ಲಖನೌ, ಆ. 22: ಉತ್ತರ ಪ್ರದೇಶವನ್ನೇ ಬೆಚ್ಚಿ ಬೀಳಿಸಿದ ಲಖನೌ ಜೋಡಿ ಕೊಲೆ ಮತ್ತು ಆತ್ಮಹತ್ಯೆ ಪ್ರಕರಣಕ್ಕೆ ಹೊಸ ತಿರುವು ಸಿಕ್ಕಿದೆ. ಮಾನಸ್ ವಾಜಪೇಯಿ (38) ಎಂಬಾತ ತನ್ನ ಪತ್ನಿ ದಿವ್ಯಾ ಮಿಶ್ರಾ ಅವರನ್ನು ಅವರು ಕೆಲಸ ಮಾಡುತ್ತಿದ್ದ ಐಸಿಐಸಿಐ ಬ್ಯಾಂಕಿನ ಹೊರಗೆ ಗುಂಡು ಹಾರಿಸಿ ಕೊಲೆ ಮಾಡಿದ್ದ. ನಂತರ ಮಾನಸ್, ಸಹೋದರಿಯನ್ನು ಕೊಂದು, ತಾನೂ ಗುಂಡು ಹಾರಿಸಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದ. ಈ ಪ್ರಕರಣಕ್ಕೀಗ ಮಹತ್ವದ ತಿರುವು ಸಿಕ್ಕಿದೆ (Crime News). ಬ್ಯಾಂಕ್ ಉದ್ಯೋಗಿಯಾಗಿದ್ದ ಮಾನಸ್‌ನ ಈ ಕೃತ್ಯಕ್ಕೆ ಕಾರಣವೇನು ಎನ್ನುವುದು ಗೊತ್ತಾಗಿದೆ.
ವಿಚ್ಛೇದನ ಪ್ರಕರಣವನ್ನು ಇತ್ಯರ್ಥಪಡಿಸಿಕೊಳ್ಳುವ ಸಲುವಾಗಿ ದಿವ್ಯಾ ಮಿಶ್ರಾ 1 ಕೋಟಿ ರುಪಾಯಿಗೆ ಬೇಡಿಕೆ ಇಟ್ಟಿದ್ದರು ಎನ್ನಲಾಗಿದೆ. ಮಾನಸ್ ಮತ್ತು ದಿವ್ಯಾ 12 ವರ್ಷಗಳ ಹಿಂದೆ ವಿವಾಹವಾಗಿದ್ದರು. ಒಂದು ವರ್ಷಕ್ಕೂ ಹೆಚ್ಚು ಕಾಲ ಪ್ರತ್ಯೇಕವಾಗಿ ವಾಸಿಸುತ್ತಿದ್ದರು. ದಿವ್ಯಾ ಕಳೆದ ವರ್ಷ ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಿದ್ದರು. ಹೀಗಾಗಿ 1 ಕೋಟಿ ರುಪಾಯಿ ಜೀವನಾಂಶಕ್ಕೆ ಬೇಡಿಕೆ ಇಟ್ಟಿದ್ದರು ಎಂದು ಆರೋಪಿಸಲಾಗಿದೆ.
ವಿಚ್ಛೇದನ ಪ್ರಕ್ರಿಯೆಗೆ ಸಂಬಂಧಿಸಿದ ದಾಖಲೆಗಳನ್ನು ತನಿಖಾಧಿಕಾರಿಗಳು ವಶಪಡಿಸಿಕೊಂಡಿದ್ದಾರೆ. ದಿವ್ಯಾ ಮಿಶ್ರಾ ಇತ್ಯರ್ಥದ ಭಾಗವಾಗಿ ಇಟ್ಟಿರುವ ಬೇಡಿಕೆಗಳ ವಿವರಗಳು ಈ ದಾಖಲೆಯಲ್ಲಿವೆ. ಕೊಲೆಗೆ ಕೇವಲ ಎರಡು ದಿನಗಳ ಮೊದಲು ವಿಚ್ಛೇದನ ಪ್ರಕರಣ ಸ್ಥಳೀಯ ನ್ಯಾಯಾಲಯದಲ್ಲಿ ವಿಚಾರಣೆಗೆ ಬಂದಿತ್ತು. ವಿಚಾರಣೆಯ ಸಮಯದಲ್ಲಿ ಜೀವನಾಂಶದ ಬೇಡಿಕೆ ಕೇಳಿ ಬಂದಿತ್ತು. ಇದು ದೂರವಾಗಿದ್ದ ದಂಪತಿಯ ನಡುವಿನ ವಿವಾದವನ್ನು ಹೆಚ್ಚಿಸಿತು.
ಇಲ್ಲಿದೆ ಸಿಸಿಟಿವಿ ದೃಶ್ಯದ ವಿಡಿಯೊ:
ಕೊಲೆಗೆ ಹಣಕಾಸಿನ ವಿವಾದವೇ ಕಾರಣವಾ ಎಂಬ ಕೋನದ ಬಗ್ಗೆ ಪೊಲೀಸರು ಈಗ ತನಿಖೆ ನಡೆಸುತ್ತಿದ್ದಾರೆ. ಮಾನಸ್ ಅವರ ಸಹೋದರಿ ಶಿವ ವಾಜಪೇಯಿ ಮಾನಸಿಕ ಆರೋಗ್ಯ ಸಮಸ್ಯೆಗಳಿಂದ ಬಳಲುತ್ತಿದ್ದರು ಎಂಬ ಕಾರಣಕ್ಕೆ ಗಂಡ-ಹೆಂಡತಿಯ ಸಂಬಂಧ ಹದಗೆಟ್ಟಿತ್ತು ಎನ್ನಲಾಗಿದೆ. ಶಿವ ವಾಜಪೇಯಿ ದಂಪತಿ ಜತೆ ವಾಸಿಸುತ್ತಿದ್ದರು. ಅದು ದಿವ್ಯಾ ಅವರಿಗೆ ಇಷ್ಟವಿರಲಿಲ್ಲ ಎನ್ನಲಾಗಿದೆ. ಸಹೋದರಿಯ ಮಾನಸಿಕ ಆರೋಗ್ಯದ ಬಗ್ಗೆ ದಂಪತಿ ಆಗಾಗ ಜಗಳವಾಡುತ್ತಿದ್ದರು ಎನ್ನಲಾಗಿದೆ.
ವಿಜಯಪುರದಲ್ಲಿ ಬಾವಿಗೆ ಬಿದ್ದು ಇಬ್ಬರು ಮಕ್ಕಳ ಸಾವು, ರಕ್ಷಿಸಲು ಹೋದ ತಂದೆಯೂ ನಾಪತ್ತೆ!
ಬ್ಲಿಂಕ್‌ಇಟ್ ಮೂಲಕ ಕೊಳೆತ ಟೊಮೆಟೊ ಬಂದರೂ ದಿವ್ಯಾ ಅವರಿಗೆ ಮಾನಸ್ ಹೊಡೆಯುತ್ತಿದ್ದ ಎಂದು ಪ್ರಖ್ಯಾತ ಯುಟ್ಯೂಬರ್ ಆಗಿರುವ ದಿವ್ಯಾ ಅವರ ಸಹೋದರಿ ಪ್ರಜ್ಞಾ ಮಿಶ್ರಾ ಆರೋಪಿಸಿದ್ದಾರೆ. ಮಾನಸ್ ಒಬ್ಬ ಸೈಕೋ ಎಂದ ಪ್ರಜ್ಞಾ, “ಆ ಕೊಲೆಗಾರ ನನ್ನ ಸಹೋದರಿಯನ್ನು ಕ್ರೂರವಾಗಿ ನಡೆದುಕೊಳ್ಳುತ್ತಿದ್ದ ಎಂಬುದು ನನಗೆ ತಿಳಿದಿತ್ತು. ಅದಕ್ಕಾಗಿಯೇ ಆಕೆ ಅವನಿಂದ ದೂರಾಗಲು ಬಯಸಿದ್ದಳು” ಎಂದು ಹೇಳಿದ್ದಾರೆ. ಕೊಲೆ ಮಾಡಲು ಮಾನಸ್‌ಗೆ ರಿವಾಲ್ವರ್ ಹೇಗೆ ಸಿಕ್ಕಿತು ಎಂದು ಪ್ರಜ್ಞಾ ಪ್ರಶ್ನಿಸಿದ್ದಾರೆ.
ಎಸ್‌ಬಿಐ ಬ್ಯಾಂಕಿನಲ್ಲಿ ಕೆಲಸ ಮಾಡುತ್ತಿದ್ದ ಮಾನಸ್, ದಿವ್ಯಾಳನ್ನು ಆಕೆ ಕೆಲಸ ಮಾಡುತ್ತಿದ್ದ ಐಸಿಐಸಿಐ ಬ್ಯಾಂಕಿನ ಹೊರಗೆ ಕರೆದು, ಕೆಲವು ನಿಮಿಷಗಳ ಕಾಲ ಮಾತನಾಡಿ, ನಂತರ ಗುಂಡು ಹಾರಿಸಿದ. ದಿವ್ಯಾಳನ್ನು ತಕ್ಷಣ ಆಸ್ಪತ್ರೆಗೆ ಸಾಗಿಸಲಾಯಿತು. ಅಲ್ಲಿ ಅವರು ಮೃತಪಟ್ಟಿದ್ದಾರೆ ಎಂದು ಘೋಷಿಸಲಾಯಿತು. ಮನೆಗೆ ಹಿಂದಿರುಗಿದ ಆರೋಪಿ, ಮಾನಸಿಕ ಆರೋಗ್ಯ ಸಮಸ್ಯೆಗಳಿಂದ ಬಳಲುತ್ತಿದ್ದ ತನ್ನ 28 ವರ್ಷದ ಸಹೋದರಿಯನ್ನು ಹತ್ಯೆ ಮಾಡಿದ್ದಾನೆ. ನಂತರ ಮಾನಸ್ ಆತ್ಮಹತ್ಯೆಗೆ ಶರಣಾಗಿದ್ದ.