ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

ಮಣಿಪುರದಲ್ಲಿ ಮತ್ತೆ ಹಿಂಸಾಚಾರ: ಸುಟ್ಟು ಕರಕಲಾದ ಮನೆಗಳು, ಕುಕಿ ಸಮುದಾಯದ ಮೂವರು ಸಾವು

ಕೆಲವು ಸಮಯದಿಂದ ತಣ್ಣಗಿದ್ದ ಮಣಿಪುರದಲ್ಲಿ ಶುಕ್ರವಾರ ಮುಂಜಾನೆ ಮತ್ತೆ ಸಂಘರ್ಷ ಭುಗಿಲೆದ್ದಿದೆ. ಮೂರು ಮನೆಗಳಿಗೆ ಬೆಂಕಿ ಹಚ್ಚಲಾಗಿದ್ದು, ಮೂವರು ಸಾವನ್ನಪ್ಪಿದರೆ. ಕುಕಿ ಸಮುದಾಯದ ಮನೆಗಳ ಮೇಲೆ ದಾಳಿಯಾಗಿದ್ದು, ಇದು ಈಗ ಭದ್ರತೆಯ ಕಳವಳವನ್ನು ಹುಟ್ಟು ಹಾಕಿದೆ. ಇದರ ಸಂಪೂರ್ಣ ತನಿಖೆಗೆ ಕುಕಿ ನಾಗರಿಕ ಸಮಾಜ ಸಂಘಟನೆಯಾದ ಕುಕಿ ಇನ್ಪಿ ಮಣಿಪುರ (KIM) ಆಗ್ರಹಿಸಿದೆ.

ಸಂಗ್ರಹ ಚಿತ್ರ

ಮಣಿಪುರ: ಹಿಂಸಾಚಾರದಲ್ಲಿ ಕುಕಿ ಸಮುದಾಯದ (Kuki community) ಮೂವರು ಸಾವನ್ನಪ್ಪಿರುವ ಘಟನೆ ಮಣಿಪುರದಲ್ಲಿ (Manipur) ನಡೆದಿದ್ದು, ಇದು ಈಗ ಮಣಿಪುರದಲ್ಲಿ ಭದ್ರತೆಯ ಕಳವಳವನ್ನು ಉಂಟು ಮಾಡಿದೆ. ಕಾಂಗ್ಪೋಕ್ಪಿಯಲ್ಲಿ (Kangpokpi) ಶುಕ್ರವಾರ ಮುಂಜಾನೆ ಕುಕಿ ಸಮುದಾಯದ ಮನೆಗಳ ಮೇಲೆ ದಾಳಿಯಾಗಿದ್ದು, ಮೂರು ಮನೆಗಳಿಗೆ ಬೆಂಕಿ ಹಚ್ಚಲಾಗಿದೆ. ಮನೆಗಳು ಸಂಪೂರ್ಣ ಸುಟ್ಟು ಹೋಗಿದ್ದು, ಮೂವರು ಸಾವನ್ನಪ್ಪಿದ್ದಾರೆ. ಈ ಕುರಿತು ಸಂಪೂರ್ಣ ತನಿಖೆಗೆ ಕುಕಿ ನಾಗರಿಕ ಸಮಾಜ ಸಂಘಟನೆಯಾದ ಕುಕಿ ಇನ್ಪಿ ಮಣಿಪುರ (KIM) ಆಗ್ರಹಿಸಿದೆ.

ಮಣಿಪುರದ ಕಾಂಗ್ಪೋಕ್ಪಿ ಜಿಲ್ಲೆಯಲ್ಲಿ ಶುಕ್ರವಾರ ಬೆಳಗ್ಗೆ ನಡೆದ ದಾಳಿಯಲ್ಲಿ ಹಲವಾರು ಮನೆಗಳು ಹಾನಿಗೊಳಗಾಗಿವೆ. ಬೆಳಗ್ಗೆ 4.10ರ ಸುಮಾರಿಗೆ ಈ ದಾಳಿ ನಡೆದಿದ್ದು,ಇದನ್ನು ನಡೆಸಿರುವುದು ಯಾರು ಎಂಬುದು ಇನ್ನೂ ಅಧಿಕೃತವಾಗಿ ದೃಢಪಟ್ಟಿಲ್ಲ. ಈ ಪ್ರದೇಶದಲ್ಲಿ ಗುಂಡಿನ ಚಕಮಕಿ ನಡೆದಿದೆ.

ಭಾರತ ವಿಶ್ವ ಗುರುವಾಗದಂತೆ ತಡೆಯುತ್ತಿರುವುದು ಸಿದ್ದತೆಯ ಕೊರತೆ: ಮೋಹನ್ ಭಾಗವತ್

ಕಾಂಗ್ಪೋಕ್ಪಿ ಜಿಲ್ಲೆಯ ನ್ಯೂ ಕೀಥೆಲ್‌ಮಾನ್ಬಿ ಪ್ರದೇಶದ ಲೋಯಿಬೋಲ್ ಖುಲ್ಲೆನ್ ಗ್ರಾಮದಲ್ಲಿ ಶುಕ್ರವಾರ ಮುಂಜಾನೆ ನಡೆದ ದಾಳಿಯಲ್ಲಿ ಗ್ರಾಮದ ನಿವಾಸಿಗಳಾದ ಮಂಗ್ಲುನ್ ಹಾವೊಕಿಪ್ ಅವರ ಮಗ ಲೆತ್ಖೊಂಗಮ್ ಹಾವೊಕಿಪ್, ಅವರ ಪತ್ನಿ ಟಿನ್ಮರಿ ಹಾವೊಕಿಪ್ ಮತ್ತು ಸೀಖೊಹಾವೊ ಹಾವೊಕಿಪ್ ಅವರ ಮಗ ಜಂಗ್ಮಿನ್ಲಾಲ್ ಹಾವೊಕಿಪ್ ಎಂಬವರು ಸಾವನ್ನಪ್ಪಿದ್ದಾರೆ.

ಈ ಸಂದರ್ಭದಲ್ಲಿ ಕುಕಿ ಸಮುದಾಯದ ಸದಸ್ಯರಿಗೆ ಸೇರಿದ ಹಲವಾರು ಮನೆಗಳಿಗೆ ಬೆಂಕಿ ಹಚ್ಚಲಾಗಿದೆ. ಇದರಲ್ಲಿ ಮೂರು ಮನೆಗಳು ಸಂಪೂರ್ಣ ಸುಟ್ಟುಹೋಗಿವೆ. ಈ ದಾಳಿಯಲ್ಲಿ ಏಳು ಮನೆಗಳಿಗೆ ಹಾನಿಯಾಗಿದ್ದು, ಅಪಾರ ಪ್ರಮಾಣದ ನಾಗರಿಕ ಆಸ್ತಿಗೆ ಹಾನಿಯಾಗಿದೆ ಎಂದು ಪ್ರಮುಖ ಕುಕಿ ನಾಗರಿಕ ಸಮಾಜ ಸಂಘಟನೆಯಾದ ಕುಕಿ ಇನ್ಪಿ ಮಣಿಪುರ ತಿಳಿಸಿದೆ.

ಈ ಕುರಿತು ದೂರು ನೀಡಿರುವ ಕುಕಿ ಇನ್ಪಿ ಮಣಿಪುರ, ನಾಗಲಿಮ್-ಇಸಾಕ್ ಮುಯಿವಾ ರಾಷ್ಟ್ರೀಯ ಸಮಾಜವಾದಿ ಮಂಡಳಿ (NSCN-IM) ಮತ್ತು ಜೆಲಿಯಾಂಗ್‌ರಾಂಗ್ ಯುನೈಟೆಡ್ ಫ್ರಂಟ್ (ZUF-K) ನ ಒಂದು ಬಣದ ಸಶಸ್ತ್ರ ಕಾರ್ಯಕರ್ತರು ಈ ದಾಳಿಯನ್ನು ನಡೆಸಿದ್ದಾರೆ. ಕುಕಿ ಸಮುದಾಯದ ಜನರನ್ನು ಗುರಿಯಾಗಿಟ್ಟುಕೊಂಡು ಈ ದಾಳಿ ನಡೆಸಲಾಗಿದೆ ಎಂದು ಹೇಳಿದೆ.

ದೀರ್ಘಾವಧಿಯ ಇಂಧನ ಸಹಭಾಗಿತ್ವಕ್ಕೆ ವೆನೆಜುವೆಲಾ ಹಂಗಾಮಿ ಅಧ್ಯಕ್ಷೆ ಡೆಲ್ಸಿ ರೊಡ್ರಿಗಸ್ ಜತೆ ಪ್ರಧಾನಿ ನರೇಂದ್ರ ಮೋದಿ ಮಾತುಕತೆ

ಇದಕ್ಕೆ ಸಂಬಂಧಿಸಿ ನಾಗಲಿಮ್-ಇಸಾಕ್ ಮುಯಿವಾ ರಾಷ್ಟ್ರೀಯ ಸಮಾಜವಾದಿ ಮಂಡಳಿ ಮತ್ತು ಜೆಲಿಯಾಂಗ್‌ರಾಂಗ್ ಯುನೈಟೆಡ್ ಫ್ರಂಟ್ ಯಾವುದೇ ಪ್ರತಿಕ್ರಿಯೆ ನೀಡಿಲ್ಲ.

ಘಟನೆ ಬಗ್ಗೆ ಸಂತಾಪ ವ್ಯಕ್ತಪಡಿಸಿರುವ ಕುಕಿ ಇನ್ಪಿ ಮಣಿಪುರ, ಇದು ಮಾನವ ಹಕ್ಕುಗಳ ಗಂಭೀರ ಉಲ್ಲಂಘನೆಯಾಗಿದೆ. ತಪ್ಪಿತಸ್ಥರ ವಿರುದ್ಧ ತ್ವರಿತ ಕ್ರಮ ಕೈಗೊಳ್ಳಬೇಕು. ಈ ಪ್ರದೇಶದ ದುರ್ಬಲ ಹಳ್ಳಿಗಳಿಗೆ ರಕ್ಷಣೆಯನ್ನು ಒದಗಿಸುವಂತೆ ಅದು ಕೇಂದ್ರ ಸರ್ಕಾರಕ್ಕೆ ಮನವಿ ಮಾಡಿದೆ. ಘಟನೆಯ ಬಳಿಕ ಈ ಪ್ರದೇಶದಲ್ಲಿ ಭದ್ರತೆಯನ್ನು ಹೆಚ್ಚಿಸಲಾಗಿದ್ದು,ತನಿಖೆಯನ್ನು ನಡೆಸಲಾಗುತ್ತಿದೆ ಎನ್ನಲಾಗಿದೆ.

ವಿದ್ಯಾ ಇರ್ವತ್ತೂರು

View all posts by this author