ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

ದೆಹಲಿಯಲ್ಲಿ ಹಿಂಸಾಚಾರ: ಇಬ್ಬರು ಎಸಿಪಿಗಳ ಮೇಲೆ ಪ್ರತಿಭಟನಾಕಾರರಿಂದ ದಾಳಿ

ಕಾಕ್ರೋಚ್ ಜನತಾ ಪಕ್ಷದಿಂದ ನಡೆಯುತ್ತಿರುವ ಪ್ರತಿಭಟನೆ ಬುಧವಾರ ರಾತ್ರಿ ಹಿಂಸಾತ್ಮಕ ರೂಪ ತಾಳಿದೆ. ಈ ಸಂದರ್ಭದಲ್ಲಿ ದೆಹಲಿ ಪೊಲೀಸ್ ಸಹಾಯಕ ಪೊಲೀಸ್ ಆಯುಕ್ತರಿಬ್ಬರ ಮೇಲೆ ಕಲ್ಲು, ಬಾಟಲ್ ನಿಂದ ದಾಳಿ ನಡೆಸಲಾಗಿದೆ. ದಿನವಿಡೀ ನಡೆದ ಘರ್ಷಣೆಯಲ್ಲಿ ಐದು ಮಂದಿ ಪ್ರತಿಭಟನಾಕಾರರು ಕೂಡ ಗಾಯಗೊಂಡಿದ್ದಾರೆ.

ಸಂಗ್ರಹ ಚಿತ್ರ

ನವದೆಹಲಿ: ಕಳೆದ ಒಂದು ತಿಂಗಳಿನಿಂದ ಕಾಕ್ರೋಚ್ ಜನತಾ ಪಕ್ಷದಿಂದ (Cockroach Janta Party) ನಡೆಯುತ್ತಿರುವ ಪ್ರತಿಭಟನೆ (CJP protest) ಬುಧವಾರ ರಾತ್ರಿ ಹಿಂಸಾತ್ಮಕ ರೂಪ ತಾಳಿದೆ. ವಿರೋಧ ಪಕ್ಷಗಳ ಬೆಂಬಲದ ನಡುವೆ ಪ್ರತಿಭಟನಾಕಾರರು ಹೋರಾಟವನ್ನು ತೀವ್ರಗೊಳಿಸಿದ್ದು, ಹಿಂಸಾಚಾರಕ್ಕೆ ಕಾರಣವಾಗಿದೆ. ಘಟನೆಯಲ್ಲಿ ದೆಹಲಿ ಪೊಲೀಸ್ ಸಹಾಯಕ ಪೊಲೀಸ್ ಆಯುಕ್ತ (ACP) ವಿವೇಕ್ ಭಗತ್ (ACP Vivek Bhagat) ಮತ್ತು ಎಸಿಪಿ ಜೈ ಪ್ರಕಾಶ್ (ACP jaiprakash) ಮೇಲೆ ಕಲ್ಲು ಮತ್ತು ಬಾಟಲಿಗಳಿಂದ ದುಷ್ಕರ್ಮಿಗಳು ದಾಳಿ ನಡೆಸಿದ್ದಾರೆ. ತೀವ್ರವಾಗಿ ಗಾಯಗೊಂಡ ಅವರಿಬ್ಬರನ್ನು ತಕ್ಷಣವೇ ಆಸ್ಪತ್ರೆಗೆ ದಾಖಲಿಸಲಾಗಿದೆ. ಘರ್ಷಣೆಯಲ್ಲಿ ಐವರು ಪ್ರತಿಭಟನಾಕಾರರು ಕೂಡ ಗಾಯಗೊಂಡಿದ್ದಾರೆ.

ಈ ಕುರಿತು ಮಾಹಿತಿ ನೀಡಿರುವ ಪೊಲೀಸರು, ದೆಹಲಿಯ ಕನ್ನಾಟ್ ಪ್ಲೇಸ್‌ನಲ್ಲಿ ಬುಧವಾರ ಸಂಜೆ ನಡೆದಿರುವ ಹಿಂಸಾಚಾರದಲ್ಲಿ ದೆಹಲಿ ಪೊಲೀಸ್ ಸಹಾಯಕ ಪೊಲೀಸ್ ಆಯುಕ್ತ ವಿವೇಕ್ ಭಗತ್ ಸೇರಿದಂತೆ ಭದ್ರತಾ ಸಿಬ್ಬಂದಿ ಮೇಲೆ ದುಷ್ಕರ್ಮಿಗಳು ದಾಳಿ ನಡೆಸಿದ್ದಾರೆ. ಕನ್ನಾಟ್ ಪ್ಲೇಸ್‌ನ ಟಾಲ್‌ಸ್ಟಾಯ್ ಮಾರ್ಗದ ಬಳಿ ರಾತ್ರಿ 8.30 ರ ಸುಮಾರಿಗೆ ಈ ಘಟನೆ ನಡೆದಿದೆ ಎಂದು ತಿಳಿಸಿದ್ದಾರೆ.

ಕೊನೆಗೂ ಉಪವಾಸ ಸತ್ಯಾಗ್ರಹ ಅಂತ್ಯಗೊಳಿಸಲು ಮುಂದಾದ ಸೋನಮ್ ವಾಂಗ್ಚುಕ್; ಕೇಂದ್ರ ಸರ್ಕಾರ ಕಂಡಿಷನ್ಸ್‌ ಒಪ್ಲೇ ಬೇಕು

ಘಟನೆಯಲ್ಲಿ ತೀವ್ರವಾಗಿ ಗಾಯಗೊಂಡ ಅವರನ್ನು ತಕ್ಷಣವೇ ಚಿಕಿತ್ಸೆಗಾಗಿ ರಾಮ್ ಮನೋಹರ್ ಲೋಹಿಯಾ (ಆರ್‌ಎಂಎಲ್) ಆಸ್ಪತ್ರೆಗೆ ದಾಖಲಿಸಲಾಗಿದೆ. ಕೆಲವು ನಿಮಿಷಗಳ ಕಾಲ ಉದ್ವಿಗ್ನವಾಗಿದ್ದ ಸ್ಥಳದಲ್ಲಿ ಐಸ್ಗ ಶಾಂತಿ ನೆಲೆಸಿದೆ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.

ವಿವೇಕ್ ಭಗತ್ ಮೇಲೆ ದಾಳಿಗೂ ಮೊದಲು ಜಂತರ್ ಮಂತರ್‌ನಲ್ಲಿ ನಡೆದ ಘರ್ಷಣೆಯಲ್ಲಿ ಮತ್ತೊಬ್ಬ ದೆಹಲಿ ಪೊಲೀಸ್ ಎಸಿಪಿ ಗಾಯಗೊಂಡಿದ್ದರು. ಪ್ರತಿಭಟನಾಕಾರರನ್ನು ನಿಯಂತ್ರಿಸಲು ಆರ್‌ಎಎಫ್ ಮತ್ತು ಪೊಲೀಸ್ ಸಿಬ್ಬಂದಿ ಬಲಪ್ರಯೋಗ ಮಾಡುವ ಮೊದಲು ಎರಡರಿಂದ ಮೂರು ಅಶ್ರುವಾಯು ಶೆಲ್‌ಗಳನ್ನು ಹಾರಿಸಿದರು. ಈ ಸಂದರ್ಭದಲ್ಲಿ ಎಸಿಪಿ ಜೈ ಪ್ರಕಾಶ್ ಅವರ ಮೇಲೆ ಪ್ರತಿಭಟನಾಕಾರರು ಕಲ್ಲು ತೂರಾಟ ನಡೆಸಿದ್ದಾರೆ. ಸಂಜೆ 4.30 ರ ಸುಮಾರಿಗೆ ಈ ಘಟನೆ ನಡೆದಿದೆ. ತಕ್ಷಣವೇ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಕೆಲವು ಪ್ರತಿಭಟನಾಕಾರ ಬಳಿ ಕೋಲು, ಕತ್ತಿಗಳು ಮತ್ತು ಖುಖ್ರಿಗಳಿದ್ದವು ಎಂದು ಪೊಲೀಸರು ತಿಳಿಸಿದ್ದಾರೆ.

ಘಟನೆಯ ಕುರಿತು ಮಾಹಿತಿ ನೀಡಿದ ನವದೆಹಲಿಯ ಹೆಚ್ಚುವರಿ ಡಿಸಿಪಿ ಆನಂದ್ ಮಿಶ್ರಾ, ದೆಹಲಿ ಪೊಲೀಸ್ ಅಧಿಕಾರಿಯೊಬ್ಬರನ್ನು ಜನಸಮೂಹವೊಂದು ಬೆನ್ನಟ್ಟಿ ಹಲ್ಲೆ ನಡೆಸಿದ್ದರಿಂದ ಹಿಂಸಾಚಾರ ಭುಗಿಲೆದ್ದಿದೆ. ರಾತ್ರಿ 8.30 ರ ಸುಮಾರಿಗೆ, ದೆಹಲಿ ಪೊಲೀಸ್ ಅಧಿಕಾರಿಯೊಬ್ಬರನ್ನು ದಿ ಪಾರ್ಕ್ ಹೊಟೇಲ್ ಬಳಿಯ ಸಂಸದ್ ಮಾರ್ಗ್ ಬಳಿ ಬೆನ್ನಟ್ಟಿ ಥಳಿಸಲಾಯಿತು. ಜನಸಮೂಹವನ್ನು ಶಾಂತಗೊಳಿಸಲು ಪೊಲೀಸರು ಕಾಕ್ರೋಚ್ ಜನತಾ ಪಕ್ಷದ ಸ್ವಯಂಸೇವಕರನ್ನು ಕರೆತಂದರು ಎಂದರು.

ಘಟನೆಯಲ್ಲಿ ಸುಮಾರು ಐದು ಪೊಲೀಸ್ ಸಿಬ್ಬಂದಿ ಹಾಗೂ ಐದು ಪ್ರತಿಭಟನಾಕಾರರು ಗಾಯಗೊಂಡಿದ್ದಾರೆ. ಘಟನೆಗೆ ಸಂಬಂಧಿಸಿ ತನಿಖೆ ನಡೆಸಲಾಗುತ್ತಿದ್ದು, ಇದಕ್ಕಾಗಿ ಎಐ ಕೆಮರಾಗಳು, ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಲಾಗುತ್ತಿದೆ ಎಂದು ತಿಳಿಸಿದರು.

ದೆಹಲಿಯಲ್ಲಿ ನಡೆದ ಹಿಂಸಾಚಾರಕ್ಕೆ ಸಂಬಂಧಿಸಿ ಈವರೆಗೆ 10 ಎಫ್‌ಐಆರ್‌ಗಳನ್ನು ದಾಖಲಿಸಲಾಗಿದೆ. ಇದರಲ್ಲಿ ಪಾರ್ಲಿಮೆಂಟ್ ಸ್ಟ್ರೀಟ್ ಪೊಲೀಸ್ ಠಾಣೆಯಲ್ಲಿ ನಾಲ್ಕು, ಕನ್ನಾಟ್ ಪ್ಲೇಸ್ ಪೊಲೀಸ್ ಠಾಣೆಯಲ್ಲಿ ಮೂರು ಮತ್ತು ಮಂದಿರ ಮಾರ್ಗ, ಬಾರಾಖಂಬಾ ಮತ್ತು ಕರ್ತವ್ಯ ಪಾತ್ ಪೊಲೀಸ್ ಠಾಣೆಗಳಲ್ಲಿ ತಲಾ ಒಂದು ಎಫ್‌ಐಆರ್‌ಗಳು ದಾಖಲಾಗಿವೆ. ಎಫ್‌ಐಆರ್‌ನಲ್ಲಿ ಗಲಭೆ, ಸಾರ್ವಜನಿಕ ಮೇಲೆ ಹಲ್ಲೆ, ಸರ್ಕಾರಿ ಕರ್ತವ್ಯಕ್ಕೆ ಅಡ್ಡಿ, ಸಾರ್ವಜನಿಕ ಆಸ್ತಿಗೆ ಹಾನಿ, ಕ್ರಿಮಿನಲ್ ಪಿತೂರಿ, ಶಸ್ತ್ರಾಸ್ತ್ರ ಕಾಯ್ದೆ ಮತ್ತು ಸಾರ್ವಜನಿಕ ಆಸ್ತಿಗೆ ಹಾನಿ ತಡೆಗಟ್ಟುವಿಕೆ (ಪಿಡಿಪಿಪಿ) ಕಾಯ್ದೆಯಡಿ ಅಪರಾಧ ಮತ್ತು ಇತರ ಆರೋಪಗಳು ಉಲ್ಲೇಖಿಸಲಾಗಿದೆ.

ಕಳೆದ ಸೋಮವಾರದಿಂದ ನಡೆಯುತ್ತಿರುವ ಹಿಂಸಾಚಾರದಲ್ಲಿ 60 ಕ್ಕೂ ಹೆಚ್ಚು ಪ್ರತಿಭಟನಾಕಾರರು ಮತ್ತು 118 ಪೊಲೀಸ್ ಸಿಬ್ಬಂದಿ ಗಾಯಗೊಂಡಿದ್ದಾರೆ. ಪೊಲೀಸ್ ವಾಹನಗಳು ಸೇರಿದಂತೆ 15- 20 ಸರ್ಕಾರಿ ವಾಹನಗಳು ಹಾನಿಗೊಳಗಾಗಿವೆ. ಜಿಲ್ಲೆಯಾದ್ಯಂತ ಭದ್ರತೆಯನ್ನು ಹೆಚ್ಚಿಸಲಾಗಿದ್ದು, ಸೂಕ್ಷ್ಮ ಸ್ಥಳಗಳಲ್ಲಿ ತೀವ್ರ ಕಟ್ಟೆಚ್ಚರ ವಹಿಸಲಾಗಿದೆ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.

ಘಟನೆಯ ಕುರಿತು ಜಂತರ್ ಮಂತರ್‌ನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಸಿಜೆಪಿ ಮುಖ್ಯ ವಕ್ತಾರ ಸೌರವ್ ದಾಸ್, ಕೇಂದ್ರ ಸಚಿವ ಜೆಪಿ ನಡ್ಡಾ ಅವರು ತಮ್ಮ ನಿವಾಸದಲ್ಲಿ ಚರ್ಚೆ ನಡೆಸಲು ಬಯಸಿದ್ದಾರೆ. ಆದರೆ ಸಿಜೆಪಿ ಈ ಪ್ರಸ್ತಾಪವನ್ನು ತಿರಸ್ಕರಿಸಿದೆ. ಅವರು ಪ್ರತಿಭಟನಾಕಾರರನ್ನು ಜನರ ನಡುವೆ ಭೇಟಿಯಾಗಬೇಕು. ಭದ್ರತಾ ಆತಂಕವಿದ್ದರೆ ಪ್ರತಿಭಟನಾ ಸ್ಥಳದ ಬಳಿ ಸಂವಾದಕ್ಕೆ ಮುಕ್ತ ಅವಕಾಶವಿದೆ ಎಂದರು.

Viral Video: ಸಿಜೆಪಿ ಪ್ರತಿಭಟನೆಯಲ್ಲಿ ಪಾಲ್ಗೊಳ್ಳಲು 1 ಲಕ್ಷ ರುಪಾಯಿ ಖರ್ಚು ಮಾಡಿ ಆಸ್ಟ್ರೇಲಿಯಾದಿಂದ ಬಂದ ಬಿ.ಟೆಕ್ ಪದವೀಧರ!

ಆಂದೋಲನದಲ್ಲಿ ಭಾಗವಹಿಸಿದ ವಿದ್ಯಾರ್ಥಿಗಳು ಮತ್ತು ಯುವಕರ ವಿರುದ್ಧ ಯಾವುದೇ ಹೊಸ ಎಫ್‌ಐಆರ್‌ಗಳು ಅಥವಾ ದಂಡನಾತ್ಮಕ ಕ್ರಮಗಳನ್ನು ತೆಗೆದುಕೊಳ್ಳಲಾಗುವುದಿಲ್ಲ ಎಂದು ಸರ್ಕಾರದಿಂದ ಭರವಸೆಯನ್ನು ಬಯಸುವುದಾಗಿ ಅವರು ಹೇಳಿದರು.

ವಿದ್ಯಾ ಇರ್ವತ್ತೂರು

View all posts by this author