ಆಶಾ ಕಾರ್ಯಕರ್ತರ ಬಗ್ಗೆ ಮಾತನಾಡುವ ನೈತಿಕತೆ ಎನ್ಡಿಎ ನಾಯಕರಿಗಿಲ್ಲ: ಸಿಎಂ ಡಿ.ಕೆ. ಶಿವಕುಮಾರ್ ವಾಗ್ದಾಳಿ
CM DK Shivakumar: ರಾಜಕಾರಣ ಮಾಡುವವರು ರಾಜಕಾರಣ ಮಾಡಲಿ. ನನ್ನ ಅಭ್ಯಂತರವಿಲ್ಲ. ನನಗೆ ಈ ವಿಚಾರದಲ್ಲಿ ರಾಜಕಾರಣದ ಅವಶ್ಯಕತೆ ಇಲ್ಲ. ಆಶಾ ಕಾರ್ಯಕರ್ತೆಯರು ನಮ್ಮ ಸಹೋದರಿಯರು. ಅವರ ಹಿತದ ಬಗ್ಗೆ ನಮಗೆ ಕಾಳಜಿ ಇದೆ. ನೀವು ಪ್ರತಿಭಟನೆ ಕೈಬಿಡಿ ಎಂದು ನಾನು ಮತ್ತೊಮ್ಮೆ ವಿನಯದಿಂದ ಮನವಿ ಮಾಡುವೆ. ನಾನು ಎಲ್ಲರನ್ನು ಕರೆದು ತೀರ್ಮಾನ ಮಾಡುವೆ ಎಂದು ಸಿಎಂ ಡಿ.ಕೆ. ಶಿವಕುಮಾರ್ ಹೇಳಿದ್ದಾರೆ.
ಸಿಎಂ ಡಿ.ಕೆ. ಶಿವಕುಮಾರ್ (ಸಂಗ್ರಹ ಚಿತ್ರ) -
ಬೆಂಗಳೂರು, ನ.27: ಆಶಾ ಕಾರ್ಯಕರ್ತೆಯರ ಬಗ್ಗೆ ಮಾತನಾಡುವ ನೈತಿಕತೆ ಎನ್ಡಿಎ ನಾಯಕರಿಗೆ ಇಲ್ಲ. ಅವರಿಗೆ ಆಶಾ ಕಾರ್ಯಕರ್ತೆಯರ ಬಗ್ಗೆ ಕಾಳಜಿ ಇದ್ದರೆ ಕೇಂದ್ರ ಸರ್ಕಾರ ನೀಡಬೇಕಿರುವ ಹಣದ ಬಗ್ಗೆ ಧ್ವನಿ ಎತ್ತಲಿ. ಇದುವರೆಗೂ ಕುಮಾರಸ್ವಾಮಿ ಹಾಗೂ ಬಿಜೆಪಿ ನಾಯಕರು ಈ ವಿಚಾರವಾಗಿ ಮಾತನಾಡಿಲ್ಲ ಎಂದು ಸಿಎಂ ಡಿ.ಕೆ. ಶಿವಕುಮಾರ್ (CM DK Shivakumar) ಕಿಡಿಕಾರಿದರು. ಕೆಂಗೇರಿಯ ಬಿಜಿಎಸ್ ಮೈದಾನದ ಬಳಿ ಮಾಧ್ಯಮಗಳ ಪ್ರಶ್ನೆಗಳಿಗೆ ಶುಕ್ರವಾರ ಅವರು ಪ್ರತಿಕ್ರಿಯೆ ನೀಡಿದರು.
ಆಶಾ ಕಾರ್ಯಕರ್ತೆಯರ ಹೋರಾಟದ ಬಗ್ಗೆ ಎನ್ಡಿಎ ನಾಯಕರ ಹೇಳಿಕೆಗಳ ಬಗ್ಗೆ ಕೇಳಿದಾಗ, “ನಾನು ಎನ್ಡಿಎನ ಯಾವುದೇ ನಾಯಕರ ಹೇಳಿಕೆಗೆ ಉತ್ತರ ನೀಡುವುದಿಲ್ಲ. ಕೇಂದ್ರ ಸರ್ಕಾರ ಆಶಾ ಕಾರ್ಯಕರ್ತೆಯರಿಗೆ ಈವರೆಗೂ 1 ರೂ. ಹೆಚ್ಚಳ ಮಾಡಿಲ್ಲ. ಅವರ ವೇತನ ಹೆಚ್ಚಳ ಮಾಡಿರುವುದು ನಾವು. ಆಶಾ ಕಾರ್ಯಕರ್ತೆಯರ ವಿಚಾರದಲ್ಲಿ ನಾವು ರಾಜಕೀಯ ಮಾಡಲ್ಲ. ಆಶಾ ಕಾರ್ಯಕರ್ತೆಯರ ಯೋಜನೆ ತಂದಿದ್ದು ಮನಮೋಹನ್ ಸಿಂಗ್ ಅವರು. ಆಶಾ ಕಾರ್ಯಕರ್ತೆಯರ ಪರವಾಗಿ ಕಾಂಗ್ರೆಸ್ ಸರ್ಕಾರ ಇದೆ ಎಂದು ಬಿಜೆಪಿಗೆ ಅವರ ಬಗ್ಗೆ ದ್ವೇಷ ಇದೆ. ಹೀಗಾಗಿ ನಾನು ಹೆಚ್ಚು ಮಾತನಾಡುತ್ತಿಲ್ಲ” ಎಂದರು.
ಸಹಿ ಹಾಕಲೇಬೇಕು ಎಂದು ಪಟ್ಟು ಹಿಡಿದರೆ ಅದು ಸಾಧ್ಯವಿಲ್ಲ
ನಿಮ್ಮ ಮೇಲೆ ನಮಗೆ ನಂಬಿಕೆ ಇದೆ. ನಮಗೆ ಅವಕಾಶ ಕೊಟ್ಟರೆ ನಾವು ಹೋಗಿ ನಮ್ಮ ಕೆಲಸ ಮಾಡಲು ಸಿದ್ಧರಿದ್ದೇವೆ ಎಂದು ಅನೇಕ ಆಶಾ ಕಾರ್ಯಕರ್ತೆಯರು ಕರೆ ಹಾಗೂ ಸಂದೇಶದ ಮೂಲಕ ನನಗೆ ಹೇಳುತ್ತಿದ್ದಾರೆ. ಆಶಾ ಕಾರ್ಯಕರ್ತೆಯರಲ್ಲೇ ಬಿರುಕು ತರಬಾರದು ಎಂಬ ಉದ್ದೇಶಕ್ಕೆ ನಾನು ಕೂಡ ಮೌನವಾಗಿದ್ದೇನೆ. ನಿಮ್ಮ ಕಷ್ಟಗಳ ಬಗ್ಗೆ ನಮಗೆ ಅರಿವಿದೆ. ನೀವು ನಿಮ್ಮ ಕೆಲಸದಲ್ಲಿ ನಿರತರಾಗಿ. ನೀವು ಸೇವೆಯ ಉದ್ದೇಶದಿಂದ ಬಂದಿದ್ದು, ಹೋರಾಟಕ್ಕಲ್ಲ. ಹೋರಾಟ ಎಲ್ಲರ ಹಕ್ಕು ಇದೆ. ನಾವು ನಿಮ್ಮ ಜತೆ ಚರ್ಚೆ ಮಾಡುತ್ತೇನೆ. ದಿನೇಶ್ ಗುಂಡೂರಾವ್, ಸಿದ್ದರಾಮಯ್ಯ ಅವರು ನಿಮ್ಮ ಜತೆ ಏನು ಮಾತನಾಡಿದ್ದಾರೆ ಎಂಬ ಅರಿವು ನನಗಿದೆ. ಆದರೆ ಸಹಿ ಹಾಕಲೇಬೇಕು ಎಂದು ಪಟ್ಟು ಹಿಡಿದರೆ ಅದು ಸಾಧ್ಯವಿಲ್ಲ. ನನ್ನ ಮೇಲೆ ವಿಶ್ವಾಸ ಇಟ್ಟರೆ ನಾನು ಖಂಡಿತವಾಗಿ ಸಹಾಯ ಮಾಡುವೆ ಎಂದು ಭರವಸೆ ನೀಡಿದರು.
ಆಶಾ ಕಾರ್ಯಕರ್ತೆಯರು ನಮ್ಮ ಸಹೋದರಿಯರು
ರಾಜಕಾರಣ ಮಾಡುವವರು ರಾಜಕಾರಣ ಮಾಡಲಿ. ನನ್ನ ಅಭ್ಯಂತರವಿಲ್ಲ. ನನಗೆ ಈ ವಿಚಾರದಲ್ಲಿ ರಾಜಕಾರಣದ ಅವಶ್ಯಕತೆ ಇಲ್ಲ. ಆಶಾ ಕಾರ್ಯಕರ್ತೆಯರು ನಮ್ಮ ಸಹೋದರಿಯರು. ಅವರ ಹಿತದ ಬಗ್ಗೆ ನಮಗೆ ಕಾಳಜಿ ಇದೆ. ನೀವು ಪ್ರತಿಭಟನೆ ಕೈಬಿಡಿ ಎಂದು ನಾನು ಮತ್ತೊಮ್ಮೆ ವಿನಯದಿಂದ ಮನವಿ ಮಾಡುವೆ. ನಾನು ಎಲ್ಲರನ್ನು ಕರೆದು ತೀರ್ಮಾನ ಮಾಡುವೆ ಎಂದರು.
ನಾವು ನುಡಿದಂತೆ ನಡೆಯುತ್ತೇವೆ
ಆಶಾ ಕಾರ್ಯಕರ್ತೆಯರ ವೇತನ ಹೆಚ್ಚಳ ಬಗ್ಗೆ ಪ್ರಣಾಳಿಕೆಯಲ್ಲಿ ಘೋಷಣೆ ಮಾಡಿದ್ದಿರಿ ಎಂದು ಕೇಳಿದಾಗ, “ಹೌದು, ನಾವು ಪ್ರಣಾಳಿಕೆಯಲ್ಲಿ ಭರವಸೆ ನೀಡಿದ್ದು, ನಾವು ನುಡಿದಂತೆ ನಡೆಯುತ್ತೇವೆ. ಕೇಂದ್ರ ಸರ್ಕಾರ ತನ್ನ ಪಾಲಿನ ಮೊತ್ತವನ್ನು ಹೆಚ್ಚಳ ಮಾಡಲು ಅವರು ಒತ್ತಡ ಹಾಕಲಿ” ಎಂದು ಸಿಎಂ ಡಿ.ಕೆ. ಶಿವಕುಮಾರ್ ಸವಾಲೆಸೆದರು.