ಮುಂಬೈ, ಅ.17: ಸ್ನೇಹಿತರೆಂದರೆ ಒಬ್ಬರಿಗೊಬ್ಬರು ಜೀವವನ್ನೇ ಕೊಡುವವರು ಎಂದೇ ವರ್ಣಿಸಲಾಗುತ್ತದೆ. ಆದರೆ, ಇತ್ತೀಚೆಗೆ ಸ್ನೇಹವು ದುರಾಸೆಯಲ್ಲಿ ಅಂತ್ಯವಾಗುತ್ತಿದೆ. ಇದೀಗ ದುರಾಸೆಗಾಗಿ ಸ್ನೇಹಿತನ ಜೀವವನ್ನೇ ತೆಗೆದ ಆಘಾತಕಾರಿ ಘಟನೆ ಮಹಾರಾಷ್ಟ್ರ (Maharashtra)ದ (Crime News) ಥಾಣೆಯಲ್ಲಿ ನಡೆದಿದೆ. ಒಬ್ಬನಿಗೆ ಹುಟ್ಟುಹಬ್ಬ ಆಚರಿಸಬೇಕೆಂಬ ಆಸೆ ಇತ್ತು. ಇನ್ನೊಬ್ಬನಿಗೆ ಬೈಕ್ ಕೊಳ್ಳಬೇಕೆಂಬ ಆಸೆ ಇತ್ತು. ಈ ದುರಾಸೆಗೆ ಬಲಿಯಾಗಿದ್ದು ಮಾತ್ರ ಸ್ನೇಹಿತ.
ಹೌದು, ಇಬ್ಬರು ಅಪ್ರಾಪ್ತ ಬಾಲಕರು ಹಣಕ್ಕಾಗಿ ತಮ್ಮ 17 ವರ್ಷದ ಆಪ್ತ ಸ್ನೇಹಿತ ಪ್ರಜ್ಯೋತ್ ಕಾಂಬ್ಳೆಯನ್ನು ಕೊಂದಿದ್ದಾರೆ. ಪೊಲೀಸರನ್ನು ದಾರಿ ತಪ್ಪಿಸುವ ಸಲುವಾಗಿ ಆತನ ದೇಹವನ್ನು ಸುಟ್ಟುಹಾಕಿ, ಮೊಬೈಲ್ ಫೋನ್ ಅನ್ನು ಬಸ್ಸಿಗೆ ಎಸೆದಿದ್ದಾರೆ.
ಥಾಣೆಯ ಆಜಾದ್ ನಗರದ ನಿವಾಸಿ ಪ್ರಜ್ಯೋತ್, ಸೆಪ್ಟೆಂಬರ್ 24 ರಂದು ಸಂಜೆ 7 ಗಂಟೆ ಸುಮಾರಿಗೆ ನಾಪತ್ತೆಯಾಗಿದ್ದರು. ಮರುದಿನ, ಅವರ ತಂದೆ ಪೊಲೀಸ್ ಠಾಣೆಗೆ ದೂರು ನೀಡಿದರು. ಪೊಲೀಸರು ಅಪಹರಣ ಪ್ರಕರಣ ದಾಖಲಿಸಿದರು. ತನಿಖೆಯ ವೇಳೆ ಪೊಲೀಸರು ಪ್ರಜ್ಯೋತ್ನ ಸ್ನೇಹಿತನೊಬ್ಬನನ್ನು ವಿಚಾರಣೆ ನಡೆಸಿದರು. ಈ ವೇಳೆ, 17 ವರ್ಷದ ಬಾಲಕ ಅಪರಿಚಿತ ಯುವಕನೊಂದಿಗೆ ಬೈಕ್ನಲ್ಲಿ ಘೋಡ್ಬಂದರ್ ಪ್ರದೇಶದ ಕಡೆಗೆ ಹೋಗಿದ್ದಾನೆ ಎಂದು ಹೇಳುವ ಮೂಲಕ ಆತ ಪೊಲೀಸರನ್ನು ದಾರಿ ತಪ್ಪಿಸಲು ಪ್ರಯತ್ನಿಸಿದ್ದಾನೆ.
ಪೊಲೀಸರು ಮಾರ್ಗದುದ್ದಕ್ಕೂ ಸುಮಾರು 80 ರಿಂದ 90 ಸಿಸಿಟಿವಿ ಕ್ಯಾಮರಾಗಳ ದೃಶ್ಯಾವಳಿಗಳನ್ನು ಪರಿಶೀಲಿಸಿದಾಗ ಸುಳ್ಳು ಎಂದು ತಿಳಿದುಬಂದಿದೆ. ತಾಂತ್ರಿಕ ಸಾಕ್ಷ್ಯಗಳು ಮತ್ತು ಮೊಬೈಲ್ ಲೊಕೇಷನ್ ಡೇಟಾದ ಆಧಾರದ ಮೇಲೆ ತನಿಖಾಧಿಕಾರಿಗಳು ಅದೇ ಸ್ನೇಹಿತನನ್ನು ಮತ್ತೆ ವಿಚಾರಣೆ ನಡೆಸಿದರು. ಈ ವಿಚಾರಣೆ ವೇಳೆ, ಕೊಲೆ ವಿಚಾರ ಬೆಳಕಿಗೆ ಬಂದಿದೆ.
ಬಾಲಕಿ ಮೇಲೆ ಅತ್ಯಾಚಾರ : ಯೂಟ್ಯೂಬ್ ನೋಡಿ ಗರ್ಭಪಾತಕ್ಕೆ ಯತ್ನಿಸಿದ ಯುವಕ, ಮಗುವಿಗೆ ಜನ್ಮ ನೀಡಿದ ಅಪ್ರಾಪ್ತೆ
ಪೊಲೀಸರ ಪ್ರಕಾರ, ಪ್ರಜ್ಯೋತ್ ಚಿನ್ನದ ಸರ ಧರಿಸಿದ್ದನು. ಆ ಸರವನ್ನು ಕಸಿದುಕೊಳ್ಳಲು ಆತನ ಇಬ್ಬರು ಅಪ್ರಾಪ್ತ ವಯಸ್ಸಿನ ಸ್ನೇಹಿತರು ಸಂಚು ರೂಪಿಸಿದ್ದರು ಎನ್ನಲಾಗಿದೆ. ಅವರಲ್ಲಿ ಒಬ್ಬನಿಗೆ ತನ್ನ ಜನ್ಮದಿನವನ್ನು ಆಚರಿಸಬೇಕೆಂಬ ಆಸೆಯಿದ್ದರೆ, ಮತ್ತೊಬ್ಬನಿಗೆ ಬೈಕ್ ಖರೀದಿಸಬೇಕೆಂಬ ಆಸೆಯಿತ್ತು ಎಂದು ಪೊಲೀಸರು ತಿಳಿಸಿದ್ದಾರೆ.
ಸೆಪ್ಟೆಂಬರ್ 24ರಂದು ಇಬ್ಬರು ಬಾಲಕರು ಸಿಗರೇಟ್ ಸೇದುವ ನೆಪದಲ್ಲಿ ಪ್ರಜ್ಯೋತ್ನನ್ನು ಥಾಣೆಯ ಬ್ರಹ್ಮಾಂಡ್ ಫೇಸ್ 2 ಪ್ರದೇಶದ ಸಮೀಪವಿರುವ ನಿರ್ಜನ ಸ್ಥಳಕ್ಕೆ ಕರೆದೊಯ್ದಿದ್ದರು. ಈ ವೇಳೆ ಪ್ರಜ್ಯೋತ್ಗೆ ಚಾಕುವಿನಿಂದ ಇರಿದು, ಕಲ್ಲಿನಿಂದ ಜಜ್ಜಿ ಕೊಲೆ ಮಾಡಿದ್ದಾರೆ ಎನ್ನಲಾಗಿದೆ.
ಸಾಕ್ಷ್ಯಗಳನ್ನು ನಾಶಪಡಿಸುವ ಉದ್ದೇಶದಿಂದ ಬಾಲಕರು ಪ್ರಜ್ಯೋತ್ನ ಮೃತದೇಹದ ಮೇಲೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿದ್ದಾರೆ ಎಂದು ಆರೋಪಿಸಲಾಗಿದೆ. ಅಲ್ಲದೆ, ಪೊಲೀಸರಿಗೆ ಆತನ ಸ್ಥಳದ ಸುಳಿವು ಸಿಗದಂತೆ ಮಾಡಲು ಪ್ರಜ್ಯೋತ್ನ ಮೊಬೈಲ್ ಫೋನ್ ಅನ್ನು ಬಸ್ನೊಳಗೆ ಎಸೆದಿದ್ದರು ಎನ್ನಲಾಗಿದೆ. ದೃಶ್ಯಂ ಸಿನಿಮಾದಲ್ಲಿನ ಸಂಚಿನ ಮಾದರಿಯನ್ನು ಅನುಸರಿಸಿ ಪೊಲೀಸರನ್ನು ದಾರಿ ತಪ್ಪಿಸಲು ಅವರು ಪ್ರಯತ್ನಿಸಿದ್ದರು ಎಂದು ಹೇಳಲಾಗಿದೆ. ಆದರೆ, ಸಿಸಿಟಿವಿ ದೃಶ್ಯಗಳು ಮತ್ತು ಡಿಜಿಟಲ್ ಸಾಕ್ಷ್ಯಗಳಿಂದಾಗಿ ಅವರ ಯೋಜನೆ ವಿಫಲವಾಗಿದೆ.
ಇಬ್ಬರೂ ಅಪ್ರಾಪ್ತ ಆರೋಪಿಗಳನ್ನು ವಶಕ್ಕೆ ಪಡೆಯಲಾಗಿದ್ದು, ಅವರು ಅಪರಾಧವನ್ನು ಒಪ್ಪಿಕೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಪ್ರಕರಣದ ಕುರಿತು ಹೆಚ್ಚಿನ ತನಿಖೆ ಮುಂದುವರಿದಿದೆ. ಈ ಘಟನೆ ಹಿನ್ನೆಲೆಯಲ್ಲಿ, ಮಕ್ಕಳು ತಪ್ಪು ದಾರಿ ಹಿಡಿಯದಂತೆ ಪೋಷಕರು ಅವರ ಚಟುವಟಿಕೆಗಳು ಮತ್ತು ಸ್ನೇಹಿತರ ಬಗ್ಗೆ ಕಾಳಜಿ ವಹಿಸಬೇಕು ಎಂದು ಉಪ ಪೊಲೀಸ್ ಆಯುಕ್ತ ಪ್ರಶಾಂತ್ ಕದಂ ಅವರು ಪೋಷಕರಿಗೆ ಮನವಿ ಮಾಡಿದ್ದಾರೆ.