ಚೆನ್ನೈ, ನ.27: ತಮಿಳುನಾಡಿನ ತಿರುವಳ್ಳೂರು ಜಿಲ್ಲೆಯ ವಾಣಿಯಚತಿರಂನಲ್ಲಿ ಶುಕ್ರವಾರ(ನ. 27) ರಂದು ಬೆಳಿಗ್ಗೆ ದುರಂತವೊಂದು ಸಂಭವಿಸಿದೆ. ಡಿಎಂಕೆ ನಾಯಕ ಮತ್ತು ವಿಧಾನಸಭೆ ವಿರೋಧ ಪಕ್ಷದ ನಾಯಕ ಉದಯನಿಧಿ ಸ್ಟಾಲಿನ್ (Udhayanidhi Stalin) ಅವರ ಬರ್ತಡೇ ಬ್ಯಾನರ್ ಕಟ್ಟುವ ವೇಳೆ ವಿದ್ಯುತ್ ಸ್ಪರ್ಶಿಸಿ ಇಬ್ಬರು ಡಿಎಂಕೆ (DMK) ಪಕ್ಷದ ಕಾರ್ಯಕರ್ತರು ಮೃತಪಟ್ಟಿದ್ದಾರೆ ಎಂದು ವರದಿಯಾಗಿದೆ. ಮೃತರನ್ನು ವಾಣಿಯಚತಿರಂನ ಅಣ್ಣಾ ನಗರದ ವಿ. ವೀರೇಂದರ್ (22) ಮತ್ತು ಕರಾಣಿ ಗ್ರಾಮದ ಎಂ. ವೇಲನ್ (30) ಎಂದು ಗುರುತಿಸಲಾಗಿದೆ. ಘಟನೆಯಲ್ಲಿ ಮತ್ತೊಬ್ಬ ವ್ಯಕ್ತಿ ಗಾಯಗೊಂಡಿದ್ದು, ಅವರನ್ನು ತಿರುವಳ್ಳೂರು ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ತಿಳಿದು ಬಂದಿದೆ.
ಸ್ಥಳದಲ್ಲೇ ಮೃತಪಟ್ಟ ಇಬ್ಬರು ಯುವಕರು
ಉದಯನಿಧಿ ಸ್ಟಾಲಿನ್ ಅವರ ಹುಟ್ಟುಹಬ್ಬದ ಪ್ರಯುಕ್ತ ತಿರುವಳ್ಳೂರು ಜಿಲ್ಲೆಯ ಪ್ರಮುಖ ಸ್ಥಳದಲ್ಲಿ ಶುಭಾಶಯ ಕೋರುವ ಬೃಹತ್ ಬ್ಯಾನರ್ ಅಳವಡಿಸಲು ಸಿದ್ಧತೆ ನಡೆದಿತ್ತು. ಈ ವೇಳೆ ಇಬ್ಬರು ಯುವಕರು ಬ್ಯಾನರ್ ನಿಲ್ಲಿಸಲು ಮುಂದಾಗಿದ್ದರು. ಆದರೆ, ಬ್ಯಾನರ್ಗೆ ಬಳಸಲಾಗಿದ್ದ ಲೋಹದ ಫ್ರೇಮ್ ಅಥವಾ ಕಬ್ಬಿಣದ ಪೈಪ್ ಆಕಸ್ಮಿಕವಾಗಿ ಮೇಲೆಯೇ ಹಾದುಹೋಗಿದ್ದ ಹೈಟೆನ್ಷನ್ ವಿದ್ಯುತ್ ತಂತಿಗೆ ತಗುಲಿ ಇಬ್ಬರು ಮೃತಪಟ್ಟಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ವಿದ್ಯುತ್ ತಂತಿ ತಗುಲಿದ ತಕ್ಷಣವೇ ಬ್ಯಾನರ್ ಫ್ರೇಮ್ಗೆ ತೀವ್ರ ಪ್ರಮಾಣದ ವಿದ್ಯುತ್ ಪ್ರವಹಿಸಿದ್ದು, ಅದನ್ನು ಹಿಡಿದಿದ್ದ ಇಬ್ಬರೂ ಯುವಕರಿಗೆ ಭಾರಿ ವಿದ್ಯುತ್ ಶಾಕ್ ಹೊಡೆದಿದೆ. ತೀವ್ರ ಆಘಾತದಿಂದ ಇಬ್ಬರೂ ಸ್ಥಳದಲ್ಲೇ ಕುಸಿದು ಬಿದ್ದು ಕೊನೆಯುಸಿರೆಳೆದಿದ್ದಾರೆ. ತಕ್ಷಣವೇ ಸ್ಥಳೀಯರು ಹಾಗೂ ಅಲ್ಲಿದ್ದವರು ರಕ್ಷಣೆಗೆ ಧಾವಿಸಿದರೂ ಪ್ರಯೋಜನವಾಗಲಿಲ್ಲ.
ಆಶಾ ಕಾರ್ಯಕರ್ತರ ಬಗ್ಗೆ ಮಾತನಾಡುವ ನೈತಿಕತೆ ಎನ್ಡಿಎ ನಾಯಕರಿಗಿಲ್ಲ: ಸಿಎಂ ಡಿ.ಕೆ. ಶಿವಕುಮಾರ್ ವಾಗ್ದಾಳಿ
ಪ್ರಕರಣ ದಾಖಲು ಪೊಲೀಸರಿಂದ ತನಿಖೆ
ವಿಷಯ ತಿಳಿಯುತ್ತಿದ್ದಂತೆಯೇ ತಿರುವಳ್ಳೂರು ಪೊಲೀಸರು ಘಟನಾ ಸ್ಥಳಕ್ಕೆ ದೌಡಾಯಿಸಿ ಪರಿಶೀಲನೆ ನಡೆಸಿದ್ದಾರೆ. ಮೃತದೇಹಗಳನ್ನು ಮರಣೋತ್ತರ ಪರೀಕ್ಷೆಗಾಗಿ ಸರ್ಕಾರಿ ಆಸ್ಪತ್ರೆಗೆ ರವಾನಿಸಲಾಗಿದೆ. ಬ್ಯಾನರ್ ಅಳವಡಿಸಲು ಅನುಮತಿ ಪಡೆಯಲಾಗಿತ್ತೇ ಹಾಗೂ ಸುರಕ್ಷತಾ ನಿಯಮಗಳನ್ನು ಪಾಲಿಸಲಾಗಿತ್ತೇ ಎಂಬ ಬಗ್ಗೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರಿಸಿದ್ದಾರೆ.