ಗೌರಿಬಿದನೂರು: ಮಹಾಲಕ್ಷ್ಮಿ ಹಬ್ಬ(VaraMahalakshmi Festival)ದ ಸಂಭ್ರಮಕ್ಕೆ ಸಿದ್ಧತೆ ಮಾಡಿಕೊಳ್ಳಲು ಮನೆಯಿಂದ ಹೊರಟಿದ್ದ ತಾಯಿ–ಮಗನಿಗೆ ವಿಧಿ ಕ್ರೂರವಾಗಿ ಎರಗಿದ ಘಟನೆ ಗೌರಿಬಿದನೂರು ನಗರದ ಅಂಬೇಡ್ಕರ್ ವೃತ್ತದ ಬಳಿ ಶುಕ್ರವಾರ ನಡೆದಿದೆ.
ಗೌರಿಬಿದನೂರು ತಾಲ್ಲೂಕಿನ ಕಾದಲವೇಣಿ ಮೂಲದ ನಾಗಮಣಿ (35) ಹಾಗೂ ಅವರ ಪುತ್ರ ಗಗನ್ (14) ಮೃತರು. ಹಬ್ಬದ ಹಿನ್ನೆಲೆಯಲ್ಲಿ ಮನೆಯಲ್ಲಿ ಪೂಜೆ ಹಾಗೂ ಆಚರಣೆಗೆ ಅಗತ್ಯವಾದ ಸಾಮಗ್ರಿಗಳನ್ನು ಖರೀದಿಸಲು ನಗರಕ್ಕೆ ಬಂದಿದ್ದ ವೇಳೆ ಈ ದುರ್ಘಟನೆ ಸಂಭವಿಸಿದೆ ಎನ್ನಲಾಗಿದೆ.
ಇದನ್ನೂ ಓದಿ: Accident: ಆದಿಯೋಗಿ ದರ್ಶನದ ಬಳಿಕ ದುರಂತ: ಕ್ಯಾಂಟರ್‌ಗೆ ಸಿಲುಕಿ ಬೈಕ್ ಸವಾರಿಬ್ಬರು ಸಾವು
ಅಂಬೇಡ್ಕರ್ ವೃತ್ತದ ಬಳಿ ತಾಯಿ–ಮಗ ನಡೆದುಕೊಂಡು ಹೋಗುತ್ತಿದ್ದ ಸಂದರ್ಭದಲ್ಲಿ ಕೆಎಸ್‌ಆರ್‌ಟಿಸಿ ಬಸ್ ಅವರ ಮೇಲೆ ಹರಿದಿದೆ. ಘಟನೆಯಿಂದ ಇಬ್ಬರೂ ಸ್ಥಳದಲ್ಲೇ ಮೃತಪಟ್ಟಿ ದ್ದಾರೆ ಎನ್ನಲಾಗಿದೆ.
ಹಬ್ಬದ ಸಂಭ್ರಮದಲ್ಲಿದ್ದ ನಗರದಲ್ಲಿ ತಾಯಿ–ಮಗನ ಸಾವಿನ ಸುದ್ದಿ ಹರಡುತ್ತಿದ್ದಂತೆ ಕುಟುಂಬ ಸ್ಥರ ಆಕ್ರಂದನ ಮುಗಿಲು ಮುಟ್ಟಿದೆ. ಹಬ್ಬದ ದಿನವೇ ಒಂದೇ ಕುಟುಂಬದ ಇಬ್ಬರು ಜೀವ ಕಳೆದು ಕೊಂಡಿರುವುದು ಸ್ಥಳೀಯರನ್ನು ಕಂಬನಿ ಮಿಡಿಯುವಂತೆ ಮಾಡಿದೆ.
ಘಟನೆಗೆ ಸಂಬಂಧಿಸಿದಂತೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಪ್ರಕರಣ ದಾಖಲಿಸಿಕೊಂಡು ಮುಂದಿನ ಕ್ರಮ ಕೈಗೊಂಡಿದ್ದಾರೆ