ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

"ಅಕ್ರಮ ಸಂಬಂಧದ ಬಗ್ಗೆ ಹೇಳು": ಪತ್ನಿಗೆ ಮನಬಂದಂತೆ ಥಳಿಸಿ, ಗುಪ್ತಾಂಗಕ್ಕೆ ಆ್ಯಸಿಡ್ ಸುರಿದ ಪಾಪಿ ಪತಿ

ಮಹಾರಾಷ್ಟ್ರದ ಪುಣೆಯಲ್ಲಿ ಪತ್ನಿಯ ನಡತೆಯ ಮೇಲೆ ಶಂಕೆ ವ್ಯಕ್ತಪಡಿಸಿದ ಪತಿಯೊಬ್ಬ ಮದ್ಯದ ಅಮಲಿನಲ್ಲಿ ಆಕೆಯ ಮೇಲೆ ಕ್ರೂರವಾಗಿ ಹಲ್ಲೆ ನಡೆಸಿ, ಗುಪ್ತಾಂಗದ ಮೇಲೆ ಆ್ಯಸಿಡ್ ಸುರಿದಿರುವ ಅಮಾನುಷ ಘಟನೆ ಬೆಳಕಿಗೆ ಬಂದಿದೆ. ಮಹಿಳೆಯನ್ನು 15 ದಿನಗಳ ಕಾಲ ಮನೆಯಲ್ಲೇ ಕೂಡಿಹಾಕಿ ಚಿಕಿತ್ಸೆ ನೀಡದೆ ಹಿಂಸಿಸಲಾಗಿದೆ ಎಂದು ಆರೋಪಿಸಲಾಗಿದೆ.

ಸಾಂದರ್ಭಿಕ ಚಿತ್ರ

ಮುಂಬೈ, ಮೇ 18: ಮದ್ಯದ ಅಮಲಿನಲ್ಲಿ ತನ್ನ ಪತ್ನಿಯ ನಡತೆಯ ಮೇಲೆ ಶಂಕೆ ವ್ಯಕ್ತಪಡಿಸಿದ ಪತಿಯೊಬ್ಬ ಆಕೆಗೆ ಮನಬಂದಂತೆ ಥಳಿಸಿ ಗುಪ್ತಾಂಗದ ಮೇಲೆ ಆ್ಯಸಿಡ್ ಸುರಿದು, 15 ದಿನಗಳ ಕಾಲ ಮನೆಯಲ್ಲೇ ಕೂಡಿಹಾಕಿ ಅತ್ಯಂತ ಕ್ರೂರವಾಗಿ ಹಿಂಸಿಸಿರುವ ಅಮಾನುಷ ಘಟನೆ ಮಹಾರಾಷ್ಟ್ರದ ಪುಣೆಯಲ್ಲಿ ನಡೆದಿದೆ. ಏಪ್ರಿಲ್ 20ರಂದು ಈ ಭೀಕರ ಘಟನೆ ಸಂಭವಿಸಿದೆ. ಸದ್ಯ ಈ ಘಟನೆ ದೇಶಾದ್ಯಂತ ಆಕ್ರೋಶ ಹುಟ್ಟು ಹಾಕಿದೆ.

ಆರೋಪಿ ಪತಿಯು ಅತಿಯಾಗಿ ಮದ್ಯ ಸೇವಿಸಿ ತಡರಾತ್ರಿ ಮನೆಗೆ ಬಂದಿದ್ದ. ಪತ್ನಿ ಗಂಡು ಮಗುವಿಗೆ ಜನ್ಮ ನೀಡಿಲ್ಲ ಎಂಬ ಕೋಪ ಮತ್ತು ಆಕೆಗೆ ಬೇರೆ ಪುರುಷನೊಂದಿಗೆ ಅಕ್ರಮ ಸಂಬಂಧವಿದೆ ಎಂಬ ಅನಗತ್ಯ ಶಂಕೆ ಆತನ ತಲೆಯಲ್ಲಿತ್ತು. ಮನೆಗೆ ಬರುತ್ತಿದ್ದಂತೆ, "ನೀನು ಕೆಲಸಕ್ಕೆ ಹೋದಾಗ ಹೊರಗೆ ಯಾರೊಂದಿಗೆ ಅಕ್ರಮ ಸಂಬಂಧ ಹೊಂದಿದ್ದೀಯಾ ಎಂದು ನನಗೆ ನಿಜ ಹೇಳು" ಎಂದು ಕೂಗಾಡುತ್ತಾ ಮಹಿಳೆಯ ಮೇಲೆ ರಾಕ್ಷಸನಂತೆ ಮುಗಿಬಿದ್ದು, ತೀವ್ರವಾಗಿ ಥಳಿಸಲು ಆರಂಭಿಸಿದ.

ಆತನ ಕೋಪ ಅಷ್ಟಕ್ಕೇ ನಿಲ್ಲದೆ, ಮಹಿಳೆಯನ್ನು ಕೊಲೆ ಮಾಡುವುದಾಗಿ ಬೆದರಿಕೆ ಹಾಕಿದ್ದಾನೆ. ನಂತರ ಶೌಚಾಲಯ ಸ್ವಚ್ಛಗೊಳಿಸಲು ಬಳಸುವ ಆ್ಯಸಿಡ್ ಬಾಟಲಿಯನ್ನು ತೆಗೆದುಕೊಂಡು ಬಂದು, ಆಕೆಯ ಗುಪ್ತಾಂಗದ ಮೇಲೆ ಸುರಿದಿದ್ದಾನೆ. ಇದರಿಂದ ತೀವ್ರವಾದ ಉರಿ ಮತ್ತು ಅಸಹನೀಯ ನೋವಿನಿಂದ ಮಹಿಳೆ ಕಿರುಚಾಡುತ್ತಾ ಪ್ರಾಣ ಉಳಿಸಿಕೊಳ್ಳಲು ಮನೆಯಿಂದ ಹೊರಗೆ ಓಡಲು ಯತ್ನಿಸಿದ್ದಾಳೆ. ಆದರೆ ಕ್ರೂರ ಪತಿ ಮನೆಯ ಮುಖ್ಯ ಬಾಗಿಲನ್ನು ಒಳಗಿನಿಂದ ಲಾಕ್ ಮಾಡಿ, ಆಕೆಗೆ ಮತ್ತೆ ಕಾಲಿನಿಂದ ಒದ್ದು, ಕೈಯಿಂದ ತೀವ್ರವಾಗಿ ಗುದ್ದಿದ್ದಾನೆ.

ಅಣ್ಣನ ಕುಟುಂಬದ ನಾಲ್ವರನ್ನು ಕೊಂದು, ಶವಗಳನ್ನು ತುಂಡರಿಸಿ ಸೂಟ್‌ಕೇಸ್‌ಗೆ ತುಂಬಿದ ಪಾಪಿ ಕಿರಿಯ ಸಹೋದರ

ಮಹಿಳೆಯ ಆಕ್ರಂದನ ಕೇಳಿ ಓಡಿಬಂದ ಆಕೆಯ ನಾದಿನಿ, ತಕ್ಷಣವೇ ಪತಿಯ ಪೋಷಕರಿಗೆ ಕರೆ ಮಾಡಿ ವಿಷಯ ತಿಳಿಸಿದ್ದಾರೆ. ಈ ನಡುವೆ, ಈ ಘಟನೆಯ ಬಗ್ಗೆ ಯಾರಿಗಾದರೂ ಬಾಯಿ ಬಿಟ್ಟರೆ ಕೊಲೆ ಮಾಡುವುದಾಗಿ ಪತ್ನಿಗೆ ಹೆದರಿಸಿದ ಪತಿ ಅಲ್ಲಿಂದ ಹೊರಟುಹೋಗಿದ್ದಾನೆ. ಅಸಹನೀಯ ನೋವಿನಿಂದ ನರಳುತ್ತಿದ್ದ ಮಹಿಳೆಗೆ ಯಾವುದೇ ವೈದ್ಯಕೀಯ ಚಿಕಿತ್ಸೆ ಕೊಡಿಸದೆ 15 ದಿನಗಳ ಕಾಲ ಮನೆಯಲ್ಲೇ ಕೂಡಿ ಹಾಕಲಾಗಿತ್ತು.

ಮೇ 9ರಂದು ಪತಿ ಕೆಲಸಕ್ಕೆ ಹೋದಾಗ, ಮಹಿಳೆ ಹೇಗೋ ತಪ್ಪಿಸಿಕೊಂಡು ತನ್ನಿಬ್ಬರು ಹೆಣ್ಣು ಮಕ್ಕಳೊಂದಿಗೆ ತಾಯಿ ಮನೆಗೆ ತಲುಪಿದ್ದಾಳೆ. ಅಲ್ಲಿ ಪೋಷಕರ ಮುಂದೆ ತನಗಾದ ಘೋರ ಕಿರುಕುಳವನ್ನು ಬಿಚ್ಚಿಟ್ಟಿದ್ದಾಳೆ. ತಕ್ಷಣವೇ ಕುಟುಂಬಸ್ಥರು ಆಕೆಯನ್ನು ಪೊಲೀಸ್ ಠಾಣೆಗೆ ಕರೆದೊಯ್ದು ದೂರು ದಾಖಲಿಸಿದ್ದಾರೆ. ಮೇ 15ರಂದು ದೂರು ದಾಖಲಾದ ನಂತರ ಆಕೆಯನ್ನು ಪುಣೆಯ ಸಸೂನ್ ಆಸ್ಪತ್ರೆಗೆ ಚಿಕಿತ್ಸೆಗಾಗಿ ದಾಖಲಿಸಲಾಗಿದೆ. ಉರುಳಿ ಕಾಂಚನ್ ಪೊಲೀಸ್ ಠಾಣೆಯ ಇನ್ಸ್‌ಪೆಕ್ಟರ್ ಸಚಿನ್ ವಾಂಗಡೆ ಪಾಪಿ ಪತಿಯ ವಿರುದ್ಧ ಕಠಿಣ ಪ್ರಕರಣ ದಾಖಲಿಸಿಕೊಂಡಿದ್ದು, ಮುಂದಿನ ಕಾನೂನು ಕ್ರಮ ಕೈಗೊಂಡಿದ್ದಾರೆ.