ನೋಯ್ಡಾ: ದೇಶವನ್ನೇ ಬೆಚ್ಚಿಬೀಳಿಸಿದ ಉತ್ತರ ಪ್ರದೇಶದ (Uttar pradesh) ನೋಯ್ಡಾ ನಿವಾಸಿ ತ್ವಿಶಾ ಶರ್ಮಾ ಆತ್ಮಹತ್ಯೆ ಪ್ರಕರಣಕ್ಕೆ (Twisha Sharma Death Case) ಸಂಬಂಧಿಸಿದ ತನಿಖೆಗೆ ಎಸ್ಐಟಿ (SIT) ತಂಡವನ್ನು ರಚಿಸಲಾಗಿದೆ. ತ್ವಿಶಾ ಶರ್ಮಾ ಅವರು ಕಳೆದ ಡಿಸೆಂಬರ್ ತಿಂಗಳಲ್ಲಿ ಭೋಪಾಲ್ (Bhopal) ಮೂಲದ ವಕೀಲ ಸಮರ್ಥ್ ಸಿಂಗ್ ಅವರನ್ನು ವಿವಾಹವಾಗಿದ್ದು, ಮಂಗಳವಾರ ರಾತ್ರಿ ಮನೆಯಲ್ಲಿ ನೇಣು ಬಿಗಿದು ಸಾವನ್ನಪ್ಪಿದ್ದಾರೆ. ತ್ವಿಶಾ ಅವರಿಗೆ ಕುಟುಂಬವು ಮಾನಸಿಕ ಕಿರುಕುಳ ನೀಡಿದ್ದಾರೆ ಎಂದು ಆರೋಪಿಸಲಾಗಿದ್ದು, ದೆಹಲಿಯ ಏಮ್ಸ್‌ನಲ್ಲಿ ಹೊಸದಾಗಿ ಮರಣೋತ್ತರ ಪರೀಕ್ಷೆ ನಡೆಸುವಂತೆ ಅವರ ಪೋಷಕರು ಒತ್ತಾಯಿಸಿದ್ದಾರೆ.
ಎಂಬಿಎ ಪದವಿಧರೆಯಾಗಿದ್ದ ತ್ವಿಶಾ ಶರ್ಮಾ ಮಿಸ್ ಪುಣೆ ವಿಜೇತರಾಗಿದ್ದರು. ತೆಲುಗು ಚಿತ್ರ ಮುಗ್ಗುರು ಮೊನಗಲ್ಲು ನಲ್ಲಿ ನಟಿಸಿದ್ದರು. ಮದುವೆಗೆ ಮೊದಲು ದೆಹಲಿಯಲ್ಲಿ ಹಲವಾರು ವರ್ಷಗಳ ಕಾಲ ಕೆಲಸ ಮಾಡಿದ್ದರು.
ಅವರ ಸಾವಿಗೂ ಮುನ್ನ ನಡೆದಿದೆ ಎನ್ನಲಾದ ವಿಡಿಯೋವೊಂದು ಸಾಮಾಜಿಕ ಮಾಧ್ಯಮದಲ್ಲಿ ಕಾಣಿಸಿಕೊಂಡಿದ್ದು, ಇದರಲ್ಲಿ ಆಕೆಯ ಪತಿ ಸಮರ್ಥ್ ಸಿಂಗ್ ಸೇರಿದಂತೆ ಮೂವರು ವ್ಯಕ್ತಿಗಳು ಎರಡು ಬಾರಿ ಸಿಪಿಆರ್ ಪ್ರಯತ್ನಗಳನ್ನು ಮಾಡಿರುವುದನ್ನು ತೋರಿಸಲಾಗಿದೆ. ಅಲ್ಲದೇ ತ್ವಿಶಾ ಅವರ ದೇಹವನ್ನು ಮೆಟ್ಟಿಲುಗಳಿಂದ ಕೆಳ ಮಹಡಿಗೆ ಕೊಂಡೊಯ್ಯುವುದನ್ನು ಕೂಡ ಸೆರೆಹಿಡಿಯಲಾಗಿದೆ. ಇದರಲ್ಲಿ ತ್ವಿಶಾ ಅವರ ಅತ್ತೆ ಗಿರಿಬಾಲಾ ಸಿಂಗ್ ಕೂಡ ಇದ್ದಾರೆ.
ಇನ್ನೊಂದು ವಿಡಿಯೋದಲ್ಲಿ ತ್ವಿಶಾ ಅವರು ಕಟಾರಾ ಹಿಲ್ಸ್ ಪ್ರದೇಶದ ಮನೆಯ ಟೆರೇಸ್ ಕಡೆಗೆ ಹೋಗುತ್ತಿರುವುದನ್ನು ತೋರಿಸಲಾಗಿದೆ. ಘಟನೆ ಬಳಿಕ ತ್ವಿಶಾ ಪತಿ ಸಮರ್ಥ್ ಸಿಂಗ್ ಪರಾರಿಯಾಗಿದ್ದಾರೆ.
ಸಮರ್ಥ್ ಸಿಂಗ್ ಅವರ ಜಾಮೀನು ಅರ್ಜಿಯನ್ನು ಭೋಪಾಲ್ ಜಿಲ್ಲಾ ನ್ಯಾಯಾಲಯವು ತಿರಸ್ಕರಿಸಿದೆ. ತ್ವಿಶಾ ಶರ್ಮಾ ಸಾವಿನ ಪ್ರಕರಣಕ್ಕೆ ಸಂಬಂಧಿಸಿ ತನಿಖೆ ನಡೆಸಲು ಪೊಲೀಸ್ ಆಯುಕ್ತರು ಎಸ್ಐಟಿ ತಂಡವನ್ನು ರಚಿಸಿದ್ದಾರೆ. ಇದರಲ್ಲಿ 6ಕ್ಕೂ ಹೆಚ್ಚು ಸದಸ್ಯರಿದ್ದು, ಆರೋಪಿ ಸಮರ್ಥ್ ನ ಬಂಧನಕ್ಕೆ ಹುಡುಕಾಟ ನಡೆಸಲಾಗುತ್ತಿದೆ. ಸಮರ್ಥ್ ಸಿಂಗ್ ಅವರ ಪಾಸ್‌ಪೋರ್ಟ್ ಅನ್ನು ಅಮಾನತುಗೊಳಿಸುವಂತೆ ಕೋರಿ ಸಂಬಂಧಪಟ್ಟ ಅಧಿಕಾರಿಗಳಿಗೆ ಪತ್ರ ಬರೆಯಲಾಗಿದೆ ಎಂದು ಎಸಿಪಿ ರಜನೀಶ್ ಕಶ್ಯಪ್ ತಿಳಿಸಿದ್ದಾರೆ.
ಘಟನೆ ಕುರಿತು ಮಾಧ್ಯಮವೊಂದರ ಜೊತೆ ಮಾತನಾಡಿರುವ ತ್ವಿಶಾ ಅವರ ಸಹೋದರಿ ಪ್ರಿಯಾಂಕಾ ಶರ್ಮಾ, ತ್ವಿಶಾ ಮತ್ತು ಸಮರ್ಥ್ 2024ರಲ್ಲಿ ಡೇಟಿಂಗ್ ಅಪ್ಲಿಕೇಶನ್‌ನಲ್ಲಿ ಭೇಟಿಯಾದರು. ಒಂದು ವರ್ಷದ ಬಳಿಕ ವಿವಾಹವಾದರು. ಮೇ 12ರಂದು ತ್ವಿಶಾ ಗಂಡನ ಮನೆಯಲ್ಲಿ ಶವವಾಗಿ ಪತ್ತೆಯಾಗಿದ್ದರೆ. ಮೇ 15ರಂದು ಆಕೆ ಮನೆಗೆ ಮರಳಬೇಕಿತ್ತು. ಮದುವೆಯಾದ ಮೇಲೆ ತ್ವಿಶಾ ಅಪಾರ ಮಾನಸಿಕ ಹಿಂಸೆಗೆ ಒಳಗಾಗಿದ್ದಳು. ತಂದೆ ಅವರಿಗೆ ಹಣವನ್ನು ವರ್ಗಾಯಿಸಿ ಷೇರುಗಳನ್ನು ಖರೀದಿಸಿದ್ದಾರೆ. ಆದರೂ ಜಂಟಿ ಖಾತೆಯನ್ನು ತೆರೆಯಲು ಮತ್ತು ಆಸ್ತಿಗಳನ್ನು ತಮ್ಮ ಹೆಸರಿಗೆ ವರ್ಗಾಯಿಸಲು ಸಮರ್ಥ್ ತ್ವಿಶಾ ಮೇಲೆ ಒತ್ತಡ ಹೇರುತ್ತಿದ್ದನು ಎಂದು ಹೇಳಿದ್ದಾರೆ.
ಮದುವೆಯಾದ 5 ತಿಂಗಳಲ್ಲೇ ಶವವಾಗಿ ಪತ್ತೆಯಾದ ಎಂಬಿಎ ಪದವೀಧರೆ, ಮಾಜಿ ಮಿಸ್ ಪುಣೆ ತ್ವಿಶಾ ಶರ್ಮಾ ಯಾರು?
ಪ್ರಕರಣಕ್ಕೆ ಸಂಬಂಧಿಸಿ ತ್ವಿಶಾ ಪತಿ, ವಕೀಲರಾದ ಸಮರ್ಥ್ ಮತ್ತು ಅವರ ತಾಯಿ ನಿವೃತ್ತ ನ್ಯಾಯಾಧೀಶ ಗಿರಿಬಾಲಾ ಸಿಂಗ್ ವಿರುದ್ಧ ವರದಕ್ಷಿಣೆ ಕಿರುಕುಳ ಮತ್ತು ಆತ್ಮಹತ್ಯೆಗೆ ಪ್ರಚೋದನೆಯ ಪ್ರಕರಣವನ್ನು ದಾಖಲಿಸಲಾಗಿದೆ. ಪರಾರಿಯಾಗಿರುವ ಸಮರ್ಥ್ ಸಿಂಗ್ ಬಗ್ಗೆ ಮಾಹಿತಿ ನೀಡಿದವರಿಗೆ ಅಧಿಕೃತವಾಗಿ 10,000 ರೂ. ನಗದು ಬಹುಮಾನವನ್ನು ಭೋಪಾಲ್ ಪೊಲೀಸರು ಘೋಷಿಸಿದ್ದಾರೆ.