ಅಮರಾವತಿ, ಜ. 23: ಬಿರಿಯಾನಿ ತಯಾರಿಸಿದ ಮಹಿಳೆಯೊಬ್ಬಳು ಅದರಲ್ಲಿ ನಿದ್ದೆಯ ಮಾತ್ರೆಗಳನ್ನು ಸೇರಿಸಿ ಪತಿಗೆ ತಿನ್ನಿಸಿದ್ದಾಳೆ. ಪತಿ ನಿದ್ದೆಗೆ ಜಾರಿದ ಬಳಿಕ ಪ್ರಿಯಕರನನ್ನು ಮನೆಗೆ ಕರೆದು, ಆತನೊಂದಿಗೆ ಸೇರಿ ಪತಿಯ ಕತ್ತು ಹಿಸುಕಿ ಕೊಲೆ ಮಾಡಿದ್ದಾಳೆ. ಬಳಿಕ ಆತನ ಮೃತದೇಹದ ಬಳಿ ಕುಳಿತು ರಾತ್ರಿ ಇಡೀ ಪೋರ್ನ್ ವಿಡಿಯೊ ವೀಕ್ಷಿಸುತ್ತ ಕುಳಿತಿದ್ದಾಳೆ. ಆಂಧ್ರ ಪ್ರದೇಶದ (Andhra Pradesh) ಗುಂಟೂರು ಜಿಲ್ಲೆಯ ಚಿಲುವೂರು ಗ್ರಾಮದಲ್ಲಿ ಈ ಭಯಾನಕ ಘಟನೆ ನಡೆದಿದೆ (Crime News).
ಆರಂಭದಲ್ಲಿ ಸಹಜ ಸಾವು ಎಂದು ಬಿಂಬಿಸಲ್ಪಟ್ಟ ಈ ಪ್ರಕರಣವು ಪೋಸ್ಟ್‌ಮಾರ್ಟಂ ಪರೀಕ್ಷೆಯ ನಂತರ ಆ ವ್ಯಕ್ತಿ ಉಸಿರುಗಟ್ಟಿ ಮೃತಪಟ್ಟಿದ್ದಾನೆ, ಇದು ಕೊಲೆ ಎಂದು ಸಾಬೀತಾಯಿತು. ಇದರಿಂದ ಅನುಮಾನಗೊಂಡ ಪೊಲೀಸರು ಇಬ್ಬರೂ ಶಂಕಿತರನ್ನು ಬಂಧಿಸಿದರು.
ಮಗಳು ಪ್ರಿಯಕರನೊಟ್ಟಿಗೆ ಎಸ್ಕೇಪ್; ಇತ್ತ ಪತಿಗೇ ಚಾಕು ಇರಿದು ಕೊಲೆ ಮಾಡಿದ ಪತ್ನಿ
ಪೊಲೀಸ್ ತನಿಖೆಯ ವೇಳೆ ಲೋಕಂ ಶಿವನಾಗರಾಜು ಎಂಬವರನ್ನು ಆತನ ಪತ್ನಿ ಲಕ್ಷ್ಮೀ ಮಾಧುರಿ ಮತ್ತು ಆಕೆಯ ಪ್ರಿಯಕರ ಗೋಪಿ ಕೊಲೆ ಮಾಡಿದ್ದಾರೆ ಎಂದು ತಿಳಿದುಬಂದಿದೆ. ಮಾಧುರಿಯು ಗೋಪಿ ಜತೆ ಅಕ್ರಮ ಸಂಬಂಧ ಹೊಂದಿದ್ದಳು. ಕೊಲೆ ಮಾಡಿದ ದಿನ ರಾತ್ರಿ, ಮಾಧುರಿಯು ನಿದ್ದೆ ಮಾತ್ರೆಗಳನ್ನು ಪುಡಿ ಮಾಡಿ ಬಿರಿಯಾನಿಯೊಂದಿಗೆ ಬೆರೆಸಿ ತನ್ನ ಪತಿಗೆ ಬಡಿಸಿದ್ದಾಳೆ. ಶಿವನಾಗರಾಜು ಊಟ ಮಾಡಿ ಗಾಢ ನಿದ್ರೆಗೆ ಜಾರಿದ ನಂತರ, ಪತ್ನಿ ತನ್ನ ಪ್ರಿಯಕರ ಗೋಪಿಯನ್ನು ಮನೆಗೆ ಕರೆಸಿದ್ದಾಳೆ. ನಂತರ ಇಬ್ಬರೂ ಸೇರಿ ಶಿವನಾಗರಾಜು ಅವರ ಮುಖದ ಮೇಲೆ ದಿಂಬನ್ನು ಇಟ್ಟು ಹತ್ಯೆ ಮಾಡಿದ್ದಾರೆ.
ಈ ಕೃತ್ಯದ ನಂತರ, ಮಾಧುರಿ ತನ್ನ ಪತಿ ಹೃದಯಾಘಾತದಿಂದ ಸಾವನ್ನಪ್ಪಿದ್ದಾರೆ ಎಂದು ಸುದ್ದಿ ಹಬ್ಬಿಸಿದ್ದಾಳೆ. ಈ ಮೂಲಕ ಕೊಲೆಯನ್ನು ಮರೆಮಾಡಲು ಪ್ರಯತ್ನಿಸಿದಳು. ಬೆಳಗಿನ ಜಾವ, ನೆರೆಹೊರೆಯವರಿಗೆ ಪತಿಯ ಹಠಾತ್ ಸಾವಿನ ಬಗ್ಗೆ ತಿಳಿಸಿದಳು.
ಶಿವನಾಗರಾಜು ಅವರ ತಂದೆ ಮತ್ತು ಸ್ನೇಹಿತರು ಶವವನ್ನು ಗಮನಿಸಿದಾಗ ರಕ್ತದ ಕಲೆಗಳ ಜತೆಗೆ ಗಾಯಗಳನ್ನು ಗುರುತಿಸಿದ್ದಾರೆ. ಇದು ಅವರ ಅನುಮಾನಕ್ಕೆ ಕಾರಣವಾಯಿತು. ಅವರು ಈ ಬಗ್ಗೆ ಸ್ಥಳೀಯ ಪೊಲೀಸರಿಗೆ ದೂರು ನೀಡಿದರು. ಹೀಗಾಗಿ ಪೊಲೀಸರು ಅಧಿಕೃತ ತನಿಖೆಗೆ ಮುಂದಾದರು. ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಯಿತು. ವರದಿಯ ಪ್ರಕಾರ, ಎದೆಯ ಗಾಯಗಳೊಂದಿಗೆ ಅವರು ಉಸಿರುಗಟ್ಟಿ ಮೃತಪಟ್ಟಿದ್ದಾರೆ ಎಂಬುದು ತಿಳಿದುಬಂತು. ಇದರಿಂದ ಅವರು ಸಹಜವಾಗಿ ಮೃತಪಟ್ಟಿದ್ದಲ್ಲ, ಕೊಲೆ ಮಾಡಲಾಗಿದೆ ಎಂಬುದು ಮೇಲ್ನೋಟಕ್ಕೆ ಕಂಡುಬಂತು.
ಕೂಡಲೇ ಪೊಲೀಸರು ಆರೋಪಿಗಳಾದ ಮಾಧುರಿ ಮತ್ತು ಗೋಪಿಯನ್ನು ಬಂಧಿಸಿದರು. ಮಾಧುರಿ ಹಾಗೂ ಆಕೆಯ ಪ್ರಿಯಕರ ರಾತ್ರಿಯಿಡೀ ತನ್ನ ಪತಿಯ ಮೃತದೇಹದ ಪಕ್ಕದಲ್ಲಿ ಅಶ್ಲೀಲ ವಿಡಿಯೊಗಳನ್ನು ವೀಕ್ಷಿಸುತ್ತಿದ್ದರು ಎಂದು ಪ್ರಾಥಮಿಕ ವರದಿಗಳು ತಿಳಿಸಿವೆ. ಆಕೆ ಮೊಬೈಲ್‍ನಲ್ಲಿ ಹೆಚ್ಚಾಗಿ ಅಶ್ಲೀಲ ದೃಶ್ಯಗಳನ್ನು ವೀಕ್ಷಿಸುತ್ತಿದ್ದಳು. ಇದರಿಂದ ದಂಪತಿಯ ಮಧ್ಯೆ ಆಗಾಗ ಜಗಳವಾಗುತ್ತಿತ್ತು ಎಂದು ಗುಂಟೂರು ಪೊಲೀಸ್ ವರಿಷ್ಠಾಧಿಕಾರಿ ವಕುಲ್ ಜಿಂದಾಲ್ ತಿಳಿಸಿದ್ದಾರೆ.
ಪೊಲೀಸ್ ವಿಚಾರಣೆಯ ಸಮಯದಲ್ಲಿ ಮಾಧುರಿ ತಪ್ಪೊಪ್ಪಿಕೊಂಡಿದ್ದು, ಗೋಪಿಯೊಂದಿಗೆ ಕೊಲೆಯನ್ನು ಯೋಜಿಸಿದ್ದು, ಕೊಲೆ ಮಾಡಿದ್ದರಲ್ಲಿ ತಾನು ಭಾಗಿಯಾಗಿದ್ದೇನೆ ಎಂದು ತಿಳಿಸಿದ್ದಾಳೆ. ಪ್ರಕರಣದ ಕುರಿತು ಹೆಚ್ಚಿನ ತನಿಖೆ ನಡೆಯುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.