ನವದೆಹಲಿ, ಸೆ. 22: ಉದ್ಯಾನವನದೊಳಗೆ ಪೊಲೀಸರಂತೆ ನಟಿಸಿದ ಮೂವರು ವ್ಯಕ್ತಿಗಳು 17 ವರ್ಷದ ಬಾಲಕಿಯ ಮೇಲೆ ಸಾಮೂಹಿಕ ಅತ್ಯಾಚಾರ ಎಸಗಿರುವ ಆಘಾತಕಾರಿ ಘಟನೆ ರಾಷ್ಟ್ರ ರಾಜಧಾನಿ ದೆಹಲಿಯ (Delhi) ಕಲ್ಕಾಜಿ ಮಂದಿರ ಬಳಿ ನಡೆದಿದೆ (Crime News). ದೂರಿನ ಪ್ರಕಾರ, ಸೋಮವಾರ (ಸೆಪ್ಟೆಂಬರ್ 21) ಸಂಜೆ 7 ಗಂಟೆ ಸುಮಾರಿಗೆ ಹದಿಹರೆಯದ ಬಾಲಕಿ ತನ್ನ 17 ವರ್ಷದ ಸ್ನೇಹಿತನೊಂದಿಗೆ ಕಲ್ಕಾಜಿ ಮಂದಿರಕ್ಕೆ ಹೋಗಿದ್ದಳು. ಪ್ರಾರ್ಥನೆ ಸಲ್ಲಿಸಿದ ನಂತರ, ಇಬ್ಬರೂ ಸಂಜೆ 7:30ರ ಸುಮಾರಿಗೆ ದೇವಸ್ಥಾನದ ಬಳಿಯ ಉದ್ಯಾನವನಕ್ಕೆ ತೆರಳಿದರು. ಅಲ್ಲಿ ಸುಮಾರು 25ರಿಂದ 30 ವರ್ಷ ವಯಸ್ಸಿನ ಮೂವರು ಆರೋಪಿಗಳು ಅವರ ಬಳಿಗೆ ಬಂದು ತಾವು ಪೊಲೀಸರೆಂದು ಹೇಳಿಕೊಂಡರು ಎನ್ನಲಾಗಿದೆ.
ಆರೋಪಿಗಳಲ್ಲಿ ಇಬ್ಬರನ್ನು ಬೆದರಿಸಿ ಬಾಲಕಿಯ ಮೇಲೆ ಅತ್ಯಾಚಾರ ಎಸಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಆರೋಪಿಗಳ ಪೈಕಿ ಓರ್ವ ಆಕೆಗೆ ಬಂದೂಕು ಮತ್ತು ಚಾಕುವಿನಿಂದ ಬೆದರಿಸಿ ಲೈಂಗಿಕ ದೌರ್ಜನ್ಯ ಎಸಗಿದ್ದಾನೆ. ನಂತರ, ಇತರ ಇಬ್ಬರೂ ಆಕೆಯ ಮೇಲೆರಗಿದ್ದಾರೆ. ಬಳಿಕ ಆರೋಪಿಗಳು ಸಂತ್ರಸ್ತೆ ಮತ್ತು ಆಕೆಯ ಸ್ನೇಹಿತನಿಗೆ ಬೆದರಿಕೆ ಹಾಕಿದ್ದಾರೆ.
ಕಲ್ಕಾಜಿ ಮಂದಿರ ಮತ್ತು ಇಸ್ಕಾನ್ ದೇವಾಲಯವನ್ನು ಸಂಪರ್ಕಿಸುವ ಉದ್ಯಾನವನದಲ್ಲಿ ನಡೆದ ಅತ್ಯಾಚಾರದ ಕುರಿತು ರಾತ್ರಿ ಮಾಹಿತಿ ಬಂದಿತು. ನಂತರ ಪೊಲೀಸ್ ತಂಡ ಸ್ಥಳಕ್ಕೆ ತಲುಪಿತು ಎಂದು ಅಧಿಕಾರಿಗಳು ಮಾಹಿತಿ ನೀಡಿದರು. ದೆಹಲಿ ನಿವಾಸಿಯಾಗಿರುವ ಬಾಲಕಿಯನ್ನು ವೈದ್ಯಕೀಯ ಪರೀಕ್ಷೆಗೆ ಒಳಪಡಿಸಲಾಗಿದ್ದು, ಅವರ ಹೇಳಿಕೆಯ ಆಧಾರದ ಮೇಲೆ ಮುಂದಿನ ಕಾನೂನು ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಜಮುಯಿ ಲೈಂಗಿಕ ದೌರ್ಜನ್ಯ ಕೇಸ್: ಘಟನೆ ಕುರಿತು ನಾಲಿಗೆ ಹರಿಬಿಟ್ಟ ಬಿಹಾರ ಸಚಿವ!
ಆರೋಪಿಗಳನ್ನು ಗುರುತಿಸಲು ಮತ್ತು ಘಟನೆಯನ್ನು ಪರಿಶೀಲಿಸಲು ಪೊಲೀಸರು ಉದ್ಯಾನವನ ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿನ ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಿದ್ದಾರೆ. ಘಟನೆಯ ಸಮಯದಲ್ಲಿ ಉದ್ಯಾನವನದಲ್ಲಿ ಅಥವಾ ಸುತ್ತಮುತ್ತ ಇದ್ದಿರಬಹುದಾದ ಜನರ ಬಗ್ಗೆಯೂ ಅವರು ಮಾಹಿತಿಯನ್ನು ಸಂಗ್ರಹಿಸಿದ್ದಾರೆ.
ತನಿಖೆಯ ಸಮಯದಲ್ಲಿ, ಪ್ರಕರಣದ ಆರೋಪಿಗಳನ್ನು ಪತ್ತೆಹಚ್ಚಲು ವಿವಿಧ ತಂಡಗಳನ್ನು ರಚಿಸಲಾಯಿತು. ಪೊಲೀಸ್ ತಂಡವು ಬಲೆ ಬೀಸಿದ್ದ ಅಮರ್ ಕಾಲೋನಿಯ ಡಿಎಂ ಕಚೇರಿ ರಸ್ತೆಯ ಬಳಿ ಅಪರಾಧಿಗಳ ಪೈಕಿ ಓರ್ವನ ಚಲನವಲನದ ಬಗ್ಗೆ ಒಂದು ತಂಡಕ್ಕೆ ನಿರ್ದಿಷ್ಟ ಮಾಹಿತಿ ಸಿಕ್ಕಿತು.
ಆತನನ್ನು ತಡೆದಾಗ ಪೊಲೀಸರ ಮೇಲೆ ಗುಂಡು ಹಾರಿಸಿದನೆಂದು ಆರೋಪಿಸಲಾಗಿದೆ. ಶರಣಾಗುವಂತೆ ನಿರ್ದೇಶಿಸಿದರೂ, ಅವನು ಪೊಲೀಸರ ಮೇಲೆ ಮೂರು ಸುತ್ತು ಗುಂಡು ಹಾರಿಸಿದ್ದ. ನಂತರ ಪೊಲೀಸರು ಆರೋಪಿಯ ಬಲಗಾಲಿಗೆ ಗುಂಡು ಹಾರಿಸಿದ್ದಾರೆ. ಬಂಧಿತ ಆರೋಪಿಯನ್ನು ಆಸಿಫ್ ಎಂದು ಗುರುತಿಸಲಾಗಿದೆ. ಅವನು ಓಖ್ಲಾ ಮಂಡಿಯಲ್ಲಿ ಕೆಲಸ ಮಾಡುತ್ತಿದ್ದ ಎನ್ನಲಾಗಿದೆ.
ಇತರ ಇಬ್ಬರು ಆರೋಪಿಗಳಾದ ಹೇಮಂತ್ ಮತ್ತು ಮುಖೇಶ್‌ನನ್ನು ಮಂಗಳವಾರ (ಸೆಪ್ಟೆಂಬರ್ 22) ಪೊಲೀಸರು ಬಂಧಿಸಿದ್ದಾರೆ. ಲೈಂಗಿಕ ಅಪರಾಧಗಳಿಂದ ಮಕ್ಕಳ ರಕ್ಷಣೆ (ಪೋಕ್ಸೊ) ಕಾಯ್ದೆ ಸೇರಿ ಸಂಬಂಧಿತ ಕಾನೂನಿನ ನಿಬಂಧನೆಗಳ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.