ಗುವಾಹಟಿ: ಅಸ್ಸಾಂನ ಗುವಾಹಟಿಯಲ್ಲಿ ಸೋಮವಾರ ಬೆಳಕಿಗೆ ಬಂದಿದ್ದ ಅತ್ಯಂತ ಭೀಕರ ಹಾಗೂ ವಿಕೃತ ಹತ್ಯೆ ಪ್ರಕರಣವು ಇಡೀ ದೇಶವನ್ನು (Assam Murder Case) ಬೆಚ್ಚಿಬೀಳಿಸಿತ್ತು. ಮದುವೆಯಾಗಿ ಕೇವಲ ಆರು ತಿಂಗಳು ಕಳೆದಿದ್ದ ದಂಪತಿಯ ನಡುವಿನ ಕಲಹವು ಕೊಲೆಯಲ್ಲಿ ಅಂತ್ಯಗೊಂಡಿದ್ದು, ಪತಿಯೇ ಹೆಂಡತಿಯನ್ನು ಬರ್ಬರವಾಗಿ ಕೊಲೆ ಮಾಡಿ ತಲೆಯನ್ನು ಫ್ರಿಜ್‌ನಲ್ಲಿಟ್ಟು ಪರಾರಿಯಾಗಿದ್ದ. ಬಳಿಕ ಪೊಲೀಸರು ಆತನನ್ನು ಬಂಧಿಸಿದ್ದಾರೆ. ಆರೋಪಿಯನ್ನು ಪೊಲೀಸರು ಕೋರ್ಟ್‌ಗೆ ಕರೆತಂದಾಗ, ಮಾಧ್ಯಮಗಳ ಮುಂದೆ ನಿಂತು, 'ಜೈಲಿನಿಂದ ಹೊರಬಂದ ಮೇಲೆ ಹೆಂಡತಿಯ ಅಕ್ರಮ ಸಂಬಂಧಕ್ಕೆ ಕಾರಣನಾಗಿದ್ದ 'ಶುಗರ್ ಡ್ಯಾಡಿಯನ್ನು ಕೊಲೆಮಾಡುತ್ತೇನೆʼ ಎಂದು ಬೆದರಿಕೆ ಹಾಕಿದ್ದಾನೆ.
ಅಸ್ಸಾಂನ ಗುವಾಹಟಿಯ ಬಸಿಷ್ಠಪುರ (ಹಟಿಗಾಂವ್) ಪ್ರದೇಶದ ಫ್ಲ್ಯಾಟ್‌ನಲ್ಲಿ ವಾಸವಿದ್ದ 25 ವರ್ಷದ ರಿಯಾ ತಾಲೂಕ್ದಾರ್ ಗೋಸ್ವಾಮಿ ಮತ್ತು ಕ್ಯಾಬ್ ಡ್ರೈವರ್ ರಾಮಾನುಜ್ ಗೋಸ್ವಾಮಿ (30) ಪರಸ್ಪರ ಪ್ರೀತಿಸಿ ಕಳೆದ ವರ್ಷ ಸೆಪ್ಟೆಂಬರ್ 22 ರಂದು ವಿವಾಹವಾಗಿದ್ದರು. ವಿವಾಹವಾದ 6 ಕೇವಲ ತಿಂಗಳ ಒಳಗೆ ಹೆಂಡತಿಯನ್ನು ಬರ್ಬರವಾಗಿ ಹತ್ಯೆ ಮಾಡಿದ್ದಾನೆ. ದಂಪತಿ ಸಂಸಾರದಲ್ಲಿ ಆರಂಭದಿಂದಲೂ ಅನುಮಾನವಿತ್ತು. ಪತ್ನಿ ರಿಯಾ ಬೇರೆ ಯಾರದೋ ಜೊತೆ ಅಕ್ರಮ ಸಂಬಂಧ ಹೊಂದಿದ್ದಾಳೆ ಎಂದು ರಾಮಾನುಜ್ ಅನುಮಾನಪಟ್ಟಿದ್ದ. ಇದೇ ವಿಚಾರವಾಗಿ ದಂಪತಿ ನಡುವೆ ನಿತ್ಯವೂ ಜಗಳ ನಡೆಯುತಿತ್ತು.
ಸೆಪ್ಟೆಂಬರ್ 3 ರ ರಾತ್ರಿ ಎಂದಿನಂತೆ ದಂಪತಿ ನಡುವೆ ತೀವ್ರ ವಾಗ್ವಾದ ನಡೆದಿದೆ. ಮದ್ಯದ ಅಮಲಿನಲ್ಲಿದ್ದ ರಾಮಾನುಜ್ ಆಕ್ರೋಶದಲ್ಲಿ ಮನೆಯಲ್ಲಿದ್ದ ಹರಿತವಾದ ಮಚ್ಚಿನಿಂದ ಪತ್ನಿ ರಿಯಾಳ ಕುತ್ತಿಗೆಯನ್ನು ಕೊಯ್ದು ಬರ್ಬರವಾಗಿ ಹತ್ಯೆ ಮಾಡಿದ್ದಾನೆ. ಅಷ್ಟಕ್ಕೆ ಸುಮ್ಮನಾಗದೆ ಹೆಂಡತಿಯ ಮೃತದೇಹದ ತಲೆಯನ್ನು ದೇಹದಿಂದ ಬೇರ್ಪಡಿಸಿ, ವಿಕೃತಿ ಮೆರೆದು ಬೆರಳುಗಳನ್ನೂ ಕತ್ತರಿಸಿದ್ದಾನೆ. ಬಳಿಕ ಕತ್ತರಿಸಿದ ತಲೆಯನ್ನು ಪಾಲಿಥಿನ್ ಚೀಲದಲ್ಲಿ ಹಾಕಿ ಫ್ರಿಜ್‌ನಲ್ಲಿ ಇಟ್ಟು, ಹೊರಗಿನಿಂದ ಬೀಗ ಜಡಿದು ಪರಾರಿಯಾಗಿದ್ದನು.
ಸೆಪ್ಟೆಂಬರ್ 6 ರ ರಾತ್ರಿ ಫ್ಲ್ಯಾಟ್‌ನಿಂದ ವಿಪರೀತ ದುರ್ವಾಸನೆ ಬರಲು ಆರಂಭಿಸಿದಾಗ, ಅನುಮಾನಗೊಂಡ ಅಕ್ಕಪಕ್ಕದವರು ಹಟಿಗಾಂವ್ ಪೊಲೀಸ್ ಠಾಣೆಗೆ ಮಾಹಿತಿ ನೀಡಿದ್ದಾರೆ. ಪೊಲೀಸರು ಬಂದು ಬಾಗಿಲು ಒಡೆದು ನೋಡಿದಾಗ ರಿಯಾ ಅವರ ಕೊಳೆತ ರುಂಡವಿಲ್ಲದ ಶವ ಪತ್ತೆಯಾಗಿದೆ. ಫ್ರಿಜ್ ಪರಿಶೀಲಿಸಿದಾಗ ಕತ್ತರಿಸಿದ ತಲೆ ಸಿಕ್ಕಿದೆ. ಪ್ರಕರಣದ ಗಂಭೀರತೆ ಅರಿತ ಆರೋಪಿ ರಾಮಾನುಜ್, ತಾನಾಗಿಯೇ ಠಾಣೆಗೆ ಬಂದು ಶರಣಾಗಿದ್ದಾನೆ.
ನನಗೆ ಯಾವುದೇ ಪಶ್ಚಾತಾಪವಿಲ್ಲ, ಆ ಶುಗರ್ ಡ್ಯಾಡಿಯನ್ನು ಬಿಡುವುದಿಲ್ಲ
ಪೊಲೀಸರ ವಶದಲ್ಲಿರುವ ಆರೋಪಿ ರಾಮಾನುಜ್ ವಿಚಾರಣೆ ವೇಳೆ ಯಾವುದೇ ಪಶ್ಚಾತಾಪವಿಲ್ಲದೆ ವರ್ತಿಸಿದ್ದಾನೆ. ತನ್ನ ಹೆಂಡತಿಯ ಅಕ್ರಮ ಸಂಬಂಧಕ್ಕೆ ಕಾರಣನೆಂದು ಶಂಕಿಸಲಾದ ವ್ಯಕ್ತಿಯನ್ನು 'Sugar Daddy' ಎಂದು ಆತ ಹೇಳೊಕೊಂಡಿದ್ದು, ʼನನಗೆ ಕಾನೂನಿನಿಂದ ಬಿಡುಗಡೆ ಸಿಕ್ಕರೆ ಅಥವಾ ಹೊರಬಂದ ತಕ್ಷಣ ಆ ಶುಗರ್ ಡ್ಯಾಡಿಯನ್ನು ಶೀಘ್ರದಲ್ಲೇ ಕೊಲೆ ಮಾಡುತ್ತೇನೆʼ ಎಂದು ಬಹಿರಂಗವಾಗಿ ಬೆದರಿಕೆ ಹಾಕಿದ್ದಾನೆ. ಪ್ರಸ್ತುತ ನ್ಯಾಯಾಲಯವು ಆರೋಪಿಯನ್ನು 7 ದಿನಗಳ ಪೊಲೀಸ್ ವಶಕ್ಕೆ ನೀಡಿದ್ದು, ಪೊಲೀಸರು ತನಿಖೆ ಮುಂದುವರೆಸಿದ್ದಾರೆ.