ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

ಪ್ರಿಯಕರನ ಜತೆ ಸೇರಿ ಪತಿಯ ಹತ್ಯೆ: ವಾಟ್ಸ್‌ಆ್ಯಪ್‌ ಚಾಟ್‌ ಮೂಲಕ ಪತ್ನಿಯ ಕೊಲೆ ಸಂಚು ಬಯಲು

Crime News: ಪ್ರಿಯಕರನೊಂದಿಗೆ ಸೇರಿ ತನ್ನ ಪತಿಯನ್ನೇ ಪತ್ನಿಯೊಬ್ಬಳು ಕೊಲೆಗೈದ ಘಟನೆ ಉತ್ತರ ಪ್ರದೇಶದ ಬಾಗ್‌ಪತ್‌ನಲ್ಲಿ ನಡೆದಿದೆ. ಪತಿಯನ್ನು ಕೊಂದು, ಪ್ರಿಯಕರನ ಜತೆ ಡೆಹ್ರಾಡೂನ್‌ಗೆ ತೆರಳಿ ಹೊಸ ಜೀವನ ಆರಂಭಿಸುವುದು ಈ ಇಬ್ಬರು ಆರೋಪಿಗಳ ಉದ್ದೇಶವಾಗಿತ್ತು ಎಂದು ಪೊಲೀಸರು ತಿಳಿಸಿದ್ದಾರೆ.

ಕೊಲೆಯಾದ ವ್ಯಕ್ತಿ (ಎಡ), ಆರೋಪಿ ಪತ್ನಿ, ಪ್ರಿಯಕರ (ಬಲ)

ಲಖನೌ, ಅ. 22: ಇತ್ತೀಚೆಗೆ ಹೆಚ್ಚುತ್ತಿರುವ ಪ್ರಿಯಕರನೊಂದಿಗೆ ಸೇರಿ ಪತಿಯನ್ನೇ ಪತ್ನಿ ಕೊಲೆ ಮಾಡುವ ಪ್ರಕರಣಕ್ಕೆ ಮತ್ತೊಂದು ಉದಾಹರಣೆ ಸೇರ್ಪಡೆಯಾಗಿದೆ (Crime News). ಉತ್ತರ ಪ್ರದೇಶದ (Uttar Pradesh) ಬಾಗ್‌ಪತ್‌ನಲ್ಲಿ ಪತ್ನಿಯೊಬ್ಬಳು ತನ್ನ ಪತಿಯನ್ನೇ ಕೊಲೆಗೈದ ಘಟನೆ ನಡೆದಿದೆ. ಕೊಲೆ ಮಾಡಿರುವುದು ಪತ್ತೆಯಾಗದಂತೆ ಇಬ್ಬರೂ ಸೇರಿ ಸಂಚು ರೂಪಿಸಿದ್ದರು. ಸಿಸಿಟಿವಿ ಕ್ಯಾಮರಾಗಳಲ್ಲಿ ಎಲ್ಲೂ ಸೆರೆಯಾಗದಂತೆ ಪ್ರಿಯಕರ ಯಾವ ಮಾರ್ಗದಲ್ಲಿ ತೆರಳಬೇಕು ಎಂಬುದರಿಂದ ಹಿಡಿದು, ಪತಿಗೆ ಮದ್ಯದಲ್ಲಿ ನಿದ್ರೆ ಮಾತ್ರೆಗಳನ್ನು ಬೆರೆಸುವವರೆಗೆ ಎಲ್ಲವನ್ನೂ ಪತ್ನಿಯೇ ಯೋಜನೆ ರೂಪಿಸಿದ್ದಳು. ಪ್ರಿಯಕರ ಆಕೆಯ ಪತಿಯನ್ನು ಕೊಲೆ ಮಾಡುತ್ತಿದ್ದಾಗಲೂ ವಾಟ್ಸ್‌ಆ್ಯಪ್‌ ಮೂಲಕ ನಿರಂತರವಾಗಿ ಮಾಹಿತಿ ನೀಡುವಂತೆ ಕೇಳಿಕೊಂಡಿದ್ದಳು. ಪತಿಯನ್ನು ಕೊಂದು, ಪ್ರಿಯಕರನ ಜತೆ ಡೆಹ್ರಾಡೂನ್‌ಗೆ ತೆರಳಿ ಹೊಸ ಜೀವನ ಆರಂಭಿಸುವುದು ಈ ಇಬ್ಬರು ಆರೋಪಿಗಳ ಉದ್ದೇಶವಾಗಿತ್ತು ಎಂದು ಪೊಲೀಸರು ತಿಳಿಸಿದ್ದಾರೆ.

ಅಕ್ಟೋಬರ್ 18ರಂದು ಹೊಲದಲ್ಲಿನ ಬಾವಿಯ ಬಳಿ ಪತಿ ಪ್ರಮೋದ್ ಶವವಾಗಿ ಪತ್ತೆಯಾಗಿದ್ದರು. ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಇದೀಗ ಪತ್ನಿ ಊರ್ಮಿಳಾ ಮತ್ತು ಆಕೆಯ ಪ್ರಿಯಕರ ಸಿಕಂದರ್‌ನನ್ನು ಬಂಧಿಸಲಾಗಿದೆ. ರಾಮಲೀಲಾ ಪ್ರದರ್ಶನ ವೀಕ್ಷಿಸುವುದಾಗಿ ಹೇಳಿ ಮನೆಯಿಂದ ಹೊರಟಿದ್ದ ಪ್ರಮೋದ್ ಮತ್ತೆ ವಾಪಸ್ ಬಂದಿರಲಿಲ್ಲ. ನಂತರ ಅವರ ಮೃತದೇಹ ಹೊಲದಲ್ಲಿ ಪತ್ತೆಯಾಗಿತ್ತು. ಅವರ ಮುಖಕ್ಕೆ ತೀವ್ರ ಗಾಯವಾಗಿತ್ತು.

ಕೊಲೆ ಪ್ರಕರಣದ ತನಿಖೆ ಆರಂಭಿಸಿದ ಪೊಲೀಸರಿಗೆ ಮೃತ ಪ್ರಮೋದ್‌ನ ಪತ್ನಿ ಊರ್ಮಿಳಾ ಮತ್ತು ಸಿಕಂದರ್‌ ಮೇಲೆ ಅನುಮಾನ ಮೂಡಿತ್ತು. ಸಿಕಂದರ್‌ ಮೆಕ್ಯಾನಿಕ್‌ ಆಗಿದ್ದು, ಪ್ರಮೋದ್‌ಗೆ ಸೇರಿದ ಅಂಗಡಿಯನ್ನು ಬಾಡಿಗೆಗೆ ಪಡೆದುಕೊಂಡಿದ್ದ.

ಪತ್ನಿಯ ಶಿರಚ್ಛೇದ ಮಾಡಿ ಪೂಜಾ ಕೋಣೆಯೊಳಗಿಟ್ಟ ಪಾಪಿ

ಊರ್ಮಿಳಾ ಮತ್ತು ಸಿಕಂದರ್ ಇಬ್ಬರೂ ಪರಸ್ಪರ ಪ್ರೀತಿಸುತ್ತಿದ್ದರು ಎಂದು ಪೊಲೀಸ್ ತನಿಖೆ ವೇಳೆ ತಿಳಿದುಬಂದಿದೆ. ಇಬ್ಬರೂ ಹೊಟೇಲ್‌ಗಳಲ್ಲಿ ರಹಸ್ಯವಾಗಿ ಭೇಟಿಯಾಗುತ್ತಿದ್ದರು. ಆದರೆ ಊರ್ಮಿಳಾಳ ಮಗನಿಗೆ ಅವರಿಬ್ಬರ ಅಕ್ರಮ ಸಂಬಂಧದ ಬಗ್ಗೆ ತಿಳಿದ ನಂತರ, ಸಿಕಂದರ್ ಅವರ ಮನೆಗೆ ಭೇಟಿ ನೀಡುವುದನ್ನು ನಿಲ್ಲಿಸಿದ. ಆದರೂ ಇಬ್ಬರೂ ಫೋನ್ ಮೂಲಕ ಸಂಪರ್ಕ ಮುಂದುವರೆಸಿದರು.

ವಿಚಾರಣೆಯ ಸಮಯದಲ್ಲಿ ಊರ್ಮಿಳಾ ಎಲ್ಲ ಸತ್ಯವನ್ನು ಬಾಯ್ಬಿಟ್ಟಿದ್ದು, ಸಿಕಂದರ್ ಜತೆ ಉತ್ತರಾಖಂಡದ ಡೆಹ್ರಾಡೂನ್‌ಗೆ ತೆರಳಿ ಆತನೊಂದಿಗೆ ಹೊಸ ಜೀವನ ಆರಂಭಿಸಲು ಬಯಸಿದ್ದಳು. ಅದಕ್ಕಾಗಿ ಇಬ್ಬರೂ ಪ್ರಮೋದ್‌ನನ್ನು ಕೊಲ್ಲಲು ಸಂಚು ರೂಪಿಸಿದರು.

ಅಕ್ಟೋಬರ್ 18ರಂದು ಊರ್ಮಿಳಾ ಸಿಕಂದರ್‌ನನ್ನು ತನ್ನ ಮನೆಗೆ ಕರೆಸಿದಳು. ಎರಡು ನಿದ್ರೆ ಮಾತ್ರೆಗಳನ್ನು ನೀಡಿ, ಪ್ರಮೋದ್‌ನ ಮದ್ಯದೊಂದಿಗೆ ಬೆರೆಸುವಂತೆ ಸೂಚಿಸಿದಳು. ಸಿಕಂದರ್ ಅದರಂತೆ ಪ್ರಮೋದ್‌ಗೆ ಒಂದು ಕ್ವಾರ್ಟರ್ ಬಾಟಲ್ ಮದ್ಯವನ್ನು ನೀಡಿ ಹೊಲಕ್ಕೆ ಹೋಗುವಂತೆ ಹೇಳಿದ. ಕೊಳವೆ ಬಾವಿ ತಲುಪಿದ ಕೂಡಲೇ ಸಿಕಂದರ್ ಪ್ರಮೋದ್‌ನ ಮದ್ಯಕ್ಕೆ ನಿದ್ರೆ ಮಾತ್ರೆಗಳನ್ನು ಬೆರೆಸಿ ಕುಡಿಸಿದ್ದಾನೆ.

ಮದ್ಯದ ಅಮಲಿನಲ್ಲಿ ತೇಲುತ್ತಿದ್ದ ಪ್ರಮೋದ್‌ನಿಗೆ ಬಾಟಲಿಯಿಂದ ಹೊಡೆದು ಕೊಲೆ ಮಾಡಿದ್ದಾನೆ. ಬಳಿಕ ತನಗೇನೂ ಗೊತ್ತೇ ಇಲ್ಲ ಎಂಬಂತೆ ರಾಮಲೀಲಾ ಪ್ರದರ್ಶನ ವೀಕ್ಷಿಸಲು ತೆರಳಿದ್ದಾನೆ. ವಾಟ್ಸ್‌ಆ್ಯಪ್‌ ಸಂದೇಶದಿಂದ ಪ್ರಕರಣ ತಿಳಿದುಬಂತು. ಪ್ರಕರಣಕ್ಕೆ ಸಂಬಂಧಿಸಿದಂತೆ ಊರ್ಮಿಳಾ ಮತ್ತು ಸಿಕಂದರ್ ಇಬ್ಬರನ್ನೂ ಬಂಧಿಸಲಾಗಿದೆ.