ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

ಸಾಯುವ ಕೆಲವೇ ಗಂಟೆಗಳ ಮುನ್ನ ಸಲೂನ್‌ಗೆ ಭೇಟಿ: ಮಾಲೀಕರಿಂದ ಬಯಲಾಯ್ತು ತ್ವಿಶಾ ಶರ್ಮಾ ಕುರಿತು ಸ್ಪೋಟಕ ಮಾಹಿತಿ

ಮಾಡೆಲ್ ತ್ವಿಶಾ ಶರ್ಮಾ ಸಾವಿನ ಪ್ರಕರಣದಲ್ಲಿ ಹೊಸ ತಿರುವು ಸಿಕ್ಕಿದ್ದು, ಆತ್ಮಹತ್ಯೆಗೆ ಕೆಲವೇ ಗಂಟೆಗಳ ಮೊದಲು ಅವರು ಬ್ಯೂಟಿ ಸಲೂನ್‌ಗೆ ಭೇಟಿ ನೀಡಿದ್ದ ಸಿಸಿಟಿವಿ ದೃಶ್ಯಗಳು ಬಹಿರಂಗವಾಗಿವೆ. ವರದಕ್ಷಿಣೆ ಕಿರುಕುಳ ಆರೋಪಗಳ ನಡುವೆ, ಸಿಸಿಟಿವಿ ದೃಶ್ಯಗಳನ್ನು ಅಪರಿಚಿತ ವಕೀಲರ ತಂಡ ತೆಗೆದುಕೊಂಡಿರುವುದು ಪ್ರಕರಣಕ್ಕೆ ಮತ್ತಷ್ಟು ಅನುಮಾನಗಳಿಗೆ ಕಾರಣವಾಗಿದೆ.

ತ್ವಿಶಾ ಶರ್ಮಾ

ನವದೆಹಲಿ: ವರದಕ್ಷಿಣೆ ಕಿರುಕುಳ ಮತ್ತು ತೀವ್ರ ಮಾನಸಿಕ ಹಿಂಸೆಯ ಆರೋಪಗಳನ್ನು ಒಳಗೊಂಡಿರುವ ಪ್ರಖ್ಯಾತ ಮಾಡೆಲ್ ತ್ವಿಶಾ ಶರ್ಮಾ (Twisha Sharma) ಅವರ ನಿಗೂಢ ಸಾವಿನ ಪ್ರಕರಣದಲ್ಲಿ ದಿನಕ್ಕೊಂದು ರೋಚಕ ತಿರುವುಗಳು ಸಿಗುತ್ತಿವೆ. ಈಗ ಅವರು ಸಾವನ್ನಪ್ಪುವ ಕೇವಲ ಕೆಲವು ಗಂಟೆಗಳ ಮೊದಲು ಬ್ಯೂಟಿ ಸಲೂನ್‌ (beauty salon)ಗೆ ಭೇಟಿ ನೀಡಿದ್ದಕ್ಕೆ ಸಂಬಂಧಿಸಿದ ಸಿಸಿಟಿವಿ ದೃಶ್ಯಾವಳಿಗಳು ಮತ್ತು ಕೆಲವು ಆಘಾತಕಾರಿ ಸಂಗತಿಗಳು ಮುನ್ನೆಲೆಗೆ ಬಂದಿವೆ.

ಮೇ 12 ರಂದು ಭೋಪಾಲ್‌ನಲ್ಲಿರುವ ಅತ್ತೆಯ ಮನೆಯಲ್ಲಿ ತ್ವಿಶಾ ಶರ್ಮಾ ಅವರು ನೇಣು ಬಿಗಿದ ಸ್ಥಿತಿಯಲ್ಲಿ ಶವವಾಗಿ ಪತ್ತೆಯಾಗಿದ್ದರು. ಆದರೆ ಇದಕ್ಕೂ ಮುನ್ನ, ಅಂದರೆ ಅಂದು ಮಧ್ಯಾಹ್ನ ಸುಮಾರು 3:12 ರ ಸುಮಾರಿಗೆ ಅವರು ಸ್ಥಳೀಯ ಸಲೂನ್‌ಗೆ ಭೇಟಿ ನೀಡಿದ್ದರು. ಅಲ್ಲಿ ಅವರು ಹೆಡ್ ಮಸಾಜ್ ಮತ್ತು ಪೆಡಿಕೂರ್ ಸೇವೆಗಳನ್ನು ಪಡೆದುಕೊಂಡು, ಸುಮಾರು ಮೂರು ಗಂಟೆಗಳ ಸುದೀರ್ಘ ಕಾಲವನ್ನು ಕಳೆದ ನಂತರ ಸಂಜೆ 6:15 ರ ಸುಮಾರಿಗೆ ಅಲ್ಲಿಂದ ಹೊರಟಿದ್ದರು ಎಂದು ಸಲೂನ್ ಮಾಲೀಕರಾದ ಕಿರಣ್ ಪರಿಹಾರ್ ಅವರು ಮಾಧ್ಯಮಗಳಿಗೆ ತಿಳಿಸಿದ್ದಾರೆ. ತ್ವಿಶಾ ಸಾವನ್ನಪ್ಪಿದ ಮರುದಿನವೇ ಅವರ ಅತ್ತೆ ಗಿರಿಬಾಲಾ ಸಿಂಗ್ ಅವರು ಸಲೂನ್‌ಗೆ ಕರೆ ಮಾಡಿ ಸೊಸೆಯ ಭೇಟಿಯ ಬಗ್ಗೆ ತೀವ್ರ ವಿಚಾರಣೆ ನಡೆಸಿದ್ದರು ಎಂದು ಅವರು ವಿವರಿಸಿದ್ದಾರೆ.

ತ್ವಿಶಾ ಶರ್ಮಾ ಸಾವು ಪ್ರಕರಣ: 10 ದಿನಗಳ ನಂತರ ಜಬಲ್‌ಪುರ ನ್ಯಾಯಾಲಯದಲ್ಲಿ ಶರಣಾದ ಪತಿ ಸಮರ್ಥ್ ಸಿಂಗ್

ನಿವೃತ್ತ ನ್ಯಾಯಾಧೀಶರಾಗಿದ್ದ ಗಿರಿಬಾಲಾ ಸಿಂಗ್ ಅವರು ಸಲೂನ್ ಮಾಲೀಕರಿಗೆ ಕರೆ ಮಾಡಿ ಹಲವು ಪ್ರಶ್ನೆಗಳನ್ನು ಕೇಳಿದ್ದರು. ತ್ವಿಶಾ ನಿಖರವಾಗಿ ಎಷ್ಟು ಗಂಟೆಗೆ ಬಂದಿದ್ದರು, ಯಾವಾಗ ವಾಪಸ್ ಹೋದರು ಮತ್ತು ಅಲ್ಲಿ ಬಿಲ್ ಹಣವನ್ನು ಹೇಗೆ ಪಾವತಿಸಿದರು ಎಂಬ ಮಾಹಿತಿಗಳನ್ನು ಪಡೆದುಕೊಳ್ಳಲು ಯತ್ನಿಸಿದ್ದರು. ಆದರೆ, ಫೆಬ್ರವರಿಯಲ್ಲಿ ತನ್ನ ಸಹೋದರನ ಮದುವೆಗಾಗಿ ತ್ವಿಶಾ ಮುಂಚಿತವಾಗಿಯೇ ಪ್ರಿಪೇಯ್ಡ್ ಸಲೂನ್ ಪ್ಯಾಕೇಜ್ ಖರೀದಿಸಿದ್ದರಿಂದ ಅಂದು ಯಾವುದೇ ನಗದು ಪಾವತಿ ಮಾಡಿರಲಿಲ್ಲ. ಇದಾದ ಬಳಿಕ ಮಧ್ಯಾಹ್ನ ಮತ್ತೆ ಕರೆ ಮಾಡಿದ ಅತ್ತೆ, ತ್ವಿಶಾ ಆತ್ಮಹತ್ಯೆ ಮಾಡಿಕೊಂಡಿರುವುದಾಗಿ ತಿಳಿಸಿ ಸಿಸಿಟಿವಿ ದೃಶ್ಯಾವಳಿಗಳನ್ನು ನೀಡುವಂತೆ ಒತ್ತಾಯಿಸಿದ್ದರು.

ಇದಾದ ಕೆಲವೇ ಹೊತ್ತಿನಲ್ಲಿ ಕಪ್ಪು ಬಿಳಿ ವಕೀಲರ ಉಡುಪಿನಲ್ಲಿದ್ದ ಐದಾರು ಜನರ ಅಪರಿಚಿತ ತಂಡವೊಂದು ಸಲೂನ್‌ಗೆ ಬಂದು, ತನಿಖೆಗೆ ಪೊಲೀಸರಿಗೆ ಅಗತ್ಯವಿದೆ ಎಂದು ಹೇಳಿ ಸಿಸಿಟಿವಿ ದೃಶ್ಯಗಳನ್ನು ಬಲವಂತವಾಗಿ ಪಡೆದುಕೊಂಡಿದ್ದರು. ಆದರೆ ಆ ವಕೀಲರು ಯಾರೆಂಬುದು ಇನ್ನು ನಿಗೂಢವಾಗಿಯೇ ಉಳಿದಿದೆ. ನೋಯ್ಡಾ ಮೂಲದ ತ್ವಿಶಾ ಶರ್ಮಾ, ಪತಿ ಸಮರ್ಥ್ ಸಿಂಗ್ ಮತ್ತು ಅತ್ತೆ ಗಿರಿಬಾಲಾ ಅವರಿಂದ ವರದಕ್ಷಿಣೆಗಾಗಿ ತೀವ್ರ ಮಾನಸಿಕ ಕಿರುಕುಳ ಅನುಭವಿಸುತ್ತಿದ್ದರು ಎಂದು ಪೋಷಕರು ಗಂಭೀರ ಆರೋಪ ಮಾಡಿದ್ದಾರೆ. ಸದ್ಯಕ್ಕೆ ಇದು ಆತ್ಮಹತ್ಯೆ ಎಂದು ಪೊಲೀಸರು ಹೇಳುತ್ತಿದ್ದರೂ, ಕುಟುಂಬದ ಮನವಿಯ ಮೇರೆಗೆ ಹೈಕೋರ್ಟ್ ಈಗ ಎರಡನೇ ಮರಣೋತ್ತರ ಪರೀಕ್ಷೆಗೆ ಅನುಮತಿ ನೀಡಿದೆ. ಸುಮಾರು 10 ದಿನಗಳಿಂದ ಪೊಲೀಸರಿಂದ ತಪ್ಪಿಸಿಕೊಂಡು ತಲೆಮರೆಸಿಕೊಂಡಿದ್ದ ಪತಿ ಸಮರ್ಥ್ ಸಿಂಗ್‌ನನ್ನು ಕೊನೆಗೂ ಬಂಧಿಸಲಾಗಿದ್ದು, ನ್ಯಾಯಾಲಯಕ್ಕೆ ಹಾಜರುಪಡಿಸಲಾಗುತ್ತಿದೆ.