರ್ಯ ಆರಂಭಿಸಿತ್ತು. ನೇತ್ರಾವತಿ ನದಿಯಿಂದ 10 ಮೀಟರ್ ದೂರದಲ್ಲಿರುವ ಈ ಜಾಗವನ್ನು ಅಗೆದಂತೆ ನೀರು ಜಿನುಗಲಾರಂಭಿಸಿತು. ಜೊತೆಗೆ ಬಿಟ್ಟು ಬಿಟ್ಟು ಧಾರಾಕಾರ ಮಳೆಯೂ ಸುರಿಯುತ್ತಿತ್ತು, ಇದರಿಂದ ಅಗೆಯುವಿಕೆಗೆ ಅಡಚಣೆಯುಂಟಾಯಿತು. ಎಸ್‌ಐಟಿ ಅಧಿಕಾರಿಗಳು ಸಣ್ಣ ಜೆಸಿಬಿ ಯಂತ್ರವನ್ನು ಸ್ಥಳಕ್ಕೆ ತರಿಸಿಕೊಂಡು ಅಗೆಯಿಸಿದರು. ಕೊನೆಗೆ ಶ್ವಾನದಳ ಕರೆತಂದು ಪರಿಶೀಲನೆ ನಡೆಸಿದರು. ಆದರೂ, ಯಾವುದೇ ಕುರುಹು ಪತ್ತೆಯಾಗದ ಕಾರಣ ಮೊದಲ ದಿನದ ಅಗೆಯುವ ಕಾರ್ಯವನ್ನು ಸಂಜೆ 6ರ ವೇಳೆಗೆ ಸ್ಥಗಿತಗೊಳಿಸಲಾಯಿತು.
ಇಂದಿನ ಉತ್ಖನನಕ್ಕೆ ಹಿಟಾಚಿ ಯಂತ್ರವನ್ನು ಬಳಸಿಲ್ಲ. ಗುರುತಿಸಲಾದ ಸ್ಥಳಗಳು ಅರಣ್ಯ ಇಲಾಖೆಯ ಜಮೀನಿಗೆ ಸೇರಿದ್ದು, ಅರಣ್ಯ ಕಾನೂನುಗಳಿಂದಾಗಿ ಯಂತ್ರ ಬಳಕೆಗೆ ಅನುಮತಿಯಿಲ್ಲ. ಹೀಗಾಗಿ ಕಾರ್ಮಿಕರನ್ನೇ ಉಪಯೋಗಿಸಿ ಶೋಧ ಕಾರ್ಯ ನಡೆಯುತ್ತಿದೆ. ಈ ಆರೋಪಗಳ ಸತ್ಯಾಸತ್ಯತೆಯನ್ನು ಎಸ್‌ಐಟಿ ತನಿಖೆಯು ಬಯಲಿಗೆಳೆಯಲಿದೆ ಎಂದು ನಿರೀಕ್ಷಿಸಲಾಗಿದೆ. ಧರ್ಮಸ್ಥಳದ ಪಾವಿತ್ರ್ಯತೆಯನ್ನು ಕಾಪಾಡಲು ಭಕ್ತರು ಒಗ್ಗಟ್ಟಿನಿಂದ ಧ್ವನಿಯೆತ್ತಿದ್ದಾರೆ.