ಭೋಪಾಲ್, ಮೇ 20: ಪತಿ ಮನೆಯಲ್ಲಿ ಶವವಾಗಿ ಪತ್ತೆಯಾಗಿದ್ದ 31 ವರ್ಷದ ಮಹಿಳೆ ತ್ವಿಶಾ ಶರ್ಮಾ (Twisha Sharma death case) ಮಾದಕ ದ್ರವ್ಯ ಸೇವಿಸಿದ್ದಾರೆ ಎಂಬ ಆಕೆಯ ಅತ್ತೆಯ ಆರೋಪಗಳನ್ನು ಸೋದರಸಂಬಂಧಿ ತಿರಸ್ಕರಿಸಿದ್ದಾರೆ. ಮಾಧ್ಯಮದೊಂದಿಗೆ ಮಾತನಾಡಿದ ನೈನಾ ಶರ್ಮಾ, ತ್ವಿಶಾ ಅವರ ಅತ್ತೆ ಮಾಡಿದ ಆರೋಪಗಳಿಗೆ ಪ್ರತ್ಯುತ್ತರ ನೀಡಿದರು. ಅವರು ಗಾಂಜಾ ಸೇವಿಸುತ್ತಿದ್ದರು (Drug consumption allegations) ಎಂಬ ಆರೋಪ ಆಧಾರರಹಿತ ಎಂದು ಶರ್ಮಾ ಹೇಳಿದರು.
ನೋಯ್ಡಾ ನಿವಾಸಿ ತ್ವಿಶಾ, ಮೇ 12 ರ ರಾತ್ರಿ ಭೋಪಾಲ್‌ನ ಕಟಾರಾ ಹಿಲ್ಸ್ ಪ್ರದೇಶದಲ್ಲಿರುವ ತನ್ನ ಗಂಡನ ಮನೆಯಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ. ಪೊಲೀಸರು ಈ ಪ್ರಕರಣವನ್ನು ತನಿಖೆ ನಡೆಸುತ್ತಿದ್ದು, ಇದು ಆತ್ಮಹತ್ಯೆ, ಕೊಲೆಯಲ್ಲ ಎಂದು ಪ್ರತಿಪಾದಿಸಿದ್ದಾರೆ. ತ್ವಿಶಾ ಅವರ ಅತ್ತೆ, ಭೋಪಾಲ್ ಜಿಲ್ಲಾ ನ್ಯಾಯಾಲಯದ ನಿವೃತ್ತ ನ್ಯಾಯಾಧೀಶರಾದ ಗಿರಿಬಾಲಾ ಸಿಂಗ್, ತಮ್ಮ ಸೊಸೆ ಮಾದಕ ವ್ಯಸನಿಯಾಗಿದ್ದು, ಆಗಾಗ ಆಕೆಯ ಮನಸ್ಥಿತಿಯಲ್ಲಿ ಏರುಪೇರಾಗುತ್ತಿತ್ತು ಎಂದು ಆರೋಪಿಸಿದ್ದರು.
ತ್ವಿಶಾ ಶರ್ಮಾ ಆತ್ಮಹತ್ಯೆ ಪ್ರಕರಣ: ತನಿಖೆಗೆ ಎಸ್ಐಟಿ ತಂಡ ರಚನೆ, ಪತಿ ಸಮರ್ಥ್ ಜಾಮೀನು ಅರ್ಜಿ ತಿರಸ್ಕರಿಸಿದ ನ್ಯಾಯಾಲಯ
ತ್ವಿಶಾ ಅವರ ಕುಟುಂಬವು ಆಕೆಯ ಗಂಡ ಹಾಗೂ ಅತ್ತೆಯ ವಿರುದ್ಧ ಕೌಟುಂಬಿಕ ಹಿಂಸೆ, ಮಾನಸಿಕ ಕಿರುಕುಳ, ದೈಹಿಕ ಕಿರುಕುಳ ಮತ್ತು ಕೊಲೆ ಸೇರಿದಂತೆ ಹಲವಾರು ತಪ್ಪುಗಳ ಆರೋಪ ಹೊರಿಸಿದೆ. ಪ್ರಕರಣದಲ್ಲಿ ನ್ಯಾಯ ಕೋರಿ ಅವರು ಎರಡನೇ ಶವಪರೀಕ್ಷೆಗೆ ಒತ್ತಾಯಿಸಿದ್ದು, ಅವರ ಅಂತ್ಯಕ್ರಿಯೆ ನಡೆಸಲು ನಿರಾಕರಿಸಿದ್ದಾರೆ. ಆಕೆಯ ಸಾವಿನ ನಂತರ ವಿಚಾರಗಳನ್ನು ನಿಭಾಯಿಸಿದ ರೀತಿ ನೋಡಿದರೆ, ಇದು ಮೊದಲೇ ಯೋಜಿತವಾಗಿದ್ದಂತೆ ತೋರುತ್ತಿದೆ ಎಂದು ಅವರು ಆರೋಪಿಸಿದರು.
ಆದರೆ, ಸಿಂಗ್ ಆರೋಪಗಳನ್ನು ತಳ್ಳಿಹಾಕಿದ್ದು, ತ್ವಿಶಾ ಅವರ ಕುಟುಂಬವು ಅವರ ಕುಟುಂಬದ ವಿರುದ್ಧ ಸೇಡು ತೀರಿಸಿಕೊಳ್ಳುತ್ತಿದೆ. ಅವರ ಮಗ ಸಮರ್ಥ್ ಸಿಂಗ್ ಅವರನ್ನು ಜೈಲಿಗೆ ಕಳುಹಿಸಲು ಪ್ರಯತ್ನಿಸುತ್ತಿದೆ ಎಂದು ದೂರಿದ್ದಾರೆ.
ಆರು ಸದಸ್ಯರ ವಿಶೇಷ ತನಿಖಾ ತಂಡ (SIT) ರಚಿಸಲಾಗಿದ್ದು, ತಾಯಿ ಮತ್ತು ಮಗನ ವಿರುದ್ಧ ವರದಕ್ಷಿಣೆ ಕಿರುಕುಳ ಮತ್ತು ಸಾವಿಗೆ ಸಂಬಂಧಿಸಿದ ನಿಬಂಧನೆಗಳ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ. ನಿವೃತ್ತ ನ್ಯಾಯಾಧೀಶೆ ಗಿರಿಬಾಲಾ ಸಿಂಗ್, ತ್ವಿಶಾ ಅವರ ಕುಟುಂಬದಿಂದ 2 ಲಕ್ಷ ರೂಪಾಯಿಗಳಿಗೆ ಬೇಡಿಕೆ ಇಟ್ಟಿದ್ದರು ಎಂಬ ಆರೋಪಗಳನ್ನು ನಿರಾಕರಿಸಿದರು. ಆಕೆಯ ತಾಯಿ ಕರೆ ಮಾಡಿದ ತಕ್ಷಣ ಅವಳಿದ್ದತ್ತ ನಾವು ಓಡಿ ಹೋದೆವು ಎಂದು ಹೇಳಿದ್ದಾರೆ.
ಇನ್ನು ತ್ವಿಶಾಳ ಪತಿ ತಲೆಮರೆಸಿಕೊಂಡಿದ್ದು, ಆತನ ಬಗ್ಗೆ ಮಾಹಿತಿ ನೀಡಿದವರಿಗೆ 10,000 ರೂ. ನಗದು ಬಹುಮಾನ ನೀಡುವುದಾಗಿ ಪೊಲೀಸರು ಘೋಷಿಸಿದ್ದಾರೆ. ಸಮರ್ಥ್‌ನನ್ನು ಪತ್ತೆಹಚ್ಚಿ ವಿಚಾರಣೆ ನಡೆಸಿದ ನಂತರ ಪ್ರಕರಣವು ನಿರ್ಣಾಯಕ ತಿರುವು ಪಡೆಯಬಹುದು ಎಂದು ತನಿಖಾಧಿಕಾರಿಗಳು ತಿಳಿಸಿದ್ದಾರೆ.