ಲಖನೌ, ಮೇ 10: ಮೇ 10ರಂದು ವಿಶ್ವಾದ್ಯಂತ ಅಮ್ಮಂದಿರ ದಿನವನ್ನು (Mother's Day) ಅರ್ಥಪೂರ್ಣವಾಗಿ ಆಚರಿಸಲಾಗಿದೆ. ಮಕ್ಕಳು ಅಮ್ಮನಿಗೆ ಉಡುಗೊರೆ ನೀಡುವ ಮೂಲಕ ವಿಶೇಷ ದಿನವನ್ನು ಮತ್ತೂ ವಿಶೇಷವಾಗಿಸಿದ್ದಾರೆ. ಜತೆಗೆ ಬೆಳಗ್ಗೆಯೇ ಶುಭಾಶಯ ತಿಳಿಸಿದ್ದಾರೆ. ಆದರೆ ಉತ್ತರ ಪ್ರದೇಶದಲ್ಲಿ ಪಾಪಿ ಪುತ್ರನೊಬ್ಬ ಆಸ್ತಿಗಾಗಿ ತಾಯಿಯನ್ನೇ ಹತ್ಯೆಗೈದಿದ್ದಾನೆ (Uttar Pradesh Horror). 9 ತಿಂಗಳು ಹೊತ್ತು, ಹೆತ್ತ ಮಗನೇ ಮುಂದೊಂದು ದಿನ ಅದೂ ಅಮ್ಮಂದಿರ ದಿನವೇ ತನ್ನ ಸಾವಿಗೆ ಕಾರಣವಾಗುತ್ತಾನೆ ಎಂಬ ಊಹೆಯೂ ಆ ಅಮಾಯಕ ತಾಯಿಗೆ ತಿಳಿದಿರಲಿಲ್ಲ. ಉತ್ತರ ಪ್ರದೇಶದಲ್ಲಿ ನಡೆದ ಈ ಕ್ರೂರ ಕೃತ್ಯದ ವಿವರ ಹೊರ ಬಿದ್ದ ಬೆನ್ನಲ್ಲೇ ದೇಶವೇ ಬೆಚ್ಚಿ ಬಿದ್ದಿದೆ.
ಉತ್ತರ ಪ್ರದೇಶದ ಬಂದಾ ನಿವಾಸಿ, ರಾಜ್‌ಕಿಶೋರ್ ಗುಪ್ತನ ತಾಯಿಗೆ ಇದು ವಿಶೇಷ ದಿನವಾಗಬೇಕಿತ್ತು. ಆದರೆ ಜಗತ್ತೇ ತಾಯಂದಿರ ದಿನವನ್ನು ಕೊಂಡಾಡುತ್ತಿದ್ದರೆ ಮಗನಿಂದಾಗಿಯೇ ಅವರು ಹೆಣವಾಗಿ ಬಿದ್ದಿದ್ದಾರೆ. ತಾಯಿ ಅಲ್ಲದೆ ರಾಜ್‌ಕಿಶೋರ್ ಗುಪ್ತ ಸಹೋದರನನ್ನೂ ಕೊಲೆಗೈದಿದ್ದಾನೆ.
ಘಟನೆ ವಿವರ
ಭಾನುವಾರ ಬೆಳಗ್ಗೆ ಇದ್ದಕ್ಕಿದ್ದಂತೆ ರಾಜ್‌ಕಿಶೋರ್ ಗುಪ್ತನ ಮನೆಯಿಂದ ಗುಂಡಿನ ಸದ್ದು ಕೇಳಿ ನೆರೆ-ಹೊರೆಯವರು ಆತಂಕದಿಂದ ಹೊರ ಬಂದರು. ಕೊಡಲೇ ಪೊಲೀಸರಿಗೆ ಮಾಹಿತಿಯನ್ನೂ ನೀಡಿದರು. ಪೊಲೀಸರು ಆಗಮಿಸಿದಾಗ ರಾಜ್‌ಕಿಶೋರ್‌ನ ತಾಯಿ ಮತ್ತು ಸಹೋದರ ರಕ್ತದ ಮಡುವಿನಲ್ಲಿ ಬಿದ್ದಿರುವುದು ಕಂಡುಬಂತು. ತಾಯಿ, ಸಹೋದರ ಹಿರಿಯರಿಂದ ಬಂದ ಆಸ್ತಿ ಮಾರಿದ್ದಾರೆ ಎಂದು ಆರೋಪಿಸಿ ರಾಜ್‌ಕಿಶೋರ್ ಈ ಕೃತ್ಯ ಎಸಗಿದ್ದಾನೆ.
ವ್ಯಕ್ತಿಯ ತಲೆ ಕಡಿದು ಮನೆಗೆ ಕೊಂಡೊಯ್ದು ಏನೂ ಆಗದಂತೆ ಅಡುಗೆ ಮಾಡಿದ ಪಾಪಿ!
ಆಸ್ತಿ ಮಾರಿದ್ದು ತಂದೆ
ಅಚ್ಚರಿ ಎಂದರೆ ಈ ಆಸ್ತಿಯನ್ನು ಮಾರಾಟ ಮಾಡಿದ್ದು ರಾಜ್‌ಕಿಶೋರ್‌ನ ತಾಯಿಯಾಗಲಿ, ಸಹೋದರನಾಗಲಿ ಅಲ್ಲ. ಬದಲಾಗಿ ತಂದೆ. ಆಸ್ತಿ ಮಾರಾಟವನ್ನು ತಡೆಯದ ಕಾರಣಕ್ಕೆ ಅಸಮಾಧಾನಗೊಂಡಿದ್ದ ರಾಜ್‌ಕಿಶೋರ್ ತಾಯಿ ಮತ್ತು ಸಹೋದರನನ್ನೇ ಕೊಲೆ ಮಾಡಿದ್ದಾಗಿ ಮೂಲಗಳು ತಿಳಿಸಿವೆ.
ಆಸ್ತಿ ಮಾರಾಟ ವಿಚಾರಕ್ಕೆ ಸಂಬಂಧಿಸಿ ಕಿರಿಕಿರಿ ಮಾಡಿದ ರಾಜ್‌ಕಿಶೋರ್ ಭಾನುವಾರ ಇದ್ದಕ್ಕಿದ್ದಂತೆ ಪಿಸ್ತೂಲ್ ಹೊರ ತೆಗೆದು ತಾಯಿ ಮತ್ತು ಸಹೋದರನ ಮೇಲೆ ಗುಂಡು ಹಾರಿಸಿದ್ದಾನೆ. ಸದ್ದು ತಿಳಿದು ಕೂಡಲೇ ಸ್ಥಳೀಯರು ಧಾವಿಸಿ ಆಸ್ಪತ್ರೆಗೆ ಕರೆದೊಯ್ದರು. ಅಷ್ಟರಲ್ಲಾಗಲೇ ಇಬ್ಬರೂ ಮೃತಪಟ್ಟಿದ್ದರು.
ಪೊಲೀಸರು ಹೇಳಿದ್ದೇನು?
ʼʼರಾಜ್‌ಕಿಶೋರ್ ಗುಪ್ತ ತನ್ನ ತಾಯಿ ಮತ್ತು ಸಹೋದರನ ಮೇಲೆ ಗುಂಡು ಹಾರಿಸಿದ್ದಾನೆ ಎಂಬ ಮಾಹಿತಿ ಇಂದು ಮುಂಜಾನೆ ಸಿಕ್ಕಿತ್ತು. ಕೂಡಲೇ ನಂತರ ತಂಡವೊಂದು ಮನೆಗೆ ತೆರಳಿ ಪರಿಶೀಲನೆ ನಡೆಸಿತು. ಸಂತ್ರಸ್ತರನ್ನು ಕೂಡಲೇ ಆಸ್ಪತ್ರೆಗೆ ಸಾಗಿಸಲಾಯಿತಾದರೂ ಅಷ್ಟರಲ್ಲಾಗಲೇ ಇಬ್ಬರು ಮೃತಪಟ್ಟಿದ್ದರುʼʼ ಎಂದು ಹಿರಿಯ ಪೊಲೀಸ್ ಅಧಿಕಾರಿ ಪಲಾಸ್ ಬನ್ಸಾಲ್ ತಿಳಿಸಿದ್ದಾರೆ.
ಗುಡಿಸಲಿಗೆ ಬೆಂಕಿ ಹಚ್ಚಿ ಲೀವ್ ಇನ್ ಜೋಡಿಯ ಕೊಲೆ; ಹತ್ಯೆಯ ಹಿಂದಿನ ಕಾಣದ ಕೈ ಯಾರದ್ದು?
4 ಟೀಮ್ ರಚನೆ
ಸ್ಥಳಕ್ಕೆ ಧಾವಿಸಿದ ಫೊರೆನ್ಸಿಕ್ ಅಧಿಕಾರಿಗಳ ತಂಡ ಪರಿಶೀಲನೆ ನಡೆಸಿದೆ. ರಾಜ್‌ಕಿಶೋರ್ ಸ್ಥಳದಿಂದ ಪರಾರಿಯಾಗಿದ್ದು, ಆತನ ಪತ್ತೆಗೆ ಆತನ ಪತ್ತೆಗೆ 4 ಟೀಮ್ ರಚಿಸಲಾಗಿದೆ. ಸದ್ಯ ಈ ಬಗ್ಗೆ ತನಿಖೆ ಮುಂದುವರಿದಿದೆ.
ದೇಶದ ಇನ್ನಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ.
ʼಪ್ರವಾಸಿ ಪ್ರಪಂಚʼ ವೆಬ್‌ಸೈಟ್‌ಗೆ ಭೇಟಿ ನೀಡಲು ಇಲ್ಲಿ ಕ್ಲಿಕ್ ಮಾಡಿ.