ಗುವಾಹಟಿ: ಸಿಸಿಟಿವಿಯನ್ನು ನಿಷ್ಕ್ರಿಯಗೊಳಿಸಿ ದೇವಾಲಯವನ್ನು ಲೂಟಿ ಮಾಡಿರುವ ಘಟನೆ ಗುವಾಹಟಿಯಲ್ಲಿ (Guwahati Temple) ನಡೆದಿದೆ. ಇಲ್ಲಿನ ಬೆಟ್ಕುಚಿಯಲ್ಲಿರುವ ಪೂರ್ವ ತಿರುಪತಿ ಶ್ರೀ ಬಾಲಾಜಿ ದೇವಾಲಯದಲ್ಲಿ (Tirupati Sri Balaji Temple) ಬುಧವಾರ ಮಧ್ಯರಾತ್ರಿ ಸಿಸಿಟಿವಿ ನಿಷ್ಕ್ರಿಯಗೊಳಿಸಿ ಕಾಣಿಕೆ ಪೆಟ್ಟಿಗೆಗಳಿಂದ ಹಣವನ್ನು (Temple Theft) ದೋಚಲಾಗಿದೆ. ಗುರುವಾರ ಬೆಳಗ್ಗೆ ದೇವಾಲಯದ ಸಿಬ್ಬಂದಿ ನಿತ್ಯದ ಸೇವೆಗಾಗಿ ದೇವಾಲಯಕ್ಕೆ ಆಗಮಿಸಿದಾಗ ಈ ಘಟನೆ ಬೆಳಕಿಗೆ ಬಂದಿದೆ. ಈ ಕುರಿತು ದೇವಾಲಯ ನಿರ್ವಹಣಾ ಸಮಿತಿಯ ಸದಸ್ಯರು ಪೊಲೀಸರಿಗೆ ದೂರು ನೀಡಿದ್ದು, ಪ್ರಕರಣ ದಾಖಲಿಸಲಾಗಿದೆ.
ಅಪರಿಚಿತರು ದೇವಾಲಯದ ಆವರಣಕ್ಕೆ ಪ್ರವೇಶಿಸಿ ಈ ಕೃತ್ಯ ಎಸಗಿರುವ ಶಂಕೆಯನ್ನು ಸ್ಥಳೀಯರು ವ್ಯಕ್ತಪಡಿಸಿದ್ದಾರೆ. ಗುವಾಹಟಿಯ ಬೆಟ್ಕುಚಿಯಲ್ಲಿರುವ ಪೂರ್ವ ತಿರುಪತಿ ಶ್ರೀ ಬಾಲಾಜಿ ದೇವಾಲಯಕ್ಕೆ ಬುಧವಾರ ಮಧ್ಯರಾತ್ರಿಯ ಬಳಿಕ ಆಗಮಿಸಿರುವ ಅಪರಿಚಿತರು ಕಾಣಿಕೆ ಪೆಟ್ಟಿಗೆಗಳಿಂದ ಹಣವನ್ನು ಕದ್ದೊಯ್ದಿದ್ದಾರೆ.
ಗುರುಗ್ರಾಮದಲ್ಲಿ ಗುಂಡಿನ ಚಕಮಕಿ: ನಾಲ್ವರು ದರೋಡೆಕೋರರ ಎನ್‌ಕೌಂಟರ್
ಈ ಕುರಿತು ಪೊಲೀಸರಿಗೆ ದೂರು ನೀಡಿರುವ ದೇವಾಲಯ ನಿರ್ವಹಣಾ ಸಮಿತಿ ಸದಸ್ಯರು, ಕಳ್ಳರು ದೇವಾಲಯದ ಒಳಗೆ ಹೋಗುವ ಮೊದಲೇ ಸಿಸಿಟಿವಿ ಕಣ್ಗಾವಲು ವ್ಯವಸ್ಥೆಯನ್ನು ನಿಷ್ಕ್ರಿಯಗೊಳಿಸಿದ್ದಾರೆ. ಇದರಿಂದಾಗಿ ಯಾವುದೇ ರೀತಿಯ ದೃಶ್ಯಗಳು ಕೆಮರಾದಲ್ಲಿ ಸೆರೆಯಾಗಿಲ್ಲ ಎಂದು ಹೇಳಿದ್ದಾರೆ.
ದೇವಾಲಯದ ಸಿಬ್ಬಂದಿ ಗುರುವಾರ ಬೆಳಗ್ಗೆ ದೇವಸ್ಥಾನಕ್ಕೆ ಆಗಮಿಸಿದಾಗ ಪ್ರಕರಣ ಬೆಳಕಿಗೆ ಬಂದಿದೆ. ದೇವಾಲಯದ ಸಂಕೀರ್ಣದೊಳಗಿನ ಶ್ರೀ ಬಾಲಾಜಿ ದೇವಾಲಯ, ದುರ್ಗಾ ದೇವಾಲಯ ಮತ್ತು ಪದ್ಮಾವತಿ ದೇವಾಲಯದ ಕಾಣಿಕೆ ಪೆಟ್ಟಿಗೆಗಳನ್ನು ಮುರಿಯಲಾಗಿದ್ದು, ಅದರಲ್ಲಿದ್ದ ನಗದು ಕಾಣಿಕೆಗಳು ಸೇರಿದಂತೆ ದೇವಾಲಯದೊಳಗಿದ್ದ ಹಲವು ಬೆಲೆಬಾಳುವ ವಸ್ತುಗಳನ್ನು ಕದ್ದೊಯ್ದಿದ್ದಾರೆ ಎಂದು ಪೊಲೀಸರಿಗೆ ತಿಳಿಸಿದ್ದಾರೆ.
ಪೊಲೀಸರು ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸಿದ್ದು, ವಿಧಿವಿಜ್ಞಾನ ತಂಡವು ಸಾಕ್ಷ್ಯಗಳನ್ನು ಸಂಗ್ರಹಿಸಿದೆ. ದೇವಾಲಯದ ಪ್ರತಿನಿಧಿಗಳು ಪೊಲೀಸರಿಗೆ ಅಗತ್ಯ ಮಾಹಿತಿಗಳನ್ನು ನೀಡಿದರು.
ರೈಲ್ವೆ ನಿಲ್ದಾಣದಲ್ಲಿರುವ 25,000 ವೋಲ್ಟ್ ಓವರ್‌ಹೆಡ್ ತಂತಿಯನ್ನೇ ಕದ್ದ ಕಳ್ಳರು; ಹಲವು ರೈಲು ಸೇವೆಗಳಿಗೆ ತೊಂದರೆ
ದೇವಾಲಯದಿಂದ ಕದ್ದಿರುವ ವಸ್ತುಗಳ ಬಗ್ಗೆ ಪೊಲೀಸರು ಪರಿಶೀಲನೆ ನಡೆಸುತ್ತಿದ್ದು, ನಷ್ಟದ ಪ್ರಮಾಣವನ್ನು ಅಂದಾಜಿಸಲು ಸ್ವಲ್ಪ ಸಮಯ ಬೇಕಾಗಬಹುದು, ಕದ್ದ ನಗದು ಮತ್ತು ಬೆಲೆಬಾಳುವ ವಸ್ತುಗಳ ಒಟ್ಟು ಮೌಲ್ಯವನ್ನು ಇನ್ನೂ ನಿರ್ಧರಿಸಲಾಗಿಲ್ಲ. ಈ ದೇವಾಲಯ 1998ರಲ್ಲಿ ಸ್ಥಾಪನೆಯಾಗಿದ್ದು, ಈವರೆಗೆ ಇಂತಹ ಯಾವುದೇ ಘಟನೆ ನಡೆದಿಲ್ಲ ಎಂದು ಆಡಳಿತ ಸಮಿತಿ ಸದಸ್ಯರು ತಿಳಿಸಿದ್ದಾರೆ.