ಬೆಂಗಳೂರು: ವಿದ್ಯಾರ್ಥಿಯೊಬ್ಬನಿಗೆ ಬೆದರಿಕೆ (Threat) ಹಾಕಿ ಲಕ್ಷಾಂತರ ರೂಪಾಯಿ ನಗದು, ಚಿನ್ನಾಭರಣವನ್ನು ವಶಕ್ಕೆ ಪಡೆದಿರುವ ಘಟನೆ ಬೆಂಗಳೂರಿನಲ್ಲಿ (Bengaluru crime) ನಡೆದಿದೆ. 8ನೇ ತರಗತಿ ವಿದ್ಯಾರ್ಥಿಯೊಂದಿಗೆ ಸ್ನೇಹ ಬೆಳೆಸಿದ ವ್ಯಕ್ತಿಯೊಬ್ಬ ಬಳಿಕ ಆತನಿಗೆ ಬೆದರಿಕೆ ಹಾಕಿ ಹಣ, ನಗದು ದೋಚಿದ್ದಾನೆ. ಸೆಪ್ಟೆಂಬರ್ 2 ರಂದು ಮನೆಯ ಕಪಾಟಿನಲ್ಲಿದ್ದ ನಗದು ಮತ್ತು ಆಭರಣಗಳು ನಾಪತ್ತೆಯಾಗಿರುವುದನ್ನು (cash, Gold theft) ಕಂಡ ಬಾಲಕನ ತಾಯಿ ಬಾಲಕನನ್ನು ವಿಚಾರಿಸಿದಾಗ ಪ್ರಕರಣ ಬೆಳಕಿಗೆ ಬಂದಿದೆ. ಈ ಪ್ರಕರಣಕ್ಕೆ ಸಂಬಂಧಿಸಿ ಬಾಗಲಗುಂಟೆ ಪೊಲೀಸ್ ಠಾಣೆಯಲ್ಲಿ 10 ಮಂದಿ ವಿರುದ್ಧ ಪ್ರಕರಣ ದಾಖಲಿಸಲಾಗಿದೆ.
ಬೆಂಗಳೂರಿನ ಟಿ. ದಾಸರಹಳ್ಳಿ ಪ್ರದೇಶದಲ್ಲಿ 14 ವರ್ಷದ 8ನೇ ತರಗತಿ ವಿದ್ಯಾರ್ಥಿಯೊಬ್ಬನಿಗೆ ಬೆದರಿಕೆ ಹಾಕಿ 6 ಲಕ್ಷ ರೂ. ನಗದು ಮತ್ತು 150 ಗ್ರಾಂ ಚಿನ್ನದ ಆಭರಣಗಳನ್ನು ದೋಚಲಾಗಿದೆ. ಇದಕ್ಕೆ ಸಂಬಂಧಿಸಿ ಬಾಲಕನ ತಂದೆ ಆದಿಲ್ ಪಾಷಾ ಅವರು ಬಾಗಲಗುಂಟೆ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.
ಅಸದುದ್ದೀನ್ ಓವೈಸಿ ಬೆಂಗಾವಲು ಪಡೆಯ ವಾಹನ-ಬೈಕ್‌ಗಳ ನಡುವೆ ಡಿಕ್ಕಿ: ಹಲವರಿಗೆ ಗಾಯ
ಕಳೆದ ಫೆಬ್ರವರಿಯಿಂದ ಕೆಲವು ಯುವಕರು ಬಾಲಕನನ್ನು ಬೆದರಿಸಿ ಚಿನ್ನ, ನಗದು ಲೂಟಿ ಮಾಡಿದ್ದಾರೆ. ಪ್ರಕಾಶ್, ಸಾಗರ್, ತರುಣ್, ವೀರೇಶ್, ಶಂಕರ್, ದಿಗಂತ್, ಲಿಖಿತ್, ಪ್ರಜ್ವಲ್, ನಾಗರಾಜು ಮತ್ತು ಪ್ರಶಾಂತ್ ಎಂಬ 10 ಮಂದಿ ಈ ಕೃತ್ಯದಲ್ಲಿ ಭಾಗಿಯಾಗಿದ್ದಾರೆ ಎಂದು ದೂರಿನಲ್ಲಿ ತಿಳಿಸಲಾಗಿದೆ.
ಮನೆ ಸಮೀಪವಿದ್ದ ಖಾಲಿ ನಿವೇಶನಕ್ಕೆ ಆಗಾಗ್ಗೆ ಬರುತ್ತಿದ್ದ ಪ್ರಕಾಶ್ ಮೊದಲು ಬಾಲಕನೊಂದಿಗೆ ಸ್ನೇಹ ಬೆಳೆಸಿಕೊಂಡು ಬಳಿಕ ತನ್ನ ಎಲೆಕ್ಟ್ರಿಕ್ ದ್ವಿಚಕ್ರ ವಾಹನಕ್ಕೆ ಬಾಲಕ ಹಾನಿ ಮಾಡಿದ್ದಾನೆ ಎಂದು ಸುಳ್ಳು ಆರೋಪ ಮಾಡಿ ಪರಿಹಾರವಾಗಿ 50,000 ರೂ. ನೀಡುವಂತೆ ಒತ್ತಾಯಿಸಿದ್ದನು. ಇದರಿಂದ ಬೆದರಿದ ಬಾಲಕ ಮನೆಗೆ ಬಂದು ಕಪಾಟಿನಲ್ಲಿದ್ದ ಹಣವನ್ನು ತೆಗೆದು ಆತನಿಗೆ ನೀಡಿದ್ದಾನೆ.
ಇದರ ಬಳಿಕ ಪ್ರಕಾಶ್ ಹಲವು ಬಾರಿ ಹಣಕ್ಕಾಗಿ ಬಾಲಕನಿಗೆ ಬೆದರಿಕೆಯೊಡ್ಡಿದ್ದನು. ಅನಂತರ ಸಾಗರ್ ಎಂಬಾತ ಕೂಡ ಬಾಲಕನನ್ನು ದರೋಡೆ ಮಾಡಲು ಪ್ರಾರಂಭಿಸಿದ. ಒಂದು ದಿನ ಅವರಿಬ್ಬರೂ ಬಾಲಕನನ್ನು ಜಾಲಹಳ್ಳಿ ಕ್ರಾಸ್‌ನಲ್ಲಿ ಚಾಕುವಿನಿಂದ ಬೆದರಿಸಿ ಹಣಕ್ಕೆ ಬೇಡಿಕೆ ಇಟ್ಟಿದ್ದು, ಆಗ ಬಾಲಕ ಮತ್ತೆ ಅವರಿಗೆ 50,000 ರೂ. ನೀಡಿದ್ದನು. ಇದರ ಬಳಿಕ ಅವರ ಸಹಚರರು ಕೂಡ ವಸೂಲಿಗಾಗಿ ಬಾಲಕನಿಗೆ ಬೆದರಿಕೆ ಹಾಕಲು ಪ್ರಾರಂಭಿಸಿದರು. ಹಣ ನೀಡದಿದ್ದರೆ ಬಾಲಕ ಮತ್ತು ಆತನ ಪೋಷಕರನ್ನು ಕೊಲ್ಲುವುದಾಗಿ ಬೆದರಿಕೆ ಹಾಕಿದ್ದರು ಎಂದು ದೂರಿನಲ್ಲಿ ತಿಳಿಸಿದ್ದಾರೆ.
ಹೀಗೆ ಬಾಲಕ ಒಟ್ಟು 6 ಲಕ್ಷ ರೂ. ಗಳಲ್ಲಿ ತರುಣ್‌ಗೆ 2 ಲಕ್ಷ ರೂ., ಸಾಗರ್‌ಗೆ 1.5 ಲಕ್ಷ ರೂ. ಮತ್ತು ಪ್ರಕಾಶ್‌ಗೆ 2.5 ಲಕ್ಷ ರೂ. ನೀಡಿದ್ದನು. ಮನೆಯಲ್ಲಿ ನಗದು ಖಾಲಿಯಾದ ಬಳಿಕ ಅವರು ಚಿನ್ನದ ಆಭರಣಗಳನ್ನು ನೀಡುವಂತೆ ಒತ್ತಾಯಿಸಲು ಪ್ರಾರಂಭಿಸಿದ್ದಾರೆ. ಇದರಿಂದ ಬಾಲಕ ತನ್ನ ತಾಯಿಗೆ ಸೇರಿದ 150 ಗ್ರಾಂ ನ ಆಭರಣಗಳಾದ ಕಿವಿಯೋಲೆ, ಬಳೆ, ಹಾರ, ಉದ್ದನೆಯ ಸರ, ಬ್ರೇಸ್‌ಲೆಟ್ ಮತ್ತು ಉಂಗುರಗಳನ್ನು ಅವರಿಗೊಪ್ಪಿಸಿದ್ದಾನೆ ಎಂದು ಎಫ್ ಐಆರ್ ನಲ್ಲಿ ತಿಳಿಸಲಾಗಿದೆ.
ಪ್ರವಾಹದ ನಡುವೆಯೂ ಪಾಠಕ್ಕೆ ವಿರಾಮವಿಲ್ಲ; ಬಿಹಾರದಲ್ಲಿ ದೋಣಿಯೇ ಮಕ್ಕಳ ತರಗತಿ! ಕಲಿಕಾಸಕ್ತಿಗೆ ದೇಶವೇ ಫಿದಾ
ಮನೆಯ ಕಪಾಟಿನಿಂದ ನಗದು ಮತ್ತು ಆಭರಣಗಳು ನಾಪತ್ತೆಯಾಗಿರುವುದನ್ನು ಸೆಪ್ಟೆಂಬರ್ 2ರಂದು ಕಂಡ ಬಾಲಕನ ತಾಯಿ ಈ ಕುರಿತು ಬಾಲಕನನ್ನು ವಿಚಾರಿಸಿದಾಗ ಪ್ರಕರಣ ಬೆಳಕಿಗೆ ಬಂದಿದೆ. ನಗದು, ಚಿನ್ನಾಭರಣ ಸೇರಿದಂತೆ ಒಟ್ಟು 17.5 ಲಕ್ಷ ರೂಪಾಯಿಯನ್ನು ದೋಚಲಾಗಿದೆ ಎಂದು ಅವರು ಹೇಳಿದ್ದಾರೆ.